ಜೆಡಿಎಸ್‍ನಿಂದ ನಿಮ್ಮೂರ ಮಗಳಿಗೂ ಅನ್ಯಾಯ
ಮೈಸೂರು

ಜೆಡಿಎಸ್‍ನಿಂದ ನಿಮ್ಮೂರ ಮಗಳಿಗೂ ಅನ್ಯಾಯ

April 14, 2019

ಮಂಡ್ಯ: ಮಹಿಳೆಯರ ಬಗ್ಗೆ ಜೆಡಿಎಸ್‍ಗೆ ಗೌರವ ಇಲ್ಲ. ಅಗೌರವದಿಂದ ಮಹಿಳೆಯರ ಬಗ್ಗೆ ಮಾತನಾಡುತ್ತಾರೆ, ಜೆಡಿಎಸ್‍ನಿಂದ ನಿಮ್ಮೂರಿನ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ. ಕಷ್ಟ ಪಟ್ಟು ಓದಿ, ಐಎಎಸ್ ಮಾಡಿದ್ದ ಅವರನ್ನು ಕೆಲಸ ಬಿಡಿಸಿ, ಕರ್ಕೊಂಡು ಬಂದು ಮೋಸ ಮಾಡಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ರಾಜಕಾರಣ ಬಯಲು ಮಾಡಿದ್ದಾರೆ. ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ವಿವಿಧೆಡೆ ಇಂದು ಪ್ರಚಾರ ನಡೆಸಿದ ವೇಳೆ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ.ಲಕ್ಷ್ಮೀ ಅಶ್ವಿನ್‍ಗೌಡ ಅವರ ಹುಟ್ಟೂರು ನಿಟ್ಟೂರು ಕೋಡಿಹಳ್ಳಿಯಲ್ಲಿ ಮತ ಯಾಚಿಸುವಾಗ ಈ ಮಾತು ಹೇಳಿದರು.

ಈಗ ನನ್ನ ವಿರುದ್ಧ ಇಡೀ ಸರ್ಕಾರವೇ ನಿಂತಿದೆ. ನನಗೆ ವೋಟ್ ಮಾಡಿ ಆಶೀರ್ವದಿಸಿ. ಮಹಿಳೆಯರ, ಮಂಡ್ಯದ ಸ್ವಾಭಿಮಾನ ಎತ್ತಿ ಹಿಡಿಯಿರಿ ಎಂದು ಅವರು ಮತದಾರರಲ್ಲಿ ಮನವಿ ಮಾಡಿದರು.

ಮಗನನ್ನ ಎಂಪಿ ಮಾಡುವ ಬದಲು ಸೈನ್ಯಕ್ಕೆ ಕಳುಹಿಸಬೇಕಿತ್ತು?: ನಮ್ಮ ದೇಶ ಕಾಯುವ ವೀರ ಯೋಧರು ಎರಡು ಹೊತ್ತಿನ ಊಟಕ್ಕೆ ಗತಿ ಇಲ್ಲದವರು ಎಂದು ಹೇಳಿಕೆ ನೀಡಿ, ಬಳಿಕ ನಾನು ಆ ಅರ್ಥದಲ್ಲಿ ಹೇಳಿಲ್ಲ, ನಾನು ದೇಶಭಕ್ತ ಎಂದು ಸಿಎಂ ಹೇಳ್ತಾರೆ. ಅವರಿಗೆ ಅಷ್ಟೊಂದು ದೇಶಭಕ್ತಿ ಇದ್ದಿದ್ದರೆ ಮಗನನ್ನು ಎಂಪಿ ಮಾಡೋ ಬದಲು ಸೈನಿಕ ಆಗು ಎನ್ನಬೇಕಿತ್ತು ಎಂದು ಹಲಗೂರಿನಲ್ಲಿ ಪ್ರಚಾರದ ವೇಳೆ ಸಿಎಂ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.

ಈಗ ನಡೆಯುತ್ತಿರುವ ಚುನಾವಣೆ ಇತಿಹಾಸ ಎನ್ನಬಹುದು. ಆದರೆ ಒಳ್ಳೆ ವಿಚಾರಕ್ಕೆ ಇದು ಇತಿಹಾಸವಲ್ಲ. ಬೇರೆ ಬೇರೆ ರೀತಿಯ ಇತಿಹಾಸವನ್ನು ಇಲ್ಲಿ ನೋಡ್ತಿದ್ದೀವಿ. ಹೆಣ್ಣು ಮಕ್ಕಳ ಬಗ್ಗೆ ವಿರೋಧವಿರುವ ಪಕ್ಷದವರು ಆಡಿದ ಕೀಳು ಮಾತುಗಳನ್ನು ಕೇಳುತ್ತಾ ಇದ್ದೇವೆ. ಮುಖ್ಯಮಂತ್ರಿಗಳ ಬಾಯಲ್ಲಿ ತುಚ್ಛವಾದ ಮಾತುಗಳು ಬರುತ್ತಿವೆ. ಇವರಿಗೆ ಮಹಿಳೆಯರ ಬಗ್ಗೆ ಗೌರವವಿಲ್ಲ, ರೈತರ ಬಗ್ಗೆ ಕಾಳಜಿಯಿಲ್ಲ, ಯೋಧರ ಬಗ್ಗೆ ಲಘುವಾದ ಮಾತುಗಳನ್ನು ಆಡುತ್ತಾರೆ. ಒಬ್ಬಳೇ ಒಬ್ಬಳು ಹೆಣ್ಣು ಮಗಳು ಇಡೀ ವ್ಯವಸ್ಥೆಯನ್ನು ಎದುರು ಹಾಕಿಕೊಂಡು ನಿಂತಿದ್ದೀನಿ. ನನಗೊಂದು ಅವಕಾಶ ಕೊಡಿ, ಜನರಿಗಾಗಿ ಕೆಲಸ ಮಾಡುತ್ತೇನೆ ಎಂದು ಮನವಿ ಮಾಡಿಕೊಂಡರು. ಸುಮಲತಾ ಅವರಿಗೆ ದಳವಾಯಿ ಕೋಡಿಹಳ್ಳಿಯಲ್ಲಿ ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತು, ಯುವಕರು ಸುಮಲತಾ, ಯಶ್, ದರ್ಶನ್ ಭಾವಚಿತ್ರವುಳ್ಳ ಟೀ ಶರ್ಟ್ ಧರಿಸಿ ಬೆಂಬಲ ನೀಡಿದರು.

ಮೂರೂ ಪಕ್ಷಗಳ ಬಾವುಟ ಹಾರಿಸಿ ಬೆಂಬಲ!: ಸುಮಲತಾ ಅಂಬರೀಶ್ ಪ್ರಚಾರದ ವೇಳೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಮೂರೂ ಪಕ್ಷಗಳ ಬಾವುಟ ಹಾರಾಟ ನಡೆಸುವ ಮೂಲಕ ಕೊನ್ನಾಪುರದ ಗ್ರಾಮಸ್ಥರು ಬೆಂಬಲ ಸೂಚಿಸಿದ್ದುದು ವಿಶೇಷವಾಗಿತ್ತು. ಹಲಗೂರು, ಚನ್ನಪಿಳ್ಳೆಕೊಪ್ಪಲು, ಕನ್ನಹಳ್ಳಿ ಸೇರಿದಂತೆ ಸುಮಾರು 30 ಹಳ್ಳಿಗಳಲ್ಲಿ ಸುಮಲತಾ ಅವರು ಇಂದು ಪ್ರಚಾರ ಮಾಡಿದರು. ಈ ವೇಳೆ ಜೆಡಿಎಸ್, ಕಾಂಗ್ರೆಸ್, ಬಿಜೆಪಿ, ರೈತ ಸಂಘದ ಬಾವುಟವನ್ನು ಅಭಿಮಾನಿಗಳು ಹಾರಿಸಿ ಸುಮಲತಾಗೆ ಬೆಂಬಲ ಘೋಷಣೆ ಮಾಡಿದ್ದಲ್ಲದೆ ಹೋದಲ್ಲೆಲ್ಲಾ ಸುಮಲತಾಗೆ ಅಭಿಮಾನಿಗಳು ಹಾಗೂ ಮತದಾರರು ಅದ್ಧೂರಿ ಸ್ವಾಗತ ಕೋರಿ, ಮತ ಹಾಕುವ ಭರವಸೆ ನೀಡುತ್ತಿದ್ದುದು ಕಂಡು ಬಂತು.

Translate »