ಮದ್ದೂರಲ್ಲಿ ನಿಖಿಲ್ ಪರ ತಂದೆ-ತಾತ ಮತ ಬೇಟೆ
ಮೈಸೂರು

ಮದ್ದೂರಲ್ಲಿ ನಿಖಿಲ್ ಪರ ತಂದೆ-ತಾತ ಮತ ಬೇಟೆ

April 14, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಪರವಾಗಿ ತಂದೆ ಹೆಚ್.ಡಿ.ಕುಮಾರಸ್ವಾಮಿ, ತಾತ ಹೆಚ್.ಡಿ. ದೇವೇಗೌಡರು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿಂದು ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.

ಮದ್ದೂರು ತಾಲೂಕಿನ ಹೊನ್ನಲಗೆರೆ ಗ್ರಾಮದಿಂದ ರೋಡ್ ಶೋ ಆರಂಭಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಸಚಿವ ಡಿ.ಸಿ. ತಮ್ಮಣ್ಣ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಸಾಥ್ ನೀಡಿ ದರು. ನಿಖಿಲ್‍ರನ್ನು ಗೆಲ್ಲಿಸಲು ತಂದೆ-ಮಗನ ಜುಗಲ್ ಬಂಧಿ ನೋಡುಗರ ಗಮನ ಸೆಳೆಯಿತು, ಹೊನ್ನಲಗೆರೆ ಗ್ರಾಮದಲ್ಲಿ ರೋಡ್ ಶೋ ವೇಳೆ ನೆಚ್ಚಿನ ದಳಪತಿಗಳನ್ನು ನೋಡಲು ಜನರು ಮುಗಿಬಿದ್ದುದು ಕಂಡು ಬಂತು.

ನಿಖಿಲ್ ನಿಮ್ಮ ಮನೆ ಮಗ ಆಶೀರ್ವದಿಸಿ; ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಂಡ್ಯದಲ್ಲಿ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುತ್ತೇವೆ. ಇನ್ನು 6 ತಿಂಗಳಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯ ಕ್ರಮ ಪೂರ್ಣಗೊಳಿಸುತ್ತೇವೆ, ಚುನಾವಣೆ ನೀತಿ ಸಂಹಿತೆ ಇರುವುದರಿಂದ ಬಜೆಟ್ ಯೋಜನೆಗಳಿಗೆ ಹಣ ಬಿಡುಗಡೆ ಆಗಿಲ್ಲ ಎಂದು ತಿಳಿಸಿದರು. ಚುನಾವಣೆ ಮುಗಿದ ತಕ್ಷಣ ನೀವು ಸಕ್ಕರೆ ಕಾರ್ಖಾನೆಗೆ ಪೂರೈಸಿರುವ ಕಬ್ಬಿನ ಬಾಕಿ ಹಣ ಪಾವತಿ ಮಾಡಿಸ್ತೀನಿ. ನಾನು ಮಾತನಾಡಿ ಭರವಸೆ ನೀಡಿದರೆ ನೀತಿ ಸಂಹಿತೆ ಉಲ್ಲಂಘನೆ ಅಂತಾ ಹೇಳ್ತಾರೆ. ಈಗ ಹೆಚ್ಚಿಗೆ ಮಾತನಾಡೋಕೆ ಹೋಗಲ್ಲಾ, ನನ್ನ ಮಾತನ್ನು ನಂಬಿ ಇದುವರೆಗೂ ನಿಮ್ಮೆಲ್ಲಾ ಕಷ್ಟ ಸುಖಗಳಿಗೆ ಸ್ಪಂದಿಸಿದ್ದೇನೆ, ಮುಂದೆಯೂ ಮತ್ತಷ್ಟು ಜವಾಬ್ದಾರಿಯುತವಾಗಿ ನಿಮ್ಮಗಳ ಕೆಲಸ ಮಾಡುತ್ತೇನೆ ಎಂದರು.

ಸಾಲಮನ್ನಾ ಮಾಡಿದ್ದು ಮೋದಿಯಲ್ಲ, ನಾವು: ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ದೇಶದ ಪ್ರಧಾನಿ ರೈತರ ಸಾಲ ಮನ್ನಾ ಬಗ್ಗೆ ಮಾತಾಡಲ್ಲ. ಆದರೆ ನಾವು ಮಾಡಿದ ರೈತರ ಸಾಲ ಮನ್ನಾ ಬಗ್ಗೆ ಮಾತನಾಡುತ್ತಾರೆ, ಅವರೇನಾದರೂ ರೈತರ ಬಿಡಿಗಾಸು ಸಾಲ ಮನ್ನಾ ಮಾಡಿದ್ದಾರಾ? ಎಂದು ಮುಖ್ಯಮಂತ್ರಿಗಳು ಕೆ.ಎಂ.ದೊಡ್ಡಿಯಲ್ಲಿ ಪ್ರಚಾರದ ವೇಳೆ ಪ್ರಶ್ನಿಸಿದರು. ಮಂಡ್ಯಕ್ಕೆ ಹೆಚ್ಚಿನ ಅನುದಾನ ಕೊಟ್ಟ ನನ್ನ ಬಜೆಟ್‍ನ್ನು ಮಂಡ್ಯ ಬಜೆಟ್ ಅಂದರು ಅಂತಹ ಬಿಜೆಪಿ ಬೆಂಬಲವನ್ನು ಪಕ್ಷೇತರ ಅಭ್ಯರ್ಥಿ ಪಡೆದಿದ್ದಾರೆ. ಅಂತಹವರಿಗೆ ನೀವು ಓಟ್ ಕೊಡಬೇಕಾ? ಯೋಚಿಸಿ ಎಂದರು.

ನಾವು ಮಂಡ್ಯ ಅಭಿವೃದ್ಧಿ ಮಾಡ್ತೀವಾ? ಅವರು ಮಾಡ್ತಾರ ಯೋಚನೆ ಮಾಡಬೇಕಿದೆ. ರೈತರ ಸಾಲಮನ್ನಾ ಆಗಿಲ್ಲ ಅನ್ನೋ ವಿಚಾರವಾಗಿ ಭಾಷಣ ಮಾಡ್ತಾರೆ. ಆದರೆ ಈ ಸಾಲಮನ್ನಾ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ, ನೀತಿ ಸಂಹಿತೆ ಇರುವುದರಿಂದ ಪೂರ್ಣ ಪ್ರಮಾಣದ ಹಣ ಬಿಡುಗಡೆಯಾಗಿಲ್ಲ. ಚುನಾವಣೆ ಹಿನ್ನೆಲೆಯಲ್ಲಿ ಆಯೋಗ ಬಾಕಿ ಹಣ ಬಿಡುಗಡೆ ಮಾಡದಂತೆ ಸೂಚಿಸಿದೆ. ಚುನಾವಣೆ ಬಳಿಕ ಪೂರ್ಣ ಪ್ರಮಾಣದ ಸಾಲ ಮನ್ನಾ ಹಣ ಪಾವತಿಯಾಗಲಿದೆ. ಯಾರಿಗೂ ಈ ವಿಚಾರದಲ್ಲಿ ಅನುಮಾನ ಬೇಡ ಎಂದರು. ಈ ಜಿಲ್ಲೆಯ ಅಭಿವೃದ್ಧಿಯೇ ನಮ್ಮ ಗುರಿ. ನನ್ನ ಆರೋಗ್ಯದ ತೊಂದರೆಯಿಂದ ನಿಖಿಲ್ ಚುನಾವಣೆಗೆ ನಿಲ್ಲಿಸಿದ್ದೇನೆ, ನನ್ನ ಕೆಲಸ ಕಡಿಮೆ ಮಾಡಲು ಇಲ್ಲಿನ ಶಾಸಕರ ತೀರ್ಮಾನದಂತೆ ಅವನ ಸ್ಪರ್ಧೆ ಮಾಡಲಾಗಿದೆಯೇ ವಿನಃ ಬೇರೇನೂ ಇಲ್ಲ. ಆದರೆ ಇದನ್ನೇ ತಪ್ಪಾಗಿ ಬಿಂಬಿಸಲಾ ಗುತ್ತಿದೆ ಎಂದು ತಿಳಿಸಿದರು. ನಮ್ಮ ಪ್ರತಿಸ್ಪರ್ಧಿಯ ಬಣ್ಣದ ಮಾತುಗಳಿಗೆ ಮರುಳಾಗಬೇಡಿ. ಇವತ್ತು ಮಂಡ್ಯ ಜಿಲ್ಲೆಯ ಉದ್ಧಾರ ಮಾಡ್ತೀನಿ ಅಂತಾರೆ.ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅವರು ಎಲ್ಲಿಗೆ ಹೋಗಿದ್ದರು? ಎಂದು ಸುಮಲತಾ ಅಂಬರೀಶ್‍ಗೆ ಟಾಂಗ್ ನೀಡಿದ ಅವರು, ನಾವೇನು ಮಂಡ್ಯ ಜನ ಸ್ವಾಭಿಮಾನ ಎತ್ತಿ ಹಿಡಿಯುವಂಥಾ ಕೆಲಸ ಮಾಡಿಲ್ವಾ? ಎಂದು ಪ್ರಶ್ನಿಸಿದರು.
ನಿಖಿಲ್ ನಿಮ್ಮ ಮಗ: ನಿಖಿಲ್ ಇನ್ನು ಮುಂದೆ ನಿಮ್ಮ ಮಗ. ರೈತರ ಜೊತೆ ನಿಖಿಲ್ ನಿರಂತರವಾಗಿ ಸಂಪರ್ಕದಲ್ಲಿರುತ್ತಾನೆ. ಮಂಡ್ಯ ರೈತರ ಜೊತೆಯಲ್ಲೇ ನಿಖಿಲ್ ಮುಂದಿನ ಜೀವನ ಕಳೆಯುತ್ತಾನೆ, ಆತನಿಗೆ ಆಶೀರ್ವದಿಸಿ ಗೆಲ್ಲಿಸಿ, ನನಗಿಂತಲೂ ನಿಮ್ಮಗಳ ಸೇವೆ ಮಾಡುವ ಕಾಳಜಿ ಆತನಲ್ಲಿದೆ ಎಂದರು.

ನಾವೆಂದೂ ದುಡ್ಡಲ್ಲಿ ರಾಜಕಾರಣ ಮಾಡಿಲ್ಲ: 150ಕೋಟಿ ಆಡಿಯೋ ವೈರಲ್ ವಿಚಾರ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಟಿವಿಯಲ್ಲಿ ಇವತ್ತೊಂದು ಸುದ್ದಿ ಬರ್ತಿದೆಯಂತೆ. 150 ಕೋಟಿ ಜೆಡಿಎಸ್‍ನಿಂದ ಹಂಚಲಾಗುತ್ತಿದೆ ಅನ್ನೋ ಆಡಿಯೋ ಬಿಡಲಾಗಿದೆ ಅಂತಾ ನನಗೀಗ ಗೊತ್ತಾಗಿದೆ. ಇದು ಯಾರೋ ಬೇಕು ಅಂತಾ ಹೇಳಿ ಕೊಂಡಿದ್ದಾರೆ. ನಾವೆಂದೂ ದುಡ್ಡಲ್ಲಿ ರಾಜಕಾರಣ ಮಾಡಿಲ್ಲಾ. ಅದನ್ನೆಲ್ಲ ನಂಬಬೇಡಿ. ಕೀಳುಮಟ್ಟದ ಹೇಳಿಕೆಗಳಿಗೆ ಕಿವಿಗೊಡಬೇಡಿ. ನಿಮ್ಮನ್ನ ನಂಬಿ, ನಿಮ್ಮ ಪ್ರೀತಿ, ವಿಶ್ವಾಸದಿಂದ ರಾಜಕಾರಣ ಮಾಡ್ತಿರೋದು ಎಂದು ಅವರು ತಿಳಿಸಿದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮಾತನಾಡಿ, ರಾಜ್ಯದ ರೈತರ ಬಗ್ಗೆ, ಕಾವೇರಿ ವಿಚಾರದಲ್ಲಿ ಸುದೀರ್ಘ ಹೋರಾಟ ಮಾಡಿದ್ದರೆ ಅದು ಜೆಡಿಎಸ್ ಮಾತ್ರ. ಹೇಮಾವತಿ, ಯಗಚಿ ಜಲಾಶಯ ನಿರ್ಮಾಣಕ್ಕೆ ದೇವೇಗೌಡರು ಕಾರಣ. ಕಾವೇರಿ ನ್ಯಾಯಾಧೀಕರಣದ ವಿರುದ್ಧ ನಿರಂತರ ಹೋರಾಟ ಮಾಡಿದ್ದೇವೆ.ಅದರ ಫಲವಾಗಿ ಇವತ್ತು 2 ಬೆಳೆಗೆ ನೀರು ಕೊಡ್ತಿದ್ದೇವೆ ಎಂದರು. ಇನ್ನು ಮುಂದೆಯೂ ಕಾವೇರಿ ನೀರು,ರೈತರ ಹಿತ ಕಾಪಾಡಲು ಹೋರಾಟ ಮಾಡುವ ಪಕ್ಷವೇನಾದರೂ ಇದ್ದರೆ ಅದು ಜೆಡಿಎಸ್ ಮಾತ್ರ, ಯಾವ ಬಿಜೆಪಿ ನಾಯಕರೂ ಬರೋದಿಲ್ಲ, ಈಗಾಗಲೇ ಸಂಸತ್‍ನಲ್ಲಿ ಬಿಜೆಪಿ ಸಂಸದರು ಎಷ್ಟರ ಮಟ್ಟಿಗೆ ಕಾವೇರಿ ಪರ ಧ್ವನಿ ಎತ್ತಿದ್ದಾರೆ ಅಂತ ನಿಮಗೇ ಗೊತ್ತಿದೆ ಎಂದರು. ರೈತರು, ಕಾವೇರಿ ವಿಚಾರದಲ್ಲಿ ಹೋರಾಟ ಮಾಡಲು ಈ ದೇವೇಗೌಡನಿಗೆ ಶಕ್ತಿ ಬರಬೇಕಾದರೆ ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿ ಸಂಸತ್‍ಗೆ ಕಳುಹಿಸಿಕೊಡಿ ಎಂದು ಅವರು ಮನವಿ ಮಾಡಿದರು. ಕೆಎಂ ದೊಡ್ಡಿಯಲ್ಲಿ ಪ್ರಚಾರದ ವೇಳೆ ಹಿರಿಯ ಕಾಂಗ್ರೆಸ್ ಮುಖಂಡ ಜಿ.ಮಾದೇಗೌಡ, ಸಚಿವ ಡಿ.ಸಿ.ತಮ್ಮಣ್ಣ ಭಾಗಿಯಾಗಿದ್ದರು. ಸಚಿವ ಡಿ.ಸಿ.ತಮ್ಮಣ್ಣ ಪುತ್ರ ಸಂತೋಷ್ ಅಭಿಮಾನಿ ಬಳಗದಿಂದ ಸಿಎಂಗೆ 3 ಲಕ್ಷ ರೂ.ಗಳನ್ನು ದೇಣಿಗೆ ನೀಡಲಾಯಿತು. ಭಾರತೀನಗರ, ಸೋಮನಹಳ್ಳಿ, ಕೆ.ಹೊನ್ನಲಗೆರೆ ಸೇರಿದಂತೆ ಹಲವು ಹಳ್ಳಿಗಳಲ್ಲಿ ಮುಖ್ಯಮಂತ್ರಿಗಳು ರೋಡ್‍ಶೊ ನಡೆಸಿದರು.

Translate »