ಮೈಸೂರು, ಫೆ.1(ಆರ್‍ಕೆ)- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೈಸೂರಿನ ಅಶೋಕ ರಸ್ತೆಯಲ್ಲಿರುವ ಮಿಲಾದ್ ಬಾಗ್ ಉದ್ಯಾನವನದಲ್ಲಿ ಎರಡು ದಿನಗಳ ಪ್ರತಿಭಟನಾ ಸಮಾವೇಶ ಇಂದಿನಿಂದ ಆರಂಭವಾಯಿತು.
ಸಿಟಿಜನ್ಸ್ ಆಫ್ ಮೈಸೂರು ಸಂಸ್ಥೆ ಆಯೋಜಿಸಿ ರುವ ಸಮಾವೇಶದಲ್ಲಿ ಮೈಸೂರು ವಿಶ್ವವಿದ್ಯಾನಿಲ ಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್ ಚಂದ್ರಗುರು, ದಲಿತ ಕ್ಷೇಮಾಭಿವೃದ್ಧಿ ಸಂಘದ ಶಾಂತರಾಜು, ಡಾ. ಸಾ.ರಾ.ಫಾತಿಮಾ, ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ, ವಿಭಾವಸು ಸೇರಿದಂತೆ ಹಲವರು ಮಾತನಾಡಿದರು.
ಬೇರೆ ದೇಶಗಳಲ್ಲಿ ಸೌಲಭ್ಯ ವಂಚಿತರಿಗೆ ಭಾರತ ದಲ್ಲಿ ಆಶ್ರಯ ನೀಡಲು ಪೌರತ್ವ ತಿದ್ದುಪಡಿ ಕಾಯ್ದೆ ತಂದಿರುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಹಾಗಾ ದರೆ ನಮ್ಮ ರಾಷ್ಟ್ರದ ಅಲ್ಪಸಂಖ್ಯಾತರಿಗೆ ತೊಂದರೆ ಯಾದರೆ ರಕ್ಷಣೆ ಕೊಡುವವರ್ಯಾರು ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಅಲ್ಪಸಂಖ್ಯಾತರಿಗೆ ಮಾರಕ ವಾಗುವ ಕಾಯ್ದೆ ಜಾರಿಗೊಳಿಸಿ ಸಂವಿಧಾನದ ಆಶಯ ಗಳನ್ನು ದಮನ ಮಾಡುತ್ತಿದೆ ಎಂದು ಆರೋಪಿಸುತ್ತಿ ದ್ದರು. ಪ್ರತಿಯೊಬ್ಬರಿಗೂ ಸೌಲಭ್ಯ ಸಿಗಲೆಂದು ಸಂವಿ ಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಭಾರತದ ಸರ್ವಶ್ರೇಷ್ಠ ಸಂವಿಧಾನವನ್ನೇ ಪ್ರಶ್ನಿಸುವ ರೀತಿ ಪೌರತ್ವ ಕಾಯ್ದೆ ಯನ್ನು ತಿದ್ದುಪಡಿ ಮಾಡಿ ವಲಸಿಗರಿಗೆ ಅನುಕೂಲ ಮಾಡಿಕೊಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಅವರು ಆಪಾದಿಸಿದರು.
ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾದರೂ, ಜನರ ಧನಿ ಧಿಕ್ಕರಿಸಿ, ಸಂಸತ್‍ನಲ್ಲಿ ನಿರ್ಣಯಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಳಿಸುವಾಗ ಮಾಹಿತಿ ಗಳನ್ನು ನೀಡದೇ ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾ ರದ ನಿರ್ಧಾರಕ್ಕೆ ಪ್ರತಿರೋಧ ವ್ಯಕ್ತಪಡಿಸಬೇಕೆಂದು ಮುಖಂಡರು ಇದೇ ವೇಳೆ ಕರೆ ನೀಡಿದರು. ಮಾಜಿ ಕಾರ್ಪೊರೇಟರ್ ಸುಹೇಲ್ ಬೇಗ್ ಸೇರಿದಂತೆ ಸಿಟಿಜನ್ಸ್ ಆಫ್ ಮೈಸೂರು ಪದಾಧಿಕಾರಿಗಳು, ವಿವಿಧ ಸಂಘ ಟನೆಗಳ ಸ್ವಯಂ ಸೇವಕರು ಶನಿವಾರ ಸಂಜೆವರೆಗೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಾಳೆಯ ಪ್ರತಿಭಟನೆಯಲ್ಲಿ (ಭಾನುವಾರ) ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಸೇರಿದಂತೆ ಪ್ರಮುಖ ಮುಸ್ಲಿಂ ನಾಯ ಕರು ಭಾಗವಹಿಸುವರು ಎನ್ನಲಾಗಿದ್ದು, ಲಷ್ಕರ್ ಠಾಣೆ ಪ್ರಭಾರ ಇನ್‍ಸ್ಪೆಕ್ಟರ್ ಎನ್.ಮುನಿಯಪ್ಪ, ಸಬ್ ಇನ್‍ಸ್ಪೆಕ್ಟರ್ ಪೂಜಾ ಸೇರಿದಂತೆ ಹಲವು ಸಿಬ್ಬಂದಿ ನಿಯೋಜಿಸಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.