ವಿಧಾನಮಂಡಲ ಅಧಿವೇಶನ ಮುಂದೂಡಿಕೆಗೆ ಅಡ್ಡಿಯಾಗಿರುವ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು
ಮೈಸೂರು

ವಿಧಾನಮಂಡಲ ಅಧಿವೇಶನ ಮುಂದೂಡಿಕೆಗೆ ಅಡ್ಡಿಯಾಗಿರುವ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು

March 19, 2020

ಬೆಂಗಳೂರು, ಮಾ.18(ಕೆಎಂಶಿ)- ರಾಜ್ಯ ವಿಧಾನಮಂಡಲ ಅಧಿವೇಶನವನ್ನು ಮುಂದೂಡುವ ಸರ್ಕಾರದ ಉದ್ದೇಶಕ್ಕೆ ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆ ಅಡ್ಡಗಾಲಾಗಿ ಪರಿಣಮಿಸಿರುವ ಅಂಶ ಬೆಳಕಿಗೆ ಬಂದಿದೆ. ಕೊರೊನಾ ವೈರಸ್ ತಡೆಗೆ ಹಲವು ಕ್ರಮಗಳನ್ನು ಕೈಗೊಂಡಿರುವ ಸರ್ಕಾರ ರಾಜ್ಯ ವಿಧಾನಮಂಡಲ ಅಧಿ ವೇಶನವನ್ನು ಮುಂದೂಡಲು ಬಯಸಿತ್ತು. ಪ್ರತಿಪಕ್ಷಗಳೂ ಇದನ್ನು ಒಪ್ಪಿದ್ದವು.

ಕೊರೊನಾ ತಡೆಗಟ್ಟಲು ರಾಜ್ಯವನ್ನು ಎಷ್ಟು ಪರಿಣಾಮಕಾರಿಯಾಗಿ ಬಂದ್ ಮಾಡಲು ಸಾಧ್ಯವೋ? ಮಾಡಬೇಕು ಎಂಬ ಕಾರಣದಿಂದ ಸರ್ಕಾರ ರಾಜ್ಯ ವಿಧಾನಮಂಡಲ ಅಧಿವೇಶನವನ್ನು ಗುರುವಾರದಿಂದ ಮುಂದೂಡಲು ಬಯಸಿತ್ತು. ಆದರೆ ರಾಜ್ಯ ಸರ್ಕಾರದ ನಿಲುವಿಗೆ ಕೇಂದ್ರ ಅಡ್ಡಗಾಲು ಹಾಕಿದ್ದಲ್ಲದೆ ಯಾವ ಕಾರಣಕ್ಕೂ ವಿಧಾನ ಮಂಡಲ ಅಧಿ ವೇಶನವನ್ನು ಮುಂದೂಡಬೇಡಿ ಎಂದು ಸಿಗ್ನಲ್ ರವಾನಿಸಿತು. ಉರುಳುವ ಹಂತದಲ್ಲಿ ರುವ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಬಹುಮತ ಸಾಬೀತುಪಡಿಸುವ ಅನಿವಾರ್ಯತೆ ಎದುರಾದ ಕೂಡಲೇ ಕೊರೊನಾ ಹಿನ್ನೆಲೆಯಲ್ಲಿ ಸದನ ಮುಂದೂಡಿರುವು ದಾಗಿ ಪ್ರಕಟಿಸಿತ್ತು. ಆದರೆ ಕೊರೊನಾ ಹೆಸರಿನಲ್ಲಿ ಬಹುಮತ ಸಾಬೀತು ಮಾಡುವ ಹೊಣೆ ಗಾರಿಕೆಯಿಂದ ಮಧ್ಯಪ್ರದೇಶ ಕಾಂಗ್ರೆಸ್ ವಿಮುಖವಾಗಿದೆ ಎಂದು ನಾವು ಪ್ರತಿಭಟಿಸಿದ್ದೇವೆ. ಹೀಗಿರುವಾಗ ಕರ್ನಾಟಕದಲ್ಲಿ ಅಧಿವೇಶನವನ್ನು ಮುಂದೂಡಿದರೆ ಮಧ್ಯಪ್ರದೇಶ ಸರ್ಕಾರ ಕೈಗೊಂಡ ಕ್ರಮಕ್ಕೆ ನಾವೇ ಪುಷ್ಟಿ ನೀಡಿದಂತಾಗುತ್ತದೆ. ಹೀಗಾಗಿ ರಾಜ್ಯದಲ್ಲಿ ಅಧಿವೇಶನವನ್ನು ಮುಂದೂಡುವ ಅಥವಾ ಮೊಟಕು ಮಾಡುವ ಪ್ರಯತ್ನ ಮಾಡಬೇಡಿ ಎಂದು ಬಿಜೆಪಿ ಹೈಕಮಾಂಡ್ ಹೇಳಿದ್ದು, ಇದರ ಪರಿಣಾಮವಾಗಿ ಅಧಿವೇಶನವನ್ನು ಮುಂದುವರಿಸಲಾಗಿದೆ.

Translate »