ಮೈಸೂರು ಅರಮನೆ ದರ್ಬಾರ್ ಹಾಲ್‍ನಲ್ಲಿ ನಟಿ ನಿಧಿ ಸುಬ್ಬಯ್ಯ ಫೋಟೋ ಶೂಟ್ ಪ್ರಕರಣ
ಮೈಸೂರು

ಮೈಸೂರು ಅರಮನೆ ದರ್ಬಾರ್ ಹಾಲ್‍ನಲ್ಲಿ ನಟಿ ನಿಧಿ ಸುಬ್ಬಯ್ಯ ಫೋಟೋ ಶೂಟ್ ಪ್ರಕರಣ

August 5, 2018

ಮೈಸೂರು: ಮೈಸೂರು ಅರಮನೆ ಮತ್ತೆ ಸುದ್ದಿಯಾಗಿದೆ. ಪ್ರತಿಷ್ಠಿತರಿಗಾಗಿ ಭದ್ರತಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ. ದರ್ಬಾರ್ ಹಾಲ್‍ನಲ್ಲಿ ಚಿತ್ರನಟಿ ನಿಧಿ ಸುಬ್ಬಯ್ಯ ಅವರು ತೆಗೆಸಿಕೊಂಡಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಅರಮನೆಯ ದರ್ಬಾರ್ ಹಾಲ್‍ನಲ್ಲಿ ಫೋಟೊ ನಿಷೇಧವಾಗಿದ್ದರೂ ನಟಿ ನಿಧಿ ಸುಬ್ಬಯ್ಯ ಅವರಿಗೆ ಅಲ್ಲಿ ಫೋಟೋ ಶೂಟ್‍ಗೆ ಅನುಮತಿ ನೀಡಿದವರು ಯಾರು? ಎಂಬ ಪ್ರಶ್ನೆ ಕಾಡುತ್ತಿದ್ದು, ಸಾರ್ವಜನಿಕರಿಗೆ ಒಂದು ನಿಯಮ, ಗಣ್ಯರಿಗೆ ಒಂದು ನಿಯಮ ಅನುಸರಿಸುತ್ತಿ ದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಅರಮನೆಗೆ ಭೇಟಿ ನೀಡುವ ಪ್ರವಾಸಿಗರಿಗೇ ಫೋಟೋಗೆ ಅವಕಾಶವಿಲ್ಲ. ಅಂತಹದ್ದರಲ್ಲಿ ನಟಿ ನಿಧಿ ಸುಬ್ಬಯ್ಯ ಫೋಟೊ ಶೂಟ್‍ಗೆ ಅವಕಾಶ ಮಾಡಿಕೊಟ್ಟಿರುವುದರ ಹಿಂದೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂಬ ಆರೋಪಗಳನ್ನು ಅರಮನೆ ಹಿತೈಷಿಗಳು ಮಾಡುತ್ತಿದ್ದು, ಪದೇ ಪದೆ ಅರಮನೆ ಪ್ರತಿಷ್ಠೆ ಹಾಗೂ ಘನತೆಗೆ ಆಗುತ್ತಿರುವ ಧಕ್ಕೆ ತಡೆ ಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ನಟಿ ನಿಧಿ ಸುಬ್ಬಯ್ಯ ಅವರು ದರ್ಬಾರ್ ಹಾಲ್‍ನಲ್ಲಿ ಕುಳಿತಿರುವ ಫೋಟೊವನ್ನು ಎರಡು ದಿನದ ಹಿಂದಷ್ಟೇ ಇನ್‌ಸ್ಟ್ರಾಗ್ರಾಮ್‌ನಲ್ಲಿ ಅಪ್‍ಲೋಡ್ ಮಾಡಲಾಗಿದೆ. ಇದರಿಂದ ಅರಮನೆಯ ಭದ್ರತಾ ನಿಯಮವನ್ನುಗಾಳಿಗೆ ತೂರಿ ಪ್ರಭಾವಿಗಳು ಹಾಗೂ ಅಧಿಕಾರಿ ವರ್ಗ, ಬೇಕಾದವರಿಗೆ ಫೋಟೋ ತೆಗೆಸಿಕೊಳ್ಳಲು ಅವಕಾಶ ನೀಡುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ವರನಟ ಡಾ.ರಾಜ್ ಕುಮಾರ್ ಅವರ `ಮಯೂರ’ ಚಿತ್ರವನ್ನು ಅರಮನೆಯ ದರ್ಬಾರ್ ಹಾಲ್‍ನಲ್ಲಿ ಚಿತ್ರೀಕರಿಸಲು ಅವಕಾಶ ನೀಡಲಾಗಿತ್ತು. ಅದನ್ನು ಹೊರತುಪಡಿಸಿದರೆ ಚಿತ್ರೀಕರಣಕ್ಕೆ ಅವಕಾಶ ನೀಡಿರಲಿಲ್ಲ. 2014ರಲ್ಲಿ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ತಮಿಳು ಚಿತ್ರ `ಲಿಂಗ’ ಫೋಟೋ ಚಿತ್ರೀಕರಣಕ್ಕೆ ಅವಕಾಶ ಕೇಳಲಾಗಿತ್ತು. ಆದರೆ ಅರಮನೆಯ ಆಡಳಿತ ಮಂಡಳಿ ಅವಕಾಶ ನೀಡಿರಲಿಲ್ಲ.

ಈ ನಡುವೆ 2016ರಲ್ಲಿ ಯುವ ಜೋಡಿಯೊಂದರ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಅರಮನೆಯ ದರ್ಬಾರ್ ಹಾಲ್‍ನಲ್ಲಿ ನಡೆದಿತ್ತು. ದರ್ಬಾರ್ ಹಾಲ್‍ನಲ್ಲಿ ದೊಡ್ಡ ಕ್ಯಾಮರಾ, ಡ್ರೋನ್ ಬಳಸಿ ಲೈಟಿಂಗ್ಸ್ ವ್ಯವಸ್ಥೆ ಮಾಡಿ ಚಿತ್ರೀಕರಿಸಿದ್ದ ವಿಡಿಯೋ ತುಣುಕು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ಮದುವೆಗೆ ಮುನ್ನ ದರ್ಬಾರ್ ಹಾಲ್ ಸೇರಿದಂತೆ ಅರಮನೆಯ ವಿವಿಧೆಡೆ ವಿಡಿಯೋ ಮಾಡಲು ಅವಕಾಶ ನೀಡಿದವರು ಯಾರು? ಎಂದು ಪ್ರಶ್ನಿಸಿದ್ದ ರಾಜ ಮನೆತನದವರು ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ನಟಿ ನಿಧಿ ಸುಬ್ಬಯ್ಯ ಫೋಟೋ ಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಅರಮನೆಯ ಭದ್ರತೆಯನ್ನು ಅಣಕಿಸಿದೆ.

ನಾನು ಅನುಮತಿ ನೀಡಿಲ್ಲ: ದರ್ಬಾರ್ ಹಾಲ್‍ನಲ್ಲಿ ನಟಿ ನಿಧಿಸುಬ್ಬಯ್ಯ ಫೋಟೋ ಶೂಟ್‍ಗೆ ನಾವ್ಯಾರೂ ಅವಕಾಶ ನೀಡಿಲ್ಲ ಎಂದು ಅರಮನೆಯ ಆಡಳಿತ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ‘ಮೈಸೂರು ಮಿತ್ರ’ನಲ್ಲಿ ಸ್ಪಷ್ಟಪಡಿಸಿದ್ದಾರೆ.

ದರ್ಬಾರ್ ಹಾಲ್‍ನಲ್ಲಿ ನಿಧಿ ಸುಬ್ಬಯ್ಯ ತೆಗೆಸಿಕೊಂಡಿರುವ ಫೋಟೋಗೂ, ನನಗೂ ಸಂಬಂಧವಿಲ್ಲ. ಫೋಟೋಶೂಟ್‍ಗೆ ನಾನು ಅನುಮತಿ ನೀಡಿಲ್ಲ. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರು ದರ್ಬಾರ್ ಹಾಲ್‍ನಲ್ಲಿ ಫೋಟೋ ತೆಗೆಸಿಕೊಳ್ಳಲು ಅವಕಾಶ ನೀಡ ಲಾಗಿದೆ. ಈ ಹಿಂದೆ 20 ರೂ. ಶುಲ್ಕ ಪಡೆದು ದರ್ಬಾರ್ ಹಾಲ್ ನಲ್ಲಿ ಫೋಟೋ ತೆಗೆಸಿಕೊಳ್ಳಲು ಅವಕಾಶ ನೀಡಲಾಗುತ್ತಿತ್ತು.

ಆದರೆ ಕಳೆದ ಕೆಲ ತಿಂಗಳ ಹಿಂದೆ ಸರ್ಕಾರದ ಮುಖ್ಯ ಕಾರ್ಯ ದರ್ಶಿಗಳಾಗಿದ್ದ ರತ್ನಪ್ರಭ ಅವರು ಅರಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದರ್ಬಾರ್ ಹಾಲ್‍ನಲ್ಲಿ ಫೋಟೋ ತೆಗೆಸಿಕೊಳ್ಳಲು ಶುಲ್ಕ ಸಂಗ್ರಹಿಸುವುದನ್ನು ನಿಲ್ಲಿಸುವಂತೆಯೂ, ತಾಜ್‍ಮಹಲ್ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿರುವಂತೆ ಮೈಸೂರು ಅರಮನೆ, ದರ್ಬಾರ್ ಹಾಲ್ ಫೋಟೋ ಶೂಟ್‍ಗೆ ಅವಕಾಶ ನೀಡುವಂತೆ ಸಲಹೆ ನೀಡಿದ್ದರು. ಅರಮನೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ನೀಡಿದ ಆದೇಶಾನುಸಾರ ಇದೀಗ ದರ್ಬಾರ್ ಹಾಲ್ ಹಾಗೂ ಕಲ್ಯಾಣ ಮಂಟಪದಲ್ಲಿ ಮೊಬೈಲ್‍ನಲ್ಲಿ ಫೋಟೋ ತೆಗೆಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.

ನಿಧಿ ಸುಬ್ಬಯ್ಯ ಅವರು ಇನ್‌ಸ್ಟ್ರಾಗ್ರಾಮ್‌ನಲ್ಲಿ ಹಾಕಿರುವುದು ಫೋಟೋ ಮಾತ್ರ. ಫೋಟೋ ಶೂಟ್ ಫೋಟೋವಲ್ಲ ಎಂದು ಸ್ಪಷ್ಟಪಡಿಸಿದ ಅವರು, ಫೋಟೋ ತೆಗೆಸಿಕೊಳ್ಳಲು ಯಾವಾಗ ಅರಮನೆಗೆ ಬಂದಿದ್ದರು. ಅವರಿಗೆ ಯಾರು ಅವಕಾಶ ನೀಡಿದರು ಎಂಬುದು ನನಗೆ ತಿಳಿದಿಲ್ಲ ಎಂದರು.

Translate »