ವಿಜ್ಞಾನ, ತಂತ್ರಜ್ಞಾನ ಸದ್ಬಳಕೆಗೆ ತಾಂತ್ರಿಕ ವಿವಿ ಸಿಂಗಾಪುರ್ ಪ್ರಾಧ್ಯಾಪಕ ಸಲಹೆ
ಮೈಸೂರು

ವಿಜ್ಞಾನ, ತಂತ್ರಜ್ಞಾನ ಸದ್ಬಳಕೆಗೆ ತಾಂತ್ರಿಕ ವಿವಿ ಸಿಂಗಾಪುರ್ ಪ್ರಾಧ್ಯಾಪಕ ಸಲಹೆ

March 19, 2019

ಮೈಸೂರು: ಪರಿ ಸರಕ್ಕೆ ಮಾರಕವಾಗದ ರೀತಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಸದ್ಬಳಕೆಗೆ ವಿಜ್ಞಾನ ಕ್ಷೇತ್ರ, ಸಮಾಜ ಹಾಗೂ ನೀತಿ-ನಿಯಮ ರೂಪಿಸುವ ಆಡಳಿತ ವರ್ಗ ಒತ್ತು ನೀಡ ಬೇಕಿದೆ ಎಂದು ಸಿಂಗಾಪುರ್‍ನ ನಂಯಾಂಗ್ ತಾಂತ್ರಿಕ ವಿಶ್ವವಿದ್ಯಾನಿಲ ಯದ ಉಪಾಧ್ಯಕ್ಷ ಪ್ರೊ.ಬಿ.ವಿ.ಆರ್. ಚೌಧರಿ ಅಭಿಪ್ರಾಯಪಟ್ಟರು.

ಮೈಸೂರಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿವಿಯ ಸೆಂಟರ್ ಫಾರ್ ಮೆಟಿರೀಯಲ್ಸ್ ಸೈನ್ಸ್ ಅಂಡ್ ಟೆಕ್ನಾಲಜಿ ವತಿಯಿಂದ `ಶಕ್ತಿ, ಪರಿ ಸರ ಹಾಗೂ ಆರೋಗ್ಯ ರಕ್ಷಣಾ ಕ್ಷೇತ್ರಗಳಲ್ಲಿ ಮುಂದುವರೆದ ಕ್ರಿಯಾತ್ಮಕ ವಸ್ತುಗಳ ಬಳಕೆ (ಅಡ್ವಾನ್ಸ್‍ಡ್ ಫಂಕ್ಷನಲ್ ಮೆಟಿರಿ ಯಲ್ಸ್ ಫಾರ್ ಎರ್ನಜಿ, ಎನ್ವೈರ್‍ಮೆಂಟ್ ಅಂಡ್ ಹೆಲ್ತ್‍ಕೇರ್)’ ಕುರಿತಂತೆ ಮೂರು ದಿನಗಳು ಹಮ್ಮಿಕೊಂಡಿರುವ ಅಂತಾ ರಾಷ್ಟ್ರೀಯ ಮಟ್ಟದ ಸಮ್ಮೇಳನ ಉದ್ಘಾ ಟಿಸಿ ಅವರು ಮಾತನಾಡಿದರು.

ವಸ್ತು ವಿಜ್ಞಾನ ಮತ್ತು ತಂತ್ರಜ್ಞಾನ ಮಾನ ವನ ಚಟುವಟಿಕೆಗಳಿಗೆ ಅಗತ್ಯವಾದ ಉತ್ಪನ್ನ ಗಳ ತಯಾರಿಕೆ ಅತ್ಯಗತ್ಯ. ಸಾರಿಗೆ, ಮೂಲ ಸೌಕರ್ಯ, ಇಂಧನ, ಜಲ ಸಂಪನ್ಮೂಲ, ಆರೋಗ್ಯ ಮತ್ತು ಶಿಕ್ಷಣದಲ್ಲಿ ತನ್ನದೇ ಆದ ಮಹತ್ವದ ಪಾತ್ರ ವಹಿಸಿರುವ ವಸ್ತು ವಿಜ್ಞಾನ ಸುಸ್ಥಿರ ಅಭಿವೃದ್ಧಿಯಲ್ಲಿ ಮುನ್ನಡೆ ಯಬೇಕಿದೆ. ಆದರೆ ಪ್ರಸ್ತುತ ಆ ರೀತಿಯ ಸನ್ನಿವೇಶ ಬಹುತೇಕ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಸ್ತುಗಳನ್ನು ಬಳಸಿ ಬೀಸಾಡುವ ಪ್ರವೃತ್ತಿ ಹೆಚ್ಚುತ್ತಿದ್ದು, ಬಳಸಿದ ಮೊಬೈಲ್ ಫೋನ್ ಬ್ಯಾಟರಿಗಳನ್ನು ಬೀಸಾಡಿದರೆ ಅವುಗಳ ಹಾನಿಕಾರಕ ಲೋಹಗಳು ಮಣ್ಣನ್ನು ಸೇರು ತ್ತವೆ. ಇದರಿಂದ ಅನೇಕ ರೀತಿಯ ದುಷ್ಪರಿ ಣಾಮ ಉಂಟಾಗಲಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ವಸ್ತು ವಿಜ್ಞಾನದಿಂದ ಸಾಧ್ಯವಿದೆ. ಇದಕ್ಕೂ ಮಿಗಿಲಾಗಿ ಮಾನವ ವರ್ತನೆ ಬದಲಾಗಬೇಕಿದೆ. ಜೊತೆಗೆ ಸರ್ಕಾರದ ನೀತಿ- ನಿಯಮಗಳು ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿ ರೂಪು ಗೊಳ್ಳಬೇಕಿದೆ ಎಂದರು.

ಜನಸಂಖ್ಯೆ ಬೆಳವಣಿಗೆಗೆ ಅನುಗುಣ ವಾಗಿ ಇಂಧನ ಅಗತ್ಯತೆಯೂ ಹೆಚ್ಚಿದೆ. ಪರಿ ಣಾಮ ಕಳೆದ 250 ವರ್ಷಗಳಲ್ಲಿ ಇಂಗಾಲ ಡೈ ಆಕ್ಸೈಡ್ ಹರಡುವಿಕೆ ಪ್ರಮಾಣವೂ ಹೆಚ್ಚಾಗಿದೆ. ಇದರ ಪ್ರಮಾಣ ಕಳೆದ 250 ದಶಲಕ್ಷ ವರ್ಷಗಳ ಅವಧಿಯಲ್ಲಿ ಸೇರಿದ್ದ ಕ್ಕಿಂತಲೂ ಹೆಚ್ಚು ಎಂಬುದು ಆಘಾತ ಕಾರಿ ಅಂಶ. ಮಾರಕವಾದ ಇಂಗಾಲದ ಡೈ ಆಕ್ಸೈಡ್ ಹರಡುವಿಕೆ ತಗ್ಗಿಸಲು ಈವ ರೆಗೂ ಮಾನವ ಕಾಳಜಿ ವಹಿಸಿಲ್ಲ. ಇನ್ನು ಮುಂದಾದರೂ ಅದರತ್ತ ಗಮನ ನೀಡುವ ಅಗತ್ಯವಿದೆ ಎಂದು ತಿಳಿಸಿದರು.

ಕೈಗಾರಿಕೀಕರಣದ ಹೆಸರಿನಲ್ಲಿ ಭೂಮಿಗೆ ವಿಷ ಉಣಿಸಿದ್ದೇವೆ. ಪ್ರಸ್ತುತ ಜಗತ್ತಿನಲ್ಲಿ ಪರಿಸರ ಮಾಲಿನ್ಯ, ಜನಸಂಖ್ಯಾ ಸ್ಫೋಟ, ಅರಣ್ಯನಾಶ, ಅನಾರೋಗ್ಯ ಸೇರಿದಂತೆ ಅನೇಕ ಸಮಸ್ಯೆಗಳು ತಾಂಡವವಾಡುತ್ತಿವೆ. ಮಾನವನ ವರ್ತನೆ ಪರಿಸರಕ್ಕೆ ಪೂರಕ ವಾಗುವುದೊಂದೇ ಇದಕ್ಕೆ ಪರಿಹಾರ. ಆದರೆ ಅದು ದೊಡ್ಡ ಸವಾಲು. ಯಾವುದೇ ಒಂದು ವಸ್ತುವನ್ನು ದಕ್ಷವಾಗಿ ಬಳಸಿಕೊಳ್ಳುವುದನ್ನು ಕಲಿಯಬೇಕಿದೆ. ಒಂದು ವಸ್ತುವನ್ನು ಪುನರ್ ಬಳಕೆಗೆ ಯೋಗ್ಯವಾಗಿಸುವ ಪರಿಣಿತಿ ಹೊಂದಬೇಕು ಎಂದು ಸಲಹೆ ನೀಡಿದರು.

450ಕ್ಕೂ ಹೆಚ್ಚು ಮಂದಿ ಭಾಗಿ: ಮಾ.20 ರವರೆಗೆ ನಡೆಯಲಿರುವ ಸಮ್ಮೇಳನದಲ್ಲಿ ಮೂಲ ವಿಜ್ಞಾನದ ವಿದ್ಯಾರ್ಥಿಗಳು, ಅಧ್ಯಾ ಪಕರು, ಸಂಶೋಧಕರು ಸೇರಿದಂತೆ 450ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದು, ಬಹುತೇಕ ದೇಶೀಯರೇ ಸೇರಿದಂತೆ ವಿದೇ ಶಿಯರೂ ಪಾಲ್ಗೊಂಡಿದ್ದಾರೆ. ವಿದ್ಯಾರ್ಥಿ ಗಳಿಗೆ 500 ರೂ., ಸಂಶೋಧಕರಿಗೆ 800 ರೂ. ಹಾಗೂ ಅಧ್ಯಾಪಕರಿಗೆ 1500 ರೂ. ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ.

ಥೈವಾನ್‍ನ ಗ್ಲೋಬಲ್ ಮೆಟೀರಿಯಲ್ಸ್ ರಿಸರ್ಚ್‍ನ ಪ್ರಚಾರ ಕೇಂದ್ರದ ನಿರ್ದೇಶಕ ಪ್ರೊ.ಮಸಾಹಿರೋ ಯೋಶಿಮುರಾ, ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಲಿಂಗರಾಜ್ ಗಾಂಧಿ, ಮಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ.ಭೈರಪ್ಪ ಮತ್ತಿತರರು ಹಾಜರಿದ್ದರು.

Translate »