ಸಾಮೂಹಿಕ ಅತ್ಯಾಚಾರ ಆರೋಪ: ನಾಲ್ವರ ವಿರುದ್ಧ ಯುವತಿ ಪೊಲೀಸರಲ್ಲಿ ದೂರು ದಾಖಲು
ಮೈಸೂರು

ಸಾಮೂಹಿಕ ಅತ್ಯಾಚಾರ ಆರೋಪ: ನಾಲ್ವರ ವಿರುದ್ಧ ಯುವತಿ ಪೊಲೀಸರಲ್ಲಿ ದೂರು ದಾಖಲು

February 9, 2019

ಮೈಸೂರು: ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಕಾಲ್ ಸೆಂಟರ್ ಉದ್ಯೋಗಿ ಮೇಲೆ ಸ್ನೇಹಿತ ಸೇರಿ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ತಡವಾಗಿ ವರದಿಯಾಗಿದೆ. ಜೆ.ಪಿ.ನಗರ ನಿವಾಸಿಯಾಗಿರುವ 20 ವರ್ಷದ ಕಾಲ್ ಸೆಂಟರ್ ಉದ್ಯೋಗಿ ಕಳೆದ ಭಾನುವಾರದಂದು ರಾತ್ರಿ 9.30ರ ಸುಮಾರಿನಲ್ಲಿ ಮೈಸೂರಿನ ಲಲಿತ ಮಹಲ್ ರಸ್ತೆಯಲ್ಲಿರುವ ಆರ್ಚ್ ಬಳಿ ಪಾನಿಪೂರಿ ಸೇವಿಸಲು ತೆರಳಿದ್ದರಂತೆ. ತನ್ನನ್ನು ಮನೆಗೆ ಡ್ರಾಪ್ ಮಾಡುವಂತೆ ಸ್ನೇಹಿತ ಚಿರಾಗ್ ಎಂಬಾತ ನಿಗೆ ಮೊಬೈಲ್ ಮೂಲಕ ಕರೆ ಮಾಡಿ ಯುವತಿ ಕೇಳಿದ್ದರು ಎನ್ನಲಾಗಿದೆ.

ಕಾರಿನಲ್ಲಿ ಸ್ಥಳಕ್ಕೆ ಬಂದ ಚಿರಾಗ್, ಆಕೆಯನ್ನು ಕೂರಿಸಿಕೊಂಡು, ಕಾರು ಸ್ವಲ್ಪ ದೂರ ಚಲಿಸಿದ ನಂತರ ಆತನ ಮೂವರು ಸ್ನೇಹಿತರು ಕಾರಿಗೆ ಹತ್ತಿದ್ದಾರೆ. ಈ ಕುರಿತು ತಾನು ಪ್ರಶ್ನಿಸಿದಾಗ ಅವರನ್ನು (ಸ್ನೇಹಿತರನ್ನು) ಡ್ರಾಪ್ ಮಾಡಿದ ನಂತರ ನಿನ್ನನ್ನು ಡ್ರಾಪ್ ಮಾಡುತ್ತೇನೆ ಎಂದು ಹೇಳಿ ಚಿರಾಗ್, ಕಾರನ್ನು ಚಾಲನೆ ಮಾಡತೊಡಗಿದ. ಕತ್ತಲೆ ಇದ್ದುದರಿಂದ ಕಾರು ಯಾವ ಮಾರ್ಗದಲ್ಲಿ ತೆರಳಿತು ಎಂದು ಗೊತ್ತಿಲ್ಲ. ಆದರೆ ಅದು ತಿ.ನರಸೀಪುರ ರಸ್ತೆ ಇರಬಹುದು ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ನಿರ್ಜನ ಪ್ರದೇಶಕ್ಕೆ ತನ್ನನ್ನು ಕರೆದೊಯ್ದ ಸ್ನೇಹಿತ ಮತ್ತಿತರರು ಬ್ಲೇಡ್‍ನಿಂದ ದೇಹದ ಕೆಲವೆಡೆ ಕೊಯ್ದದ್ದಲ್ಲದೇ, ನಾಲ್ವರೂ ಸೇರಿ ಅತ್ಯಾಚಾರ ನಡೆಸಿದ ನಂತರ ಅಲ್ಲೇ ತನ್ನನ್ನು ಬಿಟ್ಟು ಹೋದರು ಎಂದು ತಿಳಿಸಿ ರುವ ಆಕೆ, ನಂತರ ತಾನು ಮುಖ್ಯ ರಸ್ತೆಗೆ ಬಂದು ವಾಹನವೊಂದರಲ್ಲಿ ಬಂದು ಚೆಲುವಾಂಬ ಆಸ್ಪತ್ರೆಗೆ ದಾಖಲಾದೆ ಎಂದು ಆಕೆ ತನ್ನ ದೂರಿನಲ್ಲಿ ತಿಳಿಸಿದ್ದು, ತನ್ನ ಮೇಲೆ ಅತ್ಯಾಚಾರವೆಸಗಿದ ನಾಲ್ವರಲ್ಲಿ ಸ್ನೇಹಿತ ಚಿರಾಗ್ ಹೊರತುಪಡಿಸಿ ಬೇರೆ ಯಾರು ತನಗೆ ಪರಿಚಿತರಲ್ಲ ಎಂದು ಹೇಳಿದ್ದಾರೆ.

ಭಾನುವಾರ ರಾತ್ರಿ ಚೆಲುವಾಂಬ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಈಕೆ, ಶುಕ್ರವಾರ ಮುಂಜಾನೆ 2.15ರ ಸುಮಾರಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಯೊಂದಿಗೆ ನಜರ್‍ಬಾದ್ ಠಾಣೆಗೆ ಆಗಮಿಸಿ ಲಿಖಿತ ದೂರು ಸಲ್ಲಿಸಿದ್ದಾರೆ. ಭಾರತೀಯ ದಂಡ ಸಂಹಿತೆ 376-ಡಿ ಮತ್ತು 324ರಡಿ ದೂರನ್ನು ದಾಖಲಿಸಿಕೊಂಡಿರುವ ಇನ್ಸ್‍ಪೆಕ್ಟರ್ ಮಹದೇವಯ್ಯ ಅವರು, ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸಿದ್ದಾರೆ.

Translate »