ಚಾಮರಾಜನಗರದ ಯುವಕ ಕೇರಳದಲ್ಲಿ ನಾಪತ್ತೆ
ಚಾಮರಾಜನಗರ

ಚಾಮರಾಜನಗರದ ಯುವಕ ಕೇರಳದಲ್ಲಿ ನಾಪತ್ತೆ

September 10, 2018

ಚಾಮರಾಜನಗರ:  ಕೇರಳದ ಪಾಲಿಕ್ಕಲ್ ಬಜಾರ್‍ನಲ್ಲಿನ ಮೈತ್ರಿ ಅರ್ಥ್ ಮೂವರ್ಸ್‍ನಲ್ಲಿ ಹಿಟಾಚಿ ಹಾಗೂ ಜೆಸಿಬಿ ಆಪರೇಟರ್ ಕೆಲಸ ಮಾಡುತ್ತಿದ್ದ ಯುವಕನೋರ್ವ ಒಂದು ತಿಂಗಳಿನಿಂದ ನಾಪತ್ತೆ ಆಗಿದ್ದು, ಆತನ ಪೋಷ ಕರು ಕಂಗಲಾಗಿದ್ದಾರೆ.

ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರ ಗ್ರಾಮದ ಮಂಟಯ್ಯ ಎಂಬುವವರ ಮಗ ಅಶೋಕ್ ಕುಮಾರ್ (25) ನಾಪತ್ತೆ ಆಗಿದ್ದು, ಈ ಬಗ್ಗೆ ಸಂತೇಮರಹಳ್ಳಿ ಹಾಗೂ ಕೇರಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಶೋಕ್ ಕುಮಾರ್ ಕಳೆದ ಏಳೆಂಟು ತಿಂಗಳಿನಿಂದ ಕೇರಳದ ಪಾಲಿಕ್ಕಲ್ ಬಜಾರ್ ನಲ್ಲಿ ಮೈತ್ರಿ ಅರ್ಥ್ ಮೂವರ್ಸ್‍ನಲ್ಲಿ ಹಿಟಾಚಿ ಹಾಗೂ ಜೆಸಿಬಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ 15 ದಿನಕ್ಕೆ ಆಗಸ್ಟ್ 12ರಂದು ಪೋಷಕರಿಗೆ ಮೊಬೈಲ್‍ಗೆ ಕರೆ ಮಾಡಿ ನಾನು ಊರಿಗೆ ಬರುತ್ತಿದ್ದೇನೆಂದು ತಿಳಿಸಿದ್ದಾನೆ. ಅಂದಿನಿಂದ ಇಂದಿನವರೆಗೂ ಗ್ರಾಮಕ್ಕೆ ತೆರಳಿಲ್ಲ. ಆತನ ಮೊಬೈಲ್ ಸಂಪರ್ಕವೂ ಸಹ ಸ್ಥಗಿತಗೊಂಡಿದೆ. ಮಂಟಯ್ಯ, ತಾಯಿ ದುಂಡಮ್ಮ ಹಾಗೂ ಸಂಬಂಧಿಕರು ಕಂಗಲಾಗಿದ್ದಾರೆ.

ತಂದೆ ಮಂಟಯ್ಯ ಮಗ ಕೆಲಸ ನಿರ್ವಹಿಸುತ್ತಿದ್ದ ಕೇರಳಕ್ಕೆ ತೆರಳಿ ವಿಚಾರಿಸಿದ್ದಾರೆ. ಅಲ್ಲೂ ಸಹ ಗ್ರಾಮಕ್ಕೆ ತೆರಳುವುದಾಗಿ ತಿಳಿದು ಹೋದನೆಂದು ಹೇಳಿದ್ದಾರೆ. ಅಶೋಕ್ ಕುಮಾರ್ ಕೆಲಸ ನಿರ್ವಹಿಸುತ್ತಿದ್ದ ಕಂಪನಿಯ ಮಾಲೀಕರು ಕೇರಳ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಆತನೊಂದಿಗೆ ಸಂಪರ್ಕ ದೊರೆತು 28 ದಿನಗಳಾಗಿರುವುದರಿಂದ ಪೋಷಕರು ಸಂತೇಮರಹಳ್ಳಿ ಪೊಲೀಸ್ ಠಾಣೆಗೆ ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದಾರೆ.

ಮನೆಯ ಮಗನಿಗಾಗಿ ಪೋಷಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಎಲ್ಲೂ ಸಹ ಆತನ ಸುಳಿವು ದೊರೆತಿಲ್ಲ. ಮಗನ ಸಂಪರ್ಕ ಸಿಗದ ಕಾರಣ ಪೋಷಕರು ದಿನನಿತ್ಯ ಕಣ್ಣೀರು ಹಾಕುತ್ತಾ ಕಂಗಲಾಗಿದ್ದಾರೆ. ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿದ್ದು, ಮಗನ ಬರುವಿಕೆಯನ್ನೇ ಕಾಯುತ್ತಿದ್ದಾರೆ.

25 ವರ್ಷ ವಯಸ್ಸಿನ ಸುಮಾರು 5.6 ಅಡಿ, ಎಣ್ಣೆಗೆಂಪು ಮೈಬಣ್ಣ, ದೃಢಕಾಯ ಶರೀರ, ಬಲತೋಳಿನಲ್ಲಿ ಹಸಿರು ಹಚ್ಚೆ ಹಾಕಲಾಗಿದೆ. ಈತನ ಸುಳಿವು ಸಿಕ್ಕಲ್ಲಿ ಪೊಲೀಸ್ ಠಾಣೆ 08226-240250, ಪಿಎಸ್‍ಐ ಮೊ.9480804650, ತಂದೆ ಮಂಟಯ್ಯ 9538770437ಗೆ ಸಂಪರ್ಕಿಸುವಂತೆ ಕೋರಲಾಗಿದೆ.

Translate »