ಅಧಿಕಾರಕ್ಕೆ ಬಂದರೆ ಬಡತನ ನಿರ್ಮೂಲನೆ…
ಮೈಸೂರು

ಅಧಿಕಾರಕ್ಕೆ ಬಂದರೆ ಬಡತನ ನಿರ್ಮೂಲನೆ…

April 14, 2019

ಕೆ.ಆರ್.ನಗರ: ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ‘ನ್ಯಾಯ್’ ಯೋಜನೆಯಡಿ ಬಡತನ ನಿರ್ಮೂಲನೆ, ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಿ ದೇಶದ ಆರ್ಥಿಕ ವ್ಯವಸ್ಥೆ ಉತ್ತಮಪಡಿಸ ಲಾಗುವುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದರು.

ಕೆ.ಆರ್.ನಗರದ ಕೃಷ್ಣರಾಜ ಕಾಲೇಜು ಆವರಣ ದಲ್ಲಿ ಶನಿವಾರ ನಡೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಮಾವೇಶದಲ್ಲಿ ಮಂಡ್ಯ, ಮೈಸೂರು ಮತ್ತು ಚಾಮ ರಾಜನಗರ ಲೋಕಸಭಾ ಕ್ಷೇತ್ರಗಳ ಮೈತ್ರಿ ಅಭ್ಯರ್ಥಿ ಗಳ ಪರ ಅವರು ಪ್ರಚಾರ ಮಾಡಿದರು. ಮೋದಿ ಅವರು 15 ಲಕ್ಷ ರೂ. ಬ್ಯಾಂಕ್ ಖಾತೆಗೆ ಹಾಕು ವುದಾಗಿ ಸುಳ್ಳು ಹೇಳಿದ್ದಾರೆ. ಆದರೆ ನಾವು ನ್ಯಾಯ್ ಯೋಜನೆ ಮೂಲಕ ದೇಶದ ಶೇ. 20 ರಷ್ಟಿರುವ ಬಡವರಿಗೆ ವರ್ಷಕ್ಕೆ 72 ಸಾವಿರದಂತೆ 5 ವರ್ಷ ಗಳಲ್ಲಿ ಒಟ್ಟು 3.60ಲಕ್ಷ ರೂ. ನೀಡಲಾಗುವುದು. ಬಡವರಿಗೆ ಹಣ ದೊರೆತಾಗ ಸಹಜವಾಗಿಯೇ ಖರೀದಿಗಳು ಹೆಚ್ಚುತ್ತವೆ. ಇದರಿಂದಾಗಿ ಸಣ್ಣ ಉದ್ದಿಮೆ ಗಳು ಪುನಶ್ಚೇತನಗೊಂಡು ದೇಶದ ಆರ್ಥಿಕ ವ್ಯವಸ್ಥೆ ಉತ್ತಮವಾಗಲಿದೆ ಎಂದರು. 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಮೋದಿ, ಅದನ್ನು ಈಡೇರಿಸಿಲ್ಲ. ಆದರೆ ನಾವು ಯಾವುದು ಸಾಧ್ಯವೋ ಅದನ್ನೇ ಹೇಳುತ್ತೇವೆ. ಹೇಳಿದಂತೆ ಮಾಡುತ್ತೇವೆ ಎಂದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ 22 ಲಕ್ಷ ಹುದ್ದೆಗಳು ಖಾಲಿ ಇವೆ.
ಅದನ್ನು ಒಂದು ವರ್ಷದಲ್ಲಿ ಭರ್ತಿ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲಾಗುವುದು. ಪಂಚಾಯಿತಿ ಮಟ್ಟದಲ್ಲಿ 10 ಲಕ್ಷ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದರು. ಅಲ್ಲದೇ ನಾನು ಸುಳ್ಳು ಹೇಳುವ ವ್ಯಕ್ತಿಯಲ್ಲ. ನೀವು ಸುಳ್ಳು ಕೇಳಲು ಇಚ್ಛಿಸಿದರೆ ಮೋದಿ ಭಾಷಣ ಕೇಳಿ. ಸತ್ಯ ಕೇಳಬೇಕಾದರೆ, ನಮ್ಮ ಬಳಿಗೆ ಬನ್ನಿ ಎಂದರು.

ಈ ಚುನಾವಣೆಯು ನ್ಯಾಯ-ಅನ್ಯಾಯ, ಸತ್ಯ-ಅಸತ್ಯದ ನಡುವೆ ನಡೆಯುತ್ತಿರುವ ಹೋರಾಟವಾಗಿದೆ. ಅದರಲ್ಲಿ ನಾವು ಸತ್ಯದ ಪರವಿದ್ದೇವೆ. ತನ್ನನ್ನು ಚೌಕೀದಾರ್ ಎಂದು ಹೇಳಿಕೊಳ್ಳುತ್ತಿರುವ ಪ್ರಧಾನಿ ಮೋದಿ ರೈತರ ಹಾಗೂ ನಿರುದ್ಯೋಗಿ ಯುವಕರ ಮುಂದೆ ಕಾಣಿಸುವುದಿಲ್ಲ. ಅವರೇನಿದ್ದರೂ ಅಂಬಾನಿ, ಅದಾನಿ ಮುಂತಾದ ದೊಡ್ಡ ಶ್ರೀಮಂತರ ಮನೆ ಮುಂದೆ ಕಾಣಿಸಿಕೊಳ್ಳುತ್ತಾರೆ. ಅವರು, ದೇಶದ ಎಲ್ಲಾ ಚೌಕೀದಾರರ ಹೆಸರು ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು.

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಬಡಜನರ ಸಹಾಯಕ್ಕೆ ನಿಂತಿದೆ. ಈ ಸರ್ಕಾರವು ಈಗಾಗಲೇ 11 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ಇದರಿಂದಾಗಿ ಕೋಟ್ಯಾಂತರ ರೈತರಿಗೆ ಅನುಕೂಲವಾಗಿದೆ ಎಂದ ಅವರು, ಸಾಲ ಮನ್ನಾ, ರೈತರ ಬೆಳೆಗೆ ಬೆಂಬಲ ಬೆಲೆ ಎಂದೆಲ್ಲಾ ಹೇಳಿದ್ದ ಪ್ರಧಾನಿ ಮೋದಿ, ಸಾಲ ಮನ್ನಾ ಮಾಡಿಲ್ಲ. ರೈತರು ಪಾವತಿಸಿದ ಬೆಳೆ ವಿಮೆ ಹಣ ಮಲ್ಟಿನ್ಯಾಷನಲ್ ಕಂಪನಿಗಳ ಪಾಲಾಗುತ್ತಿದೆ ಎಂದು ಕಿಡಿಕಾರಿದ ರಾಹುಲ್, ದೇಶದ ಅಭಿವೃದ್ಧಿಗಾಗಿ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಬದಿಗಿಟ್ಟು, ಕರ್ನಾಟಕದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿಗಳನ್ನು ಹಾಗೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಸಮಾವೇಶದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ವಾಗತಿಸಿ, ರಾಹುಲ್ ಗಾಂಧಿಯವರ ಭಾಷಣವನ್ನು ತರ್ಜುಮೆ ಮಾಡಿದರು.

ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು, ಮಾಜಿ ಸಚಿವರಾದ ಹೆಚ್.ಕೆ. ಪಾಟೀಲ್, ಡಾ. ಹೆಚ್.ಸಿ. ಮಹದೇವಪ್ಪ, ಶಾಸಕರಾದ ಅನಿಲ್ ಚಿಕ್ಕಮಾದು, ಕೆ. ಮಹದೇವ, ವಿಧಾನ ಪರಿಷತ್ ಸದಸ್ಯ ಧರ್ಮಸೇನಾ, ಮಾಜಿ ಶಾಸಕರಾದ ಕೆ. ವೆಂಕಟೇಶ್, ಹೆಚ್.ಪಿ. ಮಂಜುನಾಥ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಎಐಸಿಸಿ ಕಾರ್ಯದರ್ಶಿ ಟಿ. ವಿಷ್ಣುನಾಥ್, ಎಐಸಿಸಿ ವಕ್ತಾರೆ ಐಶ್ವರ್ಯಾ ಮಹದೇವ, ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಕೆಪಿಸಿಸಿ ಸದಸ್ಯ ದೊಡ್ಡಸ್ವಾಮೇಗೌಡ, ಜಿ.ಪಂ. ಸದಸ್ಯ ಡಿ. ರವಿಶಂಕರ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ಇನ್ನಿತರರಿದ್ದರು.

20ರಲ್ಲಿ ಗೆದ್ದರೆ ನನ್ನ, ಸಿದ್ದರಾಮಯ್ಯ ವ್ಯಕ್ತಿತ್ವ ಉಳಿಯುತ್ತದೆ
ಕೆ.ಆರ್.ನಗರ: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳು ಆಯ್ಕೆಯಾದರೆ ಮಾತ್ರ ನನ್ನ ಮತ್ತು ಸಿದ್ದರಾಮಯ್ಯ ಅವರ ವ್ಯಕ್ತಿತ್ವ ಉಳಿಯುತ್ತದೆ ಎಂದು ಹೇಳಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಂಡು ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು. ಇಲ್ಲಿನ ಕೃಷ್ಣರಾಜೇಂದ್ರ ಕಾಲೇಜು ಮೈದಾನದಲ್ಲಿ ನಡೆದ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳ ಮೈತ್ರಿ ಅಭ್ಯರ್ಥಿಗಳ ಪರ ನಡೆದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಈ ಚುನಾವಣೆ ಒಂದು ಅಗ್ನಿಪರೀಕ್ಷೆಯಾಗಿದೆ. ಪ್ರಧಾನಿ ಮೋದಿ ದೇಶದ ವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿದ್ದಾರೆ. ಅವರು, ಮತ್ತೆ ಪ್ರಧಾನಿಯಾದರೆ, ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಹಾಳು ಮಾಡುವ ಅಪಾಯವಿದೆ. ಆದ್ದರಿಂದ ಸ್ವಲ್ಪ ಕಾಲ ಬೇರೆ ಬೇರೆಯಾಗಿದ್ದ ನಾನು ಮತ್ತು ಸಿದ್ದರಾಮಯ್ಯ ಒಟ್ಟಾಗಿದ್ದೇವೆ. ನಾವಿಬ್ಬರೂ ಒಂದಾಗಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಿದಾಗ ಮಾತ್ರ ನಮ್ಮ ವ್ಯಕ್ತಿತ್ವ ಉಳಿಯುತ್ತದೆ ಎಂದರು. ಏನೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಮರೆತು ದೇಶದ ಹಿತದೃಷ್ಟಿಯಿಂದ ಜೆಡಿಎಸ್ ಅಭ್ಯರ್ಥಿ ನಿಖಿಲ್, ಕಾಂಗ್ರೆಸ್‍ನ ಸಿ.ಹೆಚ್. ವಿಜಯಶಂಕರ್ ಮತ್ತು ಆರ್. ಧ್ರುವನಾರಾಯಣ್ ಅವರನ್ನು ಅತೀ ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯು ಈಗ ಪಕ್ಷೇತರರಾಗಿ ಉಳಿದಿಲ್ಲ. ಅವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದು, ಕೋಮುವಾದಿ ಬಿಜೆಪಿಯನ್ನು ಬೆಂಬಲಿಸಿರುವ ಪಕ್ಷೇತರ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ನಿಖಿಲ್ ಅವರಿಗೆ ಕೆ.ಆರ್.ನಗರ ಕ್ಷೇತ್ರದಲ್ಲಿ ಎರಡು ಪಕ್ಷದ ಕಾರ್ಯಕರ್ತರು 50 ಸಾವಿರ ಮತಗಳ ಲೀಡ್ ನೀಡಬೇಕೆಂದು ಮನವಿ ಮಾಡಿದರು.

ಈ ದೇಶದ ಉಳಿವಿಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ವರಿಷ್ಠರು ಹೊಂದಾಣಿಕೆ ಮಾಡಿಕೊಂಡಿದ್ದು, ಸ್ಥಳೀಯ ಮಟ್ಟದಲ್ಲಿಯೂ ಎರಡು ಪಕ್ಷದ ಕಾರ್ಯಕರ್ತರಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ನಾಯಕರು ಮತ್ತು ದೇಶದ ಹಿತದೃಷ್ಟಿಯಿಂದ ವೈಮನಸ್ಸನ್ನು ಬಿಟ್ಟು ಮೈತ್ರಿ ಪಕ್ಷದ ಅಭ್ಯರ್ಥಿಗಳಾದ ಮಂಡ್ಯ ಲೋಕಸಭಾ ಕ್ಷೇತ್ರದ ನಿಖಿಲ್ ಕುಮಾರಸ್ವಾಮಿ ಮತ್ತು ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ವಿಜಯಶಂಕರ್ ಹಾಗೂ ಚಾಮರಾಜ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಧೃವನಾರಾಯಣ್ ಅವರನ್ನು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು.

ಬರಿ ಸುಳ್ಳು ಭರವಸೆಗಳನ್ನು ನೀಡುತ್ತಾ ರೈತರು ಬಡವರು ಕಾರ್ಮಿಕರಿಗೆ ಮೋಸ ಮಾಡುತ್ತಿರುವ ಕೋಮವಾದಿಗಳನ್ನು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಲು ಬಿಜೆಪಿ ಮುದ್ರಣ ಮಾಧ್ಯಮ ಮತ್ತು ದೃಶ್ಯ ಮಾಧ್ಯಮವನ್ನು ಬಳಸಿಕೊಂಡು ಇಂಡಿಯಾ ಅಲ್ಲ ಮಂಡ್ಯ ಎಂಬುದಾಗಿ ಬಿಂಬಿಸುತ್ತಿದ್ದು, ಏನಾದರು ಸರಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಆದಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಅವಕಾಶ ಕೊಡದೆ. ಮೈತ್ರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರ ಮೂಲಕ ಬಿಜೆಪಿಗೆ ತಕ್ಕ ಉತ್ತರ ನೀಡಿ ಎಂದು ಕರೆ ನೀಡಿದರು.

ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ತಮ್ಮ ಐದು ವರ್ಷದ ಅವಧಿಯಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷದವರಿಗೆ ಉತ್ತರ ನೀಡದೆ ವಿದೇಶ ಸುತ್ತುವುದರಲ್ಲಿಯೇ ಕಾಲ ಕಳೆದ ಪ್ರಧಾನಮಂತ್ರಿ ದೇಶದ ಅಭಿವೃದ್ದಿಯ ಬಗ್ಗೆ ನನ್ನ ಪ್ರಶ್ನೆಗೆ ಉತ್ತರ ನೀಡಲಿಲ್ಲ ಇವರು ದೇಶವನ್ನು ಅಭಿವೃದ್ದಿ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ದೇವೇಗೌಡರಾಗಲೀ, ಕುಮಾರಸ್ವಾಮಿಯರಾಗಲೀ ನಮಗೆ ಅಧಿಕಾರ ನೀಡಿ ಎಂದು ಕೇಳಿರಲಿಲ್ಲ. ಆದರೆ ನಮ್ಮ ರಾಷ್ಟ್ರಧ್ಯಕ್ಷರಾದ ರಾಹುಲ್ ಗಾಂಧಿ ಮತ್ತು ಸೋನಿಯ ಗಾಂಧಿ ಆದೇಶದ ಮೇರೆಗೆ ನಾವೇ ಒತ್ತಾಯ ಮಾಡಿ ರಾಜ್ಯದಲ್ಲಿ ಕೋಮುವಾದಿಗಳು ಅಧಿಕಾರಕ್ಕೆ ಬರುವುದನ್ನು ತಡೆಯಲು ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದೇವೆ. ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡಿದ್ದೇವೆ ಎಂದರು.

Translate »