ಮೈಸೂರು ಅರಮನೆಯಲ್ಲಿ ಶ್ರೀಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಆಚರಣೆ
ಮೈಸೂರು

ಮೈಸೂರು ಅರಮನೆಯಲ್ಲಿ ಶ್ರೀಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಆಚರಣೆ

July 19, 2019

ಮೈಸೂರು,ಜು.18(ಎಂಟಿವೈ)- ಅಧಿಕಾರ ಪಡೆಯಲು ಹಾಗೂ ಕೈಯಲ್ಲಿರುವ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಮಾಡುವವರು ಮೈಸೂರು ಸಂಸ್ಥಾನದ ಕೊನೆಯ ಅರಸ ಜಯಚಾಮರಾಜ ಒಡೆಯರ್ ಅವರ ಆದರ್ಶ ಅರ್ಥೈಸಿಕೊಳ್ಳಬೇಕು ಎಂದು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಅರಮನೆ ದರ್ಬಾರ್ ಹಾಲ್ ನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆ ಯರ್ ಫೌಂಡೇಶನ್ ವತಿಯಿಂದ ಗುರು ವಾರ ನಡೆದ ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವ ಸಮಾರಂಭ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಹಲವು ರಾಜಮನೆತನಗಳನ್ನು ಕಂಡ ದೇಶವಾಗಿದೆ. ಆದರೆ ಎಲ್ಲಾ ರಾಜ ಮನೆತನದವರಿಗಿಂತ ಮೈಸೂರು ರಾಜ ಮನೆತನ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಇತ್ತೀಚಿನ ದಿನಗಳಲ್ಲಿ ಅಧಿ ಕಾರಕ್ಕೆ ಹಂಬಲಿಸುವವರ ಸಂಖ್ಯೆ ಹೆಚ್ಚಾಗಿದೆ. ಅಧಿಕಾರ ತನ್ನ ಕೈ ವಶ ಮಾಡಿಕೊಳ್ಳ ಬೇಕೆಂದು ಪರಿತಪಿಸುವವರು ಹಾಗೂ ಅಧಿಕಾರ ಉಳಿಸಿಕೊಳ್ಳಲು ಪಾಡು ಪಡು ವವರು ನಮ್ಮಲ್ಲಿದ್ದಾರೆ. ಇಂತಹವರು ಜಯಚಾಮರಾಜ ಒಡೆಯರ್ ಅವರ ಆದರ್ಶ ಅರ್ಥೈಸಿಕೊಳ್ಳಬೇಕು. ಪಟ್ಟಾಭಿ ಷೇಕಕ್ಕೆ ಒಳಗಾದ ಕೆಲವೇ ವರ್ಷಗಳಲ್ಲಿ ಸ್ವಯಂ ಪ್ರೇರಣೆಯಲ್ಲಿ ಭಾರತದ ಒಕ್ಕೂ ಟದ ವ್ಯವಸ್ಥೆಗೆ ಮೈಸೂರು ಸಾಮ್ರಾಜ್ಯ ವನ್ನು ಸೇರಿಸಿದರು.ಇದು ಅಧಿಕಾರಶಾಹಿ ಮನಸುಳ್ಳವರಿಗೆ ನೀತಿ ಪಾಠದಂತಿದೆ ಎಂದರು.

ಪ್ರಸ್ತುತ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ರಾಜಪ್ರಭುತ್ವ ಇಲ್ಲವಾಗಿದೆ. ಅನೇಕ ಅರಸರು ಇದ್ದರೂ ಇಲ್ಲದಂತಿದ್ದಾರೆ. ಆದರೆ ಮೈಸೂರು ರಾಜಮನೆತನದ ಅರಸರು ನೀಡಿದ ಜನಪರ ಆಡಳಿತದಿಂದಾಗಿ, ಪ್ರಜಾಪ್ರಭುತ್ವದಲ್ಲೂ ರಾಜಮನೆತನ ದವರ ಮೇಲೆ ಇಲ್ಲಿನ ಜನರು ಅಚ್ಚಳಿಯದ ಪ್ರೀತಿ ಹೊಂದಿದ್ದಾರೆ. ಇದನ್ನು ತೊಡೆದು ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಭೂಮಿ, ಸಂಪತ್ತಿಗಾಗಿ ಇತಿಹಾಸದಲ್ಲಿ ಎಷ್ಟೋ ರಾಜರು, ರಾಣಿಯರು ತಮ್ಮ ಕಿರೀಟ ಕಳೆದುಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಪ್ರಭುತ್ವದ ವೈಭವ ಮರೆಯಾಗಿದೆ. ಆದರೆ, ಮೈಸೂರಿನಲ್ಲಿ ಒಡೆಯರ್ ಮನೆತನದ ಸಂಸ್ಕøತಿಯ ಕುರುಹು ಇನ್ನೂ ಇದೆ. ಒಡೆಯರ್ ಅವರ ಜನಪರ ಆಡಳಿತ, ಕಲಾ-ಸಂಸ್ಕøತಿ ಪೋಷಣೆ, ವನ್ಯಜೀವಿ ಸಂರಕ್ಷಣೆ ಹಾಗೂ ಇನ್ನಿತರ ಮಹತ್ತರ ಕಾರ್ಯಗಳೇ ರಾಜಮನೆತನದ ಜೀವಂತಿಕೆಗೆ ಕಾರಣವಾಗಿದೆ. ಈ ಹಾದಿಯಲ್ಲೇ ನಡೆದ ಜಯಚಾಮರಾಜ ಒಡೆಯರ್ ಖ್ಯಾತಿಗಳಿಸಲು ಸಾಧ್ಯವಾಯಿತು. ಮೈಸೂರು ಒಡೆಯರ್ ಮನೆತನ ಇತಿಹಾಸದ ದಾಖಲೆಗಳಿಗಿಂತ ಜನಮಾನಸದಲ್ಲಿ ನೆಲೆಸಿದೆÉ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಯಚಾಮರಾಜ ಒಡೆಯರ್ ಅವರ `ಜೀವನ್ಮುಕ್ತ ಗೀತ, ಅವದೂತ ಗೀತ,’ ಕೃತಿಗಳಿಗೆ ಮುನ್ನುಡಿ ಬರೆಯುವಾಗ ಡಾ.ಎಸ್.ರಾಧಾಕೃಷ್ಣನ್ ಅವರು ಒಡೆಯರ್ ಪ್ರತಿಭೆಯನ್ನು ಹಾಡಿ ಹೊಗಳಿದ್ದಾರೆ. ರಾಧಾಕೃಷ್ಣನ್ ಅವರು ತತ್ವಜ್ಞಾನಿಗಳಲ್ಲಿ ರಾಜರಾದರೆ, ಜಯಚಾಮರಾಜ ಒಡೆಯರ್ ರಾಜರಲ್ಲಿ ತತ್ವಜ್ಞಾನಿಯಾಗಿದ್ದರು. ಒಡೆಯರ್ ಪಾಶ್ಚಾತ್ಯ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಜಯಚಾಮರಾಜ ಒಡೆಯರ್ 94 ಸಂಗೀತ ಕೃತಿಗಳನ್ನು ರಚಿಸಿದ್ದಾರೆ ಎಂದು ಹೇಳಿದ್ದಾರೆ. ಬ್ರಿಟಿಷರು ದೇಶದ ನಾಲ್ವರು ರಾಜರಿಗೆ 21 ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಿದ್ದರು. ಅದರಲ್ಲಿ ಜಯಚಾಮರಾಜ ಒಡೆಯರ್ ಅವರೂ ಒಬ್ಬರಾಗಿದ್ದರು. ಇದರಿಂದ ಮೈಸೂರು ರಾಜಮನೆತನದವರ ದಕ್ಷ ಆಡಳಿತವನ್ನು ಮನಗಾಣಬಹುದಾಗಿದೆ ಎಂದರು.

ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಮಾತನಾಡಿ, ಜಯಚಾಮರಾಜ ಒಡೆಯರ್ ಅವರು ಲಲಿತ ಕಲೆಗಳಿಗೆ ನೀಡಿದ ಪ್ರೋತ್ಸಾಹ ಮತ್ತು ಸಂಸ್ಕøತ, ವೇದಶಾಸ್ತ್ರ, ಪುರಾಣವನ್ನು ಕನ್ನಡಕ್ಕೆ ಅನುವಾದಿಸಿದ್ದು ಮಹತ್ವದ ಕಾರ್ಯಗಳಾಗಿವೆ. ಕಲೆಗಳ ಮೇಲಿದ್ದ ವಿಶೇಷ ಆಸಕ್ತಿಯನ್ನು ಗುರುತಿಸಿ ಜಗನ್ಮೋಹನ ಅರಮನೆ ಆರ್ಟ್ ಗ್ಯಾಲರಿಯನ್ನು ನವೀಕೃತಗೊಳಿಸಿ ಅವರಿಗೆ ಸಮರ್ಪಿಸುತ್ತಿದ್ದೇವೆ. ಮೈಸೂರು ವಿವಿ ನೂತನ ಕ್ಯಾಂಪಸ್‍ಗೆ ಜಯಚಾಮರಾಜ ಒಡೆಯರ್ ಸೆಂಟರ್ ಆಫ್ ಹೈಯರ್ ಎಜುಕೇಷನ್ ಹೆಸರಿಡಲು ತೀರ್ಮಾನಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರಲ್ಲದೆ, ಜಗನ್ಮೋಹನ ಅರಮನೆಯ ಆರ್ಟ್ ಗ್ಯಾಲರಿಯನ್ನು ನವೀಕರಣ ಮಾಡಿ ಮಾವ(ಜಯಚಾಮರಾಜ ಒಡೆಯರ್)ನವರಿಗೆ ಅರ್ಪಿಸುತ್ತಿರುವುದಾಗಿ ಹೇಳಿ ಗದ್ಗದಿತರಾದರು.

ಸನ್ಮಾನ: ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 8 ಸಾಧಕರಿಗೆ ಜಯಚಾಮರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯೋಗ ಕ್ಷೇತ್ರದಿಂದ ಬಿ.ಕೆ.ಎಸ್.ಐಯ್ಯಂಗಾರ್, ತತ್ವಶಾಸ್ತ್ರಜ್ಞ ಪ್ರೊ.ಎ.ಎಲ್.ಶಿವರುದ್ರಪ್ಪ, ಸಾಹಿತ್ಯ ಕ್ಷೇತ್ರದಲ್ಲಿ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ, ಸಂಸ್ಕøತ ಸಾಹಿತ್ಯದಲ್ಲಿ ಲಕ್ಷ್ಮೀ ತಾತಾಚಾರ್, ಚಲನಚಿತ್ರ ಕ್ಷೇತ್ರದಿಂದ ಬಿ.ಸುಧಾಮೂರ್ತಿ, ಸಮಾಜ ಸೇವೆಗೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಡಾ.ಸುಧಾಮೂರ್ತಿ, ವನ್ಯಜೀವಿ ಸಂರಕ್ಷಣೆಗಾಗಿ ಡಾ.ಅಜಯ್ ದೇಸಾಯಿ, ಕೃಷಿ ಕ್ಷೇತ್ರದಿಂದ ಸೈಯ್ಯದ್ ಘನಿಖಾನ್, ಕ್ರೀಡಾ ಕ್ಷೇತ್ರದಲ್ಲಿ ಪ್ರಣವಿ ಅರಸ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾ ಯಿತು. ಜಯಚಾಮರಾಜ ಒಡೆಯರ್ ಸಂಗೀತ ಸಂಯೋಜನೆಯ 94 ಕೃತಿಗಳ ಸಿಡಿಯನ್ನು ಮೈಸೂರು ಆಕಾಶವಾಣಿಯ ನಿರ್ದೇಶಕ ಸುನಿಲ್ ಭಾಟೀಯಾ ರಾಜವಂಶಸ್ಥರಿಗೆ ಹಸ್ತಾಂತರಿಸಿದರು, ಮೈಸೂರು ವಿಶ್ವವಿದ್ಯಾನಿಲಯದ ನೂತನ ಕ್ಯಾಂಪಸ್‍ಗೆ `ಜಯಚಾಮ ರಾಜ ಒಡೆಯರ್ ಸೆಂಟರ್ ಆಫ್ ಹೈಯರ್ ಎಜುಕೇಷನ್’ ಎಂದು ನಾಮಕರಣ ಮಾಡುವುದಾಗಿ ಮೈಸೂರು ವಿವಿ ಕುಲಪತಿ ಡಾ.ಹೇಮಂತಕುಮಾರ್ ಘೋಷಿಸಿದರು.

ಕಾರ್ಯಕ್ರಮದಲ್ಲಿ ರಾಜವಂಶಸ್ಥರಾದ ಕಾಮಾಕ್ಷಿದೇವಿ ಒಡೆಯರ್, ಇಂದ್ರಾಕ್ಷಿದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ದೇವಿ ಒಡೆಯರ್, ಪುತ್ರ ಆದ್ಯವೀರ್ ಮುಂತಾದವರು ಭಾಗವಹಿಸಿದ್ದರು. ಗಾಯಕಿ ಮಾಲಿನಿ ಪ್ರಸಾದ್ ಜಯಚಾಮರಾಜ ಒಡೆಯರ್ ಅವರ ಕೃತಿಯನ್ನು ಹಾಡಿದರು. ಇಂಗ್ಲಿಷ್ ಬ್ಯಾಂಡ್ ಕಲಾವಿದರು ಮೈಸೂರು ಸಂಸ್ಥಾನದ ಕಾಯೋಶ್ರೀ ಗೌರಿ ಗೀತೆಯನ್ನು ಪ್ರಸ್ತುಪಡಿಸಿದರು.

Translate »