ಪಿಂಚಣಿ ಸೌಲಭ್ಯಕ್ಕಾಗಿ ಜ.10ರಿಂದ ಅಹೋರಾತ್ರಿ ಧರಣಿ
ಮೈಸೂರು

ಪಿಂಚಣಿ ಸೌಲಭ್ಯಕ್ಕಾಗಿ ಜ.10ರಿಂದ ಅಹೋರಾತ್ರಿ ಧರಣಿ

January 6, 2020

ಮೈಸೂರು, ಜ.5(ಆರ್‍ಕೆಬಿ)- ಮೈಸೂರು ಅನುದಾನಿತ ಶಾಲಾ-ಕಾಲೇಜಿನ ನೌಕರರಿಗೆ ಪಿಂಚಣಿ ಸೌಲಭ್ಯ ನೀಡುವಂತೆ ಆಗ್ರಹಿಸಿ ಜ.10ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುವುದು ಎಂದು ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಿಂಡೆನಹಳ್ಳಿ ಶರತ್‍ಕುಮಾರ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಗೋಷ್ಠಿಯಲ್ಲಿ ಮಾತನಾಡಿ, 2006ರ ನಂತರ ನೇಮಕ ಗೊಂಡು ವೇತನ ಪಡೆಯುತ್ತಿರುವ ಹಾಗೂ ಮೊದಲೇ ನೇಮಕಗೊಂಡು ನಂತರ ಅನುದಾನಕ್ಕೆ ಒಳಪಟ್ಟು ವೇತನ ಪಡೆಯುತ್ತಾ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಹಳೆಯ ಪಿಂಚಣಿ ಸೌಲಭ್ಯವಾಗಲೀ, ಅಥವಾ ನೂತನ ಪಿಂಚಣಿ ಯೋಜನೆ ಸೌಲಭ್ಯವನ್ನಾಗಲೀ ನೀಡಿಲ್ಲ ಎಂದು ದೂರಿದರು. ಅನುದಾನಿತ ಸಂಸ್ಥೆಗಳ ಸಾವಿರಾರು ನೌಕರರು ಅಲ್ಪ ಸಂಬಳದಲ್ಲಿಯೇ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಕಳೆದ ಅಕ್ಟೋಬರ್‍ನಲ್ಲಿ 11 ದಿನಗಳ ಕಾಲ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಹೋರಾಟ ನಡೆಸಿದ ಸಂದರ್ಭ ವಿಪಕ್ಷ ನಾಯಕರಾಗಿದ್ದ ಯಡಿಯೂರಪ್ಪ ಅಂದಿನ ಸರ್ಕಾರದ ವಿರುದ್ಧ ದನಿ ಎತ್ತಿ ನಮ್ಮ ಹೋರಾಟವನ್ನು ಬೆಂಬಲಿಸಿದ್ದರು. ಆದರೆ ಈಗ ಅವರೇ ಮುಖ್ಯಮಂತ್ರಿಯಾಗಿದ್ದು ನಮ್ಮ ಬೇಡಿಕೆ ಕುರಿತಂತೆ ಮೌನ ವಹಿಸಿದ್ದಾರೆ. ಹೀಗಾಗಿ ನಮಗೆ ಹೋರಾಟ ಅನಿವಾರ್ಯವಾಗಿದೆ. ಜ.9ರೊಳಗೆ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಜ.11ರಂದು ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಶಿವಕುಮಾರ್, ಜಿ.ಆರ್.ಮಹದೇವು, ಜ್ಯೋತಿಕುಮಾರ್, ರಂಗಸ್ವಾಮಿ ಉಪಸ್ಥಿತರಿದ್ದರು.

Translate »