ಕೊಡಗು: ‘ಕಮಲ’ದ ಭದ್ರಕೋಟೆಯಲ್ಲಿ ಮೈತ್ರಿಯ ಬೇಗೆ
ಕೊಡಗು

ಕೊಡಗು: ‘ಕಮಲ’ದ ಭದ್ರಕೋಟೆಯಲ್ಲಿ ಮೈತ್ರಿಯ ಬೇಗೆ

April 4, 2019

ಮಡಿಕೇರಿ: ಹೇಳಿ ಕೇಳಿ ಕಾವೇರಿ ತವರು ಕೊಡಗು ಜಿಲ್ಲೆ ರಾಜಕೀಯವಾಗಿ ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿತವಾಗಿದೆ. ಗ್ರಾಪಂನಿಂದ ಹಿಡಿದು 2 ಶಾಸಕ ಸ್ಥಾನದವರೆಗೂ ಕಮಲದ್ದೇ ಪ್ರಾಬಲ್ಯವಿದೆ. ಕೊಡಗಿನಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದ ಪ್ರತಾಪ್ ಸಿಂಹ ಜಿಲ್ಲೆಯಿಂದ ಹೆಚ್ಚು ಮತಗಳಿಸಿ ಗೆಲುವು ಸಾಧಿಸಿದ್ದರು. ಕೊಡಗು ಜಿಲ್ಲೆಯಲ್ಲಿ ಪಡೆದ ಮತಗಳೇ ಪ್ರತಾಪ್ ಸಿಂಹ ಅವರ ಗೆಲುವಿಗೆ ಸಹಕಾರಿಯಾಗಿದ್ದವು. ರಾಜಕೀಯ ರಣರಂಗಕ್ಕೆ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದ್ದರೂ ಪ್ರತಾಪ್ ಸಿಂಹ ರಾಜಕೀಯ ದಿಗ್ಗಜ ಹೆಚ್.ವಿಶ್ವನಾಥ್ ವಿರುದ್ಧ ಜಯ ಸಾಧಿಸಿ ಎಲ್ಲರೂ ನಿಬ್ಬೆರ ಗಾಗುವಂತೆ ಮಾಡಿದ್ದರು.

ಆದರೆ ಈ ಬಾರಿ ಲೋಕಸಭಾ ಚುನಾ ವಣೆಯಲ್ಲಿ ರಾಜ್ಯದ ರಾಜಕೀಯ ಚಿತ್ರಣ ಬದಲಾಗಿದೆ. ಈವರೆಗೂ ತ್ರಿಕೋನ ಸ್ಪರ್ಧೆ ಕಂಡು ಬರುತ್ತಿದ್ದ ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯಿಂದಾಗಿ ಬಿಜೆಪಿಯು ಗೆಲುವಿಗಾಗಿ ಬೆವರು ಸುರಿಸುವಂತಹ ಪರಿಸ್ಥಿತಿಯಿದೆ. ಕೊಡಗು ಜಿಲ್ಲೆಯಲ್ಲಿಯೇ ಗಮನಿಸುವುದಾದರೆ 2013ರ ವಿಧಾನಸಭಾ ಚುನಾವಣೆಯಲ್ಲಿ ಮಡಿ ಕೇರಿ ಕ್ಷೇತ್ರದಲ್ಲಿ ಬಿಜೆಪಿ 56 ಸಾವಿರ ಮತ ಗಳನ್ನು ಪಡೆದಿದ್ದರೆ, ಕಾಂಗ್ರೆಸ್ 32 ಸಾವಿರ ಮತಗಳನ್ನು ಹಾಗೂ ಜೆಡಿಎಸ್ 52 ಸಾವಿರ ಮತಗಳನ್ನು ಪಡೆದಿತ್ತು. ಅಂದರೆ, ಕಾಂಗ್ರೆಸ್- ಜೆಡಿಎಸ್ ಒಗ್ಗೂಡಿ 84 ಸಾವಿರದಷ್ಟು ಮತ ಗಳನ್ನು ಮಡಿಕೇರಿಯಲ್ಲಿ ಪಡೆಯುವ ಮೂಲಕ ಬಿಜೆಪಿಗಿಂತ 20 ಸಾವಿರ ಹೆಚ್ಚು ವರಿ ಮತಗಳನ್ನು ಗಳಿಸಿತ್ತು.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮಡಿಕೇರಿ ಕ್ಷೇತ್ರದಲ್ಲಿ 70 ಸಾವಿರ ಮತಗಳನ್ನು ಗಳಿಸಿದ್ದರೆ, ಜೆಡಿಎಸ್ 54 ಸಾವಿರ ಹಾಗೂ ಕಾಂಗ್ರೆಸ್ 38 ಸಾವಿರ ಮತಗಳನ್ನೂ ತನ್ನದಾಗಿಸಿಕೊಂಡಿತ್ತು. ಅಂದರೆ, ಕಾಂಗ್ರೆಸ್-ಜೆಡಿಎಸ್ ಮತಗಳೆರ ಡನ್ನೂ ಒಟ್ಟು ಗೂಡಿಸಿದರೆ 92 ಸಾವಿರ ಮತಗಳು ದೊರಕಿದ್ದವು. ಬಿಜೆಪಿಗಿಂತ ಮೈತ್ರಿ ಪಕ್ಷಗಳಿಗೆ 22 ಸಾವಿರ ಹೆಚ್ಚುವರಿ ಮತಗಳು ಕಳೆದ ವಿಧಾನಸಭಾ ಚುನಾವ ಣೆಯಲ್ಲಿ ಮಡಿಕೇರಿ ಕ್ಷೇತ್ರದಲ್ಲಿ ಲಭಿಸಿದ್ದವು.

ಇನ್ನು, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ದಲ್ಲಿ 2013ನೇ ಚುನಾವಣೆಯಲ್ಲಿ ಬಿಜೆಪಿ 67 ಸಾವಿರ ಮತಗಳನ್ನು ಗಳಿಸಿದ್ದು, ಕಾಂಗ್ರೆಸ್ 63 ಸಾವಿರ ಮತ್ತು ಜೆಡಿಎಸ್ 5 ಸಾವಿರ ಮತಗಳನ್ನು ಗಳಿಸಿತ್ತು. ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ 69 ಸಾವಿರ ಮತಗಳನ್ನು ಪಡೆದು ಬಿಜೆಪಿಗಿಂತ 2 ಸಾವಿರ ಹೆಚ್ಚುವರಿ ಮತ ಗಳನ್ನು ಪಡೆದಿತ್ತು. ಕಳೆದ ಬಾರಿ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರಾಜಪೇಟೆ ಕ್ಷೇತ್ರದಲ್ಲಿ 77 ಸಾವಿರ ಮತ ಗಳನ್ನು ಗಳಿಸಿದ್ದರೆ, ಕಾಂಗ್ರೆಸ್ 64 ಸಾವಿರ ಹಾಗೂ ಜೆಡಿಎಸ್ 11 ಸಾವಿರ ಮತ ಗಳನ್ನು ಗಳಿಸಿತ್ತು. ಮೈತ್ರಿ ಪಕ್ಷಗಳು 75 ಸಾವಿರ ಮತಗಳನ್ನು ವಿರಾಜಪೇಟೆ ಕ್ಷೇತ್ರ ದಲ್ಲಿ ಹೊಂದಿದ್ದವು. ಅಂದರೆ ಬಿಜೆಪಿ ವಿರಾ ಜಪೇಟೆ ಕ್ಷೇತ್ರದಲ್ಲಿ ಮೈತ್ರಿ ಪಕ್ಷಕ್ಕೆ ಹೋಲಿಸಿ ದ್ದಲ್ಲಿ 2 ಸಾವಿರ ಮತಗಳ ಮುಂದಿದೆ.

ಈ ಲೆಕ್ಕಾಚಾರವನ್ನು ಅವಲೋಕಿಸಿ ದರೆ, ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಕೊಡಗಿನ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಒಂದೂವರೆ ಲಕ್ಷ ಮತ ದಾರರನ್ನು ಹೊಂದಿದ್ದರೆ, ಕಾಂಗ್ರೆಸ್ 1 ಲಕ್ಷದ 2 ಸಾವಿರ ಹಾಗೂ ಜೆಡಿಎಸ್ 65 ಸಾವಿರ ಮತಗಳನ್ನು ಹೊಂದಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಕೊಡಗು ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆ ಪ್ರಕಾರ 1 ಲಕ್ಷ 67 ಸಾವಿರ ಮತಗಳ ಮೂಲಕ ಬಿಜೆಪಿಗಿಂತ 16 ಸಾವಿರ ಮತಗಳನ್ನು ಹೆಚ್ಚಾಗಿ ಹೊಂದಿದೆ.

ಲೋಕಸಭಾ ಚುನಾವಣೆಯಲ್ಲಿ ಮೈಸೂರಿನ 6 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ವಿಜಯ ಶಂಕರ್ ಹೆಚ್ಚು ಮತಗಳನ್ನು ಪಡೆದು, ಕೊಡಗಿನಲ್ಲಿ ಕೊಂಚ ಮುನ್ನಡೆ ಸಾಧಿಸಿ ದರೂ ಗೆಲುವು ಸುಲಭ ಸಾಧ್ಯ. ಬಿಜೆಪಿಯ ಭದ್ರಕೋಟೆಯಾಗಿರುವ ಕೊಡಗಿನಲ್ಲಿ ಪ್ರತಾಪ್ ಸಿಂಹ ಕನಿಷ್ಟ 1 ಲಕ್ಷವಾದರೂ ಹೆಚ್ಚುವರಿ ಮತಗಳನ್ನು ಪಡೆಯಲೇ ಬೇಕಾದ ಅನಿವಾರ್ಯತೆಯೂ ಇದೆ. ಮೈಸೂರಿನಲ್ಲಿ ಬಿಜೆಪಿ ಪಾಲಿಗೆ ಕೇವಲ 2 ವಿಧಾನಸಭಾ ಕ್ಷೇತ್ರವಿರುವುದರಿಂದಾಗಿ ಉಳಿದ 4 ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳು ಮುನ್ನಡೆ ಸಾಧಿಸಿದರೂ ಬಿಜೆಪಿ ಗೆಲುವಿಗೆ ಪ್ರಯಾಸ ಪಡಬೇಕಾದ ಸ್ಥಿತಿಯಿದೆ.

ಹೀಗಾಗಿಯೇ ಬಿಜೆಪಿ ಪಾಳಯದ ಲ್ಲಿಯೂ ಮೈತ್ರಿಕೂಟದ ಅಭ್ಯರ್ಥಿ ಸ್ಪರ್ಧೆ ಯಿಂದಾಗಿ ಕಳವಳ ಹೆಚ್ಚಾಗುತ್ತಿದ್ದು, ಮೈತ್ರಿ ಪಕ್ಷಗಳು ಮತಹೆಚ್ಚು ಪಡೆದಷ್ಟೂ ಕಮಲ ಪಕ್ಷದ ಗೆಲುವು ಕಷ್ಟಸಾಧ್ಯವಾಗುತ್ತಾ ಹೋಗುತ್ತದೆ. ಹೀಗಿದ್ದರೂ, ಲೋಕಸಭಾ ಚುನಾವಣೆ ರಾಷ್ಟ್ರೀಯತೆ ಮತ್ತು ಭಾರತ ಹಾಗೂ ಮೋದಿ ಕೇಂದ್ರೀಕೃತ ಚುನಾ ವಣೆ. ಮೈತ್ರಿ ಕೂಟ ಈ ಮೊದಲು ಪಡೆದ ಮತಗಳು ಲೋಕಸಭಾ ಚುನಾವಣೆಯಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಈ ಚುನಾವಣೆಯ ಲೆಕ್ಕಾಚಾರವೇ ಬೇರೆ ಎಂದು ಬಿಜೆಪಿ ಪ್ರಮುಖರು ಲೆಕ್ಕಹಾಕುತ್ತಿದ್ದಾರೆ. ಯಾರ ಲೆಕ್ಕ ಪಕ್ಕಾ ಆಗುತ್ತದೆ, ಯಾರು ಗೆಲುವಿನ ನಾಗಾಲೋಟ ಮುಂದುವರಿಸುತ್ತಾರೆ ಎಂಬದನ್ನು ಏಪ್ರಿಲ್ 18 ರಂದು ಮತ ದಾರರು ನಿರ್ಧರಿಸಲಿದ್ದಾರೆ. ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿರುವ ಮಾತುಗಳು ಏನೇ ಇದ್ದರೂ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಯೋಚಿಸಿದಷ್ಟು ಯಾರಿಗೂ ಗೆಲುವು ಸುಲಭ ಸಾಧ್ಯವಲ್ಲ.

ವಿಜಯಮಾಲೆ ಧರಿಸಲು ಇಬ್ಬರೂ ಅಭ್ಯರ್ಥಿಗಳೂ ತಮ್ಮ ಬೆಂಬಲಿಗ ರೊಂದಿಗೆ ಬಿಸಿಲಿನ ಬೇಗೆಯ ನಡುವೆ ಮತದಾರರ ಮನವೊಲಿಸಲು ಬೆವರು ಸುರಿಸಲೇ ಬೇಕಾಗಿದೆ. ಸಾಮಾನ್ಯವಾಗಿ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದ್ದ ಕೊಡಗು-ಮೈಸೂರು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ನಡುವೇ ನೇರ ಸ್ಪರ್ಧೆ ಏರ್ಪಟ್ಟಿದ್ದು, ಈ ಇಬ್ಬರು ಅಭ್ಯರ್ಥಿ ಗಳೊಂದಿಗೆ ಕಣದಲ್ಲಿ ಉಳಿದಿರುವ 20 ಉಮೇದುವಾರರು ಕೂಡ ಲೋಕಸಭೆಗೆ ಆಯ್ಕೆ ಬಯಸಿದ್ದಾರೆ.

ಪ್ರಸಾದ್ ಸಂಪಿಗೆಕಟ್ಟೆ

Translate »