ಆಶ್ರಯ ಮನೆ ಖುಲಾಸೆ ಪತ್ರ ನೀಡಲು ಲಂಚ: ಪಾಲಿಕೆ ನೌಕರ ಎಸಿಬಿ ಬಲೆಗೆ
ಮೈಸೂರು

ಆಶ್ರಯ ಮನೆ ಖುಲಾಸೆ ಪತ್ರ ನೀಡಲು ಲಂಚ: ಪಾಲಿಕೆ ನೌಕರ ಎಸಿಬಿ ಬಲೆಗೆ

December 21, 2019

ಮೈಸೂರು,ಡಿ.20(ಎಸ್‍ಬಿಡಿ)-ಆಶ್ರಯ ಮನೆ ಖುಲಾಸೆ ಪತ್ರ ಕೊಡಿಸುವುದಾಗಿ 3 ಸಾವಿರ ರೂ. ಲಂಚ ಪಡೆಯುತ್ತಿದ್ದ ಮೈಸೂರು ನಗರ ಪಾಲಿಕೆ ನೌಕರ, ಎಸಿಬಿ ಬಲೆಗೆ ಬಿದ್ದಿದ್ದಾರೆ. ಮೈಸೂರಿನ ಗನ್‍ಹೌಸ್ ಬಳಿಯಿರುವ ಕೆ.ಆರ್.ಕ್ಷೇತ್ರದ ಆಶ್ರಯ ವಸತಿ ಯೋಜನೆ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕ ಮಂಜು ನಾಥ್, ಲಂಚ ಪಡೆದು ಸಿಕ್ಕಿಬಿದ್ದಿದ್ದಾರೆ. ಮೈಸೂರು ತಾಲೂಕು ಕಸಬಾ ಹೋಬಳಿ ಕೊಪ್ಪಲೂರು ಗ್ರಾಮದ ಆಶ್ರಯ ಬಡಾವಣೆಯಲ್ಲಿ ಕೆಂಪಮ್ಮ ಅವರಿಗೆ ಮಂಜೂರಾಗಿರುವ ಮನೆಯ ಬಾಬ್ತು ಖುಲಾಸೆ ಪತ್ರ ಕೊಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ರಮಾಬಾಯಿನಗರ ನಿವಾಸಿ ಸೋಮಶೇಖರ್ ತಮ್ಮ ಅಜ್ಜಿ ಕೆಂಪಮ್ಮ ಅವರಿಗೆ ಆಶ್ರಯ ಮನೆ ಖುಲಾಸೆ ಪತ್ರ ಕೊಡಿಸುವುದಾಗಿ ಮಂಜುನಾಥ್ ವರ್ಷದ ಹಿಂದೆಯೇ 15 ಸಾವಿರ ರೂ. ಪಡೆದಿದ್ದರಾದರೂ ಕೆಲಸ ಮಾಡಿಕೊಟ್ಟಿಲ್ಲ. ಈ ಬಗ್ಗೆ ವಿಚಾರಿಸಲೆಂದು ನಾನು ಇಂದು(ಶುಕ್ರವಾರ) ಅವರ ಕಚೇರಿಗೆ ಹೋದಾಗ ಮತ್ತೆ 3 ಸಾವಿರ ರೂ. ಕೊಡಲೇಬೇಕೆಂದು ಬೇಡಿಕೆ ಇಟ್ಟಿರುವುದಾಗಿ ಎಸಿಬಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ರೂಪಿಸಿದ ಎಸಿಬಿ ತಂಡ, ಸೋಮಶೇಖರ್ ಅವರಿಂದ 3 ಸಾವಿರ ರೂ. ಲಂಚ ಪಡೆಯುವಾಗಲೇ ಮಂಜುನಾಥ್‍ನನ್ನು ದಸ್ತಗಿರಿ ಮಾಡಿ, ಹಣವನ್ನು ವಶಪಡಿಸಿಕೊಂಡಿದ್ದಾರೆ.

ಎಸಿಬಿ ಮೈಸೂರು ಎಸ್ಪಿ ಜೆ.ಕೆ.ರಶ್ಮಿ ಅವರ ಮಾರ್ಗ ದರ್ಶನದಲ್ಲಿ ಡಿವೈಎಸ್ಪಿ ಪರಶುರಾಮಪ್ಪ, ಇನ್ಸ್‍ಪೆಕ್ಟರ್‍ಗಳಾದ ಅಬ್ದುಲ್ ಕರೀಂ ರಾವತರ್, ಕೆ.ಎಸ್.ನಿರಂಜನ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Translate »