ನಾಗರಹೊಳೆ ಅಭಯಾರಣ್ಯದಲ್ಲಿ  ಹೆಣ್ಣು ಹುಲಿ ಕಳೇಬರ ಪತ್ತೆ
ಮೈಸೂರು

ನಾಗರಹೊಳೆ ಅಭಯಾರಣ್ಯದಲ್ಲಿ ಹೆಣ್ಣು ಹುಲಿ ಕಳೇಬರ ಪತ್ತೆ

March 25, 2019

ಮೈಸೂರು: ನಾಗರಹೊಳೆ ಅಭಯಾರಣ್ಯದಲ್ಲಿ ಹೆಣ್ಣು ಹುಲಿ ಕಳೇಬರ ಪತ್ತೆಯಾಗಿದೆ. ನಾಗರ ಹೊಳೆ ಕುಂತೂರು ಬೀಟ್‍ನಲ್ಲಿ ಸುಮಾರು 9 ವರ್ಷದ ಹೆಣ್ಣು ಹುಲಿ ದೇಹವಿರುವ ವಿಷಯ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡು ಇದು ಸತ್ತಿರಬಹುದು ಎಂದು ಶಂಕಿಸಲಾಗಿದೆ. ಇದರ ಕತ್ತಿನ ಮೂಳೆ ಮುರಿದಿದೆ. ತಲೆ ಬುರುಡೆ ಬಿರುಕು ಬಿಟ್ಟಿದ್ದು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದೆ. ಮರ ಣೋತ್ತರ ಪರೀಕ್ಷೆ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು.

ಹುಲಿ ಸಂತತಿ ಹೆಚ್ಚಳ: ನಾಗರಹೊಳೆ ಅಭಯಾರಣ್ಯದಲ್ಲಿ ಮೂಲವೊಂದರ ಪ್ರಕಾರ ಹುಲಿಗಳ ಸಂಖ್ಯೆ 110ರ ಗಡಿ ದಾಟಿದೆ. 653 ಚ.ಕಿ.ಮೀ ವ್ಯಾಪ್ತಿಯ ಈ ಹುಲಿ ಸಂರಕ್ಷಿತ ಪ್ರದೇಶದಲ್ಲಿ 65ರಿಂದ 70 ಹುಲಿ ಇರಬೇಕು. ಆದರೆ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ವನ್ಯಜೀವಿ ಪ್ರೇಮಿ ಗಳು ಹಾಗೂ ಅರಣ್ಯ ಇಲಾಖೆಗೆ ಸಂತೋಷದ ಸಂಗತಿ. ಆದರೆ ಸರಹದ್ದಿಗಾಗಿ ನಡೆಯುವ ಕಾಳಗದಲ್ಲಿ ಹುಲಿ ಸಾವನ್ನಪ್ಪುತ್ತಿರುವುದು ವಿಷಾದಕರ ಸಂಗತಿ. ಪ್ರಕೃತಿ ನಿಯಮದಂತೆ ಸರಹದ್ದಿನ ಕಾದಾಟ ನಡೆಯುತ್ತದೆ. ಒಮ್ಮೊಮ್ಮೆ ಗಾಯಗೊಂಡ ಹುಲಿ ಬೇಟೆಯಾಡುವ ಶಕ್ತಿ ಕಳೆದುಕೊಂಡು ಗ್ರಾಮಗಳತ್ತ ಬರುವ ಆತಂಕವಿದೆ. 3 ತಿಂಗಳ ಹಿಂದೆ ಮಚ್ಚೂರು ಹಾಡಿಯಲ್ಲಿ ನಡೆದ ಘಟನೆಯಿಂದಾಗಿ ಅರಣ್ಯದ ಸುತ್ತ ಕಂದಕ ತೋಡಿ, ಸೋಲಾರ್ ಬೇಲಿ ಅಳವಡಿಸಿರುವುದರಿಂದ ಕಾಡುಪ್ರಾಣಿಗಳು ಗ್ರಾಮ ಗಳತ್ತ ಬರುವುದನ್ನು ತಡೆಯುವಲ್ಲಿ ಅಲ್ಪಮಟ್ಟಿನ ಯಶಸ್ಸನ್ನು ಅರಣ್ಯ ಇಲಾಖೆ ಕಂಡಿದೆ.

Translate »