ಬಿಜೆಪಿ ಅಸ್ತ್ರಕ್ಕೆ ದೋಸ್ತಿ `ವಿಪ್’ ಪ್ರತ್ಯಸ್ತ್ರ: ಕಲಾಪ ಕಾಲಹರಣ
ಮೈಸೂರು

ಬಿಜೆಪಿ ಅಸ್ತ್ರಕ್ಕೆ ದೋಸ್ತಿ `ವಿಪ್’ ಪ್ರತ್ಯಸ್ತ್ರ: ಕಲಾಪ ಕಾಲಹರಣ

July 19, 2019

ಬೆಂಗಳೂರು, ಜು.18(ಕೆಎಂಶಿ)- ಕಾಂಗ್ರೆಸ್-ಜೆಡಿಎಸ್‍ನ 15 ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥಗೊಳ್ಳುವವರೆಗೂ ವಿಶ್ವಾಸಮತ ಯಾಚನೆಗೆ ಅವಕಾಶ ನೀಡಬಾರದು ಎಂದು ಸಿಎಲ್‍ಪಿ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಎತ್ತಿದ ಕ್ರಿಯಾಲೋಪ ಇಂದು ಇಡೀ ದಿನದ ಕಲಾಪವನ್ನೇ ಬಲಿ ತೆಗೆದುಕೊಂಡಿತು.

ಸಿದ್ದರಾಮಯ್ಯ ಅವರ ಕ್ರಿಯಾಲೋಪ ಅಂಗೀಕರಿಸಬೇಕೇ ಇಲ್ಲ ತಿರಸ್ಕರಿಸಬೇಕೇ ಅಥವಾ ಸುಪ್ರೀಂಕೋರ್ಟ್‍ನಲ್ಲೇ ಶಾಸಕರ ರಾಜೀನಾಮೆಯ ಸಂಶಯವನ್ನು ನಿವಾರಿಸಿಕೊಳ್ಳಬೇಕೇ ಎಂಬ ಬಗ್ಗೆ ರಾಜ್ಯ ಅಡ್ವೊಕೇಟ್ ಜನರಲ್ ಅವರಿಂದ ಮಾಹಿತಿ ಪಡೆದು, ನಂತರ ನಾನು ನಿರ್ಧಾರ ಪ್ರಕಟಿಸುತ್ತೇನೆ ಎಂಬ ನಿರ್ಧಾರಕ್ಕೆ ಸ್ಪೀಕರ್ ರಮೇಶ್ ಕುಮಾರ್ ಬಂದರು. ಆದರೆ ಅಡ್ವೋಕೇಟ್ ಜನರಲ್ ಅವರು ಭೋಜನ ವೇಳೆಯಲ್ಲಿ ಸಭಾಧ್ಯಕ್ಷರಿಗೆ ಸಮಯಾವಕಾಶ ದೊರೆಯದ ಹಿನ್ನೆಲೆಯಲ್ಲಿ ಸಂಜೆ ಪಡೆಯುವುದಾಗಿ ಮತ್ತೆ ಸದನ ಸೇರಿದಾಗ ಸಭೆ ಗಮನಕ್ಕೆ ತಂದರು.

ಇದೇ ವೇಳೆ ಕಾಂಗ್ರೆಸ್‍ನ ಶ್ರೀಮಂತ ಪಾಟೀಲ್ ಅವರನ್ನು ಅಪಹರಿಸಲಾಗಿದೆ ಎಂದು ಆಡಳಿತ ಪಕ್ಷದ ಸದಸ್ಯರು ಪ್ರತಿಪಕ್ಷದ ಮೇಲೆ ಮಾಡಿದ ಆರೋಪ ವಾಕ್ಸಮರಕ್ಕೆ ಎಡೆ ಮಾಡಿಕೊಟ್ಟಿತು. ಈ ಹಂತದಲ್ಲಿ ಬಿಜೆಪಿಯ ವಿ.ಸೋಮಣ್ಣ, ಸಭಾಧ್ಯಕ್ಷರು ಸಮಯ ವಿಳಂಬ ಮಾಡುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು. ಸೋಮಣ್ಣ ಅವರ ಆರೋಪನ್ನು ತಳ್ಳಿ ಹಾಕಿದ ಅಧ್ಯಕ್ಷರು, ನಾನು ನಿಯಮಾವಳಿಯಂತೆ ನಡೆದುಕೊಳ್ಳುತ್ತಿ ದ್ದೇನೆ. ನಿಮ್ಮ ನಿಯಮದ ಪ್ರಕಾರ ನಾನು ನಡೆದುಕೊಳ್ಳಲು ಸಾಧ್ಯವಿಲ್ಲ ಎಂದಾಗ ಆಡಳಿತ ಪಕ್ಷದ ಸದಸ್ಯರು ಪೀಠದ ಮುಂದೆ ಬರುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಯಾರು ಏನು ಹೇಳುತ್ತಿದ್ದಾರೆ ಎಂಬುದು ತಿಳಿಯದಾಯಿತು. ಈ ಸಂದರ್ಭದಲ್ಲಿ ಸ್ಪೀಕರ್ ಅರ್ಧ ಗಂಟೆ ಕಾಲ ಸದನ ಮುಂದೂಡಿದರು.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆಯ ಪ್ರಾಸ್ತಾವಿಕ ಭಾಷಣ ಮಾಡುವ ಸಂದರ್ಭದಲ್ಲಿ ಸಂವಿಧಾನದ 10ನೇ ಷೆಡ್ಯೂಲ್ ಕಾನೂನು ಮತ್ತು ನ್ಯಾಯಾಲಯ ನೀಡಿರುವ ತೀರ್ಪಿನಿಂದಾಗಿ ಗೊಂದಲ ಸೃಷ್ಟಿಯಾಗಿದೆ ಎಂದು ಹೇಳುತ್ತಿದ್ದಂತೆ, ಸಿದ್ದರಾಮಯ್ಯ ಅವರು ಮಧ್ಯ ಪ್ರವೇಶಿಸಿ ಕ್ರಿಯಾಲೋಪ ಮಂಡಿಸಿದರು.

ಸಿಎಲ್‍ಪಿ ನಾಯಕರು ವಿಷಯವನ್ನು ಸುದೀರ್ಘ ಹಾಗೂ ಕಾನೂನು ಬದ್ಧವಾಗಿ ಎಳೆ ಎಳೆಯಾಗಿ ಸದನದ ಮುಂದೆ ಬಿಡಿಸಿಡುವಾಗ ಕಾನೂನು ಮತ್ತು ಸಂಸದೀಯ ಸಚಿವ ಕೃಷ್ಣಭೈರೇಗೌಡ ಕೂಡ ಮತ್ತೊಂದು ಕ್ರಿಯಾಲೋಪವೆತ್ತಿದರು.

ಬಿಜೆಪಿಯ ಮಾಧುಸ್ವಾಮಿ, ಜಗದೀಶ್ ಶೆಟ್ಟರ್, ಕೆ.ಜಿ.ಬೊಪಯ್ಯ ಸೇರಿದಂತೆ ಹಲವು ವಿಪಕ್ಷ ಸದಸ್ಯರು ವಿರೋಧ ವ್ಯಕ್ತಪಡಿಸಿದರೂ, ಸಭಾಧ್ಯಕ್ಷ ರಮೇಶ್‍ಕುಮಾರ್ ಕ್ರಿಯಾಲೋಪ ಪ್ರಸ್ತಾಪ ಪೂರ್ಣಗೊಳಿಸಲು ಅನುಮತಿ ನೀಡಿದರು. ಅಧ್ಯಕ್ಷರು ನೀಡಿದ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡ ಸಿದ್ದರಾಮಯ್ಯ – ಮುಖ್ಯಮಂತ್ರಿ ಅವರು ಮಂಡಿಸಿರುವ ಅವಿಶ್ವಾಸ ನಿರ್ಣಯದ ಪ್ರಸ್ತಾಪ ಮುಂದೂಡಿ, ಮೊದಲು 15 ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗಲಿ. ಮುಖ್ಯಮಂತ್ರಿ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ವಿಶ್ವಾಸ ವ್ಯಕ್ತಪಡಿಸುತ್ತದೆ ಎಂಬ ನಿರ್ಣಯವನ್ನು ಕುಮಾರಸ್ವಾಮಿ ಮಂಡಿಸಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 15 ಶಾಸಕರ ವಿಚಾರ ಸುಪ್ರೀಂಕೋರ್ಟ್‍ನಲ್ಲಿದ್ದು, ಅದರ ಅಂತಿಮ ತೀರ್ಪು ಬರುವವರೆಗೂ ಈ ಪ್ರಸ್ತಾವವನ್ನು ಮುಂದೂಡಬೇಕು ಎಂದು ಮನವಿ ಮಾಡಿದರು. ರಾಜೀನಾಮೆ ನೀಡಿರುವ ಶಾಸಕರು ಸದನಕ್ಕೆ ಹಾಜರಾಗುವುದು ಕಡ್ಡಾಯವಲ್ಲ ಎಂಬ ಸುಪ್ರೀಂಕೋರ್ಟ್‍ನ ಮಧ್ಯಂತರ ಆದೇಶವಿದೆ. ಆದರೆ, ಸಂವಿಧಾನದ 10ನೇ ಷೆಡ್ಯೂಲ್ ಪ್ರಕಾರ ರಾಜಕೀಯ ಪಕ್ಷ, ಶಾಸಕಾಂಗ ಪಕ್ಷದ ನಾಯಕರಿಗೆ ವ್ಹಿಪ್ ನೀಡುವ ಅವಕಾಶವಿದೆ. ಅವರಿಗೂ ಕೂಡ ವಿಪ್ ಅನ್ವಯವಾಗಲಿದೆ. ಈ ಪರಿಸ್ಥಿತಿಯಲ್ಲಿ ವಿಶ್ವಾಸ ಮತದ ನಿರ್ಣಯದ ಚರ್ಚೆ ಮುಂದುವರೆಸುವುದು ಸರಿಯಲ್ಲ ಎಂದು ಹೇಳಿದರು.

ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ನಾವು ವ್ಹಿಪ್ ಕೊಟ್ಟರೂ ಕಾಂಗ್ರೆಸ್-ಜೆಡಿಎಸ್ ಶಾಸಕರು ಸದನಕ್ಕೆ ಬರುವುದಿಲ್ಲ. ಅವರು ಬಾರದೆ ವಿಶ್ವಾಸಮತವನ್ನು ಮತಕ್ಕೆ ಹಾಕಿದಾಗ ಕಾಂಗ್ರೆಸ್ ಪಕ್ಷ ಮತ್ತು ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ನಷ್ಟ ಉಂಟಾಗುತ್ತದೆ. ಸಂವಿಧಾನ ಬದ್ಧ ಸರ್ಕಾರಕ್ಕೂ ದೊಡ್ಡ ನಷ್ಟ ಉಂಟಾಗುತ್ತದೆ ಎಂದರು.

ಮಾತು ಮುಂದುವರೆಸಿದ ಸಿದ್ದರಾಮಯ್ಯ ಅವರು, ಸಂವಿಧಾನದ 10ನೇ ಷೆಡ್ಯೂಲ್ ಪ್ರಕಾರ ಕಾಂಗ್ರೆಸ್ ಪಕ್ಷದ ಶಾಸಕರಿಗೆ ವ್ಹಿಪ್ ನೀಡಲಾಗಿದೆ. 10 ಮಂದಿ ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಗುಂಪಾಗಿಯೇ ಹೋಗಿದ್ದಾರೆ. ಒಬ್ಬೊಬ್ಬರೇ ಹೋಗಿಲ್ಲ. ಜೆಡಿಎಸ್-ಕಾಂಗ್ರೆಸ್‍ನ ಹಲವು ಸದಸ್ಯರು ರಾಜೀನಾಮೆ ಕೊಟ್ಟು ಒಟ್ಟಾಗಿ ಹೋಗಿದ್ದಾರೆ ಎಂದರು. ಸಂವಿಧಾನದ 10ನೇ ಷೆಡ್ಯೂಲ್ ಈಗಲೂ ಚಾಲ್ತಿಯಲ್ಲಿದ್ದು, ರಾಜಕೀಯ ಪಕ್ಷಗಳಿಗೆ ವ್ಹಿಪ್ ಕೊಡುವ ಅಧಿಕಾರವಿದೆ. ಇದು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಎಲ್ಲ ಪಕ್ಷಗಳಿಗೂ ಅನ್ವಯವಾಗುತ್ತದೆ. ವ್ಹಿಪ್ ನೀಡಿ ಸದನಕ್ಕೆ ಹಾಜರಾಗಬೇಕೆಂದು ಹೇಳಿದ್ದರೂ ಅವರು ಹೋಗಿದ್ದಾರೆ ಎಂದರು.

ಶಾಸಕ ಪ್ರತಾಪ್‍ಗೌಡ ಪಾಟೀಲ್ ಮತ್ತು ಇತರೆ 9 ಮಂದಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಜೊತೆಗೆ ಇತರೆ ಐದು ಮಂದಿ ಶಾಸಕರು ಕೂಡ ಸೇರ್ಪಡೆಯಾಗಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರು ಸುಪ್ರೀಂಕೋರ್ಟ್‍ಗೆ ಹೋಗಿರುವ ವಿಚಾರದಲ್ಲಿ ನ್ಯಾಯಾಲಯವು ಶಾಸಕಾಂಗ ಪಕ್ಷದ ನಾಯಕನಾದ ತಮ್ಮನ್ನಾಗಲಿ, ಕಾಂಗ್ರೆಸ್ ಪಕ್ಷವನ್ನಾಗಲಿ ಪ್ರತಿವಾದಿಯನ್ನಾಗಿ ಮಾಡಿಲ್ಲ. ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಲ್ಲಿ ಶಾಸಕರು ಸದನದಲ್ಲಿ ಹಾಜರಾಗುವುದು, ಬಿಡುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದೆ ಎಂಬ ಅಂಶವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದರು.

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಯಿತು. ಆ ಕೀರ್ತಿ ಅವರಿಗೇ ಸಲ್ಲಬೇಕು ಎಂದಾಗ, ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ಪೆÇ್ರ.ಮಧು ದಂಡವತೆ ಅವರು ಪಕ್ಷಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದ ವಿಧೇಯಕದ ಚರ್ಚೆಯಲ್ಲಿ ಪಾಲ್ಗೊಂಡು ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರಿಗೆ ಗೌರವ ಸಲ್ಲಿಸುವುದೇ ಆದರೆ ಪಕ್ಷಾಂತರ ಪಿಡುಗನ್ನು ಕೊನೆಗಾಣಿಸಬೇಕು ಎಂದು ಹೇಳಿದರು.

ಈ ಮಧ್ಯೆ ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಸದನಕ್ಕೆ ಗೈರು ಹಾಜರಾಗಿರುವ ಮತ್ತು ರಾಜೀನಾಮೆ ನೀಡಿರುವ 15 ಮಂದಿ ಶಾಸಕರು ವಿಧಾನಸಭೆಯ ಸದಸ್ಯರೋ, ಅಲ್ಲವೋ ಎಂಬುದು ತೀರ್ಮಾನವಾಗಬೇಕು ಎಂದರು. ವ್ಹಿಪ್ ಜಾರಿ ಅಥವಾ ಅದಕ್ಕೆ ಸೀಮಿತವಾದ ವಿಷಯ ಚರ್ಚೆಗಿಂತಲೂ 15 ಮಂದಿ ಶಾಸಕರು ಈ ಮನೆ ಸದಸ್ಯರು ಅಲ್ಲವೋ ಎಂಬುದು ಮೊದಲು ತೀರ್ಮಾನವಾಗಲಿ ಎಂದರು. ಸದನದ ನಿಯಮಾವಳಿ 178 ಪ್ರಮಾಣವಚನ ಸ್ವೀಕಾರಕ್ಕೆ ಸಂಬಂಧಪಟ್ಟಿದ್ದರೆ, 190 ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ವಿಷಯ ಕುರಿತ ಮಾಹಿತಿ ನೀಡುತ್ತದೆ. ಈ ಎರಡೂ ಆಯಾಮಗಳನ್ನು ಬಿಟ್ಟು ಮೂರನೇ ಆಯಾಮಕ್ಕೆ ಅವಕಾಶವೇ ಇಲ್ಲ. ಈಗಿನ ಪರಿಸ್ಥಿತಿಯಲ್ಲಿ ಶಾಸಕರು ರಾಜೀನಾಮೆ ಕೊಟ್ಟಿರುವುದರಿಂದ ಗೊಂದಲ ಸೃಷ್ಟಿಯಾಗಿದೆ. ವಿಶ್ವಾಸ ಮತ ರಾಜ್ಯದ ಭವಿಷ್ಯವನ್ನು ನಿರ್ಧರಿಸುತ್ತದೆ. ಅಂತಹ ಸಂದರ್ಭದಲ್ಲಿ ಈ 15 ಮಂದಿ ಗೈರು ಹಾಜರಿ ಗಂಭೀರ ವಿಚಾರ. ಅವರನ್ನು ಬದಿಗಿಟ್ಟು ವಿಶ್ವಾಸಮತ ಯಾಚಿಸಿದರೆ ಅದು ಸಿಂಧುತ್ವವಾಗುತ್ತದೋ, ಇಲ್ಲವೋ ಎಂಬ ಅನುಮಾನವೂ ಕೂಡ ಮೂಡುತ್ತದೆ ಎಂದು ಹೇಳಿದರು.