ವಿಧಾನಸಭೆಯಲ್ಲೇ ಬಿಜೆಪಿ ಶಾಸಕರ ಅಹೋರಾತ್ರಿ ಧರಣಿ
ಮೈಸೂರು

ವಿಧಾನಸಭೆಯಲ್ಲೇ ಬಿಜೆಪಿ ಶಾಸಕರ ಅಹೋರಾತ್ರಿ ಧರಣಿ

July 19, 2019

ಬೆಂಗಳೂರು, ಜು.18- ತಕ್ಷಣವೇ ಸದನದಲ್ಲಿ ಮುಖ್ಯಮಂತ್ರಿಗಳು ವಿಶ್ವಾಸ ಮತಯಾಚಿಸಬೇಕೆಂದು ಆಗ್ರಹಿಸಿ ಬಿಜೆಪಿ ಶಾಸಕರು ಇಂದು ರಾತ್ರಿ ವಿಧಾನಸಭೆಯಲ್ಲೇ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಅವರಿಗೆ ಊಟದ ವ್ಯವಸ್ಥೆ ಕಲ್ಪಿಸ ಲಾಗಿದ್ದು, ಊಟದ ನಂತರ ಶಾಸಕರು ವಿಧಾನಸೌಧದ ಮುಂದೆ ವಾಯುವಿಹಾರ ನಡೆಸಿದರು. ಇಂದು ಬೆಳಿಗ್ಗೆ ಸದನ ಆರಂಭ ವಾದಾಗ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಪ್ರಸ್ತಾವನೆ ಮಂಡಿಸಿದರು. ಆ ವೇಳೆ ಪ್ರಸ್ತಾವನೆ ಮೇಲೆ ಚರ್ಚೆ ನಡೆಸಲು ಸ್ಪೀಕರ್ ರಮೇಶ್‍ಕುಮಾರ್ ಅವಕಾಶ ನೀಡಿದರು. ಮುಖ್ಯಮಂತ್ರಿಗಳು ಮಾತನಾಡುತ್ತಿರುವಂತೆಯೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕ್ರಿಯಾಲೋಪ ಎತ್ತಿದ ಕಾರಣ ವಿಶ್ವಾಸಮತ ಪ್ರಕ್ರಿಯೆ ನೆನೆಗುದಿಗೆ ಬಿತ್ತು. ಈ ವೇಳೆ ರಾತ್ರಿ 12 ಗಂಟೆಯಾದರೂ ಸರಿ. ಆಡಳಿತ ಪಕ್ಷದವರು ಮಾತನಾಡಲಿ. ನಾವು ಹೆಚ್ಚು ಮಾತನಾಡಲ್ಲ. ಆದರೆ, ವಿಶ್ವಾಸಮತ ಪ್ರಕ್ರಿಯೆ ಇಂದೇ ಮುಗಿಯಬೇಕು ಎಂದು ಬಿಜೆಪಿ ಶಾಸಕರು ಆಗ್ರಹಿಸಿದ್ದರು.

ಆದರೆ ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿದ ಪರಿಣಾಮ ಬಿಜೆಪಿ ಶಾಸಕರು ವಿಧಾನಸಭೆಯಲ್ಲೇ ಪ್ರತಿಭಟನೆ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ ಇಂದು ಸದನದಲ್ಲಿ ಅವರ ಶಾಸಕರೆಷ್ಟಿದ್ದರು? ನಮ್ಮ ಶಾಸಕರೆಷ್ಟಿದ್ದರು? ಸ್ಪೀಕರ್‍ಗೆ ಇದಕ್ಕಿಂತ ಪುರಾವೆ ಬೇಕಿತ್ತಾ? ಇವತ್ತಿನ ಕಾರ್ಯಕಲಾಪ ಮುಂದೂಡುವುದು ಮೈತ್ರಿ ನಾಯಕರ ಷಡ್ಯಂತ್ರವಾಗಿತ್ತು ಎಂದು ಕಿಡಿಕಾರಿದರು.

ನಾವು ಇಡೀ ರಾತ್ರಿ ಸದನದಲ್ಲೇ ಸತ್ಯಾಗ್ರಹ ಮಾಡುತ್ತೇವೆ. ದೇಶ, ರಾಜ್ಯದ ಜನಕ್ಕೆ ತಿಳಿಯಲಿ. ಅದೆಷ್ಟು ದಿನ ಹೀಗೇ ಕಲಾಪ ನಡೆಸುತ್ತಾರೋ ನೋಡೋಣ. ವಿಶ್ವಾಸಮತಯಾಚನೆ ಮಾಡುತ್ತಾರೆಂದು ನಾವು ಸದನ ನಡೆಸಲು ಒಪ್ಪಿಗೆ ನೀಡಿದೆವು, ಆದರೆ ಅನಗತ್ಯವಾಗಿ ಕಾಲಹರಣ ಮಾಡಿದ್ದಾರೆ ಎಂದು ಮೈತ್ರಿ ಪಕ್ಷದ ನಾಯಕರ ವಿರುದ್ಧ ಗುಡುಗಿದರು.

ಇಂದಿನ ಸದನವನ್ನು ಇಡೀ ದೇಶ ನೋಡಿದೆ, ಸದನದಲ್ಲಿ ಹೇಗೆ ನಡೆದುಕೊಂಡಿ ದ್ದಾರೆ ಎಂದು ಜನರಿಗೆ ತಿಳಿದಿದೆ. ವಿಶ್ವಾಸಮತ ಪ್ರಸ್ತಾವನೆಯ ಹದಿನೈದು ನಿಮಿಷದ ಬಳಿಕ ಅನಗತ್ಯ ವಿಚಾರ ಮಧ್ಯಕ್ಕೆ ತಂದರು. ಮೈತ್ರಿ ಪಕ್ಷಗಳ ಬಳಿ ಕೇವಲ 98 ಸಂಖ್ಯೆ ಇದೆ, ನಮ್ಮ ಬಳಿ 105 ಶಾಸಕರಿದ್ದಾರೆ. ಇಷ್ಟಾದರೂ ಸಿಎಂ ರಾಜೀನಾಮೆ ನೀಡಲಿಲ್ಲ. ಇಂದು ವಿಶ್ವಾಸ ಮತ ಸಾಬೀತು ಪಡಿಸದೆ, ಪ್ರಜಾತಂತ್ರ ವ್ಯವಸ್ಥೆಯ ಅಣಕು ಮಾಡಿದ್ದಾರೆ. ಒಂದು ರೀತಿ ಸರ್ಕಾರವನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಸುಪ್ರೀಂಕೋರ್ಟ್ ಎಲ್ಲವನ್ನೂ ಗಮನಿಸುತ್ತಿದೆ ಎಂದು ಹರಿಹಾಯ್ದರು.

ರಾಜ್ಯಪಾಲರ ಸೂಚನೆಗೂ ಕಿಮ್ಮತ್ತಿಲ್ಲ: ನಮ್ಮ ಮನವಿಗೆ ರಾಜ್ಯಪಾಲರು ಸ್ಪಂದಿಸಿ, ಸ್ಪೀಕರ್‍ಗೆ ವಿಶ್ವಾಸ ಮತಯಾಚನೆ ಮುಗಿಸಬೇಕೆಂದು ರಾಜ್ಯಪಾಲರು ಸಂದೇಶ ಕಳುಹಿಸಿದ್ದರು. ಹೀಗಾಗಿ ರೂಲಿಂಗ್ ಕೊಡುವಂತೆ ಕೇಳಿದೆವು. ಆದರೆ ಸ್ಪೀಕರ್ ರೂಲಿಂಗ್ ಕೊಡಲಿಲ್ಲ. ರಾಜ್ಯಪಾಲರ ಮಾತನ್ನೂ ಕೇಳದೆ ಪ್ರಜಾಪ್ರಭುತ್ವವವನ್ನೇ ಬುಡಮೇಲು ಮಾಡಲಾಗುತ್ತಿದೆ. ಇವರಿಗೆಲ್ಲ ಏನಾಗಿದೆ. ಅಭಿವೃದ್ಧಿ ಕುಂಠಿತವಾಗಿ ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ. ಚರ್ಚೆ ಮಾಡದೇ ರಾಜೀನಾಮೆ ನೀಡಬೇಕಿತ್ತು ಎಂದು ಯಡಿಯೂರಪ್ಪ ಕಿಡಿ ಕಾರಿದರು. ಸುಪ್ರೀಂಕೋರ್ಟ್ ಆದೇಶ ಸ್ಪಷ್ಟವಾಗಿದ್ದು, ಅರ್ಜಿದಾರ ಶಾಸಕರು ಸದನಕ್ಕೆ ಬರುವಂತೆ ಒತ್ತಾಯ ಮಾಡುವಂತಿಲ್ಲ ಎಂದು ಆದೇಶಿಸಿದೆ. ಶಾಸಕರಿಗೆ ವಿಪ್ ನೀಡಲು ಬಿಜೆಪಿ ಅಕ್ಷೇಪ ಮಾಡಿಲ್ಲ. ವಿಪ್ ಜಾರಿ ಮಾಡಿದರೆ ಶಾಸಕರಿಲ್ಲದೇ ಬಹುಮತ ಕಳೆದುಕೊಳ್ಳುತ್ತೇವೆ ಎಂದು ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಈ ವಿಷಯ ಸಿಎಂಗೆ ಗೊತ್ತಿರಲಿಲ್ಲವೇ ಎಂದು ಬಿಎಸ್‍ವೈ ಪ್ರಶ್ನಿಸಿದರು. ವರ್ಗಾವಣೆ ದಂಧೆ ಮೂಲಕ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ರಾತ್ರಿ ಹಗಲು ಸಾವಿರಾರು ಫೈಲ್‍ಗಳು ವಿಲೇವಾರಿಯಾಗುತ್ತಿವೆ. ಅಲ್ಪ ಮತಕ್ಕೆ ಕುಸಿದರೂ ಅನೇಕ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯಪಾಲರ ಸೂಚನೆ ಮೀರಿ ನಡೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

Translate »