ಡಿಕೆಶಿಗೆ ಭವ್ಯ ಸ್ವಾಗತ
ಮೈಸೂರು

ಡಿಕೆಶಿಗೆ ಭವ್ಯ ಸ್ವಾಗತ

October 27, 2019

ಬೆಂಗಳೂರು,ಅ.26(ಕೆಎಂಶಿ)- ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆ ಗಾಗಿ 48 ದಿನ ದೆಹಲಿಯ ತಿಹಾರ್ ಜೈಲಿ ನಲ್ಲಿ ಬಂಧನಕ್ಕೊಳಗಾಗಿ ಬಿಡುಗಡೆಗೊಂಡ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರ ಅಭಿ ಮಾನಿಗಳು, ಕಾರ್ಯಕರ್ತರು ಭವ್ಯ ಸ್ವಾಗತ ನೀಡಿ, ಬರ ಮಾಡಿಕೊಂಡರು.

ರಾಜಕೀಯ ನಾಯಕನೊಬ್ಬನನ್ನು ರಾಜ್ಯದ ಇತಿಹಾಸದಲ್ಲೇ ವಿಮಾನ ನಿಲ್ದಾಣ ದಲ್ಲಿ ಇಂತಹ ದೊಡ್ಡ ಪ್ರಮಾಣದಲ್ಲಿ ಸ್ವಾಗತ ಕೋರಿ ಬರ ಮಾಡಿಕೊಂಡಿದ್ದು, ಇದೇ ಮೊದಲಾಗಿದೆ.

ವಿಮಾನ ನಿಲ್ದಾಣದಲ್ಲಿ ಮುಂಜಾನೆಯಿಂದಲೇ ಕಾದು ನಿಂತಿದ್ದ ಅಭಿಮಾನಿಗಳು ತಮ್ಮ ನಾಯಕನನ್ನು ಬರಮಾಡಿಕೊಳ್ಳಲು ಗ್ರಾಮೀಣ ಸೊಗಡಿನ ತಮಟೆ, ನಗಾರಿ, ಕಲಾ ತಂಡಗಳಿಂದ ವಿವಿಧ ನೃತ್ಯಗಳನ್ನು ಏರ್ಪಡಿಸಿದ್ದರು.

ಮಧ್ಯಾಹ್ನ 2.45ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಹೊರ ಬರುತ್ತಿದ್ದಂತೆ ಕಾಕತಾಳೀಯ ವಾಗಿ ವಿಮಾನ ವಿಳಂಬದಿಂದ ವಿಐಪಿ ಸಭಾಂಗಣದಲ್ಲಿ ಹುಬ್ಬಳ್ಳಿಗೆ ತೆರಳಲು ಕಾದು ಕುಳಿತಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಶಿವಕುಮಾರ್ ಬಂದ ತಕ್ಷಣವೇ ಅವರಿಗೆ ಹಸ್ತಲಾಘವ ನೀಡಿ ಶುಭ ಕೋರಿದರು.

ಪ್ರದೇಶ ಕಾಂಗ್ರೆಸ್, ಶಿವಕುಮಾರ್ ಬರಮಾಡಿಕೊಳ್ಳಲು ಮಾಜಿ ಸಚಿವ ಕೃಷ್ಣಬೈರೇಗೌಡ ಅವರಿಗೆ ಹೊಣೆ ವಹಿಸಿತ್ತು. ಇವರ ಜೊತೆ ದೊಡ್ಡ ಪ್ರಮಾಣದಲ್ಲಿ ಆ ಪಕ್ಷದ ಶಾಸಕರು, ಮುಖಂಡರು ವಿಮಾನ ಇಳಿಯುತ್ತಿದ್ದಂತೆ ಅವರನ್ನು ಬರಮಾಡಿಕೊಂಡರು. ವಿಮಾನ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಶಿವಕುಮಾರ್ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು. ನಾ ಮುಂದು ತಾ ಮುಂದು ಎಂದು ಅವರಿಗೆ ಹಾರ ತುರಾಯಿ ಹಾಕಲು ಮುಂದಾದರು. ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬ ಶಿವಕುಮಾರ್ ಅವರನ್ನು ಹೆಗಲ ಮೇಲೆ ಕೂರಿಸಿಕೊಂಡು ಮುಂಬಾ ಗಿಲಿನಿಂದ ಕಾರಿನವರೆಗೂ ಎತ್ತಿಕೊಂಡು ಬಂದ, ಈ ವೇಳೆ ಅಭಿಮಾನಿಗಳು ಹಾರ, ಶಾಲು ಹಾಕಿ ನಾಯಕನಿಗೆ ತಮ್ಮ ಇರುವಿಕೆಯನ್ನು ತೋರ್ಪಡಿಸಲು ನಾ ಮುಂದು, ತಾ ಮುಂದು ಎಂದು ನುಗ್ಗಾಡಿದರು. ತಾಳ್ಮೆ ಕಳೆದುಕೊಳ್ಳದ ಶಿವಕುಮಾರ್ ಕತ್ತು ಬಗ್ಗಿಸಿ, ಎಲ್ಲರಿಂದಲೂ ಹಾರತುರಾಯಿ ಹಾಕಿಸಿಕೊಂಡಿದ್ದಲ್ಲದೆ, ಕೃತಜ್ಞತೆ ಅರ್ಪಿಸಿದರು. ಭಾರೀ ದಟ್ಟಣೆಯಲ್ಲೇ ತಮ್ಮ ಕಾರು ಹತ್ತಿ ಕೈ ಮುಗಿಯುತ್ತಾ ನಿಂತರು. ಅಷ್ಟೇ ಅಲ್ಲ ಕಾರಿನಲ್ಲಿ ನಿಂತ ಮೇಲೂ ಎಲ್ಲೆಲ್ಲಿಂದಲೋ ಹಾರಗಳು ಅವರ ಕೊರಳಿಗೆ ಬರುತ್ತಲೇ ಇದ್ದವು. ನಂತರ ಅಲ್ಲಿಂದ ಸಾದಳ್ಳಿ ಗೇಟ್‍ವರೆಗೂ ಬಂದು ನಂತರ ಅಲ್ಲಿ ನೆರೆದಿದ್ದ ದೊಡ್ಡ ಪ್ರಮಾಣದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ವಂದಿಸಲು ಅಲ್ಲಿಯೇ ತೆರೆದ ವಾಹನ ಏರಿದರು. ಶಿವಕುಮಾರ್ ಸಾದಳ್ಳಿ ಗೇಟ್ ಬಳಿ ಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮುಗಿಲು ಮುಟ್ಟುವಂತೆ ತಮ್ಮ ನಾಯಕನಿಗೆ ಹರ್ಷೋದ್ಘಾರ ಸಲ್ಲಿಸಿ, ಹೂವಿನ ಮಳೆಗರೆದು ಬರಮಾಡಿಕೊಂಡರು.

ಅಲ್ಲಿ ನೆರೆದಿದ್ದ ಮಹಿಳಾ ಅಭಿಮಾನಿಗಳು ಮತ್ತು ಕಾರ್ಯಕರ್ತರು ತಮ್ಮ ನಾಯಕನ ಫೋಟೋಗಳನ್ನು ಹಿಡಿದು ನೃತ್ಯ ಮಾಡಿದರು. ಅಭಿಮಾನಿಗಳು ತಮ್ಮ ನಾಯಕನಿಗೆ ಗೌರವ ಸಲ್ಲಿಸಲು 20 ಅಡಿ ಉದ್ದದ 500 ಕೆಜಿಯ ಸೇಬಿನ ಹಾರವನ್ನು ಎರಡು ಕ್ರೇನ್‍ಗಳ ಮೂಲಕ ಎತ್ತಿಸಿ, ಕೊರಳಿಗೆ ಹಾಕಿ ತಮ್ಮ ಸಂತಸ ವ್ಯಕ್ತಪಡಿಸಿದರು.

ಆನಂತರ ಸಾವಿರಾರು ಕಾರ್ಯಕರ್ತರು ದ್ವಿಚಕ್ರ ವಾಹನಗಳಲ್ಲಿ ಮೆರವಣಿಗೆ ಮುಂದೆ ಸಾಗಿದರೆ, ಅವರ ಹಿಂದೆ ಶಿವಕುಮಾರ್ ಇದ್ದ ತೆರೆದ ವಾಹನದಲ್ಲಿ ಅರ್ಧ ದಾರಿಗೆ ಬಂದ ನಂತರ ಭಾರೀ ವಾಹನ ದಟ್ಟಣೆ ಹಿನ್ನೆಲೆಯಲ್ಲಿ ಅದರಿಂದ ಇಳಿದು ಕಾರನ್ನತ್ತಿ ಕಾಂಗ್ರೆಸ್ ಕಚೇರಿಯನ್ನು ಸಂಜೆ ತಲುಪಿದರು. ಮೆರವಣಿಗೆಯುದ್ದಕ್ಕೂ ಜೆಡಿಎಸ್ ಬಾವುಟಗಳು ರಾರಾಜಿಸಿದವು. ಅಭಿಮಾನಿಗಳಿಗೆ ದಾರಿಯುದ್ದಕ್ಕೂ ಕೈ ಮುಗಿಯುತ್ತಾ, ಬೀಗುತ್ತಾ ಕಾಂಗ್ರೆಸ್ ಕಚೇರಿ ಹತ್ತಿರ ಬರುತ್ತಿದ್ದಂತೆ ಅಲ್ಲಿ ನೆರೆದಿದ್ದ ದೊಡ್ಡ ಪ್ರಮಾಣದ ಕಾರ್ಯಕರ್ತರ ಪಡೆ ತಮ್ಮ ನಾಯಕನನ್ನು ಸಂತಸ-ಸಂಭ್ರಮದಿಂದ ಬರ ಮಾಡಿಕೊಂಡಿತು. ವಿಮಾನ ನಿಲ್ದಾಣಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಬರುವ ನಿರೀಕ್ಷೆ ಇರುವುದರಿಂದ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಮೆರವಣಿಗೆಗೆ ಪೊಲೀಸರ ವಿರೋಧವಿದ್ದರೂ, ಅದನ್ನು ಲೆಕ್ಕಿಸದ ಕಾರ್ಯಕರ್ತರು ದೊಡ್ಡ ಪ್ರಮಾಣದಲ್ಲಿ ತಾವು ಅಂದುಕೊಂಡಿದ್ದನ್ನು ಮಾಡಿಯೇ ತೀರಿದರು. ಆದರೆ ಸಾದಹಳ್ಳಿ ಗೇಟ್ ಬಳಿ ಕಾರ್ಯಕರ್ತರು ಕಾನೂನು ಎಲ್ಲೆ ಮೀರಿದ್ದರಿಂದ ಲಘು ಲಾಠಿ ಪ್ರಹಾರ ಮಾಡಿ ತಹಬದಿಗೆ ತಂದರು. ಮೆರವಣಿಗೆಯಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಕ್ಕೆಲ ರಸ್ತೆಗಳಲ್ಲಿ ಸಂಚಾರ ದಟ್ಟಣೆಗೆ ಒಳಗಾಗಿದ್ದರಿಂದ ಇದನ್ನು ಮನಗಂಡ ಶಿವಕುಮಾರ್ ತೆರೆದ ವಾಹನದಿಂದ ಇಳಿದು, ಕಾರಿಗೆ ಹತ್ತಿ, ಕಾಂಗ್ರೆಸ್ ಕಚೇರಿಯತ್ತ ತೆರಳಿದರು. ಕಾಂಗ್ರೆಸ್ ಕಚೇರಿಯಿಂದ ನಂತರ ತಮ್ಮ ಮನೆ ದೇವರಿಗೆ ಕುಟುಂಬ ಸಮೇತ ಪೂಜೆ ಸಲ್ಲಿಸಲು ಕನಕಪುರಕ್ಕೆ ತೆರಳಿದರು. ಇಲ್ಲಿಯೂ ನಗರದ ಹೊರ ವಲಯದ ಎಪಿಎಸ್ ಕಾಲೇಜು ವೃತ್ತದಿಂದ ಕನಕಪುರದವರೆಗೆ 40 ಕಿಲೋ ಮೀಟರ್ ದಾರಿಯುದ್ದಕ್ಕೂ ಜನವೋ ಜನ, ಅವರಿಗೆಲ್ಲ ವಂದಿಸಿ, ತಡ ರಾತ್ರಿ ಊರು ಮುಟ್ಟಿದರು.

ಬಂಡೆ ಕೆತ್ತಿದರೆ ಆಕೃತಿಯಾಗುತ್ತದೆ! ಪೂಜಿಸಿದರೆ ಸಂಸ್ಕøತಿಯಾಗುತ್ತದೆ!!
ಬೆಂಗಳೂರು, ಅ.26- ಬಂಡೆ ಚೂರು ಚೂರಾ ಗುತ್ತದೆ ಎಂದೆಲ್ಲಾ ಹೇಳಿದ್ದಾರೆ. ಬಂಡೆ ಕೆತ್ತಿದರೆ ಆಕೃತಿಯಾಗುತ್ತದೆ, ಪೂಜಿಸಿದರೆ ಸಂಸ್ಕøತಿಯಾಗು ತ್ತದೆ ಎಂದು ಹೇಳುವ ಮೂಲಕ ರಾಮನಗರ ಬಂಡೆ ಎಂದು ಕರೆಸಿಕೊಳ್ಳುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮಾರ್ಮಿಕ ಎಚ್ಚರಿಕೆ ನೀಡಿದ್ದಾರೆ.

ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ ಇಂದು ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿ ಸಿದ ಅವರು, ಬೃಹತ್ ಮೆರವಣಿಗೆ ಮೂಲಕ ಕೆಪಿಸಿಸಿ ಕಚೇರಿಗೆ ಆಗಮಿಸಿ, ಸುದ್ದಿಗೋಷ್ಠಿ ನಡೆಸಿದ ಅವರು, ಚುನಾವಣೆ ವೇಳೆ ಆಯೋಗಕ್ಕೆ ನಾನು ಪ್ರಮಾಣ ಪತ್ರ ಸಲ್ಲಿಸಿದ್ದೇನೆ. ನನ್ನ ಪತ್ನಿ, ಸಹೋದರನ ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದೇನೆ. ಆ ಪ್ರಮಾಣ ಪತ್ರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಅದನ್ನು ಕೆಲವರು ಗುಮಾನಿ ಯಿಂದ ನೋಡುತ್ತಿದ್ದಾರೆ. ಕೆಲವರು ಕಪ್ಪು ಕನ್ನಡಕ ದಿಂದ ನೋಡುತ್ತಿದ್ದಾರೆ. ಇನ್ನು ಕೆಲವರು ಎಕ್ಸ್-ರೇ ಕಣ್ಣಿನಿಂದ ನೋಡುತ್ತಿದ್ದರು. ಬಂಡೆ ಚೂರು ಚೂರಾಗುತ್ತದೆ ಎಂದೆಲ್ಲಾ ಹೇಳಿದ್ದಾರೆ. ಅವೆಲ್ಲ ದ್ದಕ್ಕೂ ಉತ್ತರ ದೊರೆಯುತ್ತದೆ. ಬಂಡೆ ಕೆತ್ತಿದರೆ ಆಕೃತಿಯಾಗುತ್ತದೆ, ಪೂಜಿಸಿದರೆ ಸಂಸ್ಕøತಿಯಾಗು ತ್ತದೆ ಎಂದು ಹೇಳಿದರು.

ಹಿಂದೆ ಸರಿಯುವುದಿಲ್ಲ: ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ನನ್ನ ವಿರುದ್ಧ ನಡೆಯುತ್ತಿರುವ ಇಡಿ ತನಿಖಾ ಪ್ರಕರಣ ದೇಶಕ್ಕೇ ಮಾದರಿಯಾಗಬೇಕು. ನನ್ನ ಮೇಲೆ ನಡೆದಿರುವ ಪ್ರಯೋಗ ಎಲ್ಲರ ಮೇಲೂ ನಡೆಯಬೇಕು. ನನ್ನ 86 ವರ್ಷದ ತಾಯಿ, ತಮ್ಮ, ಪತ್ನಿ, ಪುತ್ರಿ ಸೇರಿದಂತೆ ನನ್ನ ಸ್ನೇಹಿತರನ್ನೆಲ್ಲಾ ಟಾರ್ಗೆಟ್ ಮಾಡಿ ಪ್ರಕರಣ ದಾಖಲಿಸಲಾಗಿದೆ. ನಾನು ರಾಜಕಾರಣ ಮಾಡಲೆಂದೇ ಹಳ್ಳಿಯಿಂದ ಬಂದವನು. ಯಾವುದೇ ಕಾರಣಕ್ಕೂ ಹಿಂದೆ ಸರಿಯುವವನಲ್ಲ. ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡುತ್ತೇನೆ ಎಂದು ಅವರು ಘೋಷಿಸಿದರು. ಕಾಂಗ್ರೆಸ್ ಪಕ್ಷ ಸಂಕಷ್ಟದ ಪರಿಸ್ಥಿತಿಯಲ್ಲಿ ನನಗೆ ವಹಿಸಿದ್ದ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಅದಕ್ಕಾಗಿ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ನಾನು ಬಂಧನಕ್ಕೊಳಗಾದಾಗ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಮೂಲಕ ನನಗೆ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಸೇರಿದಂತೆ ಇತರ ಪಕ್ಷದವರೂ ನನಗೆ ಬೆಂಬಲ ಸೂಚಿಸಿದ್ದು, ಡಿ.ಕೆ.ಶಿವಕುಮಾರ್ ಮೋಸ ಮಾಡಿಲ್ಲ ಎಂಬ ನಂಬಿಕೆ ಅವರಿಗಿದೆ ಎಂದರು.

ಮಗನಿಗೆ ತಾಯಿ ಬೇನಾಮಿಯೇ?: ನನ್ನ ತಾಯಿಗೆ ವ್ಯವಹಾರ ನಡೆಸಲು ನಾನು ಮಾರ್ಗದರ್ಶನ ನೀಡಿದ್ದೇನೆ. ತಾಯಿ ಮಗನನ್ನು ನಂಬದೇ ಬೇರೆ ಯಾರನ್ನು ನಂಬಬೇಕು. ತಾಯಿಯೇ ಮಗನಿಗೆ ಬೆನಾಮಿಯಾಗಲು ಸಾಧ್ಯವೇ? ಎಂದು ಪ್ರಶ್ನಿಸಿದ ಅವರು, ನಾನು ಸಚಿವನಾಗಿದ್ದಾಗ ಸಂಸದರೆಲ್ಲರಿಗೂ ಪಕ್ಷಾತೀತವಾಗಿ ಮೊಬೈಲ್ ಫೋನ್ ಕೊಟ್ಟಿದ್ದೆ. ಮೂರು ಮಂದಿ ಫೋನ್ ತೆಗೆದುಕೊಳ್ಳಲಿಲ್ಲ. ನನ್ನ ವಿರುದ್ಧ ಹೇಳಿಕೆ ನೀಡಿರುವವರೂ ಸೇರಿದಂತೆ ಎಲ್ಲರೂ ಫೋನ್ ತೆಗೆದುಕೊಂಡಿದ್ದರು. ಫೋನ್ ಅನ್ನು ನನ್ನ ಸ್ವಂತ ಅಕೌಂಟ್‍ನಿಂದಲೇ ಕೊಟ್ಟಿದ್ದೆ. ಅದಕ್ಕಾಗಿ ಐಟಿಯಿಂದ ನನಗೆ ನೋಟಿಸ್ ಬಂದಿತ್ತು. ನನಗೆ ಕೊಟ್ಟ ರೀತಿಯೇ ಫೋನ್ ತೆಗೆದುಕೊಂಡಿ ರುವವರಿಗೂ ನೋಟಿಸ್ ನೀಡಬೇಕಾಗಿತ್ತಲ್ಲವೇ? ಶಾಲೆಗೆ ಹೋಗುವಾಗ ನನ್ನ ಮಕ್ಕಳನ್ನು ನೋಡಿ `ನಿಮ್ಮ ಅಪ್ಪ ಜೈಲಿಗೆ ಹೋಗಿದ್ದಾನೆ’ ಅಂದರೆ ಅವರಿಗೆ ಏನಾಗಬೇಡ ಎಂದು ಪ್ರಶ್ನಿಸಿದ ಅವರು, ನನಗೆ ಆಗಿರುವ ಕಿರುಕುಳಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ ಎಂದರು. ನಾನು ಹುಟ್ಟಿನಲ್ಲಿ ರೈತ, ವ್ಯವಹಾರಸ್ಥ. ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಉಳ್ಳವ. ರಾಜಕಾರಣ ನನಗೆ ಪ್ಯಾಷನ್. ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದೇನೆ. ನಾನು ಯಾರಿಗೂ ಮೋಸ ಮಾಡಿಲ್ಲ. ನಾನೇನಾದರೂ ತಪ್ಪು ಮಾಡಿದ್ದರೆ ನನ್ನನ್ನು ನೇಣಿಗೆ ಹಾಕಲಿ. ಎಷ್ಟು ವರ್ಷ ಬೇಕಾದರೂ ಜೈಲಿಗೆ ಹಾಕಲಿ? ಕಾನೂನು ಮಾಡಿರುವವರು ನಾವು. ನಾವೇ ಮಾಡಿರುವ ಕಾನೂನಿಗೆ ಗೌರವ ಕೊಡುತ್ತೇವೆ. ನನ್ನ ವಿರುದ್ಧ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ಕೊಟ್ಟಿದೆ ಎಂದು ತಿಳಿದಿದ್ದೇನೆ. ಜೈಲಿನಲ್ಲಿದ್ದಾಗ ಕಾನೂನು ಪುಸ್ತಕದ ಎಲ್ಲಾ ಪುಟಗಳನ್ನು ಓದಿದ್ದೇನೆ. ಅದೆಲ್ಲವೂ ನನ್ನ ತಲೆಯಲ್ಲೇ ಇದೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ನನ್ನನ್ನು ಬೆಂಬಲಿಸಿದ ಅಭಿಮಾನಿಗಳ ಋಣವನ್ನು ತೀರಿಸುವ ಶಕ್ತಿ ಕೊಡಬೇಕೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು. ಕೆಂಪೇಗೌಡ ವಿಮಾನ ನಿಲ್ದಾಣದಿಂದ ಕೆಪಿಸಿಸಿ ಕಚೇರಿವರೆಗೆ ನಡೆದ ಬೃಹತ್ ಮೆರವಣಿಗೆ ವೇಳೆ ಉಂಟಾದ ಟ್ರಾಫಿಕ್ ಜಾಮ್‍ನಿಂದಾಗಿ ಹಲವರಿಗೆ ತೊಂದರೆಯಾಗಿದೆ. ಅದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದ ಅವರು, ಇಂತಹ ಸಂದರ್ಭಗಳಲ್ಲಿ ಕಾರ್ಯಕರ್ತರು ನಮ್ಮ ಕಂಟ್ರೋಲ್‍ನಲ್ಲಿ ಇರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದಕ್ಕೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ನಾನು ಆಸ್ಪತ್ರೆಯಲ್ಲಿದ್ದಾಗ ಯಾರನ್ನೂ ನೋಡಲೂ ಬಿಡುತ್ತಿರಲಿಲ್ಲ. ಸಿದ್ದರಾಮಯ್ಯರನ್ನು ಕೂಡ ಬಿಟ್ಟಿಲ್ಲ. ಪರಮೇಶ್ವರ್ ಅವರಿಗೆ ಡಾ. ಕೋಟ್ ಹಾಕಿಸಿ, ಅವರು ಡಾಕ್ಟರ್ ಎಂದು ಹೇಳಿ, ನನ್ನನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿಸಲಾಯಿತು ಎಂದು ಶಿವಕುಮಾರ್ ಹೇಳಿದರು. ಇದಕ್ಕೂ ಮುನ್ನ ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೇಂದ್ರದ ಬಿಜೆಪಿ ಸರ್ಕಾರ ಐಟಿ ಹಾಗೂ ಇಡಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ. ಇದರಿಂದ ನಮ್ಮ ಆತ್ಮಸ್ಥೈರ್ಯ ಕುಗ್ಗುವುದಿಲ್ಲ. ಬದಲಾಗಿ ನಾವು ಮತ್ತಷ್ಟು ಬಲಗೊಳ್ಳುತ್ತೇವೆ. ಅದಕ್ಕೆ ಡಿ.ಕೆ.ಶಿವಕುಮಾರ್ ಅವರಿಗೆ ದೊರೆತಿರುವ ಅಪೂರ್ವ ಬೆಂಬಲವೇ ಸಾಕ್ಷಿ ಎಂದರು.

ಜೈಲಿಗೆ ಹೋದವರನ್ನು ಹಿಂದೆ ಬಹಿಷ್ಕರಿಸುತ್ತಿದ್ದರು, ಈಗ ಸ್ವಾಗತಿಸುತ್ತಿದ್ದಾರೆ…
ಬಳ್ಳಾರಿ, ಅ.26-`ಹಿಂದೆ ಜೈಲಿಗೆ ಹೋಗಿ ಬಂದವರನ್ನು ಬಹಿಷ್ಕರಿಸು ತ್ತಿದ್ದರು. ಆದರೆ ಈಗ ಸ್ವಾಗತಿ ಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿರುವ ಮಾಜಿ ಲೋಕಾಯುಕ್ತ, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರು, ಪರೋಕ್ಷವಾಗಿ ಡಿಕೆಶಿ ವಿರುದ್ಧ ಕಿಡಿಕಾರಿದ್ದಾರೆ. ಬಳ್ಳಾರಿಯಲ್ಲಿ ಶನಿವಾರ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ನಂತರ ಸುದ್ದಿಗಾರರೊಂದಿಗೆ ಮುಕ್ತ ವಾಗಿ ಮಾತನಾಡಿದರು.

ಹಿಂದೆ ಜೈಲಿಗೆ ಹೋದವರನ್ನು ಜನರು ಚುನಾ ವಣೆಗಳಲ್ಲಿ ಬಹಿಷ್ಕರಿಸುತ್ತಿದ್ದರು. ಆದರೆ ಈಗ ಅದ್ಧೂರಿಯಾಗಿ ಬರಮಾಡಿಕೊಳ್ಳುತ್ತಿದ್ದಾರೆ. ನಾವೀಗ ಕಡು ಭ್ರಷ್ಟ ವ್ಯವಸ್ಥೆಯಲ್ಲಿದ್ದೇವೆ. ಆದಷ್ಟೂ ತ್ವರಿತವಾಗಿ ಸಮಾಜ ಬದಲಾಗಬೇಕಿದೆ, ವ್ಯವಸ್ಥೆ ಬದಲಾಗಬೇಕಿದೆ. ಜನರಲ್ಲಿ ಅರಿವು ಮೂಡಿ ಬದ ಲಾವಣೆ ಬರಬೇಕಿದೆ ಎಂದರು. ಜನರಲ್ಲಿ ದುರಾಸೆ, ಅಧಿಕಾರದ ಆಸೆ ಜಾಸ್ತಿಯಾಗಿದೆ. ದುಡ್ಡಿದ್ದವರು ಅಧಿಕಾರ ಬೇಕು ಎನ್ನುತ್ತಾರೆ.

ಅಧಿಕಾರ ಹಿಡಿದವರು ಭ್ರಷ್ಟಾಚಾರ ಮಾಡುತ್ತಾರೆ. ಹಿಂದೆ ಜೈಲಿಗೆ ಹೋದವರನ್ನು ಶಿಕ್ಷೆ ಆಗುವ ಮುಂಚೆ ಬಹಿಷ್ಕರಿಸುತ್ತಿದರು. ಆದರೆ ಈಗ ಸಂಭ್ರಮದಿಂದ ಸ್ವಾಗತಿಸುತ್ತಿದ್ದಾರೆ ಎಂದು ಅಸಂತೋಷ ವ್ಯಕ್ತಪಡಿಸಿದ ಅವರು, ಬೇಕಿದ್ದರೆ ಜನತೆ ವ್ಯಕ್ತಿ ಪೂಜೆ ಮಾಡಿಕೊಳ್ಳಲಿ, ಆದರೆ ಭ್ರಷ್ಟರನ್ನು ಮಾತ್ರ ಪೂಜೆ ಮಾಡಬಾರದು ಎಂದರು. ಆ ಮೂಲಕ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅಭಿಮಾನಿಗಳು, ಹಿಂಬಾಲಕರ ಇಂದಿನ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಬಲಿಷ್ಠ ಲೋಕಪಾಲ್ ವಿಧೇಯಕ ಯಾರಿಗೆ ಬೇಕು? ಅಧಿಕಾರದಲ್ಲಿ ಇರುವವರಲ್ಲಿ ಎಷ್ಟು ಮಂದಿ ಪ್ರಮಾಣಿಕರಿದ್ದಾರೆ. ಈಗ ಲೋಕಾಯುಕ್ತ ಕೂಡ ದುರ್ಬಲವಾಗಿದೆ. ಎಸಿಬಿ ಎಂಬುದು ಪೆÇಲೀಸ್ ವ್ಯವಸ್ಥೆಯಲ್ಲಿರುವ ಸಂಸ್ಥೆ. ಒಬ್ಬ ಮಂತ್ರಿಯ ಕೈಕೆಳಗಿರುವ ಎಸಿಬಿ ಹೇಗೆ ಕೆಲಸ ಮಾಡಬಹುದು. ಪರಿಸ್ಥಿತಿ ಹೀಗಾದರೆ ಭ್ರಷ್ಟಾಚಾರ ತಡೆಗಟ್ಟುವುದು ಹೇಗೆ? ಎಂದು ತುಸು ಉದ್ವೇಗದಿಂದಲೇ ಪ್ರಶ್ನೆ ಮಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಕನಿಷ್ಠ ವಿದ್ಯಾರ್ಹತೆ ಮೀಸಲಿರಿಸಬೇಕೆಂಬ ಚರ್ಚೆ ಬಂದಿತ್ತು. ಆದರೆ, ದೇಶದಲ್ಲಿ ಶೇ.80ರಷ್ಟು ಅನಕ್ಷರತೆ ಇದೆ. ಹಾಗಾಗಿ ವಿದ್ಯಾರ್ಹತೆ ನಿಗದಿಗೊಳಿಸುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಅಲ್ಲದೆ ಆ ವೇಳೆ ಚುನಾಯಿತ ಪ್ರತಿನಿಧಿಗಳಿಗೆ ಸ್ಥಳೀಯ ಸಮಸ್ಯೆಗಳ ಕುರಿತು ಅರಿವಿದ್ದರೆ ಸಾಕೆಂಬ ಅಂಶವೂ ಪ್ರಸ್ತಾಪವಾಯಿತು. ಅದಕ್ಕೆ ಪ್ರಮುಖರೆಲ್ಲರೂ ಸಮ್ಮತಿದರು. ಈ ಪರಂಪರೆ ಹಾಗೆಯೇ ಮುಂದುವರೆದುಕೊಂಡು ಬಂದಿತು. ಈಗ ಕನಿಷ್ಠ ವಿದ್ಯಾರ್ಹತೆ ಹೊಂದಿರುವ ಸುಶಿಕ್ಷಿತರಿಂದಲೇ ದೇಶ ಹಾಳಾಗುತ್ತಿದೆ. ರಾಜಕಾರಣದಲ್ಲಿ ಸ್ವಂತ ಅಭಿವೃದ್ಧಿಯ ಪೆಡಂಭೂತ ಸೇರಿಕೊಂಡಿದ್ದರಿಂದ ದೇಶದ ಆರ್ಥಿಕ ಸಂಪನ್ಮೂಲವನ್ನು ಲೂಟಿ ಹೊಡೆಯಲಾಗುತ್ತಿದೆ. ಇನ್ನಾದರೂ ಯಾವುದೇ ಜಾತಿ, ಮತ ಹಾಗೂ ಪಂಥಗಳನ್ನು ಜನರು ನೋಡದೇ ಉತ್ತಮ ವ್ಯಕ್ತಿಗಳನ್ನು ಮಾತ್ರ ಚುನಾವಣೆಯಲಿ ಆರಿಸಿ ಕಳಿಸಬೇಕಿದೆ ಎಂದು ಗಮನ ಸೆಳೆದರು.

ಈ ದೇಶದಲ್ಲಿ ಬೂಪರ್ಸ್, ಟು ಜೀ ಸ್ಪೆಕ್ಟ್ರಮ್, ಕರ್ನಾಟಕದ ಅಕ್ರಮ ಗಣಿಗಾರಿಕೆ ಸೇರಿದಂತೆ ಇನ್ನಿತರೆ ಹಗರಣಗಳಲ್ಲಿ ಸಾವಿರಾರು ಕೋಟ್ಯಾಂತರ ರೂ. ಗಳ ಕೊಳ್ಳೆ ಹೊಡೆಯಲಾಗಿದೆ. ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗ ಮತ್ತು ನಾಲ್ಕನೇ ರಂಗವೂ ಕೂಡ ಕಲುಷಿತಗೊಂಡಿದೆ ಎಂದು ಮಾಜಿ ಲೋಕಾಯುಕ್ತರು ವಿಷಾದಿಸಿದರು.

ಲೋ ಶುಗರ್: ಇದಕ್ಕೂ ಮುನ್ನ ವೇದಿಕೆಯಲ್ಲಿ ಭಾಷಣದ ವೇಳೆ ಸಂತೋಷ ಹೆಗಡೆ ಅವರು ಥಟ್ಟನೆ ಲೋ ಶುಗರ್ ಆಗಿದ್ದರಿಂದ ತಕ್ಷಣ ಭಾಷಣ ನಿಲ್ಲಿಸಿ ಕುರ್ಚಿ ಮೇಲೆ ಕುಳಿತರು. ನಂತರ ಚಾಕ್ಲೇಟ್ ತಿಂದು ನಿಧಾನವಾಗಿ ಸುಧಾರಿಸಿಕೊಂಡರು. ನಂತರ `ನಾನು ಆರೋಗ್ಯವಾಗಿದ್ದೇನೆ’ ಎಂದು ಹೇಳಿ ಸ್ಥಳದಲ್ಲಿದ್ದವರ ಆತಂಕ ನಿವಾರಿಸಿದರು.

Translate »