ಪೊನ್ನಂಪೇಟೆಯಲ್ಲಿ ಎ ಡಿವಿಜನ್ ಹಾಕಿ ಲೀಗ್ ಪಂದ್ಯಾವಳಿ: ನಾಪೋಕ್ಲು ಶಿವಾಜಿ ತಂಡ ಚಾಂಪಿಯನ್
ಕೊಡಗು

ಪೊನ್ನಂಪೇಟೆಯಲ್ಲಿ ಎ ಡಿವಿಜನ್ ಹಾಕಿ ಲೀಗ್ ಪಂದ್ಯಾವಳಿ: ನಾಪೋಕ್ಲು ಶಿವಾಜಿ ತಂಡ ಚಾಂಪಿಯನ್

December 31, 2018

ಗೋಣಿಕೊಪ್ಪಲು, ಡಿ. 30- ಪೊನ್ನಂ ಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆದ ಎ. ಡಿವಿಜóನ್ ಹಾಕಿಲೀಗ್ ಫೈನಲ್‍ನಲ್ಲಿ ನಾಪೋಕ್ಲು ಶಿವಾಜಿ ತಂಡವು ಪ್ರಶಸ್ತಿ ಗೆದ್ದುಕೊಂಡಿದೆ. ಬೇಗೂರು ಈಶ್ವರ ಯೂತ್ ಕ್ಲಬ್ ತಂಡವು ಸೋಲನುಭವಿಸಿ ರನ್ನರ್ ಅಪ್ ತಂಡವಾಗಿ ಉಳಿದುಕೊಂಡಿದೆ.
ಶಿವಾಜಿ ತಂಡವು ಶೂಟೌಟ್ ಮೂಲಕ 4-2 ಗೋಲುಗಳ ಗೆಲುವು ದಾಖಲಿ ಸಿತು. ಶಿವಾಜಿ ಪರ 37 ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‍ನ್ನು ಶುಭಂ ಚಿಟ್ಯಪ್ಪ ಗೋಲಾಗಿ ಪರಿವರ್ತಿಸಿ ಮೈದಾನ ದಲ್ಲಿ ಸಂಚಲನ ಮೂಡಿಸಿದರು. ಇದರ ಬೆನ್ನಲ್ಲೇ ಬೇಗೂರು ಪರ 51 ನೇ ನಿಮಿಷ ದಲ್ಲಿ ದೊರೆತ ಪೆನಾಲ್ಟಿಯನ್ನು ಪೃಥ್ವಿ ಅಯ್ಯಮ್ಮ ಗೋಲಾಗಿ ಪರಿವರ್ತಿಸಿ ಸಮಬಲ ಸಾಧಿಸಲು ಕಾರಣಕರ್ತರಾದರು.
ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡದ ಆಟಗಾರ ಗೌತಂ 9 ಗೋಲು ಹೊಡೆದು ಟೂರ್ನಿಯಲ್ಲಿ ಹೆಚ್ಚು ಗೋಲು ಹೊಡೆದ ಆಟಗಾರ ಪ್ರಶಸ್ತಿ ಪಡೆದು ಕೊಂಡರು. ಉಳಿದಂತೆ ಉತ್ತಮ ಆಟಗಾರರುಗಳಾಗಿ ಟಾಟಾ ಕಾಫಿ ತಂಡದ ಕಾರ್ಯಪ್ಪ, ನಾಪೋಕ್ಲು ಶಿವಾಜಿ ತಂಡದ ಶುಭಂ ಚಿಟ್ಯಪ್ಪ, ಬೇಗೂರು ತಂಡದ ಪೃಥ್ವಿ ಅಯ್ಯಮ್ಮ, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡದ ಬಿಪಿನ್ ಪಡೆದುಕೊಂಡರು.
ಟೂರ್ನಿ ನಿರ್ದೇಶಕರಾಗಿ ನೆಲ್ಲಮಕ್ಕಡ ಪವನ್, ತೀರ್ಪುಗಾರರುಗಳಾಗಿ ಕೊಕ್ಕಂಡ ರೋಶನ್, ಕುಮ್ಮಂಡ ಬೋಸ್, ವೀಕ್ಷಕ ವಿವರಣೆಗಾರರಾಗಿ ಸುಳ್ಳಿಮಾಡ ಸುಬ್ಬಯ್ಯ ಕಾರ್ಯನಿರ್ವಹಿಸಿದರು. ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಮಾತನಾಡಿ, ಈ ಬಾರಿ ನಡೆದ ಹಾಕಿ ವಿಶ್ವಕಪ್‍ನಲ್ಲಿ ರಾಜ್ಯದ ಆಟಗಾರರು ಆಯ್ಕೆಯಾಗದಿರುವುದು ಬೇಸರದ ಸಂಗತಿ. ಕೊಡಗು ಜಿಲ್ಲೆಯಿಂದ ಮತ್ತಷ್ಟು ಮಂದಿ ದೇಶವನ್ನು ಪ್ರತಿನಿಧಿಸುವಂತಾಗಲು ಇಂತಹ ಟೂರ್ನಿ ಸಹಕಾರಿಯಾಗುತ್ತಿದೆ. ಈ ಬಗ್ಗೆ ಉತ್ತೇಜನ ಅವಶ್ಯ ಎಂದರು.
ಅತಿಥಿಗಳಾಗಿ ದಾನಿ ಪಟ್ರಂಗಡ ಧನಿ ಗಂಗಮ್ಮ, ಅಯ್ಯಪ್ಪ, ಹಿರಿಯ ಹಾಕಿ ಆಟಗಾರ ಜಮ್ಮಡ ನಂದಪ್ಪ, ಹಾಕಿಕೂರ್ಗ್ ಕ್ರೀಡಾಕೂಟ ಸಮಿತಿ ಮುಖ್ಯಸ್ಥ ಬುಟ್ಯಂಡ ಚೆಂಗಪ್ಪ, ನಿರ್ದೇಶಕಿ ವೀಣಾ ಚೆಂಗಪ್ಪ ಪಾಲ್ಗೊಂಡು ಬಹುಮಾನ ವಿತರಿಸಿದರು.

Translate »