ಮಾಸ್ಟರ್ಸ್ ಹಾಕಿ ಟೂರ್ನಿ; ಮೂರು ತಂಡಗಳ ಗೆಲುವು
ಕೊಡಗು

ಮಾಸ್ಟರ್ಸ್ ಹಾಕಿ ಟೂರ್ನಿ; ಮೂರು ತಂಡಗಳ ಗೆಲುವು

December 11, 2018

ಗೋಣಿಕೊಪ್ಪಲು:  ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಅಶ್ವಿನಿ ಸ್ಪೋಟ್ರ್ಸ್ ಫೌಂಡೇಶನ್, ಕರುಂಬಯ್ಯಾಸ್ ಅಕಾಡೆಮಿ ಹಾಗೂ ಹಾಕಿಕೂರ್ಗ್ ಸಹಯೋಗದಲ್ಲಿ ಆರಂಭಗೊಂಡಿರುವ 17 ವರ್ಷದೊಳಗಿನ 3 ನೇ ವರ್ಷದ ಇನ್ವಿಟೇಷನ್ ಮಾಸ್ಟರ್ಸ್ ಹಾಕಿ ಟೂರ್ನಿಯಲ್ಲಿ 3 ತಂಡಗಳು ಗೆದ್ದು ಬೀಗಿವೆ.

ಕಾಪ್ಸ್ ತಂಡವು ಲಯನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿತು. ಕಾಪ್ಸ್ ಪರ 8 ಹಾಗೂ 11 ನೇ ನಿಮಿಷಗಳಲ್ಲಿ ಅಯ್ಯಣ್ಣ 2 ಗೋಲು ಹೊಡೆದು ಮುನ್ನಡೆ ತಂದುಕೊಟ್ಟರು. 19 ರಲ್ಲಿ ಬೋಪಣ್ಣ, 26 ರಲ್ಲಿ ತಶಿನ್ ತಲಾ ಒಂದೊಂದು ಗೋಲು ಹೊಡೆದರು. ಲಯನ್ಸ್ ಪರ 21 ನೇ ನಿಮಿಷದಲ್ಲಿ ನಾಣಯ್ಯ, 29 ರಲ್ಲಿ ಆಕಾಶ್ ತಲಾ ಒಂದೊಂದು ಗೋಲು ಹೊಡೆದರು.

ಕಾಲ್ಸ್ ತಂಡವು ಭಾರತೀಯ ಕೊಡಗು ವಿದ್ಯಾಲಯ ತಂಡದ ವಿರುದ್ದ 1-0 ಗೋಲುಗಳ ಗೆಲುವು ಪಡೆಯಿತು. ಕಾಲ್ಸ್ ಪರ 17 ನೇ ನಿಮಿಷದಲ್ಲಿ ಕುಶಾಲಪ್ಪ ಏಕೈಕ ಗೋಲು ಹೊಡೆದು ಗೆಲುವಿನ ರೂವಾರಿಯಾದರು. ವಿರಾಜಪೇಟೆ ಕಾವೇರಿ ಕಾಲೇಜು ತಂಡ ಸೆಂಟ್ ಆನ್ಸ್ ತಂಡದ ವಿರುದ್ದ 2-1 ಗೋಲುಗಳ ಜಯ ಸಾಧನೆ ಮಾಡಿತು. ವಿರಾಜಪೇಟೆ ಪರವಾಗಿ 10 ಹಾಗೂ 40 ನೇ ನಿಮಿಷಗಳಲ್ಲಿ ರಚನ್ 2 ಗೋಲು ಹೊಡೆದು ಗೆಲುವು ತಂದುಕೊಟ್ಟರು. ಸೆಂಟ್ ಆನ್ಸ್ ಪರ 3 ನೇ ನಿಮಿಷದಲ್ಲಿ ಯಶ್ವಿನ್ 1 ಗೋಲು ಹೊಡೆದು ಸೋಲಿನ ಅಂತರ ತಗ್ಗಿಸಿದರು.
ಕರುಂಬಯ್ಯಾಸ್ ಅಕಾಡೆಮಿ ಮುಖ್ಯಸ್ಥ ದತ್ತ ಕರುಂಬಯ್ಯ ಟೂರ್ನಿ ಉದ್ಘಾಟಿಸಿ ದರು. ಈ ಸಂದರ್ಭ ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್ ಮುಖ್ಯಸ್ಥೆ ಅಶ್ವಿನಿ ನಾಚಪ್ಪ, ಕಾಲ್ಸ್ ಪ್ರಾಂಶುಪಾಲ ಬಾಚೇಟೀರ ಗೌರಮ್ಮ ನಂಜಪ್ಪ ಉಪಸ್ಥಿತರಿದ್ದರು.

Translate »