ಜಲದರ್ಶಿನಿ ಬಳಿ ಹುಣಸೂರು ರಸ್ತೆ ಅಗಲೀಕರಣದಲ್ಲಿ ಭಾರೀ ಅವ್ಯವಹಾರ ಆರೋಪ: ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು

ಜಲದರ್ಶಿನಿ ಬಳಿ ಹುಣಸೂರು ರಸ್ತೆ ಅಗಲೀಕರಣದಲ್ಲಿ ಭಾರೀ ಅವ್ಯವಹಾರ ಆರೋಪ: ತನಿಖೆಗೆ ಆಗ್ರಹಿಸಿ ಪ್ರತಿಭಟನೆ

June 21, 2018

ಮೈಸೂರು: ಮೈಸೂರು-ಹುಣಸೂರು ಮುಖ್ಯ ರಸ್ತೆಯನ್ನು ಜಲದರ್ಶಿನಿ ಅತಿಥಿ ಗೃಹದ ಬಳಿ ಅಗಲೀಕರಣದೊಂದಿಗೆ ನೇರಗೊಳಿಸುವ ಕಾಮಗಾರಿಯಲ್ಲಿ ಬಾರೀ ಹಗರಣ ನಡೆದಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬುಧವಾರ ಪಡುವಾರಹಳ್ಳಿ ಶ್ರೀಗಂಧ ಯುವಕರ ಸಂಘದ ಕಾರ್ಯಕರ್ತರು ಜಲದರ್ಶಿನಿ ಮುಂದೆ ಪ್ರತಿಭಟನೆ ನಡೆಸಿದರು.

ಮೈಸೂರಿನ ಕಲಾಮಂದಿರದಿಂದ ವಾಲ್ಮೀಕಿ ರಸ್ತೆಯ ಜಂಕ್ಷನ್‍ವರೆಗೆ ಈ ಹಿಂದೆ ಅಪಘಾತಗಳು ಸಂಭವಿಸುತ್ತಿದ್ದವು. ಕಡಿದಾದ ತಿರುವಿನಲ್ಲಿ ವಾಹನಗಳು ಅಪಘಾತಕ್ಕೀಡಾಗಿ ಅಮಾಯಕರು ಬಲಿಯಾಗುತ್ತಿದ್ದರು. ಆದರೆ ಜಲದರ್ಶಿನಿಯ ಮುಂಭಾಗದಿಂದ ವಾಲ್ಮೀಕಿ ರಸ್ತೆಯ ಜಂಕ್ಷನ್‍ವರೆಗೆ ರಸ್ತೆ ನೇರಗೊಳಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ರಸ್ತೆಯ ಬದಿಯಲ್ಲಿದ್ದ ಮರಗಳನ್ನು ಕಡಿಯಬೇಕಾದ ಪರಿಸ್ಥಿತಿ ಬಂದಿದ್ದರಿಂದ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ರಸ್ತೆಯ ಎರಡು ಬದಿಯಲ್ಲಿಯೂ ಪಾದಚಾರಿ ಮಾರ್ಗವನ್ನು ಸೇರಿಸಿ ರಸ್ತೆಯನ್ನು ಅಗಲೀಕರಣ ಮಾಡಿದ್ದಾರೆ. ಆದರೆ ಈ ಕಾಮಗಾರಿ ಯಾವ ಅವೈಜ್ಞಾನಿಕ ಹಾಗೂ ನೆಪ ಮಾತ್ರಕ್ಕೆ ನಡೆಸಿದ್ದಾರೆ. ಈ ಕಾಮಗಾರಿಯಲ್ಲಿ ಕೋಟ್ಯಾಂತರ ರೂ. ಅವ್ಯವಹಾರ ನಡದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ರಸ್ತೆ ನೇರಗೊಳಿಸಲು 12.50 ಕೋಟಿ ರೂ ವೆಚ್ಚದ ಕ್ರಿಯಾಯೋಜನೆ ಸಿದ್ದಗೊಳಿಸಲಾಗಿತ್ತು. ನಂತರ ರಸ್ತೆಯ ಎರಡು ಬದಿಯಲ್ಲಿ ನಾಲ್ಕರಿಂದ ಆರು ಅಡಿಯಷ್ಟು ರಸ್ತೆಯನ್ನು ವಿಸ್ತರಿಸಿದ್ದಾರೆ. ಪಾದಚಾರಿ ಮಾರ್ಗವೇ ಇಲ್ಲದಂತಾಗಿದ್ದು, ಪಾದಚಾರಿಗಳು ಹಾಗೂ ವಿದ್ಯಾರ್ಥಿಗಳು ತಿರುವಿನಲ್ಲಿ ರಸ್ತೆಯಲ್ಲಿಯೇ ಹೋಗಬೇಕಾದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾಮಗಾರಿಯಲ್ಲಿ ನಡೆದಿರುವ ಹಗರಣದ ವಿರುದ್ಧ ತನಿಖೆ ನಡೆಸುವಂತೆ ಹಲವು ಬಾರಿ ಲಿಖಿತ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಹಗರಣವನ್ನು ಬಯಲಿಗೆಳೆಯಲು ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶ್ರೀಗಂಧ ಯುವಕರ ಸಂಘದ ಅಧ್ಯಕ್ಷ ಪಡುವಾರಹಳ್ಳಿ ರಾಮಕೃಷ್ಣ, ಸದಸ್ಯರಾರ ಜವರೇಗೌಡ, ಟೆನ್ನಿಸ್ ಕೆ.ಗೋಪಿ, ಎ.ಪಿ.ರಾಜೇಶ್ ಗೌಡ, ಜಿ.ಎಂ.ದಿವಾಕರ, ವಿನೋದ್ ನಾಗವಾಲ, ಎಂ.ಶಿವಪ್ರಕಾಶ್, ಎಸ್.ಕಾಂತರಾಜು, ವಿ.ರವಿಕುಮಾರ್, ಸ್ವಾಮಿಗೌಡ, ಈ ಬಸವರಾಜು, ಪ್ರಕಾಶ್, ಪ್ರೇಮ್ ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »