ಮೈಸೂರು: ದೇಶದಲ್ಲಿ ಜಿಎಸ್‍ಟಿ ಕಾಯ್ದೆ ಜಾರಿ ಬಳಿಕ ಚಾರ್ಟೆರ್ಡ್ ಅಕೌಂಟೆಂಟ್‍ಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಚಾರ್ಟೆರ್ಡ್ ಅಕೌಂಟೆಂಟ್ ಶಿವಾನಂದ್ ಹೇಳಿದರು.
ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನೇಗಿಲಯೋಗಿ ವಿದ್ಯಾವರ್ಧಕ ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾ ಕೇಂದ್ರದ ವತಿಯಿಂದ ದ್ವಿತೀಯ ಪಿಯುಸಿ ವಾಣ ಜ್ಯ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶೈಕ್ಷಣಿಕ ಹಾಗೂ ಸಿಎ, ಸಿಎಸ್, ಐಸಿಡಬ್ಲ್ಯೂಎ ಪರೀಕ್ಷೆಗಳ ವಿಶೇಷ ವಾರಾಂತ್ಯ ತರಬೇತಿಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಚಾರ್ಟೆರ್ಡ್ ಅಕೌಂಟೆಂಟ್ (ಸನ್ನದು ಲೆಕ್ಕಿಗ) ಕೋರ್ಸ್ ಅನ್ನು ಇನ್ಸ್‍ಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆಂಟ್ ಆಫ್ ಇಂಡಿಯಾದಿಂದ ನಡೆಸಲ್ಪಡುತ್ತದೆ. 1947ರಲ್ಲಿ ಕೇವಲ 1700 ಸನ್ನದು ಲೆಕ್ಕಿಗರು ಇದ್ದರು. ಪ್ರಸ್ತುತ 3 ಲಕ್ಷ ಸನ್ನದು ಲೆಕ್ಕಿಗರು ಇದ್ದಾರೆ. ಇಡೀ ಪ್ರಪಂಚದಲ್ಲೇ ಹೆಚ್ಚಿನ ಸಂಖ್ಯೆಯ ಚಾರ್ಟೆರ್ಡ್ ಅಕೌಂಟೆಂಟ್‍ಗಳನ್ನು ಹೊಂದಿರುವ ದೇಶಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಸನ್ನದು ಲೆಕ್ಕಿಗರ ಕೋರ್ಸ್ ಸ್ನಾತಕೋತ್ತರ ಕೋರ್ಸ್‍ಗೆ ಸಮಾನವಾದುದು. ಪಿಯುಸಿ ಬಳಿಕ ಫೌಂಡೇಶನ್ ಕೋರ್ಸ್ ಅನ್ನು ತೆಗೆದುಕೊಂಡು ಪೂರ್ಣಗೊಳಿಸುವ ಮೂಲಕ ಸನ್ನದು ಲೆಕ್ಕಿಗರ ಕೋರ್ಸಿಗೆ ಪ್ರವೇಶ ಪಡೆಯಬಹುದು. ಜೊತೆಗೆ ಯಾವುದಾದರೂ ಪದವಿಯಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಗಳಿಸಿದವರು ಸನ್ನದು ಲೆಕ್ಕಿಗರ ಪರೀಕ್ಷೆಗೆ ಪ್ರವೇಶ ಪಡೆಯಬಹುದು ಎಂದು ವಿವರಿಸಿದರು.
ಪ್ರವೇಶಾತಿಗೆ ಆನ್‍ಲೈನ್ ವ್ಯವಸ್ಥೆ ಇದ್ದು, ಫೌಂಡೇಶನ್ ಕೋರ್ಸ್‍ನಲ್ಲಿ 4 ವಿಷಯಗಳು ಇರಲಿವೆ. ವಿಷಯವೊಂದಕ್ಕೆ 100 ಅಂಕಗಳಿದ್ದು, ಒಟ್ಟು 400 ಅಂಕಗಳಿರುತ್ತವೆ. ಇದರಲ್ಲಿ ನೆಗಿಟಿವ್ ಮಾರ್ಕಿಂಗ್ ಸಹ ಇರುತ್ತದೆ. ಸನ್ನದು ಲೆಕ್ಕಿಗರಿಗೆ ಪ್ರಪಂಚದಾದ್ಯಂತ ಉತ್ತಮ ಬೇಡಿಕೆ ಇದೆ. ಸ್ಥಳೀಯವಾಗಿಯೂ ಅವಕಾಶಗಳು ಲಭ್ಯವಾಗಲಿದ್ದು, ಸಂಭಾವನೆಯೂ ಉತ್ತಮವಾಗಿ ದೊರೆಯಲಿದೆ ಎಂದು ಮಾಹಿತಿ ನೀಡಿದರು.
ಕಾವೇರಿ ನೀರಾವರಿ ನಿಗಮದ ಡಿ.ರವಿಕುಮಾರ್, ವಿದ್ಯಾವರ್ಧಕ ಪಿಯು ಕಾಲೇಜಿನ ಪ್ರಾಂಶುಪಾಲ ಸಿದ್ದಯ್ಯ, ಜ್ಞಾನದೀಪ್ತಿ ಎಜುಕೇಷನ್ ಟ್ರಸ್ಟ್‍ನ ಕಾರ್ಯದರ್ಶಿ ಶ್ರೀನಿವಾಸಮೂರ್ತಿ, ಮರಿಮಲ್ಲಪ್ಪ ಶಿಕ್ಷಣ ಸಂಸ್ಥೆಯ ಬಿಬಿಎಂ ವಿಭಾಗದ ಮುಖ್ಯಸ್ಥ ಶಿವಕುಮಾರ್, ನೇಗಿಲಯೋಗಿ ಸಂಸ್ಥೆ ಗೌರವಾಧ್ಯಕ್ಷ ಪ್ರೊ.ಕೆ.ಆರ್.ರಂಗಯ್ಯ, ಸಿಎ-ಇಂಟರ್ ಬಾಲರಾಜ್ ಮತ್ತಿತರರು ಹಾಜರಿದ್ದರು.