ರಾಜ್ಯಪಾಲರ ಆದೇಶ ಧಿಕ್ಕರಿಸಿದರೆ ಸರ್ಕಾರದ ಅಮಾನತಿಗೆ ಸಿದ್ಧತೆ
ಮೈಸೂರು

ರಾಜ್ಯಪಾಲರ ಆದೇಶ ಧಿಕ್ಕರಿಸಿದರೆ ಸರ್ಕಾರದ ಅಮಾನತಿಗೆ ಸಿದ್ಧತೆ

July 19, 2019

ಬೆಂಗಳೂರು, ಜು.18(ಕೆಎಂಶಿ, ಎಸಿಪಿ)- ರಾಜ್ಯಪಾಲರ ಸೂಚನೆಯಂತೆ ನಾಳೆ (ಜು.19) ಮಧ್ಯಾಹ್ನದೊಳಗೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಸರ್ಕಾರವನ್ನು ಅಮಾನತುಪಡಿಸಿ, ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿ ಮಾಡಲು ಅಗತ್ಯವಿರುವ ಸಿದ್ಧತೆಗಳು ರಾಜಭವನದಲ್ಲಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದ್ದರೂ ಆಡಳಿತದಲ್ಲಿ ಮುಂದುವರೆಯುತ್ತಿರುವುದರಿಂದ ರಾಜ್ಯದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗಿದೆ ಎಂಬ ಕಾರಣವನ್ನು ಮುಂದಿಟ್ಟು, ರಾಜ್ಯ ಪಾಲರು ತಮ್ಮ ಅಧಿಕಾರವನ್ನು ಚಲಾಯಿಸಿ ಸರ್ಕಾರದ ಅಮಾನತಿಗೆ ಶಿಫಾರಸು ಮಾಡಲು ಎಲ್ಲಾ ಸಿದ್ಧತೆಗಳು ನಡೆದಿವೆ ಎಂದು ಹೇಳಲಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‍ನ 15 ಶಾಸಕರು ರಾಜೀನಾಮೆ ನೀಡಿದ್ದು, ಇಬ್ಬರು ಪಕ್ಷೇತರರು ಸಹ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡ ಕಾರಣದಿಂದ ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿದಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಪ್ರಸ್ತಾಪ ಮಂಡನೆ ಮಾಡಿದ್ದಾರೆ. ವಿಶ್ವಾಸ ಮತಯಾಚನೆ ಪ್ರಕ್ರಿಯೆ ಇಂದು ಪೂರ್ಣಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ನಡುವೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕ್ರಿಯಾಲೋಪ ಎತ್ತಿದ ಪರಿಣಾಮ ಮುಖ್ಯಮಂತ್ರಿಗಳ ವಿಶ್ವಾಸ ಮತಯಾಚನೆ ಪ್ರಕ್ರಿಯೆ ವಿಳಂಬವಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯಪಾಲರು ಇಂದೇ ಪ್ರಕ್ರಿಯೆ ಪೂರ್ಣಗೊಳಿಸಲು ಸ್ಪೀಕರ್ ರಮೇಶ್‍ಕುಮಾರ್ ಅವರಿಗೆ ಸೂಚಿಸಿದ್ದರು. ಆದರೆ ಪ್ರಕ್ರಿಯೆ ಪೂರ್ಣಗೊಳ್ಳದೆ ವಿಧಾನಸಭೆ ಕಲಾಪ ಮುಂದೂಡಲ್ಪಟ್ಟ ಕಾರಣದಿಂದ ನಾಳೆ ಮಧ್ಯಾಹ್ನದವರೆಗೆ ಗಡುವು ನೀಡಿ ವಿಶ್ವಾಸ ಮತಯಾಚನೆಗೆ ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದ್ದಾರೆ.

ಸಿದ್ದರಾಮಯ್ಯನವರು ಕ್ರಿಯಾಲೋಪಕ್ಕೆ ಸ್ಪೀಕರ್ ಸ್ಪಷ್ಟನೆ ನೀಡುವವರೆವಿಗೂ ಮುಖ್ಯಮಂತ್ರಿಗಳು ವಿಶ್ವಾಸ ಮತಯಾಚನೆ ಮಾಡದೇ ಇದ್ದು ರಾಜ್ಯಪಾಲರ ಸೂಚನೆಯನ್ನು ಉಲ್ಲಂಘಿಸುವ ಸಾಧ್ಯತೆಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ಮೈತ್ರಿ ಸರ್ಕಾರದ ಅಮಾನತಿಗೆ ಶಿಫಾರಸು ಮಾಡಲು ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಒಂದು ವೇಳೆ ನಾಳೆ ಮಧ್ಯಾಹ್ನದೊಳಗೆ ಮುಖ್ಯಮಂತ್ರಿಗಳು ವಿಶ್ವಾಸ ಮತ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ತಕ್ಷಣವೇ ಸರ್ಕಾರದ ಅಮಾನತಿಗೆ ಕೇಂದ್ರ ಗೃಹ ಇಲಾಖೆಗೆ ಶಿಫಾರಸು ರವಾನಿಸಲಾಗುವುದು. ನಂತರ ಕೇಂದ್ರ ಗೃಹ ಇಲಾಖೆಯು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ ತಕ್ಷಣವೇ ಸರ್ಕಾರ ಅಮಾನತಿಗೊಳಗಾಗಿ ಸಹಜವಾಗಿಯೇ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬರುತ್ತದೆ. ರಾಜ್ಯಪಾಲರ ಆಡಳಿತ ಅಸ್ತಿತ್ವಕ್ಕೆ ಬಂದ ನಂತರ ಸರ್ಕಾರ ರಚನೆ ಪ್ರಕ್ರಿಯೆಯು ಮೊದಲಿನಿಂದ ಪ್ರಾರಂಭವಾಗುತ್ತದೆ. ಅಂದರೆ ಚುನಾವಣೆ ನಡೆದು ಹೊಸ ಸರ್ಕಾರ ರಚನೆಗೆ ಯಾವ ರೀತಿಯ ಪ್ರಕ್ರಿಯೆಗಳು ನಡೆಯುತ್ತವೋ ಅದೇ ರೀತಿಯ ಪ್ರಕ್ರಿಯೆಗಳು ನಡೆಯಬೇಕಾಗುತ್ತದೆ. ಆ ಸಂದರ್ಭದಲ್ಲಿ ಯಾರಿಗೆ ಬಹುಮತವಿದೆಯೋ ಅವರಿಗೆ ಸರ್ಕಾರ ರಚಿಸುವ ಅವಕಾಶವನ್ನು ನೀಡಲಾಗುತ್ತದೆ.

ರಾಜ್ಯಪಾಲರಿಗೆ ಸಂವಿಧಾನದ ವಿಧಿ 175 (2)ರಂತೆ ಬಹುಮತ ಸಾಬೀತು ಪಡಿಸಲು ಮುಖ್ಯಮಂತ್ರಿಗಳಿಗೆ ಸೂಚಿಸುವ ಪರಮಾಧಿಕಾರವಿದೆ. ಅದರಂತೆ ಈಗ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ರವಾನಿಸಿರುವ ಪತ್ರ ಕಾನೂನುಬದ್ಧವಾಗಿಯೇ ಇದೆ. ಆದರೆ ವಿಶ್ವಾಸ ಮತಯಾಚನೆಯ ಪ್ರಕ್ರಿಯೆಗಳು ಈಗಾಗಲೇ ಸದನದಲ್ಲಿ ಪ್ರಾರಂಭವಾಗಿದೆ. ಸದನದಲ್ಲಿ ಸ್ಪೀಕರ್ ಅವರದೇ ಪರಮಾಧಿಕಾರ. ಹಾಗಿರುವಾಗ ಈಗಾಗಲೇ ಆರಂಭವಾಗಿರುವ
ವಿಶ್ವಾಸಮತ ಪ್ರಕ್ರಿಯೆಯನ್ನು ಇಂತಿಷ್ಟೇ ಸಮಯದಲ್ಲಿ ಪೂರ್ಣಗೊಳಿಸಬೇಕೆಂದು ಸೂಚಿಸುವ ಅಧಿಕಾರ ರಾಜ್ಯಪಾಲರಿಗೆ ಇದೆಯೇ? ಎಂಬ ಪ್ರಶ್ನೆ ಸುಪ್ರೀಂಕೋರ್ಟ್ ವ್ಯಾಪ್ತಿಗೆ ಹೋಗುವ ಸಾಧ್ಯತೆಗಳಿವೆ. – ದಿವಾಕರ್, ಹಿರಿಯ ನ್ಯಾಯವಾದಿ

ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡುವ ಸಂಪೂರ್ಣ ಅಧಿಕಾರ ರಾಜ್ಯಪಾಲರಿಗಿದೆ. ಅದರಂತೆ ಇಂದು ಅವರು ಮುಖ್ಯಮಂತ್ರಿಗಳಿಗೆ ನೀಡಿರುವ ನಿರ್ದೇಶನವನ್ನು ಸಿಎಂ ಪಾಲಿಸಬೇಕಾಗುತ್ತದೆ. – ಅಶೋಕ್ ಹಾರ್ನಹಳ್ಳಿ, ಮಾಜಿ ಅಡ್ವೋಕೆಟ್ ಜನರಲ್.