ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಅಗತ್ಯ ಕ್ರಮ  ವಿಧಾನಸಭೆಯಲ್ಲಿ ಸಚಿವ ಈಶ್ವರಪ್ಪ ಭರವಸೆ
ಮೈಸೂರು

ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಅಗತ್ಯ ಕ್ರಮ ವಿಧಾನಸಭೆಯಲ್ಲಿ ಸಚಿವ ಈಶ್ವರಪ್ಪ ಭರವಸೆ

March 19, 2020

ಬೆಂಗಳೂರು,ಮಾ.18(ಕೆಎಂಶಿ)- ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ವಿಧಾನ ಸಭೆಯಲ್ಲಿ ಸ್ಪಷ್ಟಪಡಿಸಿರುವ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಜಲ ಮೂಲವೇ ಇಲ್ಲದ ಬಯಲು ಸೀಮೆಯಲ್ಲಿ ನೀರಿಗಾಗಿ ಹಣ ವೆಚ್ಚ ಮಾಡುವುದು ಪ್ರಯೋಜನವಿಲ್ಲ ಎಂದಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಶರತ್ ಬಚ್ಚೇಗೌಡ, ಬಸವನಗೌಡ ದದ್ದಲ್ ಮತ್ತಿತರರು ಮಾಡಿದ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ತುರ್ತು ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಪ್ರತಿ ಜಿಲ್ಲಾ ಪಂಚಾಯಿತಿಗೆ 100 ಲಕ್ಷ ರೂ. ಬರಪೀಡಿತ ಪ್ರತಿ ತಾಲೂಕುಗಳಿಗೆ ಕಂದಾಯ ಇಲಾಖೆ ಪ್ರತ್ಯೇಕವಾಗಿ 50 ಲಕ್ಷ ರೂ., ಬರವಿಲ್ಲದ ತಾಲೂಕುಗಳಿಗೆ ಹತ್ತು ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದರು. ಜಲಧಾರೆ ಯೋಜನೆಯಡಿ ಮಂಡ್ಯ ಮತ್ತು ವಿಜಯಪುರದ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಕಲ್ಪಿಸಲು ಎಐಐಬಿ ಬ್ಯಾಂಕ್‍ನಿಂದ ಸಾಲ ಪಡೆಯಲಾಗುತ್ತಿದೆ. ಈ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಶೀಘ್ರದಲ್ಲೇ ಟೆಂಡರ್ ಕರೆಯುವುದಾಗಿ ಹೇಳಿದರು.

ಜಲಮೂಲವೇ ಇಲ್ಲದ ಬಯಲು ಸೀಮೆಯಲ್ಲಿ ಅನಗತ್ಯವಾಗಿ ಹಣ ಪೋಲು ಮಾಡುವುದರಲ್ಲಿ ಅರ್ಥವಿಲ್ಲ. ಮೊದಲು ಜಲಮೂಲ ಹುಡುಕಿ, ನಂತರ ಕುಡಿಯುವ ನೀರಿನ ಯೋಜನೆಗಳಿಗೆ ಅನುದಾನ ನೀಡಬೇಕು. ಜಲಮೂಲವಿಲ್ಲವೆಂದು ಈ ಪ್ರದೇಶ ಗಳನ್ನು ಕೈಬಿಡಲು ಸಾಧ್ಯವಿಲ್ಲ. ಆದರೆ ಬೇರೆ ಮಾರ್ಗಗಳಿಂದ ಈ ಪ್ರದೇಶಕ್ಕೆ ನೀರನ್ನು ಹರಿಸಲು ಅನೇಕ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಂಡಿದೆ ಎಂದು ತಿಳಿಸಿದರು.

 

 

 

Translate »