ಸರ್ಕಾರಿ ಸೇವೆಗಳನ್ನು ಮನೆಗೇ ತಲುಪಿಸುವ ವಿನೂತನ ಯೋಜನೆ ‘ಜನಸೇವಕ’
ಮೈಸೂರು

ಸರ್ಕಾರಿ ಸೇವೆಗಳನ್ನು ಮನೆಗೇ ತಲುಪಿಸುವ ವಿನೂತನ ಯೋಜನೆ ‘ಜನಸೇವಕ’

October 15, 2019

ಬೆಂಗಳೂರು, ಅ.14- ಸಾರ್ವಜನಿಕರಿಗೆ ಸರಕಾರಿ ಸೇವೆಗಳು ಸುಲಭವಾಗಿ ಸಿಗಲಿ ಎಂಬ ಉದ್ದೇಶದಿಂದ ‘ಸಕಾಲ’ ಯೋಜನೆಯಡಿಯಲ್ಲಿ ‘ಜನಸೇವಕ’ ಎಂಬ ವಿನೂತನ ಯೋಜನೆಯನ್ನು ಪೀಣ್ಯದ ದಾಸರಹಳ್ಳಿಯಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಕಡೆ ಅದನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಸರಕಾರಿ ಕಚೇರಿಗೆ ಅಲೆದಾಡುವುದು, ಕಚೇರಿಯಲ್ಲಿ ಸರದಿ ಸಾಲಿನಲ್ಲಿ ನಿಲ್ಲುವುದು ಮತ್ತು ಮಧ್ಯವರ್ತಿಗಳ ಕಾಟ ತಪ್ಪಿಸಲು ಈ ಯೋಜನೆ ಜಾರಿಗೆ ತರಲಾಗಿದ್ದು, ಸರಕಾರ ನಿಯೋಜಿಸಿರುವ ಜನಸೇವಕರು ಸಾರ್ವ ಜನಿಕರಿಗೆ ಬೇಕಾಗುವ ಸರಕಾರಿ ಸೇವೆಗಳನ್ನು ಮನೆಗೇ ತಲುಪಿಸುವ ಯೋಜನೆ ಇದಾಗಿದೆ ಎಂದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ಗಳು, ಹೆಚ್ಚುವರಿ ನಗರ ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಉಪತಹ ಶೀಲ್ದಾರ್ ಅವರೊಂದಿಗೆ ಸಕಾಲ ಸೇವೆಗಳ ಪರಿಶೀಲನಾ ಸಭೆಯ ನಂತರ, ನಗರ ಜಿಲ್ಲೆ ಸೇರಿದಂತೆ ಬಿಬಿಎಂಪಿಯಲ್ಲೂ ಸಕಾಲ ಸೇವೆಗಳ ಸಮರ್ಪಕ ಅನುಷ್ಠಾನ ತೃಪ್ತಿದಾಯಕವಾಗಿಲ್ಲ. ಬೆಂಗಳೂರು ನಗರ ಜಿಲ್ಲೆ 30ನೇ ಸ್ಥಾನದಲ್ಲಿದ್ದು, ಸಕಾಲ ಸೇವೆಗಳ ವಿಲೇವಾರಿಯನ್ನು ಚುರುಕುಗೊಳಿಸಿ ನವೆಂಬರ್ ವೇಳೆಗೆ 10ನೇ ಸ್ಥಾನಕ್ಕೆ ತಲುಪಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿರುವುದಾಗಿ ತಿಳಿಸಿದರು. ಅಧಿಕಾರಿ ಗಳಿಗೆ ಸಕಾಲ ಸೇವೆಯ ಬಗ್ಗೆ ತಿಳುವಳಿಕೆ ಇಲ್ಲ.

ಹಾಗಾಗಿ ಈ ತಿಂಗಳ 20ರೊಳಗೆ ನಗರ ಜಿಲ್ಲೆಯ ಅಧಿಕಾರಿಗಳನ್ನೊಳಗೊಂಡಂತೆ ಸಕಾಲ ಕುರಿತಂತೆ ಕಾರ್ಯಾಗಾರ ನಡೆಸಲಾಗುವುದು. ಬೆಂಗಳೂರು ನಗರ ಜಿಲ್ಲೆ ಬಿಬಿಎಂಪಿ, ಬಿಡಿಎ, ಬೆಸ್ಕಾಂ, ಬಿಎಂಟಿಸಿ, ಜಲಮಂಡಳಿ ಕಚೇರಿಗಳಲ್ಲಿ ಸಕಾಲ ಕಾರ್ಯದ ಪ್ರಗತಿ ಬಗ್ಗೆ ಆಗಾಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸುವಂತೆ ಪ್ರಾದೇಶಿಕ ಆಯುಕ್ತ ಡಾ. ಹರ್ಷ ಗುಪ್ತಾ ಅವರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ನಗರ ಜಿಲ್ಲೆಯಲ್ಲಿ ಸಕಾಲದ ಅರ್ಜಿಗಳ ಸ್ವೀಕಾರ ನಿರಂತರವಾಗಿ ಕಡಿಮೆಯಾಗುತ್ತಿದೆ. ಇದಕ್ಕೆ ಮಧ್ಯವರ್ತಿಗಳ ಪ್ರವೇಶವೇ ಕಾರಣ. ಸಕಾಲ ವ್ಯವಸ್ಥೆಯನ್ನು ಭ್ರಷ್ಟಾಚಾರವನ್ನಾಗಿಸಿದೆ. ಇನ್ನು ಮುಂದೆ ಈ ರೀತಿಯ ಭ್ರಷ್ಟಾಚಾರ ನಡೆಯುವುದಿಲ್ಲ. ಸಕಾಲ ಯೋಜನೆಯಡಿ 15 ದಿನದೊಳಗಾಗಿ ಸೇವೆ ಸಿಗಬೇಕು. ಆದರೆ 14ನೇ ದಿನ ಅರ್ಜಿಯಲ್ಲಿ ದಾಖಲಾತಿಗಳು ಇಲ್ಲವೆಂಬ ಕಾರಣಕ್ಕಾಗಿ ತಿರಸ್ಕೃತಗೊಳಿಸಲಾಗುತ್ತಿದೆ. ಈಗ ಅರ್ಜಿ ಪಡೆಯುವಾಗಲೇ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳು ಇದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತ ಡಾ. ಹರ್ಷಗುಪ್ತಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜು ಚಾವ್ಲಾ, ನಗರ ಜಿಲ್ಲಾಧಿಕಾರಿ ಶಿವಮೂರ್ತಿ, ಸಕಲ ಮಿಷನ್‍ನ ಕಾರ್ಯಕಾರಿ ನಿರ್ದೇಶಕ ವರಪ್ರಸಾದ್ ರೆಡ್ಡಿ ಇದ್ದರು.

ಬೆಂಗಳೂರಿಗೆ ಕೊನೆ ಸ್ಥಾನ…: ರಾಜ್ಯದಲ್ಲಿ ಸಕಾಲ ಸೇವೆಗಳ ಯೋಜನೆ ಅನು ಷ್ಠಾನದಲ್ಲಿ ಬೆಂಗಳೂರು ನಗರ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ. ನಾಗರಿಕರಿಗೆ ಸಕಾಲ ದಲ್ಲಿ ಸೇವೆಗಳನ್ನು ಒದಗಿಸಲು ಬೆಂಗಳೂರು ವಿಫಲವಾಗಿದ್ದು 30ನೇ ಸ್ಥಾನದಲ್ಲಿ ಇದೆ.

Translate »