ಕೊಡಗು ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ
ಕೊಡಗು

ಕೊಡಗು ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ

December 11, 2018

ಮಡಿಕೇರಿ: ತಮಿಳುನಾಡಿನ ಚೆನ್ನೈನಲ್ಲಿ ಕೊಡಗು ಪ್ರವಾಸೋದ್ಯಮಕ್ಕೆ ಸೂಕ್ತ ವೇದಿಕೆ ಕಲ್ಪಿಸುವುದರೊಂದಿಗೆ ತಮಿಳುನಾಡಿನಿಂದ ವಿಶೇಷವಾಗಿ ಕೊಡಗಿಗೆ ಪ್ರವಾಸಿಗರನ್ನು ಆಕರ್ಷಿಸುವ ಕಾರ್ಯಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಕೊಡಗು ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಅಸೋಸಿ ಯೇಷನ್ ಮುಂದಾಗಿದೆ.
ಚೆನ್ನೈನ ವೆಸ್ಟ್ ಇನ್ ಪಂಚತಾರ ಹೊಟೇಲ್ ಸಭಾಂಗಣದಲ್ಲಿ ಡಿಸ್ಟಿನೇಷನ್ ಕೂರ್ಗ್ ಎಂಬ ಹೆಸರಿನಡಿ ಕರ್ನಾಟಕ ಪ್ರವಾಸೋ ದ್ಯಮ ಇಲಾಖೆಯಿಂದ ಆಯೋಜಿತ ಕೊಡಗು ಪ್ರವಾಸೋದ್ಯಮ ಕೇಂದ್ರೀಕೃತ ಕಾರ್ಯಕ್ರಮಕ್ಕೆ ಕೊಡಗು ಹೊಟೇಲ್, ರೆಸಾರ್ಟ್, ರೆಸ್ಟೋ ರೆಂಟ್ ಅಸೋಸಿಯೇಷನ್ ಉಪಾಧ್ಯಕ್ಷ ಬಿ.ಎಸ್. ಸದಾನಂದ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಬಿ.ಎಸ್. ಸದಾನಂದ, ಕೊಡಗು ಜಿಲ್ಲೆ ಪ್ರವಾಸಿಗರಿಗೆ ವೈವಿಧ್ಯಮಯ ತಾಣಗಳ ಮೂಲಕ ಸುಂದರ ಅನುಭವಕ್ಕೆ ಕಾರಣವಾಗುತ್ತದೆ. ನಿಸರ್ಗ ರಮಣೀಯತೆ, ಧಾರ್ಮಿಕತೆ, ಐತಿಹಾಸಿಕ, ಕ್ರೀಡಾ ಪ್ರವಾಸೋದ್ಯಮ, ವನ್ಯಜೀವಿ, ಅಣೆಕಟ್ಟುಗಳು, ಉದ್ಯಾನವನ, ಜಲಧಾರೆಗಳೂ ಸೇರಿದಂತೆ ಪ್ರವಾಸಿಗರು ಏನನ್ನು ಬಯಸುತ್ತಾರೋ ಅವರ ಆಯ್ಕೆಗೆ ತಕ್ಕಂತೆ ಪ್ರವಾಸಿ ತಾಣಗಳನ್ನು ಹೊಂದಿದ ವಿಶಿಷ್ಟ ಜಿಲ್ಲೆಯಾಗಿದೆ ಎಂದು ತಿಳಿಸಿದರು. ಕೊಡಗಿನ ಕೆಲವೇ ಪ್ರದೇಶ ಗಳು ಪ್ರಕೃತಿ ವಿಕೋಪಕ್ಕೀಡಾಗಿದ್ದರೂ ಇದೀಗ ಸಂಪೂರ್ಣ ಸುರಕ್ಷಿತವಾಗಿದ್ದು, ಗತವೈಭವ ಮರುಕಳಿ ಸಿದೆ. ಪ್ರವಾಸಿಗರು ಯಾವುದೇ ಸಮಸ್ಯೆ ಯಿಲ್ಲದಂತೆ ಕೊಡಗು ಪ್ರವಾಸ ಕೈಗೊಳ್ಳ ಬಹುದಾಗಿದೆ ಎಂದರಲ್ಲದೇ, ಕೊಡಗಿಗೆ ಆಗಮಿಸುವ ಪ್ರವಾಸಿಗರಿಗೆ ಎಲ್ಲಾ ರೀತಿಯ ಸಹಾಯವನ್ನು ಹೋಟೇಲ್, ರೆಸಾರ್ಟ್, ರೆಸ್ಟೋರೆಂಟ್ ಆಸೋಸಿಯೇಷನ್ ಮಾಡಲು ಸಿದ್ಧವಿದೆ ಎಂದರು.

ಕೊಡಗು ಹೋಟೇಲ್ ಅಸೋಸಿಯನ್ ನಿರ್ದೇಶಕ ಮೋಹನ್ ದಾಸ್, ಕೊಡಗಿನ ವಿಶಿಷ್ಟತೆಗಳ ಬಗ್ಗೆ ವಿವರಿಸಿದರು. ಕರ್ನಾ ಟಕ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರವೀಂದ್ರ ಮಾತನಾಡಿ, ಕೊಡಗಿನ ಪ್ರವಾಸೋದ್ಯಮಕ್ಕೆ ಕಾಯಕಲ್ಪ ನೀಡಲು ಪ್ರವಾಸೋದ್ಯಮ ಇಲಾಖೆ ಚೆನ್ನೈನಲ್ಲಿ ಪ್ರವಾಸಿ ಏಜೆಂಟರ ಸಭೆ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಇಂಥ ಪ್ರವಾ ಸೋದ್ಯಮಕ್ಕೆ ಸಂಬಂಧಿಸಿದಂತೆ ಸಭೆ ಆಯೋಜಿಸಲಾಗುತ್ತದೆ. ಕೊಡಗು ಪ್ರವಾಸಿ ಗರಿಗೆ ಸುರಕ್ಷಿತ ಎಂಬ ಸಂದೇಶ ಸಾರಲಾ ಗುತ್ತದೆ ಎಂದೂ ರವೀಂದ್ರ ಹೇಳಿದರು.

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರತ್ನಾಕರ್, ಕಾರ್ಯಕ್ರಮ ಆಯೋಜಕ ರೋಹಿತ್ ಹಾನಗಲ್, ಕೊಡಗು ಹೋಟೇಲ್, ರೆಸಾರ್ಟ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‍ನ 20 ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿ ದ್ದರು. ತಮಿಳು ನಾಡಿನ ವಿವಿಧೆಡೆಗಳ 120 ಪ್ರವಾಸಿ ಏಜೆಂಟರು, ಪ್ರವಾಸೋದ್ಯಮಿ ಗಳು ಸಭೆಯಲ್ಲಿ ಪಾಲ್ಗೊಂಡು ಕೊಡಗಿನ ಬಗ್ಗೆ ಮಾಹಿತಿ ಪಡೆದು ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಕಳುಹಿಸುವ ಬಗ್ಗೆ ಭರವಸೆ ನೀಡಿದರು.
ಕೊಡಗು ಹೋಟೇಲ್ ಅಸೋಸಿಯೇಷನ್ ವತಿಯಿಂದ ನಿರ್ಮಿಸಲಾದ ‘ಕೊಡಗು ಸುರಕ್ಷಿತ ಮತ್ತು ಮನಮೋಹಕ’ ಎಂಬ ಕಿರುಚಿತ್ರ ಮೆಚ್ಚುಗೆಗೆ ಪಾತ್ರವಾಯಿತು.

Translate »