ನಟರು ಪ್ರೇಕ್ಷಕರನ್ನು ನಿರ್ಲಕ್ಷ್ಯ ಮಾಡಬಾರದೆಂಬ ನಿಲುವು ಹೊಂದಿದ್ದ ಮೇರು ವ್ಯಕ್ತಿತ್ವದ ಗುಬ್ಬಿ ವೀರಣ್ಣ
ಮೈಸೂರು

ನಟರು ಪ್ರೇಕ್ಷಕರನ್ನು ನಿರ್ಲಕ್ಷ್ಯ ಮಾಡಬಾರದೆಂಬ ನಿಲುವು ಹೊಂದಿದ್ದ ಮೇರು ವ್ಯಕ್ತಿತ್ವದ ಗುಬ್ಬಿ ವೀರಣ್ಣ

September 4, 2019

ಮೈಸೂರು, ಆ.31(ಪಿಎಂ)- ರಂಗಭೂಮಿ ಕಲಾವಿ ದರು ಪ್ರೇಕ್ಷಕರನ್ನು ನಿರ್ಲಕ್ಷ್ಯ ಮಾಡಬಾರದೆಂದು ಹೇಳು ತ್ತಿದ್ದ ಗುಬ್ಬಿ ವೀರಣ್ಣ, ನಟರಿಗೆ ನಾಟಕ ಕಂಪನಿ ಮಾಲೀ ಕರು ಗೌರವ ನೀಡಬೇಕೆಂಬ ನಿಲುವು ಹೊಂದಿದ್ದವರು ಎಂದು ಗುಬ್ಬಿ ವೀರಣ್ಣನವರ ಮೊಮ್ಮಗಳೂ ಆದ ರಂಗಕರ್ಮಿ ಡಾ.ಬಿ.ಜಯಶ್ರೀ ಹೇಳಿದರು.

ಮೈಸೂರು ವಿವಿ ಗುಬ್ಬಿ ವೀರಣ್ಣ ರಂಗಪೀಠದ ವತಿಯಿಂದ ಮಾನಸಗಂಗೋತ್ರಿಯ ಲಲಿತಕಲಾ ಕಾಲೇಜು ಸಭಾಂಗಣ ದಲ್ಲಿ ಹಮ್ಮಿಕೊಂಡಿದ್ದ ರಂಗಧ್ವನಿ ಉಪನ್ಯಾಸ ಮಾಲಿಕೆ-1ರ ಉದ್ಘಾಟನಾ ಸಮಾರಂಭದಲ್ಲಿ `ಡಾ.ಗುಬ್ಬಿ ವೀರಣ್ಣರ ಬದುಕು-ಸಾಧನೆ’ ಕುರಿತು ಅವರು ಮಾತನಾಡಿದರು.

ನಟರು ಪ್ರೇಕ್ಷಕರ ಅಪೇಕ್ಷೆ ಅರಿತು ಗೌರವದಿಂದ ಕಾಣ ಬೇಕು ಎಂಬ ನಿಲುವು ಹೊಂದಿದ್ದ ಗುಬ್ಬಿ ವೀರಣ್ಣ, ಅದೇ ರೀತಿ ನಾಟಕ ಕಂಪನಿಗಳ ಮಾಲೀಕರು ಕಲಾವಿದರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂಬುದರಲ್ಲಿ ನಂಬಿಕೆ ಇಟ್ಟು ಕಂಪನಿ ಮಾಲೀಕರಾಗಿ ಅದರಂತೆಯೇ ನಡೆದವರು. ನಾನು ಗುಬ್ಬಿ ವೀರಣ್ಣನವರ ಮೊಮ್ಮಗಳು ಎಂದು ಹೇಳಿ ಕೊಳ್ಳುವುದು ಹೆಮ್ಮೆ. ಆದರೆ ಈವರೆಗೂ ಗುಬ್ಬಿ ವೀರಣ್ಣ ನವರು ನಮ್ಮ ತಾತ ಎಂದು ನಾನೆಂದೂ ಬಿಂಬಿಸಿಕೊಂಡಿಲ್ಲ. ಗುಬ್ಬಿ ವೀರಣ್ಣನವರದು ಮೇರು ವ್ಯಕ್ತಿತ್ವ. ಅವರ ಮಕ್ಕಳು ಅವರನ್ನು ಅಪ್ಪ ಎಂದು ಕರೆಯುತ್ತಿರಲಿಲ್ಲ. ಬದಲಿಗೆ ಯಜ ಮಾನರೆ ಎಂದೇ ಸಂಬೋಧಿಸುತ್ತಿದ್ದರು ಎಂದು ತಿಳಿಸಿದರು.

ಗುಬ್ಬಿ ವೀರಣ್ಣರ ಬಾಲ್ಯದ ಜೀವನ ಕಡುಕಷ್ಟದಿಂದ ಕೂಡಿತ್ತು. ಚಂದಣ್ಣ ಮತ್ತವರ ಸ್ನೇಹಿತರು ನಡೆಸುತ್ತಿದ್ದ ನಾಟಕ ಕಂಪನಿಗೆ ಮಣ್ಣು ಅಗೆಯುವ ಕೆಲಸಕ್ಕೆ ಅವರು ಸೇರುತ್ತಾರೆ. 6ನೇ ತರಗತಿಯವರೆಗೆ ಓದಿದ್ದ ಗುಬ್ಬಿ ವೀರಣ್ಣ, ಚಂದಣ್ಣರ ಕಂಪನಿಯಲ್ಲಿ ಹಂತ ಹಂತವಾಗಿ ಪ್ರಚಾರದ ಕೆಲಸ, ಟಿಕೆಟ್ ಮಾರಾಟ, ರಂಗ ಸಜ್ಜಿಕೆ ಮಾಡುವಂತಾ ದರು. ಅಲ್ಲದೆ, ಸಣ್ಣ ಪುಟ್ಟ ಅಭಿನಯಕ್ಕೂ ಅವಕಾಶ ಪಡೆದರು. ಒಂದು ದಿನ `ಸದಾರಮೆ’ ನಾಟಕ ಪ್ರದರ್ಶನವಿದ್ದಾಗ ಕಳ್ಳನ ಪಾತ್ರಧಾರಿ ಗೈರು ಹಿನ್ನೆಲೆಯಲ್ಲಿ ಆ ಪಾತ್ರ ನಿರ್ವಹಿಸುವ ಅವಕಾಶ ವೀರಣ್ಣರಿಗೆ ಒಲಿದು ಬಂದಿತು. ಆಗ ತಮ್ಮ ಕಳ್ಳನ ಪಾತ್ರಧಾರಿಯ ಅಮೋಘ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸನ್ನೂ ಕದ್ದರು. ಚಂದಣ್ಣನವರು ತಮ್ಮ ಕಂಪನಿ ಹಸ್ತಾಂತರಿಸುವ ಮಟ್ಟಕ್ಕೆ ಪ್ರಾಮಾಣಿಕ ಹಾಗೂ ಬದ್ಧತೆಯ ವ್ಯಕ್ತಿತ್ವಕ್ಕೆ ವೀರಣ್ಣ ಬೆಳೆದು ನಿಂತರು ಎಂದರು.

ಮೂವರು ಪತ್ನಿಯರು: ಚಂದಣ್ಣನವರು ನೋಡಿದ ಜಿ.ವಿ.ಸುಂದರಮ್ಮನವರನ್ನು ವೀರಣ್ಣ ಗಾಂಧರ್ವ ವಿವಾಹ ವಾಗುತ್ತಾರೆ. ಬಳಿಕ ಸಂಬಂಧಿಕರು ಈ ಮದುವೆ ಒಪ್ಪದ ಕಾರಣ, ಸ್ವತಃ ಸುಂದರಮ್ಮನವರೇ ಎಮ್ಮೆ ಕಾಯುತ್ತಿದ್ದ ಭದ್ರಮ್ಮ ಅವರನ್ನು ಹುಡುಕಿ ವೀರಣ್ಣರಿಗೆ ಮದುವೆ ಮಾಡಿ ಸುತ್ತಾರೆ. ಬಳಿಕವೂ ಅವರು ಸಿನಿಮಾ ರಂಗದಲ್ಲಿ ಬಿ. ಜಯಮ್ಮ ಎಂಬ ಯುವತಿಯನ್ನು ಪ್ರೀತಿಸಿ ವಿವಾಹವಾದರು. ಸುಂದರಮ್ಮ ನಾಟಕ ಕಂಪನಿಯ ಬೆನ್ನೆಲುಬಾದರೆ, ಭದ್ರಮ್ಮ ಸಂಸಾರದ ನೊಗ ಹೊತ್ತಿದ್ದರು. ಇನ್ನು ಬಿ.ಜಯಮ್ಮ ಪತಿಯ ಸಿನಿಮಾ ಕನಸ್ಸಿಗೆ ನೀರೆರೆದರು. ಹೀಗೆ ನಾಲ್ಕು ಶಕ್ತಿಗಳು ಸೇರಿ ಸಾಧನೆ ಮೆರೆದವು ಎಂದು ತಮ್ಮ ತಾತನ ದಾಂಪತ್ಯ ಜೀವನದ ಹಿನ್ನೆಲೆಯನ್ನು ಬಿಚ್ಚಿಟ್ಟರು.

ಉಪನ್ಯಾಸ ಮಾಲಿಕೆ ಉದ್ಘಾಟಿಸಿದ ಮೈಸೂರು ವಿವಿ ಕುಲ ಸಚಿವ ಪ್ರೊ.ಲಿಂಗರಾಜ ಗಾಂಧಿ ಮಾತನಾಡಿ, ಜಾಗತೀ ಕರಣ ಹಾಗೂ ಖಾಸಗೀಕರಣದ ಈ ಸಂದರ್ಭದಲ್ಲಿ ಕಲೆ, ಸಾಹಿತ್ಯ ಹಾಗೂ ಸಂಸ್ಕøತಿಯನ್ನು ಹೊಂದಿದ ಮಾನವಿಕ ವಿಷಯಗಳತ್ತ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿರುವುದು ಕಡಿಮೆಯಾಗುತ್ತಿದೆ. ಹೀಗಾಗಿ ಮಾನವಿಕ ವಿಷಯಗಳತ್ತ ವಿದ್ಯಾರ್ಥಿಗಳನ್ನು ಸೆಳೆಯುವುದು ವಿವಿಗೆ ಒಂದು ಸವಾಲೇ ಸರಿ ಎಂದರು. ಅಭಿವೃದ್ಧಿ ಎಂದರೆ ಕೇವಲ ಹಣ ಸಂಪಾದನೆ, ವಿಜ್ಞಾನ-ತಂತ್ರಜ್ಞಾನದ ಪ್ರಗತಿಯಷ್ಟೇ ಅಲ್ಲ. ಹೀಗಾಗಿ ಮಾನ ವಿಕ ವಿಷಯಗಳ ಪ್ರಾಮುಖ್ಯತೆ ಅರಿಯಬೇಕಿದೆ. ನಾಟಕ ಕಲೆ ಕೇವಲ ಮನರಂಜನೆಗೆ ಮಾತ್ರ ಸೀಮಿತವಲ್ಲ. ಅದು ಸಾಮಾಜಿಕ ಬದಲಾವಣೆಗೂ ನಾಂದಿ ಹಾಡಲಿದೆ. ಇಂತಹ ಕ್ಷೇತ್ರದಲ್ಲಿ ಗುಬ್ಬಿ ವೀರಣ್ಣ ತಮ್ಮ ಬದ್ಧತೆ ಪ್ರದರ್ಶಿಸಿ ಬೆಳೆದವರು ಎಂದು ಸ್ಮರಿಸಿದರು. ಲಲಿತ ಕಲಾ ಕಾಲೇಜು ಪ್ರಾಂಶುಪಾಲ ಡಾ.ಸಿ.ರಾಮಸ್ವಾಮಿ, ಗುಬ್ಬಿ ವೀರಣ್ಣ ರಂಗಪೀಠದ ಸಂದ ರ್ಶಕ ರಂಗ ತಜ್ಞ ಮಂಡ್ಯ ರಮೇಶ್ ಮತ್ತಿತರರು ಹಾಜರಿದ್ದರು.

Translate »