ಸೂಯೇಜ್ ಫಾರಂ ತ್ಯಾಜ್ಯ ವಿಲೇವಾರಿಗೆ ಕ್ರಿಯಾ ಯೋಜನೆ: ಸಂದೇಶ್‍ಗೆ ಸಚಿವ ಭೈರತಿ ಬಸವರಾಜ್ ವಿವರಣೆ
ಮೈಸೂರು

ಸೂಯೇಜ್ ಫಾರಂ ತ್ಯಾಜ್ಯ ವಿಲೇವಾರಿಗೆ ಕ್ರಿಯಾ ಯೋಜನೆ: ಸಂದೇಶ್‍ಗೆ ಸಚಿವ ಭೈರತಿ ಬಸವರಾಜ್ ವಿವರಣೆ

March 19, 2020

ಬೆಂಗಳೂರು, ಮಾ.18-ಮೈಸೂರು ನಗರದ ವಿದ್ಯಾರಣ್ಯಪುರಂನ ಸೂಯೇಜ್ ಫಾರಂನಲ್ಲಿ ಹಲವು ವರ್ಷಗಳಿಂದ ಶೇಖರಣೆಯಾಗಿರುವ ತ್ಯಾಜ್ಯದ ಪ್ರಮಾಣ ಅಂದಾಜು 2 ಲಕ್ಷ ಟನ್ ಇದ್ದು, ಈ ತ್ಯಾಜ್ಯವನ್ನು ಬಯೋರೆಮಿಡಿಯೇಷನ್ ಪದ್ಧತಿಯ ಪ್ರಕಾರ ವಿಲೇವಾರಿ ಮಾಡಲು ನಗರಪಾಲಿಕೆ ವತಿಯಿಂದ ಅಂದಾಜು ಪಟ್ಟಿ ಸಿದ್ಧಪಡಿಸಿದ್ದು, ಮಹಾತ್ಮಾ ಗಾಂಧೀ ನಗರ ವಿಕಾಸ್ ಯೋಜನೆ ಅಡಿಯಲ್ಲಿ ಅನುದಾನ ವನ್ನು ಭರಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ವಿದ್ಯಾರಣ್ಯಪುರಂ ಸೂಯೇಜ್ ಫಾರಂನಲ್ಲಿ ಸಂಗ್ರಹವಾಗಿರುವ ಹಳೆಯ ಕಸದ ರಾಶಿಯನ್ನು ಕೂಡಲೇ ವಿಲೇವಾರಿ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂಬ ಬಗ್ಗೆ ಸಂದೇಶ್ ನಾಗರಾಜ್ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.

ಮಹಾರಾಷ್ಟ್ರದ ನಾಗಪುರ ನಗರವು ಲೆಗಸಿ ವೇಸ್ಟ್ ನಿರ್ವಹಣೆಯಲ್ಲಿ ಉತ್ತಮ ಪದ್ಧತಿ ಯನ್ನು ಅನುಸರಿಸುತ್ತಿದ್ದು, ಮೈಸೂರು ಮಹಾನಗರಪಾಲಿಕೆ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡ 30.12.19ರಂದು ಅಲ್ಲಿಗೆ ಭೇಟಿ ನೀಡಿ ವೀಕ್ಷಣೆ ಮಾಡಿ ಕೊಂಡು ಬಂದಿದೆ. ಈ ಲೆಗಸಿ ವೇಸ್ಟ್‍ನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಅಂದಾಜುಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಅದು ಪರಿಶೀಲನೆಯಲ್ಲಿದೆ ಎಂದರು.

ಜಿಗ್ಮಾ ಕಂಪನಿಯ ಆಧುನಿಕ ಕೊರಿಯನ್ ತಂತ್ರಜ್ಞಾನದ ಮೂಲಕ ಈ ಕಸ ವಿಲೇವಾರಿ ಮಾಡುವ ಯೋಜನೆ ಸರ್ಕಾರದ ಮುಂದೆ ಇಲ್ಲ. ಈಗ ಮಹಾನಗರ ಪಾಲಿಕೆ ಸಿದ್ಧಪಡಿಸಿರುವ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ಪಡೆದು, ಕೆ.ಟಿ.ಟಿ.ಪಿ. ನಿಯಮಗಳ ರೀತ್ಯಾ ಟೆಂಡರ್ ಕರೆದು, ಅರ್ಹ ಏಜೆನ್ಸಿಯನ್ನು ಆಯ್ಕೆ ಮಾಡಿಕೊಂಡು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮ ಜರುಗಿಸಲಾಗುವುದೆಂದು ಸಚಿವರು ವಿವರಿಸಿದರು.

Translate »