ಡಾ.ಶಿವಕುಮಾರಸ್ವಾಮೀಜಿ ಜೀವನಾದರ್ಶ ಮೈಗೂಡಿಸಿಕೊಳ್ಳಲು ಕರೆ
ಕೊಡಗು

ಡಾ.ಶಿವಕುಮಾರಸ್ವಾಮೀಜಿ ಜೀವನಾದರ್ಶ ಮೈಗೂಡಿಸಿಕೊಳ್ಳಲು ಕರೆ

January 23, 2019

ಸಿದ್ದಾಪುರ: ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ಗ್ರಾಮ ಪಂಚಾ ಯಿತಿ ಅಧ್ಯಕ್ಷ ಎಂ.ಕೆ ಮಣಿ ಕರೆ ನೀಡಿದರು.

ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಮಾನ ಮನಸ್ಕರ ವೇದಿಕೆ ವತಿಯಿಂದ ನಡೆದ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿ, ಸಾಮಾಜಿಕ ಬದಲಾವಣೆಗಾಗಿ ಅವಿ ರತವಾಗಿ ಶ್ರಮಿಸಿದ್ದ ಮಹಾನ್ ಚೇತನ ಇಂದು ನಮ್ಮನ್ನೆಲ್ಲಾ ಅಗಲಿರುವುದು ವಿಷಯವಾಗಿದೆ. ಬಡ ವಿದ್ಯಾರ್ಥಿಗಳಗೆ ಅನ್ನ ದಾಸೋಹದೊಂದಿಗೆ ಅಕ್ಷರ ಜ್ಞಾನವನ್ನು ನೀಡಿದಂತಹ ಶ್ರೀಗಳ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದೇ ಆದಲ್ಲಿ ಅದುವೆ ನಾವು ಅವರಿಗೆ ಸಲ್ಲಿಸುವ ಗೌರವ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್. ವೆಂಕಟೇಶ್ ಮಾತನಾಡಿ, ಶ್ರೀಗಳ ಜೀವನವು ಸರ್ವರಿಗೂ ಆದರ್ಶ ಮತ್ತು ಸ್ಫೂರ್ತಿ ತುಂಬುವಂತಹದ್ದು, ಅವರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿ ಕೊಂಡರೆ ಸ್ವಾಸ್ಥ್ಯ ಸಮಾಜ ಕಟ್ಟಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾನ ಮನಸ್ಕರ ವೇದಿಕೆ ಪ್ರಮುಖ ರಜೀತ್ ಕುಮಾರ್ ಮಾತನಾಡಿ, ಡಾ.ಶಿವ ಕುಮಾರ ಸ್ವಾಮೀಜಿ ಅವರ 100ನೇ ವರ್ಷಚಾರಣೆ ಸಂದರ್ಭ ಸರಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿತ್ತು. ದೇಶದಲ್ಲೇ ಯಾರು ಮಾಡದಂತಹ ಸೇವೆಗಳನ್ನು ಮಾಡಿದ ಶ್ರೀಗಳಿಗೆ ಕೇಂದ್ರ ಸರಕಾರ ಗೌರವ ಪೂರ್ವಕವಾಗಿ ಭಾರತ ರತ್ನ ನೀಡಬೇಕೆಂದರು. ಒಂದು ನಿಮಿಷದ ಮೌನಾಚರಣೆ ಮಾಡುವ ಮೂಲಕ ಶ್ರೀಗಳಿಗೆ ನಮನ ಸಲ್ಲಿಸಲಾಯಿತು. ಪ್ರಮುಖರಾದ ಶುಕ್ಕೂರ್, ಬಶೀರ್, ರಾಜ್ ಕುಮಾರ್, ಅಜೀಜ್, ಮುಸ್ತಫ, ಮುಬಾರಕ್, ಶೌಕತ್ ಆಲಿ, ಜೋಸ್, ಪ್ರತೀಶ, ಮಂಜು, ಅಸ್ಕರ್, ಎಎಸೈ ವಸಂತ್, ಪೇದೆ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »