ಬಲಿಗಾಗಿ ಕಾದಿವೆ ತಡೆಗೋಡೆ ರಹಿತ ಕಾಲುವೆ
ಮಂಡ್ಯ

ಬಲಿಗಾಗಿ ಕಾದಿವೆ ತಡೆಗೋಡೆ ರಹಿತ ಕಾಲುವೆ

December 13, 2018

ವರ್ಷಗಳು ಕಳೆದರೂ ದುರಸ್ತಿ ಕಾಣದ ರಸ್ತೆಗಳು: ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳು, ಅಧಿಕಾರಿಗಳು

ಮಂಡ್ಯ:  ಜಿಲ್ಲೆಯ ಹಲವೆಡೆ ಬಸ್, ಕಾರು, ಬೈಕ್ ತುಂಬಿ ಹರಿಯುವ ನಾಲೆ, ಕೆರೆಗೆ ಉರುಳಿ ಹಲವು ಜನರು ಪ್ರಾಣ ಕಳೆದುಕೊಂಡ ಪ್ರಕರಣಗಳು ಮತ್ತೆ ಮತ್ತೆ ಘಟಿಸುತ್ತಿದ್ದರೂ ಅವಘಡಗಳ ನಿಯಂತ್ರಣಕ್ಕೆ ಕೈಗೊಳ್ಳ ಬೇಕಾದ ಕೆಲಸಗಳು ನಿರೀಕ್ಷಿತ ಮಟ್ಟ ದಲ್ಲಿ ನಡೆಯುತ್ತಿಲ್ಲ.

ಪಾಂಡವಪುರ ತಾಲೂಕಿನ ಕನಗನ ಮರಡಿ ಗ್ರಾಮದ ವಿ.ಸಿ.ನಾಲೆಗೆ ಇತ್ತೀಚೆಗೆ ಬಸ್ ಉರುಳಿ 30 ಮಂದಿ ಸಾವನ್ನಪ್ಪಿ ದ್ದರು. ಲೋಕಸಾರ ಗ್ರಾಮದಲ್ಲಿ ಇಬ್ಬರು ಮಹಿಳೆಯರು ಹಾಗೂ ಒಂದು ಮಗು ಬೈಕ್‍ನಿಂದ ನಾಲೆಗೆ ಬಿದ್ದು ಸಾವನ್ನಪ್ಪಿದ್ದರು. ಈ ಎರಡೂ ಘಟನೆಗಳು ಕೆರೆ ಮತ್ತು ನಾಲೆಗಳ ಏರಿ ಮೇಲಿನ ರಸ್ತೆ ಎಷ್ಟು ಅಪಾಯ ಕಾರಿ ಎಂಬುದನ್ನು ಸಾಬೀತುಪಡಿಸಿವೆ.
ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಗಳಲ್ಲದೆ, ಜಿಲ್ಲಾ ಕೇಂದ್ರ ಸಂಪರ್ಕಿಸುವ ತಾಲೂಕು ರಸ್ತೆಗಳು ಬಹಳ ಕಿರಿದಾಗಿವೆ. ಅದರಲ್ಲೂ ಕೆರೆ ನಾಲೆ ಏರಿಗಳ ಮೇಲಂತೂ ಅಪಾಯ ಕಾರಿ ಮಟ್ಟದಲ್ಲಿವೆ. ಇಲ್ಲಿ ಸ್ವಲ್ಪ ಯಾಮಾ ರಿದರೂ ವಾಹನಗಳು ನೀರು ಪಾಲಾಗು ವುದು ಅಥವಾ ಏರಿಯ ಮತ್ತೊಂದು ಬದಿ ಗದ್ದೆ, ತೋಟಕ್ಕೆ ಉರುಳುವುದು ಖಚಿತ ಎಂಬಂತಹ ಸ್ಥಿತಿ ಇದೆ.

ಇದರ ಮಧ್ಯೆ ಇನ್ನೂ ಬಹಳಷ್ಟು ಕೆರೆಗಳು ಇದೂವರೆಗೆ ತಡೆಗೋಡೆ ಅಥವಾ ಸಿಮೆಂಟ್ ಕಂಬಗಳನ್ನು ಕಂಡಿಲ್ಲ. ಕೆಲವೆಡೆ ಕಳಪೆ ಗುಣಮಟ್ಟದ ಸಿಮೆಂಟ್ ಕಂಬಗಳು ಹಾಕಿದ ವರ್ಷದಲ್ಲೇ ಮುರಿದು ಹೋಗಿ, ಇಲ್ಲವೆ ಪುಡಿಯಾಗಿವೆ. ಇದರಿಂದ ಸರ್ಕಾರದ ಹಣ ಪೋಲಾಯಿತೆ ಹೊರತು ಅಪಘಾತ ನಿಯಂತ್ರಣ ಸಾಧ್ಯವಾಗಿಲ್ಲ.

ಕಲ್ಕುಣಿ ದುರಂತ: 1998ರಲ್ಲಿ ಮಳವಳ್ಳಿ ತಾಲೂಕಿನ ಕಲ್ಕುಣಿ ಗ್ರಾಮದ ಕೆರೆಗೆ ಬಸ್ ಉರುಳಿ ಬಿದ್ದು ದುರಂತ ಸಂಭವಿಸಿತ್ತು. ಅಂದು ಕಿರುಗಾವಲು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದವರು ಇಂದಿನ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ. ಸಿಎಂ ಆಗಿದ್ದ ಎಸ್. ಎಂ.ಕೃಷ್ಣ. ದುರಂತ ನಡೆಯುತ್ತಿ ದ್ದಂತೆಯೇ ಗ್ರಾಮಕ್ಕೆ ಬಂದು ಸಾವಿಗೀಡಾ ದವರಿಗೆ ಪರಿಹಾರ ನೀಡಿದರು. ಜೊತೆಗೆ ತಡೆಗೋಡೆ ನಿರ್ಮಾಣ ಭರವಸೆ ನೀಡಿದರು. ಘಟನೆ ನಡೆದು ಎರಡು ದಶಕಗಳು ಕಳೆ ದರೂ ಇನ್ನೂ ಕೂಡ ಅಧಿಕಾರಿಗಳು ತಡೆ ಗೋಡೆ ನಿರ್ಮಾಣಕ್ಕೆ ಮುಂದಾಗಿಲ್ಲ.

ಇಂದಿಗೂ ಬಸ್ ಚಾಲಕರು, ವಾಹನ ಸವಾರರು ಜೀವವನ್ನು ಮುಷ್ಟಿಯಲ್ಲಿ ಹಿಡಿದು ಚಾಲನೆ ಮಾಡುತ್ತಿದ್ದಾರೆ. ಕೆರೆಯ ಏರಿ ಮೇಲೆ ರಾಜ್ಯ ಹೆದ್ದಾರಿ ಹಾದು ಹೋದರೂ ಅಧಿಕಾರಿಗಳ ಕಣ್ಣಿಗೆ ಬಿದ್ದಿಲ್ಲ. ಕಿರುಗಾವಲು ಮೂಲಕ ಟಿ.ನರಸೀಪುರಕ್ಕೆ ಹೋಗಲು ಇದೇ ದಾರಿ ಮುಖ್ಯವಾಗಿದೆ. ಹಾಗಾಗಿ, ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ವಾಹನಗಳು ಸಂಚಾರ ಮಾಡುತ್ತಿವೆ.

ಕೆರೆ ಹಲವು ತಿರುವುಗಳನ್ನು ಹೊಂದಿದೆ. ವಾಹನಗಳು ವೇಗವಾಗಿ ಚಲಿಸುತ್ತವೆ. ಎರಡೂ ಬದಿಯಲ್ಲಿ ಪ್ರಪಾತವಿದ್ದು ವಾಹನಗಳು ಅಪಘಾತಗೊಂಡರೆ ಮತ್ತಷ್ಟು ಸಾವು ನೋವು ಗ್ಯಾರಂಟಿಯಾ ಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಮುಂದೆ ಸಂಭವಿಸಬಹುದಾದ ಅಪಘಾತಗಳ ತಡೆಗೆ ಜಾಗೃತಿ ವಹಿಸಬೇಕು. ಜನರ ಪ್ರಾಣ ರಕ್ಷಣೆಗೆ ಮುಂದಾಗಬೇಕಾಗಿದೆ.
ಜಿಲ್ಲೆಯಲ್ಲಿ ಸಂಭವಿಸಿದೆ 4 ದುರಂತ: ಮಂಡ್ಯ ಜಿಲ್ಲೆ ಇಲ್ಲಿವರೆಗೂ ನಾಲ್ಕು ಜಲ ದುರಂತಗಳನ್ನು ಕಂಡಿದೆ. ಮೊದಲ ದುರಂತ ದುದ್ದ ಗ್ರಾಮದಲ್ಲಿ, ಎರಡನೆಯ ದುರಂತ ಕಲ್ಕುಣಿ ಗ್ರಾಮ ದಲ್ಲಿ, ಮೂರನೇ ಬಾರಿ ಮದ್ದೂರು ಬಳಿ ಹಾಗೂ ನಾಲ್ಕನೆಯದು ಕನಗನಮರಡಿ ಗ್ರಾಮದಲ್ಲಿ ನಡೆದಿದೆ.

ನಾಲೆಗಳಿಗಿಲ್ಲದ ತಡೆಗೋಡೆ…

ಜಿಲ್ಲೆಯಲ್ಲಿ ಬಹುತೇಕ ಕಡೆ ನಾಲೆ ಮತ್ತು ಕೆರೆ ಏರಿಯ ರಸ್ತೆಗಳಲ್ಲಿ ಇಂದಿಗೂ ತಡೆಗೋಡೆಗಳು ಇಲ್ಲ. ಪರಿಣಾಮ ಆಗಾಗ ನಾಲೆಗೆ ಅಥವಾ ಕೆರೆಗಳಿಗೆ ವಾಹನಗಳು ಉರುಳಿ ಬಿದ್ದು ದುರಂತಗಳು ಸಂಭವಿಸುತ್ತಿವೆ.

ವಾಸ್ತವ ಸ್ಥಿತಿ ಹೀಗಿದ್ದರೂ ಸರ್ಕಾರ ಮಾತ್ರ ಬಹುತೇಕ ನಾಲೆ, ಕೆರೆಗಳಿಗೆ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿಲ್ಲ. ಸರ್ಕಾರ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ದುರಂತಗಳು ನಡೆಯ ಬೇಕು? ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ‘ನಾಲೆ ಏರಿ ರಸ್ತೆಗೆ ತಡೆಗೋಡೆ ನಿರ್ಮಿಸಿದ್ದರೆ ಕನಗನಮರಡಿ ಗ್ರಾಮದಲ್ಲಿ ಅಪಘಾತ ಸಂಭವಿಸುತ್ತಿರಲಿಲ್ಲ. ಇಂತಹ ಅಪಾಯಕಾರಿ ರಸ್ತೆಗಳು ಜಿಲ್ಲೆಯಲ್ಲಿ ಬಹಳಷ್ಟಿವೆ. ಅಧಿಕಾರಿಗಳು ಇವನ್ನು ಪರಿಶೀಲಿಸಿ ಸೂಕ್ತ ರಕ್ಷಣಾ ವ್ಯವಸ್ಥೆ ಕೈಗೊಳ್ಳಬೇಕು’ ಎಂಬುದು ಸ್ಥಳಿಯ ಮುಖಂಡರ ಒತ್ತಾಯ.

ಕನಗನಮರಡಿ ವಿ.ಸಿ. ನಾಲೆಗೆ ತಡೆಗೋಡೆ ಯೋಗ

ಕನಗನಮರಡಿ ಗ್ರಾಮದಲ್ಲಿ ನಡೆದ ಬಸ್ ದುರಂತದಿಂದ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ವಿ.ಸಿ.ನಾಲೆಯ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮುಂದಾ ಗಿದೆ. ಸುಮಾರು 1 ಕಿಮೀ ಉದ್ದ ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಬಹುತೇಕ ಅಂತಿಮ ಘಟ್ಟಕ್ಕೆ ಕಾಮಗಾರಿ ತಲುಪಿದೆ.

ಬಸ್ ದುರಂತ ನಡೆದ ನಂತರ ಸಾರಿಗೆ ಇಲಾಖೆ ವರದಿ ಮತ್ತು ಸಾರ್ವಜನಿಕ ಮಾಹಿತಿ ಮೇರೆಗೆ ದುರಂತಕ್ಕೆ ತಡೆಗೋಡೆ ಇಲ್ಲದಿರುವುದೇ ಕಾರಣ ಎಂಬ ಮಾಹಿತಿ ಬಹಿರಂಗ ವಾಗಿದೆ. ಸ್ಥಳೀಯರು ನಾಲೆಯ ಎರಡೂ ಬದಿಯಲ್ಲಿ ತಡೆಗೋಡೆ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದರು. ಈ ಆಧಾರದಡಿ ಸರ್ಕಾರ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದೆ.

Translate »