ಮೈಸೂರು,ಸೆ.15(ಎಂಟಿವೈ)- ವಿವಾಹ ನಿಶ್ಚಯಗೊಂಡ ಜೋಡಿಯೊಂದರ ವಿವಾಹ ಪೂರ್ವ ಫೋಟೊ ಶೂಟ್‍ಗಾಗಿ ಮೈಸೂರಿನ ಹೃದಯ ಭಾಗದ ರಸ್ತೆ ಯಲ್ಲಿ ನಿಯಮ ಉಲ್ಲಂಘಿಸಿ ರಾಜಾರೋಷ ವಾಗಿ ವಾಹನ ಸಂಚಾರ ತಡೆಹಿಡಿದಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದ್ದು, ಸಾರ್ವಜನಿಕರ ದೂರಿನ ಮೇರೆಗೆ ಪ್ರಕ ರಣವನ್ನು ಗಂಭೀರವಾಗಿ ಪರಿಗಣಿ ಸಿರುವ ಪೊಲೀಸರು ತಪ್ಪಿತಸ್ಥ ಫೋಟೋಗ್ರಾಫರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.
ದೊಡ್ಡ ಗಡಿಯಾರ ವೃತ್ತದಿಂದ ಅರ ಮನೆ ಕಡೆಗೆ ಬರುವ ರಸ್ತೆಯಲ್ಲಿ ಆರೇಳು ಫೋಟೋಗ್ರಾಫರ್‍ಗಳು ಇಂದು ಬೆಳಿಗ್ಗೆ ಏಕಾಏಕಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಿ ದ್ದಾರೆ. ಚಾಮರಾಜ ಒಡೆಯರ್ ವೃತ್ತದಿಂದ ಅಶೋಕ ರಸ್ತೆಯಲ್ಲಿ, ಹರ್ಷ ರಸ್ತೆ ಜಂಕ್ಷನ್ ನಲ್ಲಿ ರಸ್ತೆಯ ಮಧ್ಯ ಭಾಗದಲ್ಲಿಯೇ ಹೊಸ ಜೋಡಿಯ ಫೋಟೊ ತೆಗೆಯುವ ಉದ್ದೇಶದಿಂದ ವಾಹನ ಸಂಚಾರಕ್ಕೆ ತಡೆ ಯೊಡ್ಡಿದ್ದಾರೆ. ವಾಹನ ಸಂಚಾರಕ್ಕೆ ತಡೆ ಯೊಡ್ಡಿದವರನ್ನು ಕೆಲವು ವಾಹನ ಸವಾ ರರು ಪ್ರಶ್ನಿಸಿದ್ದಾರೆ. ಆದರೆ ಅಲ್ಲಿದ್ದ ಫೋಟೋಗ್ರಾಫರ್‍ವೊಬ್ಬರು ಪೊಲೀಸ್ ಅಧಿಕಾರಿಗಳಿಂದಲೇ ಅನುಮತಿ ಪಡೆದಿ ದ್ದೇವೆ ಎಂದು ಹೇಳಿ ಗದರಿಸಿದ್ದಾರೆ. ಇದ ರಿಂದ ವಾಹನ ಸವಾರರು ಅಸಹಾಯ ಕರಂತೆ ಸುಮ್ಮನೆ ನಿಲ್ಲುವಂತಾಗಿದೆ.
ಈ ವೇಳೆ ಹಾರ್ಡಿಂಗ್ ವೃತ್ತದ ಕಡೆ ಯಿಂದ ಬಂದ ಆಂಬ್ಯುಲೆನ್ಸ್ ಸಂಚಾ ರಕ್ಕೂ ವಿವಾಹ ಪೂರ್ವ ಫೋಟೋ ಶೂಟ್ ಮಾಡುತ್ತಿದ್ದವರಿಂದ ಸಮಸ್ಯೆ ಯಾಗಿದೆ. ನಗರ ಸಾರಿಗೆ ಬಸ್‍ಗಳನ್ನು ತಡೆದು ದರ್ಪ ಪ್ರದರ್ಶಿಸಿದ್ದಾರೆ. ಸುಮಾರು 10ರಿಂದ 15 ನಿಮಿಷ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಅಲ್ಲದೆ ಚಾಮರಾಜ ಒಡೆಯರ್ ವೃತ್ತದ ಸುತ್ತಮುತ್ತ ರಸ್ತೆಯಲ್ಲಿ ಫೋಟೋ ತೆಗೆಯುತ್ತಿದ್ದ ಹಿನ್ನೆಲೆಯಲ್ಲಿ 10ಕ್ಕೂ ಹೆಚ್ಚು ಮಂದಿ ಸಹಾಯಕರು ರಸ್ತೆ ಮಧ್ಯೆಯೇ ನಿಂತಿದ್ದರಿಂದ ವಾಹನ ಸವಾರ ರಿಗೆ ಕಿರಿಕಿರಿಯುಂಟಾಗುತ್ತಿತ್ತು. ಈ ಫೋಟೋ ಗ್ರಾಫರ್‍ಗಳ ಮಿತಿ ಮೀರಿದ ವರ್ತನೆ ಕಂಡು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಮನೆಯ ಉತ್ತರ ದ್ವಾರ(ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂದೆ) ಹಾಗೂ ಜಯಮಾರ್ತಾಂಡ ದ್ವಾರ, ವಸಂತಮಹಲ್ ಪಕ್ಕದ ರಸ್ತೆ, ಲಲಿತಮಹಲ್ ರಸ್ತೆ( ಎಟಿಐ ಮುಂಭಾ ಗದ ಸರ್ವಿಸ್ ರಸ್ತೆ), ಚಾಮುಂಡಿಬೆಟ್ಟದ ರಸ್ತೆ ಸೇರಿದಂತೆ ವಿವಿಧೆಡೆ ಪ್ರತಿದಿನ ಒಂದಲ್ಲಾ ಒಂದು ವಿವಾಹ ಪೂರ್ವ ಫೋಟೋ ಶೂಟ್ ನಡೆಯುವುದು ಸಾಮಾನ್ಯ. ಅದರಲ್ಲಿಯೂ ಭಾನುವಾರ ಫೋಟೋ ಶೂಟ್ ಹೆಚ್ಚಾಗಿ ನಡೆಯುತ್ತವೆ. ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರಗಳಿಂದ ಹೊಸ ಜೋಡಿಗಳೊಂದಿಗೆ ಫೋಟೋಗ್ರಾಫರ್ ಗಳು ಅರಮನೆ ಮುಂದೆ ಬಂದು ಫೋಟೋ ಶೂಟ್ ಮಾಡುವುದು ವಾಡಿಕೆಯಾಗಿ ಪರಿಣಮಿಸಿದೆ. ಅತ್ಯುತ್ತಮವಾಗಿ ಫೋಟೊ ತೆಗೆಯಲೆಂಬ ಉದ್ದೇಶದಿಂದ ಸಾಕಷ್ಟು ಸಮಯ ಪಡೆಯುವುದರಿಂದ ವಾಹನ ಸವಾರರಿಗೆ ಕೆಲವೊಮ್ಮೆ ಅಡಚಣೆಯಾಗು ತ್ತಿದೆ. ಇಂದು ಬೆಳಿಗ್ಗೆ ಅರಮನೆ ಮುಂದೆ ನಡೆದ ಫೋಟೋ ಶೂಟ್‍ನಲ್ಲಿಯೂ ಹಲವು ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ.
ಪಾರಿವಾಳಗಳಿಗೂ ತೊಂದರೆ: ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗದ ಪ್ರಾಂಗಣದಲ್ಲಿ ಹಲವು ಮಂದಿ ಪಾರಿವಾಳಗಳಿಗೆ ದವಸ-ಧಾನ್ಯ ತಂದು ಚೆಲ್ಲುವ ಪರಿಪಾಠ ಹೊಂದಿದ್ದಾರೆ. ಇದರಿಂದ ಪ್ರತಿದಿನ ನೂರಾರು ಪಾರಿ ವಾಳಗಳು ಆಹಾರ ಅರಸಿ ಗುಂಪು ಗುಂಪಾಗಿ ಬರುತ್ತವೆ. ಬೆಳಿಗ್ಗೆ 6.30ರಿಂದ 8 ಗಂಟೆಯೊಳಗೆ ಪಾರಿವಾಳಗಳು ಅಲ್ಲಿ ಚೆಲ್ಲಿರುವ ಧಾನ್ಯ ತಿಂದು ವಾಪಸ್ಸಾಗುತ್ತವೆ. ಆದರೆ ವಿವಾಹ ಪೂರ್ವ ಫೋಟೊ ಶೂಟ್‍ಗಾಗಿ ಬಂದವರು ನವಜೋಡಿ ಯನ್ನು ಪಾರಿವಾಳ ನಡುವೆ ನಡೆದು ಕೊಂಡು ಬರುವಂತೆ ಸೂಚನೆ ನೀಡಿ, ಮೂರ್ನಾಲ್ಕು ದಿಕ್ಕುಗಳಿಂದ ಫೋಟೊ ತೆಗೆಯುತ್ತಿರುತ್ತಾರೆ. ಇದರಿಂದ ದವಸ ತಿನ್ನುತ್ತಿದ್ದ ಪಾರಿವಾಳಗಳಿಗೆ ಅಡಚಣೆ ಯಾಗಿ ಪದೇ ಪದೆ ಮೇಲಕ್ಕೆ ಹಾರುತ್ತಿ ರುತ್ತವೆ. ಇದನ್ನು ಕಂಡ ಸಾರ್ವಜನಿಕರು, ದೇವಾಲಯಕ್ಕೆ ಬರುವ ಭಕ್ತರು, ಆಟೋ ಚಾಲಕರಾದಿಯಾಗಿ ಪಾರಿವಾಳಗಳ ನಡುವೆ ಬರದಂತೆ ಸಲಹೆ ನೀಡುತ್ತಾರೆ. ಆದರೂ ಕೆಲವು ಫೋಟೋಗ್ರಾಫರ್‍ಗಳು ಯಾರ ಸಲಹೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸದೇ ಮಾತಿನ ಚಕಮಕಿಗೆ ಇಳಿಯು ತ್ತಿದ್ದಾರೆ. ಡ್ರೋನ್ ಬಳಕೆಯೂ ಮಾಡುವು ದರಿಂದ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಎಲ್ಲೆ ಮೀರುತ್ತಿರುವುದೇ ಸಮಸ್ಯೆ ಸೃಷ್ಟಿಗೆ ಕಾರಣ: ವಿವಾಹ ಪೂರ್ವ ಫೋಟೋ ಶೂಟ್‍ಗೆ ಸಾರ್ವಜನಿಕರು ಇದುವರೆಗೂ ಆಕ್ಷೇಪ ವ್ಯಕ್ತಪಡಿಸಿಲ್ಲ. ನೀತಿ ನಿಯಮದ ಚೌಕಟ್ಟನ್ನು ಮೀರುತ್ತಿರುವುದೇ ಸಮಸ್ಯೆಗೆ ಕಾರಣವಾಗುತ್ತಿದೆ. 30 ಸಾವಿರ ರೂ. ನಿಂದ ಲಕ್ಷ ರೂ. ವರೆಗೆ ಪ್ಯಾಕೇಜ್ ಮಾದರಿಯಲ್ಲಿ ಫೋಟೋ ಶೂಟ್ ಮಾಡ ಲಾಗುತ್ತದೆ. ತಮ್ಮ ಚಾಣಾಕ್ಷತನ, ನೈಪುಣ್ಯತೆ ಪ್ರದರ್ಶಿಸಲು ಹೆಚ್ಚು ಸಮಯ ರಸ್ತೆಯ ಲ್ಲಿಯೇ ನಿಂತು ಫೋಟೊ ತೆಗೆಯಲು ಪ್ರಯತ್ನಿಸುತ್ತಾರೆ. ಕೆಲವು ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡು ಸಾರ್ವಜನಿಕ ರೊಂದಿಗೆ ಮಾತಿನ ಚಕಮಕಿಗೆ ಇಳಿಯುವ ಮೂಲಕ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.