ರೈತರು ಖಾಸಗಿ ಸಾಲದಿಂದ ದೂರವಿರಲು ಸಲಹೆ
ಮಂಡ್ಯ

ರೈತರು ಖಾಸಗಿ ಸಾಲದಿಂದ ದೂರವಿರಲು ಸಲಹೆ

December 13, 2018

ಕೆ.ಆರ್.ಪೇಟೆ:  ರೈತರ ಜೀವನಾಡಿಯಾಗಿರುವ ಸಹಕಾರ ಸಂಘಗಳಿಂದ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ಪಡೆದುಕೊಳ್ಳವ ಮೂಲಕ ಖಾಸಗಿ ಸಾಲದಿಂದ ದೂರವಿರ ಬೇಕು ಎಂದು ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರೇಗೌಡ ರೈತರಲ್ಲಿ ಸಲಹೆ ನೀಡಿದರು.

ತಾಲೂಕಿನ ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ನೂತನವಾಗಿ ಆರಂಭಿಸಲಾದ ಬ್ಯಾಂಕಿಂಗ್ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು. 45 ವರ್ಷಗಳ ಹಿಂದೆ ಆರಂಭವಾಗಿರುವ ಮುರುಕನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಈ ಭಾಗದ ರೈತರ ಜೀವನಾಡಿಯಾಗಿ ಕೆಲಸ ಮಾಡುತ್ತಿದೆ. ಸುಮಾರು ಏಳೆಂಟು ಗ್ರಾಮಗಳ ರೈತರಿಗೆ ಸಕಾಲದಲ್ಲಿ ಸಾಲ ಸೌಲಭ್ಯ, ಬೇಸಾಯಕ್ಕೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ, ಹಾಗೂ ಪಡಿತರ ವಸ್ತುಗಳನ್ನು ವಿತರಣೆ ಮಾಡುವ ಮೂಲಕ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.

ಸಂಘದಲ್ಲಿ ಸುಮಾರು 25ಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಸಂಘಗಳು ಖಾತೆಯನ್ನು ತೆರೆದು ಲಕ್ಷಾಂತರ ರೂ. ಉಳಿತಾಯ ಮಾಡುತ್ತಿವೆ ಅಲ್ಲದೆ ಹಲವು ಸಂಘಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಕೈಗೊಂಡು ಸ್ವಾವಲಂಬನೆ ಸಾಧಿಸಿವೆ. ಜೊತೆಗೆ ಸುಮಾರು 600ಕ್ಕೂ ಹೆಚ್ಚು ರೈತರ ಉಳಿತಾಯ ಖಾತೆ ತೆರೆದು ವ್ಯವಹಾರ ಮಾಡುತ್ತಿದ್ದಾರೆ. ಹಾಗಾಗಿ ಸಂಘದ ಮೂಲಕ ಇನ್ನೂ ಹೆಚ್ಚಿನ ಸೇವೆ ನೀಡುವ ಉದ್ದೇಶದಿಂದ ಸಂಘದ ಕಟ್ಟಡದಲ್ಲಿ ಬ್ಯಾಂಕಿಂಗ್ ಶಾಖೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ರೈತರು, ಸಾರ್ವಜನಿಕರು ನೂತನ ಬ್ಯಾಂಕಿಂಗ್ ಶಾಖೆಯಲ್ಲಿ ಉಳಿತಾಯ ಖಾತೆ, ಆರ್‍ಡಿಎಫ್‍ಡಿ ಖಾತೆ ತೆರೆಯುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿ ಎಂ.ಎನ್.ಸತೀಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಮಂಜುಳಾ, ನಿರ್ದೇಶಕರಾದ ಸೋಮೇಗೌಡ, ಪರಮೇಶ್, ಶಿವಶಂಕರ್, ನಂಜುಂಡಪ್ಪ, ಎಂ.ಬಿ.ಚಂದ್ರೇಗೌಡ, ಪ್ರಕಾಶ್, ಜಯಮ್ಮ, ನಾಗರಾಜು, ಸಂಘದ ಮೇಲ್ವಿಚಾರಕ ಎಲ್.ಜೆ.ದೇವಕುಮಾರ್, ಸಂಘದ ಗುಮಾಸ್ತರಾದ ಎಂ.ವೈ. ಮಧುಚಂದ್ರ, ಎಂ.ಆರ್.ಸುರೇಶ್, ಗ್ರಾಮದ ಮುಖಂಡ ರಾದ ಶಿವರಾಮೇಗೌಡ, ಕೆಂಪೇಗೌಡ, ರಾಮೇಗೌಡ, ಗೋಪಾಲ್, ರಾಮಕೃಷ್ಣೇಗೌಡ, ಚಂದ್ರಶೆಟ್ಟಿ, ಶಿವಪ್ರಕಾಶ್ ಇದ್ದರು.

Translate »