ದೀಪಾವಳಿ ಹಬ್ಬಕ್ಕೆ ಮೈಸೂರಲ್ಲಿ ಸಡಗರದ ಸಿದ್ಧತೆ
ಮೈಸೂರು

ದೀಪಾವಳಿ ಹಬ್ಬಕ್ಕೆ ಮೈಸೂರಲ್ಲಿ ಸಡಗರದ ಸಿದ್ಧತೆ

October 27, 2019

ಮೈಸೂರು,ಅ.26(ಆರ್‍ಕೆ)-ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಮೈಸೂರಲ್ಲಿ ಮನೆ-ಮನೆಗಳಲ್ಲಿ ಸಡಗರದಿಂದ ಸಿದ್ಧತೆ ನಡೆದಿದ್ದರೆ, ಸತತ ಮಳೆಯಿಂದಾಗಿ ಪಟಾಕಿ ವ್ಯಾಪಾರ ನೆಲಕಚ್ಚಿದೆ. ಮಾರಾಟಗಾರರು ಪರಿತಪಿಸುವಂತಾಗಿದೆ.

ಹೂ, ಹಣ್ಣು, ಕಾಯಿ ಸೇರಿದಂತೆ ಪೂಜಾ ಸಾಮಗ್ರಿ, ಹೊಸ ಬಟ್ಟೆ ಖರೀದಿಸಲು ಜನರು ಮಾರುಕಟ್ಟೆಗೆ ಮುಗಿ ಬಿದ್ದಿದ್ದರೂ, ಜೆ.ಕೆ.ಮೈದಾನ, ಪುರಭವನ ಹಾಗೂ ಹೆಬ್ಬಾಳಿನ ರಾಣೆ ಮಡ್ರಾಸ್ ರಸ್ತೆ ಸೇರಿದಂತೆ ಮೈಸೂರಿನ ವಿವಿಧೆಡೆ ಆರಂಭಗೊಂಡಿರುವ ಪಟಾಕಿ ಅಂಗಡಿಗಳು ಮಾತ್ರ ಬಿಕೋ ಎನ್ನುತ್ತಿವೆ. ಭಾನುವಾರ ಮತ್ತು ಮಂಗಳವಾರ ನಡೆಯುವ ನರಕ ಚತುರ್ದಶಿ ಮತ್ತು ಬಲಿಪಾಡ್ಯಮಿಯ ಧಾರ್ಮಿಕ ಕೈಂಕರ್ಯ ಹಾಗೂ ಪೂಜಾ ವಿಧಿಗಳಿಗಾಗಿ ಮನೆಗಳಲ್ಲಿ ಪೂರ್ವ ತಯಾರಿ ನಡೆದಿದೆ. ಧನಲಕ್ಷ್ಮಿ ಪೂಜೆ ನಡೆಸುವ ಸಲುವಾಗಿ ಜನರು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.

ದೇವರಾಜ, ಕೃಷ್ಣರಾಜ, ಮಂಡಿ, ಬಂಡಿಪಾಳ್ಯದ ಎಪಿಎಂಸಿ, ಮಹಾತ್ಮ ಗಾಂಧಿ ರಸ್ತೆಯ ತರಕಾರಿ ಮಾರುಕಟ್ಟೆಗಳಲ್ಲಿ ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿ ಸಲು ಜನರು ಮುಗಿ ಬಿದ್ದಿದ್ದ ದೃಶ್ಯ ಇಂದು ಸಾಮಾನ್ಯವಾಗಿತ್ತು.

ಜೆ.ಕೆ.ಮೈದಾನದ ಬಳಿ ಫುಟ್‍ಪಾತ್‍ನಲ್ಲಿ ದೀಪಾವಳಿ ಹಬ್ಬಕ್ಕೆ ಸೇವಂತಿಗೆ ಹೂ ಮಾರಾಟ ಬಲು ಜೋರಾ ಗಿದ್ದು, ಬೆಲೆ ಜಾಸ್ತಿಯಾದರೂ ಲೆಕ್ಕಿಸದೆ ಜನರು ಖರೀದಿ ಸುತ್ತಿದ್ದಾರೆ. ಒಂದು ವಾರದ ಹಿಂದೆ ಪಾತಾಳಕ್ಕೆ ಕುಸಿದಿದ್ದ ಸೇವಂತಿಗೆ ಬೆಲೆ ಇಂದು ದಿಢೀರ್ ಏರಿಕೆಯಾಗಿರುವುದು ಕಂಡು ಬಂದಿತು. 10 ರಿಂದ 20 ರೂ.ಗೆ ಸಿಗುತ್ತಿದ್ದ ಮಾರು ಸೇವಂತಿಗೆ ಇಂದು 50 ರಿಂದ 60 ರೂ. ಗಳಿಗೇರಿತ್ತು. ಹಾಗಿದ್ದೂ ಹೂವಿಗೆ ಭಾರೀ ಬೇಡಿಕೆ ಇದ್ದುದು ಶನಿವಾರ ಕಂಡು ಬಂದಿತು.

ಮಾರುಕಟ್ಟೆಗಳಲ್ಲಿ ಹಣ್ಣು, ತರಕಾರಿ ಬೆಲೆಯೂ ಗಗನಕ್ಕೇರಿದ್ದು, ತೆಂಗಿನಕಾಯಿಯೂ 25ರಿಂದ 30 ರೂ.ಗಳಿಗೆ ಹೆಚ್ಚಳವಾಗಿದೆ. ಮೈಸೂರಿನ ಹೆಬ್ಬಾಳು, ವಿಜಯನಗರ, ಮೇಟಗಳ್ಳಿ, ಕುವೆಂಪುನಗರ, ರಾಮಕೃಷ್ಣ ನಗರ, ನಜರ್‍ಬಾದ್, ಅಗ್ರಹಾರ ಸೇರಿದಂತೆ ನಗರದಾದ್ಯಂತ ಪ್ರಾವಿಜನ್ ಸ್ಟೋರ್‍ಗಳು, ಮಾಲ್‍ಗಳು, ಸೂಪರ್ ಮಾರ್ಕೆಟ್‍ಗಳಲ್ಲಿ ಪೂಜಾ ಮತ್ತು ಹಬ್ಬದ ಸಾಮಗ್ರಿ ಕೊಳ್ಳಲು ನೂಕು-ನುಗ್ಗಲು ಏರ್ಪಟ್ಟಿತ್ತು.

ಇನ್ನೊಂದೆಡೆ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಯೂ ಜೋರಾಗಿ ಸಾಗಿದ್ದು, ಡಿ.ದೇವರಾಜ ಅರಸು ರಸ್ತೆ, ಕೆ.ಆರ್.ಸರ್ಕಲ್, ಸಯ್ಯಾಜಿರಾವ್ ರಸ್ತೆ, ಓಲ್ಡ್ ಬ್ಯಾಂಕ್ ರಸ್ತೆ, ಮಕ್ಕಾಜಿ ಚೌಕ, ಗಾಂಧಿ ಸ್ಕ್ವೇರ್ ಸೇರಿದಂತೆ ಎಲ್ಲೆಡೆ ಅಂಗಡಿಗಳಲ್ಲಿ ಖರೀದಿ ಜೋರಾಗಿದ್ದು, ವರ್ತಕ ಸಮೂಹ ಹರ್ಷದಿಂದಿದೆ. ಇಂದಿನಿಂದ 5 ದಿನಗಳವರೆಗೆ ಪಟಾಕಿ ಮಾರಲು ಅಂಗಡಿಗೆ ಅನುಮತಿ ನೀಡಲಾಗಿದೆ. ಆದರೆ ಮೊದಲ ದಿನವಾದ ಇಂದು ಬೆಳಿಗ್ಗೆಯೇ ಜಿಟಿ ಜಿಟಿ ಮಳೆ ಆರಂಭವಾದ ಕಾರಣ, ಪಟಾಕಿ ಖರೀದಿಸಲು ಜನರು ಮನೆಯಿಂದ ಹೊರಗೇ ಬರಲಿಲ್ಲ. ಕಾರ್ಖಾನೆ, ಕೈಗಾರಿಕೆಗಳಿಂದ ಬರುವವರು ಹೆಬ್ಬಾಳಿನ ಅಂಗಡಿಗಳಲ್ಲಿ ಅಲ್ಪಸ್ವಲ್ಪ ಪಟಾಕಿ ವ್ಯಾಪಾರ ನಡೆಸಿದರು.

ಶನಿವಾರ ಮಧ್ಯಾಹ್ನ ಮಳೆ ಬಿದ್ದ ಕಾರಣ ಜೆ.ಕೆ.ಮೈದಾನದಲ್ಲಿ ನೀರು ನಿಂತು ಕೊಚ್ಚೆ ಗುಂಡಿಯಂತಾಗಿರುವುದರಿಂದ ಅಲ್ಲಿ ಪಟಾಕಿ ಖರೀದಿಗೆ ಗ್ರಾಹಕರು ಬಾರದ ಹಿನ್ನೆಲೆಯಲ್ಲಿ ಮೊದಲ ದಿನವೇ ಮಾರಾಟಗಾರರು ನಿರಾಶರಾದರು.

Translate »