ಮಹನೀಯರ ಆದರ್ಶ ಅಳವಡಿಸಿಕೊಳ್ಳಲು ಸಲಹೆ
ಮೈಸೂರು

ಮಹನೀಯರ ಆದರ್ಶ ಅಳವಡಿಸಿಕೊಳ್ಳಲು ಸಲಹೆ

July 28, 2018

ತಿ.ನರಸೀಪುರ: ಮಹನೀಯರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಗಳಿಗೆ ಅರ್ಥ ಸಿಗಲಿದೆ ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ನಯನ ಕ್ಷತ್ರೀಯ ಸಂಘದ ವತಿಯಿಂದ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿದರು.
12 ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಕಾರ್ಯದರ್ಶಿ ಯಾಗಿದ್ದ ಹಡಪದ ಅಪ್ಪಣ್ಣ ಜಾತಿ ಭೇದ ಮರೆತು ಕೆಲಸ ಮಾಡುವ ಮುಖಾಂತರ ಸರ್ವರಿಗೂ ಸಮಪಾಲು, ಸಮಬಾಳನ್ನು ಅಂದಿನ ಕಾಲದಲ್ಲೇ ನೀಡಿದ್ದರೆಂದು ಅವರು ಸ್ಮರಿಸಿದರು.

ಕಾಯಕದ ಮೂಲಕ ಅಂದ ಚೆಂದ ರೂಪಿಸುವ ಸವಿತಾ ಸಮಾಜದವರು ಸಂಘಟಿತ ರಾಗಿ ಹೋರಾಟ ನಡೆಸುವ ಮೂಲಕ ಸರ್ಕಾರದ ಸೌಲಭ್ಯವನ್ನು ಪಡೆಯುವ ಜೊತೆಗೆ ಮಕ್ಕಳಿಗೆ ಪೂರಕ ಶಿಕ್ಷಣ ಕೊಡಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಅಧ್ಯಕ್ಷ ಆರ್.ಚಲುವ ರಾಜ್, ಸವಿತಾ ಸಮಾಜದವರು ವಿದ್ಯಾ ವಂತರಾಗಿ ಸಂಘಟನೆ ಮೂಲಕ ರಾಜಕೀಯ ಶಕ್ತಿ ಬೆಳೆಸಿಕೊಂಡಾಗ ಮಾತ್ರ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದರು,
ಇದಕ್ಕೂ ಮುನ್ನ ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯ ಆವರಣ ದಿಂದ ಹೊರಟ ಮೆರವಣಿಗೆಗೆ ತಹಸೀಲ್ದಾರ್ ರಾಜು ಚಾಲನೆ ನೀಡಿದರು. ಕಾರ್ಯ ಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಗರ್ಗೇಶ್ವರಿ ಹಿಲಾಲ್ ಶಿಕ್ಷಣ ಸಂಸ್ಥೆಯ ಶಿಕ್ಷಕ ಊ.ನಾ. ರಮೇಶ್ ಮುಖ್ಯ ಭಾಷಣ ಮಾಡಿದರು.

ವಾಟಾಳು ಶ್ರೀ ಡಾ.ಸಿದ್ದಲಿಂಗಶಿವ ಚಾರ್ಯಸ್ವಾಮೀಜಿ, ಜಿ.ಪಂ ಸದಸ್ಯ ಮಂಜು ನಾಥನ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ, ಸದಸ್ಯರಾದ ಉಮೇಶ್, ಚಂದ್ರಶೇಖರ್, ರಂಗಸ್ವಾಮಿ, ಕುಕ್ಕೂರು ಗಣೇಶ್, ಎಂ.ರಮೇಶ್, ಸಾಜಿದ್‍ಅಹಮ್ಮದ್, ಪುರಸಭೆ ಸದಸ್ಯರಾದ ಟಿ.ಜಿ.ಪುಟ್ಟಸ್ವಾಮಿ, ಮರಯ್ಯ, ಅಂಬೇಡ್ಕರ್ ಅಭಿವೃದ್ದಿ ಸಂಘದ ಅಧ್ಯಕ್ಷ ಮಹದೇವು, ಶಂಭುದೇವನಪುರ ರಮೇಶ್, ತಾಲ್ಲೂಕು ನಯನಜ ಕ್ಷತ್ರೀಯ ಸಂಘದ ಅಧ್ಯಕ್ಷ ನಾಗೇಂದ್ರ, ಗೌರವ ಅಧ್ಯಕ್ಷ ಮೂರ್ತಿ, ಕಾರ್ಯದರ್ಶಿ ಇ. ರಾಜು, ಸಿದ್ದರಾಜು, ರಾಜಣ್ಣ, ಜೋಗಿನಾಗ, ಶಿರಸ್ತೇದಾರ್ ಪ್ರಭುರಾಜ್, ರಾಜೇಶ್, ಇಒ ಡಾ.ನಂಜೇಶ್, ಕಂಟ್ರಾಕ್ಟರ್ ಮಂಟೇ ಲಿಂಗಪ್ಪ ಇತರರು ಇದ್ದರು.

Translate »