ಜನೌಷಧ ಕೇಂದ್ರದಲ್ಲಿ ಔಷಧಿ ಕೊರತೆಯಾಗದಂತೆ ಕೇಂದ್ರ ಸರ್ಕಾರದಿಂದ ಕ್ರಮ ಶಾಸಕ ಎಸ್. ರಾಮದಾಸ್
ಮೈಸೂರು

ಜನೌಷಧ ಕೇಂದ್ರದಲ್ಲಿ ಔಷಧಿ ಕೊರತೆಯಾಗದಂತೆ ಕೇಂದ್ರ ಸರ್ಕಾರದಿಂದ ಕ್ರಮ ಶಾಸಕ ಎಸ್. ರಾಮದಾಸ್

August 13, 2018

ಮೈಸೂರು: ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ ವಿವಿಧೆಡೆಯಿರುವ 4400ಕ್ಕೂ ಹೆಚ್ಚು ಪ್ರಧಾನ ಮಂತ್ರಿ ಜನೌಷದ ಕೇಂದ್ರಗಳಲ್ಲಿ ಔಷಧಗಳ ಕೊರತೆ ಉಂಟಾಗದಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

ಜನೌಷಧ ಕೇಂದ್ರಗಳಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಅನಂತ್ ಕುಮಾರ್ ಅವರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿರುವ ಜನೌಷಧಿ ಕೇಂದ್ರಗಳ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿ, ಇನ್ನಷ್ಟು ಔಷಧಿಗಳು ಲಭ್ಯವಾಗುವುದರೊಂದಿಗೆ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಔಷಧ ಪೂರೈಕೆಗೆ ಕ್ರಮ ಕೈಗೊಳ್ಳುವುದರೊಂದಿಗೆ ಅಗತ್ಯ ಅನುದಾನ ಬಿಡುಗಡೆಗೆ ಸಹಕರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ರಕ್ತದೊತ್ತಡ, ಸಕ್ಕರೆ ಕಾಯಿಲೆ ಸಂಬಂಧಿಸಿದ ಇನ್ಸುಲಿನ್, ಹೃದಯ ಸಂಬಂಧಿತ, ಆಸ್ತಮ ಖಾಯಿಲೆ, ಮೂತ್ರಪಿಂಡ ಖಾಯಿಲೆ ಮತ್ತು ಜೀವರಕ್ಷಕ ಔಷಧಗಳ ಸರಬರಾಜಿನ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ನಿರ್ಧಾರ ಕೈಗೊಂಡಿದೆ. ಸುಮಾರು 400 ಔಷಧಗಳಿಗೆ ಈಗಾಗಲೇ ಟೆಂಡರ್ ಮೂಲಕ ಆದೇಶವನ್ನು ನೀಡಲಾಗಿದೆ. ಸುಮಾರು ರೂ. 120 ಕೋಟಿ ರೂ ಗಿಂತ ಹೆಚ್ಚಿನ ಔಷಧಿಗಳನ್ನು ಆಗಸ್ಟ್ 25 ರಿಂದ 30ರೊಳಗೆ ದೇಶಾದ್ಯಂತ ಇರುವ ಜನೌಷಧಿ ಕೇಂದ್ರಗಳಿಗೆ ಸರಬರಾಜಾಗಲಿವೆ. ದೊಡ್ಡ ಔಷದ ಕಂಪನಿಗಳಾದ ಸಿಪ್ಲ, ವೊಕಾರ್ಡ್, ಬಯೋಕಾನ್ ಸೇರಿದಂತೆ ಇನ್ನಿತರ ಕಂಪನಿಗಳು ಔಷಧಿಗಳನ್ನು ಸರಬರಾಜು ಮಾಡಲು ಮುಂದೆ ಬಂದಿವೆ ಎಂದರು.

ಪ್ರತಿಯೊಂದು ಔಷಧಿಯ ಗುಣಾತ್ಮಕ ಪರೀಕ್ಷೆಯನ್ನು 8ರಿಂದ 12 ದಿನಗಳೊಳಗೆ ದೃಡೀಕರಿಸಿ, ಸರಬರಾಜು ಮಾಡಬೇಕೆಂಬ ಸೂಚನೆ ನೀಡಲಾಗಿದೆ. ಇಡೀ ದೇಶಾದ್ಯಂತ ಬಹಳಷ್ಟು ಬೇಡಿಕೆಯಿರುವ ಬಹು ವಿದವಾದ ಇನ್ಸುಲಿನ್‍ಗಳನ್ನು ಪ್ರತೀವಾರ ಅವಶ್ಯಕತೆಗೆ ಅನುಗುಣವಾಗಿ ಎಲ್ಲಾ ಜನೌಷಧ ಕೇಂದ್ರಗಳಿಗೆ ಪೂರೈಸಲು ತೀರ್ಮಾನಿಸಲಾಗಿದೆ. ಆಗಸ್ಟ್ 30 ರಿಂದ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ. ಕರ್ನಾಟಕ ರಾಜ್ಯವೂ ಸೇರಿದಂತೆ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜನೌಷಧ ಕೇಂದ್ರಗಳು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಎನ್‍ಜಿಓಗಳು ಹಾಗೂ ಚೇಂಬರ್ ಆಫ್ ಇಂಡಸ್ಟ್ರೀಸ್ ಅಂಡ್ ಕಾಮರ್ಸ್ ಸಂಸ್ಥೆಯನ್ನು ಒಳಗೊಂಡಂತೆ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಜನೌಷಧಗಳನ್ನು ನೀಡಬೇಕೆಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಲಾಗಿದೆ. ದೇಶಾದ್ಯಂತ ಎಲ್ಲಾ ವೈದ್ಯರು ಪ್ರಧಾನಮಂತ್ರಿ ಜನೌಷಧÀಗಳನ್ನೇ ಜನಸಾಮಾನ್ಯರಿಗೆ ಮತ್ತು ಬಡವರಿಗೆ ಪ್ರಿಸ್ಕ್ರೈಬ್ ಮಾಡಬೇಕೆಂಬ ವಿಷಯದ ಬಗ್ಗೆ ಕೇಂದ್ರ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೋರಲಾಯಿತು. ಈ ಸಂಬಂಧವಾಗಿ ಮಂತ್ರಿಗಳು ಸಭೆಯಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಜನೌಷದ ಕೇಂದ್ರದ ಸಿಇಓ ಸಚಿನ್ ಸಿಂಗ್ ಅವರನ್ನು ಅಭಿನಂದಿಸಲಾಯಿತು ಎಂದು ಅವರು ಹೇಳಿದರು.

Translate »