ನ.17ಕ್ಕೆ ಮೈಸೂರು ಮೇಯರ್, ಉಪ ಮೇಯರ್ ಅಧಿಕಾರಾವಧಿ ಅಂತ್ಯ
ಮೈಸೂರು

ನ.17ಕ್ಕೆ ಮೈಸೂರು ಮೇಯರ್, ಉಪ ಮೇಯರ್ ಅಧಿಕಾರಾವಧಿ ಅಂತ್ಯ

October 27, 2019

ಮೈಸೂರು, ಅ. 26(ಆರ್‍ಕೆ)- ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಅಧಿಕಾರಾವಧಿ ನವೆಂಬರ್ 17ಕ್ಕೆ ಅಂತ್ಯಗೊಳ್ಳಲಿದೆ.

ಪಾಲಿಕೆ ಚುನಾವಣೆ ನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಅಧಿಕಾರ ಹಿಡಿದಿದ್ದು, ಮೊದಲ ಅವಧಿಗೆ ಕಾಂಗ್ರೆಸ್‍ನ ಪುಷ್ಪಲತಾ ಜಗನ್ನಾಥ್ ಮೇಯರ್ ಆಗಿ ಹಾಗೂ ಜೆಡಿಎಸ್‍ನ ಶಫಿ ಅಹಮದ್ ಅವರು ಉಪ ಮೇಯರ್ ಆಗಿ 2018ರ ನವೆಂಬರ್ 17ರಂದು ಅಧಿಕಾರ ವಹಿಸಿಕೊಂಡಿದ್ದರು.

ಅವರ ಒಂದು ವರ್ಷದ ಅಧಿಕಾರಾವಧಿಯು 2019ರ ನವೆಂಬರ್ 17ರಂದು ಸಂಜೆ 5 ಗಂಟೆಗೆ ಅಂತ್ಯಗೊಳ್ಳುವುದರಿಂದ ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿಗಳು ಈಗಾ ಗಲೇ ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮೇಯರ್ ಮತ್ತು ಉಪ ಮೇಯರ್ ಅಧಿಕಾರ ಅಂತ್ಯಗೊಳ್ಳು ತ್ತಿರುವ ಬಗ್ಗೆ ಮಾಹಿತಿ ರವಾನಿಸಿದ್ದಾರೆ. ಈ ಅವಧಿಯ ಎರಡನೇ ವರ್ಷದ ಮೇಯರ್-ಉಪ ಮೇಯರ್ ಚುನಾ ವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಮೀಸಲಾತಿ ನಿಗದಿಪಡಿಸಿದ ನಂತರ, ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣಾ ಅಧಿ ಸೂಚನೆ ಹೊರಡಿಸಿ ನಿಯಮಾನುಸಾರ ಚುನಾ ವಣೆ ನಡೆಸಬೇಕಾಗಿದೆ. ಕಳೆದ ಬಾರಿ ಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನಕ್ಕೆ ಅಲ್ಪಸಂಖ್ಯಾತ ಅಭ್ಯರ್ಥಿಗೆ ಸರ್ಕಾರ ಮೀಸಲಾತಿ ಪ್ರಕಟಿಸಿದ್ದರಿಂದ ಪುಷ್ಪಲತಾ ಜಗನ್ನಾಥ್ ಅವರು ಮೇಯರ್ ಆಗಿ ಹಾಗೂ ಶಫಿ ಅಹಮದ್ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿ ದ್ದರು. ಇದೀಗ ಒಂದು ಬಾರಿ ದಸರಾ ಹಬ್ಬವನ್ನು ಆಚರಿಸಿರುವ ಅವರ ಅಧಿಕಾರದ ಅವಧಿ ಮುಗಿ ಯುತ್ತಾ ಬಂದಿರುವುದ ರಿಂದ ಎರಡನೇ ಅವ ಧಿಯ ಮೇಯರ್-ಉಪ ಮೇಯರ್‍ಗಾದಿ ಹಿಡಿಯಲು ಮೀಸಲಾತಿ ಪ್ರಕಟಿಸುವ ಬಗ್ಗೆ ಕೆಲವರು ಸರ್ಕಾರದ ಮಟ್ಟದಲ್ಲಿ ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ.

ಮೈತ್ರಿ ಸರ್ಕಾರವಿದ್ದಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಮೈಸೂರು ಮಹಾನಗರ ಪಾಲಿಕೆಯಲ್ಲೂ ಅಧಿಕಾರ ಹಿಡಿದಿದ್ದ ಎರಡೂ ಪಕ್ಷಗಳು ಎರಡನೇ ಅವಧಿಯಲ್ಲಿ ಮುಂದುವರಿಯುತ್ತವೆಯೋ ಅಥವಾ ಮೈತ್ರಿ ಮುರಿದು ಬೀಳುತ್ತದೆಯೋ ಎಂಬುದು ಚುನಾವಣಾ ವೇಳಾಪಟ್ಟಿ ಪ್ರಕಟವಾದ ನಂತರ ತಿಳಿಯಲಿದೆ. ಈ ಹಿಂದೆ 2006ರಲ್ಲಿ ಭಾರತಿ ಅವರು ಮೇಯರ್ ಆಗಿದ್ದನ್ನು ಹೊರತುಪಡಿಸಿದರೆ ನಂತರ ಈವರೆಗೆ ಪರಿಶಿಷ್ಟ ಪಂಗಡ (ಎಸ್‍ಟಿ)ದ ಅಭ್ಯರ್ಥಿಗಳ ಮೀಸಲಾತಿ ಬಾರದಿರುವ ಕಾರಣ, ಈ ಸಾಲಿನಲ್ಲಿ ಸರ್ಕಾರ ಎಸ್‍ಟಿ ವರ್ಗಕ್ಕೆ ಮೀಸ ಲಾತಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ ಅಥವಾ ರೊಟೇಷನ್‍ನಲ್ಲಿ ನಿಯಮಾನುಸಾರ ಯಾವ ವರ್ಗಕ್ಕೆ ಅವಕಾಶವಿದೆ ಎಂಬುದನ್ನು ನೋಡಿ ಸರ್ಕಾರ ಅಧಿಸೂಚನೆ ಹೊರಡಿಸಲಿದೆ. ಒಟ್ಟಾರೆ ಮೇಯರ್-ಉಪ ಮೇಯರ್ ಅವಧಿ ಮುಗಿಯುತ್ತಾ ಬಂದಿರುವುದರಿಂದ ರಾಜಕೀಯ ಚಟುವಟಿಕೆ ಇದೀಗ ಗರಿಗೆದರತೊಡಗಿದೆ.

Translate »