ಬಿಜೆಪಿಯಿಂದ ಸಂತ್ರಸ್ತರ ನೆರವಿಗೆನಿಧಿ, ಸಾಮಗ್ರಿಗಳ ಸಂಗ್ರಹ
ಮೈಸೂರು

ಬಿಜೆಪಿಯಿಂದ ಸಂತ್ರಸ್ತರ ನೆರವಿಗೆನಿಧಿ, ಸಾಮಗ್ರಿಗಳ ಸಂಗ್ರಹ

August 13, 2019

ಮೈಸೂರು,ಆ.12(ಪಿಎಂ)-ನೆರೆ ಹಾವಳಿಯಿಂದ ತತ್ತರಿಸಿರುವ ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಬಿಜೆಪಿ ಮೈಸೂರು ನಗರ ಘಟಕದ ವತಿಯಿಂದ ಪರಿಹಾರ ನಿಧಿ ಹಾಗೂ ಅಗತ್ಯ ಸಾಮಗ್ರಿಗಳನ್ನು ಸೋಮವಾರ ಸಂಗ್ರಹಿಸಲಾಯಿತು.

ಮೈಸೂರಿನ ಚಿಕ್ಕಗಡಿಯಾರದ ಬಳಿ, ಡಿ.ದೇವರಾಜ ಅರಸು ರಸ್ತೆ, ಶಿವರಾಂಪೇಟೆ, ಅಶೋಕ ರಸ್ತೆ ಸೇರಿದಂತೆ ನಗರದ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿ ವರ್ತಕರು ಹಾಗೂ ಸಾರ್ವಜನಿಕರಿಂದ ಹಣ ಹಾಗೂ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಲಾಯಿತು.

ಇದೇ ವೇಳೆ ಮಾತನಾಡಿದ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್, ಪ್ರವಾಹಕ್ಕೆ ಕೇವಲ ಉತ್ತರ ಕರ್ನಾಟಕ ಮಾತ್ರ ತತ್ತರಿಸಿಲ್ಲ. ಜೊತೆಗೆ ಕೊಡಗು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳು ಸೇರಿದಂತೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಪ್ರವಾಹ ತನ್ನ ಆರ್ಭಟ ಪ್ರದರ್ಶಿಸಿದೆ. ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಂದ ಸುಮಾರು 6 ಸಾವಿರ ಜನರು ನೆರೆ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವಿಷಾದಿಸಿದರು.

ಸಂತ್ರಸ್ತರ ನೆರವಿಗೆ ಧಾವಿಸಲು ಇಡೀ ರಾಜ್ಯದಲ್ಲಿ ಬಿಜೆಪಿ ನಿಧಿ ಹಾಗೂ ಅಗತ್ಯ ಸಾಮಗ್ರಿಗಳ ಸಂಗ್ರಹಕ್ಕೆ ಮುಂದಾಗಿದೆ. ಅದೇ ರೀತಿ ಇಂದು ಮೈಸೂರಿನಲ್ಲಿ ಪಕ್ಷದ ವತಿಯಿಂದ ವರ್ತಕ ರಿಂದ ನಿಧಿ ಹಾಗೂ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗುವುದು. ಸಂತ್ರಸ್ತರು ನೆರೆ ಭೀಕರತೆ ಕಡಿಮೆಯಾಗಿ ತಮ್ಮ ಮನೆಗಳಿಗೆ ಹೋಗುವಾಗ ಅಗತ್ಯ ವಸ್ತುಗಳನ್ನು ಒಳಗೊಂಡ ವೆಲ್‍ಕಮ್ ಕಿಟ್ (ಸ್ವಾಗತ ಕಿಟ್) ನೀಡಲು ಜಿಲ್ಲಾಡಳಿತ ಮುಂದಾಗಿದ್ದು, ಇಂತಹ ಒಳ್ಳೆಯ ಆಲೋಚನೆಗೆ ಸಾರ್ವಜನಿಕರೂ ಕೈಜೊಡಿಸ ಬೇಕು ಎಂದು ಕೋರಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಪ್ರಕೃತಿ ವಿಕೋಪದಿಂದ ಸಂತ್ರಸ್ತರು ನಲುಗಿ ಹೋಗಿದ್ದಾರೆ.  ಇಂದು ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ನಿಮಿಷಾಂಬ ದೇವಸ್ಥಾನದ ಆವರಣದಲ್ಲೂ ನೀರು ನಿಂತಿದೆ. ಕೆಆರ್‍ಎಸ್ ಜಲಾಶಯದಿಂದ ಲಕ್ಷ ಕ್ಯೂಸೆಕ್ಸ್‍ಗೂ ಮೀರಿ ನೀರು ಹೊರ ಬಿಡಲಾಗಿದೆ. ಇಂತಹ ಭೀಕರ ಪ್ರವಾಹದ ಹಿನ್ನೆಲೆ ಯಲ್ಲಿ ಆಸ್ತಿ-ಪಾಸ್ತಿ ಕಳೆದುಕೊಂಡು ನಿರಾಶ್ರಿತರಾದವರಿಗೆ ಮತ್ತೆ ಬದುಕು ಕಟ್ಟಿಕೊಡಲು ಸಮಾಜ ಮುಂದಾಗಬೇಕಿದೆ ಎಂದರು.

ಇಂದು ಸಂಜೆ 4 ಗಂಟೆಯವರೆಗೂ ಮೈಸೂರಿನ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಪಕ್ಷದಿಂದ ಪರಿಹಾರ ನಿಧಿ ಹಾಗೂ ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸಿ, ಬಳಿಕ ಜಿಲ್ಲಾಡಳಿತದ ಮೂಲಕ ಸಂತ್ರಸ್ತರಿಗೆ ತಲುಪಿಸಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎಂ.ರಾಜೇಂದ್ರ,  ಬಿಜೆಪಿ ಮುಖಂಡರಾದ ರಘು ಕೌಟಿಲ್ಯ, ಹೆಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್. ಮಂಜುನಾಥ್, ಮಾಜಿ ಶಾಸಕ ಮಾರುತಿ ರಾವ್ ಪವಾರ್, ಮಾಜಿ ಮೇಯರ್ ಸಂದೇಶಸ್ವಾಮಿ, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ವಿದ್ಯಾ ಅರಸ್, ಚಿಕ್ಕಮ್ಮ ಬಸವರಾಜು, ಪಾಲಿಕೆ ಸದಸ್ಯ ರಾದ ಬಿ.ವಿ.ಮಂಜುನಾಥ್, ಶಿವಕುಮಾರ್, ಎಂ.ಯು.ಸುಬ್ಬಯ್ಯ, ರಂಗಸ್ವಾಮಿ, ಪ್ರಮೀಳಾ ಭರತ್, ಕಾರ್ಯಕರ್ತರಾದ ಕಾವೇರಿ, ಜಯಂತಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Translate »