ಉಪ ಚುನಾವಣೆ ನಂತರ ರಾಜ್ಯದಲ್ಲಿ   ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ
ಮೈಸೂರು

ಉಪ ಚುನಾವಣೆ ನಂತರ ರಾಜ್ಯದಲ್ಲಿ  ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ

December 1, 2019

ಬೆಂಗಳೂರು, ನ.30(ಕೆಎಂಶಿ)- ವಿಧಾನಸಭಾ ಉಪ ಚುನಾವಣೆ ನಂತರ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಭವಿಷ್ಯ ನುಡಿದಿದ್ದಾರೆ.

ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 6ಕ್ಕಿಂತ ಕಡಿಮೆ ಸ್ಥಾನ ಪಡೆದು ಅಧಿಕಾರ ಕಳೆದು ಕೊಳ್ಳಲಿದೆ ಎಂದು ಪಕ್ಷದ ಕಚೇರಿಯಲ್ಲಿ ಕರೆದಿದ್ದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಸೋಲುವ ಪಕ್ಷಕ್ಕೆ ಮತ್ತೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಸದಸ್ಯರು ವಲಸೆ ಹೋಗುವುದಿಲ್ಲ, ಈಗಾಗಲೇ ಬಿಜೆಪಿ ಸೇರಿರುವ 17 ಅನರ್ಹ ಶಾಸಕರ ಸ್ಥಿತಿ ಬೀದಿ ಪಾಲಾಗ ಲಿದೆ. ಇದನ್ನು ನೋಡಿ ಯಾವ ಶಾಸಕ ಇರುವ ಅಧಿಕಾರ ಕಳೆದು ಕೊಳ್ಳಲು ಇಚ್ಛಿಸುತ್ತಾನೆ ಎಂದು ಸುದ್ದಿಗಾರರನ್ನೇ ಪ್ರಶ್ನಿಸಿದರು. ಖರೀದಿಗೆ ನಮ್ಮ ಮತದಾರರು ಬಲಿಯಾಗುವುದಿಲ್ಲ, ಬಿಜೆಪಿಯ ಆಪರೇಷನ್ ಕಮಲ ನಂತರ ಅಧಿಕಾರಕ್ಕೆ ಬಂದ ಸರ್ಕಾರದ ವೈಫಲ್ಯದಿಂದ ಜನತೆ ಬೇಸರಗೊಂಡಿದ್ದಾರೆ. ಇಂತಹವರಿಗೆ ಮತ್ತೆ ಮತ ಹಾಕಿ ಸರ್ಕಾರವನ್ನು ಉಳಿಸುವ ಪ್ರಯತ್ನಕ್ಕೆ ನಮ್ಮ ಪ್ರಜ್ಞಾವಂತ ಮತದಾರರು ಮುಂದಾಗುವುದಿಲ್ಲ ಎಂಬ ಆಶಯ ವ್ಯಕ್ತಪಡಿಸಿದರು.

ಚುನಾವಣೆ ಫಲಿತಾಂಶ ನಂತರ ಆಪರೇಷನ್ ಕಮಲ ನಡೆಯು ವುದಿಲ್ಲ ಎನ್ನುವುದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ, ಮತ್ತೆ ಮೈತ್ರಿ ಸರ್ಕಾರ ಬರಲಿದೆ. ಕುಮಾರಸ್ವಾಮಿ ಅಥವಾ ಸಿದ್ದರಾಮಯ್ಯ ನೇತೃತ್ವದಲ್ಲಿ ಮೈತ್ರಿ ಸರ್ಕಾರ ರಚನೆಗೆ ಯಾವುದೇ ವಿರೋಧ ಇಲ್ಲ, ನಾನೂ ಬೆಂಬಲಿಸುವೆ ಎಂದರು. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೇಲಿನ ವಿಶ್ವಾಸ ದಿನದಿಂದ ದಿನಕ್ಕೆ ಜನರಲ್ಲಿ ಕಡಿಮೆ ಆಗುತ್ತಿದೆ. ಜಿಡಿಪಿ ಶೇಕಡ 4.5ಕ್ಕೆ ಕುಸಿದಿದೆ, ಈ ಸರ್ಕಾರಕ್ಕೆ ಆರ್ಥಿಕ ತಜ್ಞರ ಸಲಹೆ ಬೇಕಿಲ್ಲ, ತಜ್ಞರ ಸೂಚನೆಗಳನ್ನು ಪಡೆದಿದ್ದರೆ ದೇಶದ ಆರ್ಥಿಕ ಸ್ಥಿತಿ ಈ ಮಟ್ಟಕ್ಕೆ ಇಳಿಯುತ್ತಿರಲಿಲ್ಲ ಎಂದರು.

ಬಿಜೆಪಿ ನೇತೃತ್ವದ ಎನ್‍ಡಿಎ, ಕಳೆದ ಲೋಕಸಭಾ ಚುನಾ ವಣೆಯಲ್ಲಿ ಜನತೆಗೆ ನೀಡಿದ್ದ ಭರವಸೆಯಲ್ಲಿ ಒಂದನ್ನೂ ಪ್ರಧಾನಿ ನರೇಂದ್ರ ಮೋದಿ ಈಡೇರಿಸಿಲ್ಲ. ಉದ್ಯೋಗ ಸೃಷ್ಟಿ ಆಗದೆ, ದಿನ ದಿಂದ ದಿನಕ್ಕೆ ನಿರುದ್ಯೋಗ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಇವರ ಆರ್ಥಿಕ ನೀತಿಯಿಂದ ಇರುವ ಉದ್ಯೋಗವನ್ನೂ ಕಳೆದುಕೊಂಡು ಜನರು ಬೀದಿ ಪಾಲಾಗುತ್ತಿದ್ದಾರೆ. ಜನತೆ ಹತಾಶ ಭಾವನೆಗೆ ಒಳಗಾಗಿದ್ದಾರೆ, ರಾಜ್ಯದಲ್ಲಿ ಅತಿವೃಷ್ಟಿ ಉಂಟಾದಾಗ ಪ್ರಧಾನಿ ಒಮ್ಮೆಯೂ ರಾಜ್ಯದ ನೆರೆ ವೀಕ್ಷಣೆ ಮಾಡಲಿಲ್ಲ. ಕೇಂದ್ರದ ಆರ್ಥಿಕ ನೀತಿಯಿಂದ ಹೊಸ ಉದ್ಯೋಗ ಸೃಷ್ಟಿ ಆಗುತ್ತಿಲ್ಲ, ಹೊರರಾಷ್ಟ್ರದ ಕಂಪನಿಗಳಿಂದ ಬಂಡವಾಳ ಹೂಡಿಕೆ ಆಗುತ್ತಿಲ್ಲ, ಇದರ ಪರಿಣಾಮ ಇರುವ ಉದ್ಯೋಗಗಳೂ ಕಡಿಮೆ ಆಗುತ್ತಿವೆ.

ರಾಜ್ಯದಲ್ಲಿನ ನೆರೆ ಹಾನಿಗೆ ಸೂಕ್ತ ಪರಿಹಾರ ಕೊಟ್ಟಿಲ್ಲ, ರಾಜ್ಯದಿಂದ ಒಂದು ಲಕ್ಷ ಕೋಟಿ ರೂ. ತೆರಿಗೆ ಹಣ ಹೋಗುತ್ತೆ, ಅದರಲ್ಲಿ ಪಾಲು ಕೊಡಬಹುದಿತ್ತು, ಆದರೆ ನೀಡಿಲ್ಲ ಎಂದರು.

ಚುನಾವಣಾ ಅಕ್ರಮ ನಡೆಯುತ್ತಿದೆ, ಗೃಹ ಸಚಿವರ ಕಾರು ತಪಾಸಣೆ ಆಗಿಲ್ಲ, ವಿಜಯೇಂದ್ರ ಕಾರು ತಪಾಸಣೆಗೆ ಬಿಟ್ಟಿಲ್ಲ. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹಣ ಹಂಚಿ ದ್ದಾರೆ, ಟಿಕೆಟ್ ವಾಪಸ್ ಪಡೆಯಲು ಹಲವು ಅಭ್ಯರ್ಥಿಗಳಿಗೆ ಬಲವಂತ ಮಾಡಲಾಗಿದೆ. ಇಂತಹ 9 ಪ್ರಕರಣಗಳನ್ನು ಆಧರಿಸಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದ್ದರೂ, ಆಯೋಗ ಕ್ರಮ ಕೈಗೊಂಡಿಲ್ಲ, ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ದೂರಿದರು.

 

Translate »