ಆಸಿಡ್ ದಾಳಿ ಸಂತ್ರಸ್ತೆಯ ಜೀವನವನ್ನೇ ಅಂತ್ಯಗೊಳಿಸುತ್ತಿದೆ…
ಮೈಸೂರು

ಆಸಿಡ್ ದಾಳಿ ಸಂತ್ರಸ್ತೆಯ ಜೀವನವನ್ನೇ ಅಂತ್ಯಗೊಳಿಸುತ್ತಿದೆ…

February 4, 2020

= ಸಂತ್ರಸ್ತರ ಸಮಾಜ ಸ್ವೀಕರಿಸದೇ ಇರುವುದು ಬಹಳ ನೋವಿನ ಸಂಗತಿ
= ಆಸಿಡ್ ದಾಳಿಯಿಂದ ಬದುಕುಳಿದ ಮೈಸೂರಿನ ವೈದ್ಯೆಯ ಬದುಕುವ ಸಾಹಸಗಾಥೆ
= ದಾಳಿಯ ದುಷ್ಕರ್ಮಿಗಳಿಗೆ ಮರಣ ದಂಡನೆಯನ್ನೇ ವಿಧಿಸುವುದು ಸೂಕ್ತ ಶಿಕ್ಷೆ ವಿಧಾನ
ಮೈಸೂರು, ಜ. 3- ಆಸಿಡ್ ಸಂತ್ರಸ್ತೆ ಲಕ್ಷ್ಮಿ ಅಗರ್ ವಾಲ್‍ರವರ ಬದುಕಿನ ದುರಂತ ಕಥೆಯಾಧಾರಿತ ಚಲನಚಿತ್ರ ‘ಚಾಪಾಕ್’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ, ಸಿನಿರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಂತಹ ನೂರಾರು ಆಸಿಡ್ ಸಂತ್ರಸ್ತರು ನಮ್ಮ ಸಮಾಜದಲ್ಲಿ ದುಃಖದ ಮಡಿಲಲ್ಲೇ ಕಾಲ ತಳ್ಳುತ್ತಿರುವುದನ್ನು ನಾವು ಕಾಣಬಹುದು.

ಮೈಸೂರು ನಗರದಲ್ಲೂ ಇಂತಹ ಒಂದು ಆಸಿಡ್-ದಾಳಿಗೆ ತುತ್ತಾದ ಮಹಿಳೆಯೊಬ್ಬರು ತಮ್ಮ ನೋವನ್ನು ನುಂಗಿಕೊಂಡು, ಮತ್ತೆ ತಮ್ಮ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅಷ್ಟೇ ಅಲ್ಲ, ತಮ್ಮ ವೈದ್ಯವೃತ್ತಿಗೆ ಮರಳಿ ರೋಗಿಗಳ ಸೇವೆ ಯಲ್ಲಿ ನಿರತರಾಗಿದ್ದಾರೆ. ನಗರದ ಅಗ್ರಹಾರ ದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ವೈ.ಎನ್. ಮಹಾಲಕ್ಷ್ಮಿ ‘ಮೈಸೂರು ಮಿತ್ರ’ನೊಂದಿಗೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

“ಆಸಿಡ್ ದಾಳಿ ಮಾಡಿದವರಿಗೆ ಮರಣ ದಂಡನೆ ವಿಧಿಸಬೇಕು. ಏಕೆಂದರೆ ಆಸಿಡ್ ದಾಳಿಗೆ ತುತ್ತಾದ ವ್ಯಕ್ತಿಯ ಎಲ್ಲ ಕನಸುಗಳೂ ನುಚ್ಚು ನೂರಾಗಿ ಬದುಕೇ ದುರ್ಬರವಾಗಿಬಿಡುತ್ತದೆ. ನಮ್ಮ ಶಾಸ ಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಎಲ್ಲಾ ಮಾಧ್ಯಮಗಳಿಗೂ ನಾನು ಕೇಳಿಕೊಳ್ಳುವುದಿಷ್ಟೇ. ಸಾಮಾನ್ಯವಾಗಿ ಅಪರಾಧಿ ಕೆಲವೇ ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಗೆ ಬಂದು ಬಿಡುತ್ತಾನೆ. ಹೀಗಾಗಬಾರದೆಂದರೆ, ಅಪರಾಧಿಗೆ ಮರಣ ದಂಡನೆ ವಿಧಿಸಬೇಕು,’’ ಎಂದು ಡಾ.ಮಹಾಲಕ್ಷ್ಮಿ ದುಃಖದಿಂದಲೇ ಪ್ರತಿಪಾದಿಸಿದರು.

ಕ್ರೂರ ಸಮಾಜ: “ನಮ್ಮ ಸಮಾಜವೂ ಬಲು ಕ್ರೂರಿ. ಎಲ್ಲವೂ ಸರಿಯಾಗಿರುವವರನ್ನೇ ಬಿಡುವು ದಿಲ್ಲ. ಇನ್ನು ಈಗ ನನ್ನ ಪರಿಸ್ಥಿತಿ ಹೇಗಿರಬಹುದು ಊಹೆ ಮಾಡಿಕೊಳ್ಳಿ! ಮಹಿಳೆಯರೂ ಕೂಡ ನನ್ನನ್ನು ಅಣಕಿಸುತ್ತಾರೆ, ಹೆಸರು ಕೂಗುತ್ತಾರೆ. ಪುಣ್ಯಕ್ಕೆ ನನಗೆ ನನ್ನ ಹೆತ್ತವರು ಬೆನ್ನಿಗಿದ್ದಾರೆ. ಹೀಗಾಗಿ ಅನೇಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರೂ ಧೈರ್ಯದಿಂದಲೇ ಬದುಕುತ್ತಿದ್ದೇನೆ. ಆದರೆ ಆ ಆಘಾತ ನನ್ನ ಜೀವನವನ್ನು ಇಷ್ಟರ ಮಟ್ಟಿಗೆ ಬಾಧಿಸ ಬಹುದು ಎಂದು ನನಗೆ ಅರಿವು ಇರಲಿಲ್ಲ. ಹೀಗಾ ಗಿಯೇ ಆ ಅಪರಾಧಿಗೆ ಮರಣದಂಡನೆ ವಿಧಿಸ ಬೇಕು ಎಂದು ನಾನು ಬಯಸುತ್ತೇನೆ” ಎಂದರು.

ಆ ಕರಾಳ ದಿನ: ಅದು ಜನವರಿ 11, 2001. ಸಂಜೆ ರಸ್ತೆಯಲ್ಲಿ ಇನ್ನೂ ಜನರು ಓಡಾಡುತ್ತಿದ್ದರು. ಮೈಸೂರಿನ ಒಂಟಿಕೊಪ್ಪಲಿನಲ್ಲಿದ್ದ ತಮ್ಮ ಕ್ಲಿನಿಕ್ ಬಾಗಿಲು ಹಾಕಿದ ನಂತರ ಆ ಯುವ ವೈದ್ಯೆ ಮನೆಯತ್ತ ಹೊರಟಿದ್ದರು. ಇದ್ದಕ್ಕಿದ್ದಂತೆ ಬಂದ ಚಿಕ್ಕಬಸವಯ್ಯ ಆಕೆಯ ಮುಖದ ಮೇಲೆ ಆಸಿಡ್ ಎರಚಿ ಓಡಿಹೋದ. ಜೋರಾಗಿ ಚೀರಿಕೊಂಡ ವೈದ್ಯೆ ನೆಲಕ್ಕೆ ಕುಸಿದರು. ಹಾಗೆ ಬೆಂಕಿ ದ್ರವದ ದಾಳಿಗೀಡಾಗಿ ಡಾ. ವೈ.ಎನ್. ಮಹಾಲಕ್ಷ್ಮಿ ಎಂಬ ಆ ಯುವವೈದ್ಯೆಯ ಬದುಕೇ ಅಂದಿ ನಿಂದ ನಾಶವಾಯಿತು.

ಚಿಕ್ಕಬಸವಯ್ಯ ವಿದ್ಯಾರಣ್ಯಪುರಂನ ಕೈಗಾರಿಕಾ ಉಪನಗರದಲ್ಲಿದ್ದ ತನ್ನ ಕಟ್ಟಡದ ಒಂದು ಭಾಗವನ್ನು ಡಾ. ಮಹಾಲಕ್ಷ್ಮಿಗೆ ಕ್ಲಿನಿಕ್ ನಡೆಸಲು ಬಾಡಿಗೆಗೆ ನೀಡಿದ್ದ. ವಿದ್ಯಾರಣ್ಯಪುರಂನಲ್ಲಿ ವೈನ್ ಸ್ಟೋರ್ ಹೊಂದಿದ್ದ ಚಿಕ್ಕಬಸವಯ್ಯ, ಡಾ. ಮಹಾ ಲಕ್ಷ್ಮಿ ಅವರ ಮೇಲೆ ಕಣ್ಣು ಹಾಕಿದ್ದ. ಆತನ ಕಾಟ ತಡೆಯಲಾರದೆ ಡಾ. ಮಹಾಲಕ್ಷ್ಮಿ ತಮ್ಮ ಕ್ಲಿನಿಕ್ ಅನ್ನು ಮುಚ್ಚಿ ಮೇಟಗಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬಿ.ಎಂ.ಶ್ರೀ ನಗರದಲ್ಲಿ ಹೊಸ ಕ್ಲಿನಿಕ್ ಆರಂಭಿಸಿ ತಮ್ಮ ಹೆತ್ತವರೊಂದಿಗೆ ಬೃಂದಾ ವನ ಬಡಾವಣೆಯಲ್ಲಿ ವಾಸಿಸತೊಡಗಿದರು. ಆದರೂ ಚಿಕ್ಕಬಸವಯ್ಯನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗ ಲಿಲ್ಲ. ಆತ ಹೊಸ ಕ್ಲಿನಿಕ್ಕಿಗೂ ಬರಲು ಪ್ರಾರಂಭಿಸಿದ.

25 ಶಸ್ತ್ರಚಿಕಿತ್ಸೆ: ಆಸಿಡ್ ದಾಳಿಯ ನಂತರ ಡಾ.ಮಹಾಲಕ್ಷ್ಮಿ ಖಿನ್ನತೆಗೆ ಒಳಗಾದರು. ಆಗ ಅವರಿಗೆ ಕೇವಲ 26 ವರ್ಷ ವಯಸ್ಸು. ದಾಳಿ ನಡೆದು 20 ವರ್ಷವಾಗಿದೆ. “ನಾನು ಈವರೆಗೂ 25ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಆದರೆ ಅನ್ಯಾಯದ ವಿರುದ್ಧ ಹೋರಾಡುವ ಛಲ ನನ್ನಲ್ಲಿ ಇನ್ನೂ ಇದೆ,” ಎಂದು ತಿಳಿಸಿದರು.

“ವಿರೂಪಗೊಂಡ, ಅಂಗವೈಕಲ್ಯಕ್ಕೆ ಒಳಗಾದ ಮಹಿಳೆಯರನ್ನು ಸಮಾಜ ಸ್ವೀಕರಿಸುವುದಿಲ್ಲ. ಇದಕ್ಕಿಂತಲೂ ಘೋರ ಸಾಮಾಜಿಕ ಅನ್ಯಾಯ ಇದೆಯೇ? ನಾವು ಬಲಿಪಶುಗಳು, ನಾಲ್ಕು ಗೋಡೆಗಳ ಒಳಗೇ ಇರಲು ಸಮಾಜ ಬಲವಂತ ಪಡಿಸುತ್ತದೆ. ಅನೇಕ ಸಂತಸ್ತರು ತಮ್ಮನ್ನು ತಾವು ಕನ್ನಡಿಯಲ್ಲೂ ನೋಡಲು ಇಚ್ಛಿಸುವುದಿಲ್ಲ. ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ಸರ್ಕಾರ ಮಾಸಿಕ ಪಿಂಚಣಿ, ಉಚಿತ ಮನೆ ಮತ್ತು ಉದ್ಯೋಗ ನೀಡಿ ಪುನರ್ವಸತಿ ಕಲ್ಪಿಸುತ್ತದೆಯಾದರೂ, ಆದರೆ, ಸಮಾಜ ಮಾತ್ರ ತನ್ನ ದೃಷ್ಟಿಕೋನ ಬದಲಾಯಿಸಿ ಕೊಳ್ಳಬೇಕಿದೆ’’ ಎಂದು ಅಭಿಪ್ರಾಯಪಟ್ಟರು.

ನಾನು ಸೋಲಲಿಲ್ಲ: “ಹಠ ಹಿಡಿದು ಹೈಕೋರ್ಟ್ ನಲ್ಲಿ ಸುದೀರ್ಘ ಕಾನೂನು ಹೋರಾಟ ನಡೆಸಿದೆ. ನಮಗೆ ಬೇಕಾಗಿರುವುದು ಸಹಾನುಭೂತಿ ಅಲ್ಲ. ಎಲ್ಲರಂತೆ ಬದುಕಲು ಬೇಕಾಗಿರುವುದು ಸಮಾಜದ ಬೆಂಬಲ’’ ಎಂದು ತಿಳಿಸಿದ ಡಾ. ಮಹಾಲಕ್ಷ್ಮಿ ಪ್ರತಿ ದಿನ 50 ರಿಂದ 60 ಕ್ಕೂ ಹೆಚ್ಚು ಹೊರ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು ಸ್ವತಂತ್ರ ಜೀವನ ನಡೆಸುತ್ತಿದ್ದಾರೆ.

ಡಾ. ಮಹಾಲಕ್ಷ್ಮಿ ಹೇಳುವಂತೆ ‘ಚಪಾಕ್’ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಒಂದು ಉತ್ತಮ ಸಾಮಾಜಿಕ ಸಂದೇಶವಿರುವ ಈ ಚಲನಚಿತ್ರ ಸಂತಸ್ತರು ಸಮಾಜವನ್ನು ಹೇಗೆ ಎದುರಿಸುತ್ತಾರೆ ಎಂಬುದನ್ನು ಚೆನ್ನಾಗಿ ತೋರಿಸುತ್ತದೆ.

ತಮ್ಮ ವೈದ್ಯ ವೃತ್ತಿಯ ಮೂಲಕವೇ ಸೇವೆ ಸಲ್ಲಿಸುತ್ತಿರುವ ಡಾ. ಮಹಾಲಕ್ಷ್ಮಿ ಆಸಿಡ್ ದಾಳಿಗೆ ಒಳಗಾದವರಿಗೆ ನೆರವಾಗಲು ಅನೇಕ ಯೋಜನೆ ಗಳನ್ನು ಹಾಕಿಕೊಂಡಿದ್ದಾರೆ. ಸರ್ಕಾರದೊಂದಿಗೆ ಸೇರಿ ಅವುಗಳನ್ನು ಕಾರ್ಯಗತಗೊಳಿಸಲು ಉತ್ಸುಕರಾಗಿದ್ದಾರೆ.

Translate »