ವಿಶ್ವಾಸಮತ ಯಾಚನೆಗೆ ಇಂದು ಮಧ್ಯಾಹ್ನ 1.30ರ ಗಡುವು
ಮೈಸೂರು

ವಿಶ್ವಾಸಮತ ಯಾಚನೆಗೆ ಇಂದು ಮಧ್ಯಾಹ್ನ 1.30ರ ಗಡುವು

July 19, 2019

ಇಂದು ರಾತ್ರಿ ರಾಜಭವನದಿಂದ ಮುಖ್ಯ ಮಂತ್ರಿಗಳಿಗೆ ರಾಜ್ಯಪಾಲರಿಂದ ಮೂರು ಪುಟಗಳ ಅಧಿಕೃತ ಪತ್ರ ರವಾನೆಯಾ ಗಿದ್ದು, 224 ಶಾಸಕರ ಬಲ ಹೊಂದಿರುವ ವಿಧಾನಸಭೆಯಲ್ಲಿ 117 ಶಾಸಕರ ಬೆಂಬಲದಿಂದ ನೀವು ಸರ್ಕಾರ ರಚಿಸಿದ್ದೀರಿ. ಜು.1ರಂದು ಕಾಂಗ್ರೆಸ್‍ನ ಆನಂದ್‍ಸಿಂಗ್, ಜು.6 ರಂದು ರಮೇಶ್ ಜಾರಕಿಹೊಳಿ, ಎಸ್.ಟಿ. ಸೋಮಶೇಖರ್, ಜೆಡಿಎಸ್‍ನ ಗೋಪಾಲಯ್ಯ, ಎ.ಹೆಚ್. ವಿಶ್ವನಾಥ್, ನಾರಾಯಣಗೌಡ, ಕಾಂಗ್ರೆಸ್‍ನ ಭೈರತಿ ಬಸವರಾಜು, ಬಿ.ಸಿ. ಪಾಟೀಲ್, ಶಿವರಾಂ ಹೆಬ್ಬಾರ್, ಮುನಿರತ್ನ, ರೋಷನ್‍ಬೇಗ್, ಜು.10ರಂದು ಡಾ. ಕೆ. ಸುಧಾಕರ್, ಎಂಟಿಬಿ ನಾಗರಾಜು, ಪ್ರತಾಪ್‍ಗೌಡ ಪಾಟೀಲ್ ಮತ್ತು ಮಹೇಶ್ ಕುಮಟಳ್ಳಿ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಉಲ್ಲೇಖಿಸಿರುವ ರಾಜ್ಯಪಾಲರು ಒಟ್ಟು 15 ಶಾಸಕರು ಯಾವ್ಯಾವ ದಿನಾಂಕ ದಂದು ರಾಜೀನಾಮೆ ಸಲ್ಲಿಸಿದ್ದಾರೆ ಎಂಬು ದನ್ನು ಸವಿವರವಾಗಿ ತಮ್ಮ ಪತ್ರದಲ್ಲಿ ತಿಳಿ ಸಿದ್ದಾರೆ.

ಅಲ್ಲದೆ, ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಿಮ್ಮ ಸರ್ಕಾರ ಬಹುಮತ ಕಳೆದುಕೊಂಡಿದೆ. ಆದ್ದರಿಂದ ಬಹುಮತ ಸಾಬೀತುಪಡಿಸುವಂತೆ ನಿಮಗೆ ಸೂಚಿಸಲು ನನಗೆ ಹಲವಾರು ಮನವಿಗಳು ಬಂದಿದ್ದವು. ಆದರೆ ನೀವೇ ವಿಶ್ವಾಸಮತ ಯಾಚಿಸುವುದಾಗಿ ತಿಳಿಸಿದ್ದರಿಂದ ಅದನ್ನು ನಾನು ನಿರೀಕ್ಷಿಸಿದ್ದೆ. ಇಂದು ವಿಶ್ವಾಸಮತ ಯಾಚನೆ ಉದ್ದೇಶದಿಂದ ಅಧಿವೇಶನ ಆರಂಭವಾಗಿತ್ತು. ಅಲ್ಲಿ ಅನಾವಶ್ಯಕವಾಗಿ ಕಾಲಹರಣ ಮಾಡಲಾಗುತ್ತಿದೆ ಎಂದು ನನಗೆ ಬಿಜೆಪಿ ದೂರು ಸಲ್ಲಿಸಿತ್ತು. ಅದರ ಜೊತೆಗೆ ನನ್ನದೇ ಆದ ಮೂಲ ಗಳಿಂದಲೂ ಮಾಹಿತಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಇಂದು ವಿಶ್ವಾಸಮತ ಪೂರ್ಣಗೊಳ್ಳುತ್ತದೆ ಎಂಬ ಭಾವನೆಯನ್ನೊಳಗೊಂಡ ಸಂದೇಶವನ್ನು ವಿಧಾನಸಭಾ ಧ್ಯಕ್ಷರಿಗೆ ರವಾನಿಸಿದ್ದೆ ಎಂದು ರಾಜ್ಯಪಾಲರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಇಂದು ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳ್ಳದೆ ಸದನ ಮುಂದೂಡಲ್ಪಟ್ಟಿರುವುದನ್ನು ಗಮನಿಸಿದ್ದೇನೆ. ಸುಪ್ರೀಂಕೋರ್ಟ್‍ನ ತೀರ್ಪು ಸಹ ನನ್ನ ಗಮನದಲ್ಲಿದೆ. ಯಾವುದೇ ಸರ್ಕಾರ ಬಹುಮತ ಹೊಂದಿರಬೇಕು ಎಂಬ ಕಾರಣದಿಂದ ಈ ಸಂದೇಶವನ್ನು ನೀಡುತ್ತಿದ್ದೇನೆ ಎಂದು ತಿಳಿಸಿರುವ ರಾಜ್ಯಪಾಲರು ನಾಳೆ ಮಧ್ಯಾಹ್ನ 1.30ರ ಒಳಗಾಗಿ ವಿಶ್ವಾಸಮತ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದಾರೆ. ಈ ಸಂಬಂಧ ಸುದ್ದಿ ಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ನಾಳೆ ಮಧ್ಯಾಹ್ನ 1.30ರೊಳಗೆ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಪೂರ್ಣಗೊಳಿಸಿ ಎಂದು ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈಗಾಗಲೇ ವಿಶ್ವಾಸಮತದ ಮೇಲೆ ಕಲಾಪ ನಡೆಯುತ್ತಿದೆ. ವಿಧಾನಸಭಾಧ್ಯಕ್ಷರು ಎಲ್ಲಾ ಶಾಸಕರಿಗೂ ತಮ್ಮ ಅನಿಸಿಕೆಗಳನ್ನು ತಿಳಿಸಲು ಅವಕಾಶ ನೀಡಬೇಕಾಗಿದೆ. ಈ ಹಂತದಲ್ಲಿ ಬಿಜೆಪಿಯವರು ರಾಜ್ಯಪಾಲರ ಮೂಲಕ ಒತ್ತಡ ತಂದು ನಾಳೆ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸಬೇಕೆಂದು ಪತ್ರ ರವಾನೆಯಾಗುವಂತೆ ಮಾಡಿದ್ದಾರೆ ಎಂದು ಹೇಳಿದರು.

Translate »