ಮೈತ್ರಿ ಕಾರ್ಯಕರ್ತರಲ್ಲಿ ವ್ಯತ್ಯಾಸವಿದ್ದರೂ ನನ್ನದೇ ಗೆಲುವು: ವಿಜಯಶಂಕರ್ ಸ್ಪಷ್ಟನೆ
ಮೈಸೂರು

ಮೈತ್ರಿ ಕಾರ್ಯಕರ್ತರಲ್ಲಿ ವ್ಯತ್ಯಾಸವಿದ್ದರೂ ನನ್ನದೇ ಗೆಲುವು: ವಿಜಯಶಂಕರ್ ಸ್ಪಷ್ಟನೆ

May 3, 2019

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ವೋಟ್ ಮಾಡಿದ್ದಾರೆ. ಇದರಿಂದ ಮೈತ್ರಿ ಅಭ್ಯರ್ಥಿಗೆ ಹಿನ್ನಡೆ ಯಾಗಿದೆ ಎನ್ನುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಓಟ್ ಹಾಕಿ ದ್ದಾರೆ ಎಂದು ಸಚಿವ ಜಿ.ಟಿ.ದೇವೇಗೌಡ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಮೈತ್ರಿ ಹೇಳಿಕೆ ಯಲ್ಲ. ನಾನು ಈ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ. ಆ ವಿಶ್ವಾಸ ನನಗೆ ಇದೆ. ಮೈತ್ರಿ ಕಾರ್ಯಕರ್ತರಲ್ಲಿ ಸಣ್ಣ, ಪುಟ್ಟ ವ್ಯತ್ಯಾಸಗಳಿರಬಹುದು. ಆದರೆ, ಅದು ಚುನಾವಣೆಯ ಫಲಿತಾಂಶದ ಮೇಲೆ ಯಾವುದೇ ಪರಿಣಾಮವನ್ನು ಬೀರಿಲ್ಲ, ಬೀರಲೂ ಸಾಧ್ಯವಿಲ್ಲ. ಯಾಕೆಂದರೆ ಮತ ದಾರರ ಅಭಿಪ್ರಾಯವೇ ಬೇರೆಯಾಗಿದೆ ಎಂದರು. ನಾನು ಚುನಾವಣೆಯನ್ನು ಇದೇ ಮೊದಲ ಬಾರಿ ಎದುರಿಸುತ್ತಿಲ್ಲ. 9 ಬಾರಿ ಎದುರಿಸಿದ್ದೇನೆ, ಹಾಗಾಗಿ ಜನರ ನಾಡಿ ಮಿಡಿತ ನನಗೆ ಚೆನ್ನಾಗಿ ಗೊತ್ತಿದೆ. ಮತ ದಾರರು ನನ್ನ ಕೈ ಹಿಡಿದಿದ್ದಾರೆ. ಹಾಗಾಗಿ ನನ್ನ ಗೆಲುವಿನ ಮೇಲೆ ನನಗೆ ಸಂಪೂರ್ಣ ವಾದ ನಂಬಿಕೆಯಿದೆ. ಹಾಗಾಗಿ ಚುನಾ ವಣಾ ಫಲಿತಾಂಶ ಅಧಿಕೃತವಾಗಿ ಹೊರ ಬೀಳುವುದಕ್ಕಾಗಿ ಕಾಯುತ್ತಿದ್ದೇನೆ ಎಂದರು.

ಪಿರಿಯಾಪಟ್ಟಣದಲ್ಲಿ ಹಾಲಿ ಜೆಡಿಎಸ್ ಶಾಸಕ ಕೆ.ಮಹದೇವ್ ಹಾಗೂ ಮಾಜಿ ಶಾಸಕ ಕೆ.ವೆಂಕಟೇಶ್ ಅವರು ವೈರತ್ವ ಮರೆತು ಒಂದಾಗಿ ಜಂಟಿಯಾಗಿ ಚುನಾ ವಣಾ ಪ್ರಚಾರವನ್ನು ನಡೆಸಿದ್ದಾರೆ. ಅಲ್ಲದೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಿ.ಟಿ.ದೇವೇಗೌಡರೂ ನನ್ನ ಪರವಾಗಿ ಚುನಾವಣಾ ಪ್ರಚಾರವನ್ನು ನಡೆಸಿದ್ದಾರೆ. ಹಾಗಾಗಿ ನನಗೆ ಹಿನ್ನಡೆಯಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಚುನಾವಣೆಯ ವೇಳೆ ಕಾಲಾವಕಾಶದ ಕೊರತೆ ಎಲ್ಲರನ್ನೂ ಕಾಡಿದೆ. ಹೀಗಿದ್ದರೂ ಕೂಡ ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ, ಹೆಚ್.ಡಿ.ದೇವೇಗೌಡರು ನನ್ನ ಪರವಾಗಿ ಚುನಾವಣಾ ಪ್ರಚಾರ ನಡೆಸಿರು ವುದು ನನಗೆ ಹೆಚ್ಚಿನ ಮತಗಳನ್ನು ತಂದು ಕೊಟ್ಟಿದೆ. ಹುಣಸೂರು ಟೌನ್‍ನಲ್ಲಿ ಸಮಯಾ ವಕಾಶದ ಕೊರತೆಯಿಂದಾಗಿ ನನಗೆ ಪ್ರಚಾರ ನಡೆಸಲು ಸಾಧ್ಯವಾಗಲಿಲ್ಲ. ಆದರೆ, ಅಲ್ಲಿ ಮೈತ್ರಿ ಪಕ್ಷದ ಮುಖಂಡರು, ಕಾರ್ಯ ಕರ್ತರು ನನ್ನ ಪರವಾಗಿ ಪ್ರಚಾರ ನಡೆಸಿ, ತಮ್ಮ ಕರ್ತವ್ಯವನ್ನು ನೆರವೇರಿಸಿದ್ದಾರೆ. ನನ್ನ ಗೆಲುವು ನಿಶ್ಚಿತ. ಎಷ್ಟು ಮತಗಳ ಅಂತರದಿಂದ ಎಂಬುದು ಫಲಿತಾಂಶದ ನಂತರ ತಿಳಿಯಲಿದೆ ಎಂದರು.

ಜೆಡಿಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗೆ ವೋಟ್ ಮಾಡಿದ್ದಾರೆ: ಸಚಿವ ಸಾರಾ ಮಹೇಶ್

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಉದ್ಬೂರು ಸೇರಿದಂತೆ ಚಾಮುಂಡೇಶ್ವರಿ ಕ್ಷೇತ್ರದ ಹಲವೆಡೆ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ನೀಡಿರುವ ಹೇಳಿಕೆಯನ್ನು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅಲ್ಲಗಳೆದಿದ್ದು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿಗೆ ಓಟ್ ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಮೈಸೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಚಿವ ಜಿ.ಟಿ. ದೇವೇಗೌಡರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ನನಗೆ ತಿಳಿದಿಲ್ಲ. ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಮೈತ್ರಿ ಧರ್ಮವನ್ನು ಪಾಲಿಸಿದ್ದಾರೆ. ನನಗೆ ಗೊತ್ತಿರುವಂತೆ ಹಾಗೂ ಮಾಹಿತಿಯಂತೆ ಜೆಡಿಎಸ್ ಕಾರ್ಯ ಕರ್ತರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂದು ತಿಳಿಸಿದರು.

ಜಿ.ಟಿ.ದೇವೇಗೌಡರು ಮೈತ್ರಿಯನ್ನು ಬಹಳ ಬೇಗ ಮಾಡಿಕೊಂಡಿದ್ದರೆ, ಹೆಚ್ಚಿನ ಕಾಲಾವಕಾಶ ಚುನಾವಣೆಗೆ ಸಿಗುತ್ತಿತ್ತು. ಹಾಗಾಗಿ ಹೆಚ್ಚಿನ ಮತಗಳ ಅಂತರದಿಂದ ಮೈತ್ರಿ ಅಭ್ಯರ್ಥಿ ಗೆಲ್ಲಲು ಸಾಧ್ಯವಾಗುತ್ತಿತ್ತು ಎಂಬ ಅರ್ಥದಲ್ಲಿ ಹೇಳಿರಬಹುದು. ಮಂಡ್ಯ ಚುನಾವಣೆಯ ಮೇಲೆ ಮಾಧ್ಯಮಗಳು ಹೆಚ್ಚು ಗಮನಹರಿಸುತ್ತಿರುವ ಕಾರಣ ಅವರ ಗಮನವನ್ನು ಮೈಸೂರಿನತ್ತಲೂ ಸೆಳೆಯಲು ಜಿ.ಟಿ.ದೇವೇಗೌಡರು ಈ ರೀತಿಯ ಹೇಳಿಕೆಯನ್ನು ನೀಡಿರಬಹುದು ಎಂದು ಪ್ರತಿಕ್ರಿಯಿಸಿದರು.

ಜೆಡಿಎಸ್ ಮತಗಳು ಬಿಜೆಪಿಗೆ: ಸಚಿವ ಜಿ.ಟಿ.ದೇವೇಗೌಡ ಹೇಳಿಕೆ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯ ಕರ್ತರು ಕಾಂಗ್ರೆಸ್‍ಗೆ ಮತ ಚಲಾಯಿಸುವ ಬದಲು ಬಿಜೆಪಿಗೆ ಹಾಕಿದ್ದಾರೆ ಎನ್ನುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಹೊಸ ವಿವಾದ ಹುಟ್ಟು ಹಾಕಿದ್ದಾರೆ. ನಾವು ತಡವಾಗಿ ಮೈತ್ರಿ ಮಾಡಿ ಕೊಂಡಿದ್ದೇವೆ. ಒಂದು ವೇಳೆ, ಜೆಡಿಎಸ್- ಕಾಂಗ್ರೆಸ್ ಮೊದಲೇ ಮೈತ್ರಿ ಮಾಡಿಕೊಂಡು ಒಟ್ಟಾಗಿದ್ದರೆ ಬಿಜೆಪಿಗೆ 5 ಸ್ಥಾನ ಗೆಲ್ಲುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಜಿದ್ದಾ ಜಿದ್ದಿನ ಸ್ಪರ್ಧೆ ಎದುರಿಸಿದ್ದರಿಂದ ಕಾರ್ಯಕರ್ತರ ಮನಸ್ಸು ಇನ್ನೂ ಒಟ್ಟಾಗಿರಲಿಲ್ಲ. ಮೊದಲೇ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಮೈತ್ರಿಯಲ್ಲಿ ಸಮನ್ವಯದ ಕೊರತೆ ಉಂಟಾಗಿದ್ದರಿಂದ ಜೆಡಿಎಸ್‍ನವರು ಬಿಜೆಪಿಗೆ ಮತ ಹಾಕಿದ್ದಾರೆ. ಕಾಂಗ್ರೆಸ್‍ಗೆ ಅವರ ಪಕ್ಷದವರು ಮಾತ್ರ ಮತ ಚಲಾಯಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಉದ್ಬೂರು ಗ್ರಾಮ ಪಂಚಾಯಿತಿ ಸೇರಿ ಕೆಲವು ಕಡೆ ಹೀಗಾಗಿದೆ ಎನ್ನುವುದನ್ನು ಅವರು ಒಪ್ಪಿಕೊಂಡರು. ಮಂಡ್ಯದಲ್ಲಿ ಕಾಂಗ್ರೆಸ್‍ನವರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬದಲಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬೆಂಬಲಿಸಿದ್ದಾರೆ. ಕಾರ್ಯಕರ್ತರ ಮಟ್ಟದಲ್ಲಿ ಮೈತ್ರಿ ಗಟ್ಟಿಗೊಳಿಸಲು ಸಾಧ್ಯವಾಗಿಲ್ಲದಿರುವುದೇ ಇದಕ್ಕೆಲ್ಲ ಕಾರಣ ಎಂದು ಜಿಟಿಡಿ ಹೇಳಿದರು.

Translate »