ಬೀನ್ಸ್ ಕೆಜಿಗೆ ರೂ.80, ಟೊಮೆಟೋ ರೂ.40, ಬಟಾಣಿ ರೂ.120ರಿಂದ 140
ಮೈಸೂರು

ಬೀನ್ಸ್ ಕೆಜಿಗೆ ರೂ.80, ಟೊಮೆಟೋ ರೂ.40, ಬಟಾಣಿ ರೂ.120ರಿಂದ 140

May 3, 2019

ಮೈಸೂರು: ಮೈಸೂರು ಜನತೆಗೆ ಬಿಸಿಲ ತಾಪದ ಜೊತೆಗೆ ತರಕಾರಿಗಳ ದರವೂ ಕೈ ಸುಡುತ್ತಿದೆ. ಒಂದು ವಾರದಿಂದಲೂ ತರಕಾರಿ ಬೆಲೆಗಳಲ್ಲಿ ಏರಿಳಿತ ಕಂಡು ಬರುತ್ತಿದ್ದು, ಇಳಿತಕ್ಕಿಂತ ಏರಿಕೆಯೇ ಹೆಚ್ಚಾಗಿದೆ.

ಮೈಸೂರಿನಲ್ಲಿ ಕಳೆದ ವಾರ ಪ್ರತಿ ಕೆಜಿಗೆ ರೂ.100ರ ಗಡಿ ದಾಟಿದ್ದ ಬೀನ್ಸ್ ಇಂದು ರೂ.80ಕ್ಕೆ ಇಳಿದಿದ್ದರೂ ಗ್ರಾಹಕರು ಅನಿವಾರ್ಯವಾಗಿ ಕೊಳ್ಳಲೇ ಬೇಕಾದ ಪರಿಸ್ಥಿತಿಗೆ ಒಳಗಾಗಿದ್ದಾರೆ. ಮೈಸೂರಿನ ಪ್ರಮುಖ ದೇವರಾಜ ಮಾರುಕಟ್ಟೆಯಲ್ಲಿ ಗುರುವಾರ ಬೀನ್ಸ್ ರೂ.80ಕ್ಕೆ ಮಾರಾಟವಾಗುತ್ತಿತ್ತು. ಕಳೆದ ವಾರ ರೂ.50ರ ಗಡಿ ದಾಟಿದ್ದ ಟೊಮೆಟೊ ಇಂದು 30ರಿಂದ 40ರ ಆಸುಪಾಸಿನಲ್ಲಿ ಮಾರಾಟ ವಾಗುತ್ತಿದೆ. ಉಳಿದಂತೆ ಇತರೆ ತರಕಾರಿಗಳ ದರ ಹೀಗಿತ್ತು. ಬಟಾಣಿ ಕೆಜಿಗೆ ರೂ. 120ರಿಂದ 140, ಹಸಿ ಮೆಣಸಿನಕಾಯಿ- ಕೆಜಿಗೆ ರೂ60, ಸೀಮೆ ಬದನೆ- ರೂ.50, ಕ್ಯಾರೆಟ್ ರೂ. 30-40, ಬೀಟ್‍ರೂಟ್ ಕೆಜಿಗೆ ರೂ.30ಕ್ಕೆ ಮಾರಾಟವಾಯಿತು. 1 ಕಟ್ಟು ಕೊತ್ತಂಬರಿ ಸೊಪ್ಪು ರೂ.20ಕ್ಕೆ ಮಾರಾಟವಾಗುತ್ತಿತ್ತು. ಈ ಕಟ್ಟು ಇತರೆ ದಿನಗಳಲ್ಲಿ ರೂ. 10ಕ್ಕೆ ಮಾರಾಟವಾಗುತ್ತವೆ. ಬೇಡಿಕೆಗೆ ತಕ್ಕಂತೆ ಉತ್ಪಾದನೆ ಇಲ್ಲದಿರು ವುದೇ ಇದಕ್ಕೆ ಕಾರಣ ಎಂದು ತರಕಾರಿ ವ್ಯಾಪಾರಿಗಳು ತಿಳಿಸುತ್ತಾರೆ.

ಬೇಸಿಗೆಯ ಬಿಸಿಲು ಮತ್ತು ಮಳೆಯ ಕೊರತೆಯಿಂದಾಗಿ ತರಕಾರಿ ಗಿಡಗಳು ಒಣಗುತ್ತಿರುವುದೇ ತರಕಾರಿ ಬೆಲೆಗಳ ಹೆಚ್ಚಳಕ್ಕೆ ಕಾರಣ. ಮಳೆ ಕೊರತೆ ಜೊತೆಗೆ ತರಕಾರಿ ಬೆಳೆಯುವ ಪ್ರದೇಶಗಳಲ್ಲಿ ಕೊಳವೆಬಾವಿಗಳು ನೀರಿಲ್ಲದೆ ಒಣಗಿರುವ ಹಿನ್ನೆಲೆಯಲ್ಲಿ ಗಿಡಗಳಿಗೆ ನೀರು ಹಾಕಲು ಸಾಧ್ಯವಾಗದೇ ಗಿಡಗಳು ಒಣಗಿವೆ. ಹೀಗಾಗಿ ಬೀನ್ಸ್ ಇನ್ನಿತರ ತರಕಾರಿ ಗಳ ಆವಕದಲ್ಲಿ ಗಣನೀಯ ಪ್ರಮಾಣದ ಇಳಿಮುಖವಾಗಿದೆ ಎಂದು ನಷ್ಟಕ್ಕೊಳ ಗಾದ ಹಲವು ರೈತರು ಹೇಳಿದ್ದಾರೆ.

ಮದುವೆ ಇನ್ನಿತರ ಶುಭ ಸಮಾರಂಭಗಳಿ ರುವ ಹಿನ್ನೆಲೆಯಲ್ಲಿ ತರಕಾರಿಗಳ ಬೇಡಿಕೆಯೂ ಗಣನೀಯವಾಗಿ ಹೆಚ್ಚಾಗಿದೆ. ಆದರೆ ಬೆಳೆ ಕಡಿಮೆಯಾಗಿ, ಎಪಿಎಂಸಿ ಮಾರುಕಟ್ಟೆಗೆ ಮಾಮೂಲಿಗಿಂತ ಕಡಿಮೆ ಆವಕವಾಗುತ್ತಿರುವುದರಿಂದ ಈ ಬಿಸಿ ಗ್ರಾಹಕರಿಗೆ ತಟ್ಟಿದೆ ಎಂದೇ ಹೇಳಬಹುದು.

Translate »