ಉದ್ದೇಶಿತ ಪ್ರತಿಷ್ಠಿತ ಬಲ್ಲಹಳ್ಳಿ ಬಡಾವಣೆಗೆ ಎಳ್ಳು-ನೀರು
ಮೈಸೂರು

ಉದ್ದೇಶಿತ ಪ್ರತಿಷ್ಠಿತ ಬಲ್ಲಹಳ್ಳಿ ಬಡಾವಣೆಗೆ ಎಳ್ಳು-ನೀರು

October 15, 2019

ಮೈಸೂರು,ಅ.14(ಆರ್‍ಕೆ)- ಭೂಮಿ ನೀಡಲು ರೈತರು ನಿರಾಕರಿಸಿರುವುದರಿಂದ ಮಹತ್ವಾಕಾಂ ಕ್ಷೆಯ ಬಲ್ಲಹಳ್ಳಿ ವಸತಿ ಬಡಾವಣೆ ಯೋಜನೆ ಮೂಲೆಗುಂಪಾಗುವುದು ಖಚಿತವಾಗಿದೆ. ಯೋಜ ನೆಯ ಅನುಕೂಲ, ಭವಿಷ್ಯದ ಸೌಲಭ್ಯಗಳು, ಸುತ್ತ ಮುತ್ತಲಿನ ಗ್ರಾಮಗಳಿಗೆ ಸಿಗುತ್ತಿದ್ದ ಸಂಪರ್ಕ ವ್ಯವಸ್ಥೆ, ವೈಯಕ್ತಿಕವಾಗಿ ಭೂ ಮಾಲೀಕರಿಗೆ ಆಗುತ್ತಿದ್ದ ಆರ್ಥಿಕ ಲಾಭ ಇತ್ಯಾದಿ ಅಂಶಗಳನ್ನು ತಿಳಿಸಿ ಮನವರಿಕೆ ಮಾಡದೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ರೈತರ ಆಕ್ರೋಶಕ್ಕೆ ಕಾರಣ ಎಂಬುದು ಇಂದು ನಡೆದ ಸಭೆಯಲ್ಲಿ ಮುಡಾ ಅಧಿಕಾರಿಗಳು ಹಾಗೂ ಸದಸ್ಯರುಗಳಿಗೆ ಮನವರಿಕೆಯಾಯಿತು.

ವಸತಿ ಬಡಾವಣೆ ನಿರ್ಮಿಸಲು 2012ರಲ್ಲೇ ಮುಡಾ ನಿರ್ಣಯಿಸಿ 2016ರ ಸೆಪ್ಟೆಂಬರ್ 28ರಂದೇ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ ಅಧಿನಿಯಮ 1987ರ ಕಲಂ 17(1)ರ ಪ್ರಕಾರ ಮೈಸೂರು ತಾಲೂಕು, ಜಯಪುರ ಹೋಬಳಿ ಬಲ್ಲ ಹಳ್ಳಿ ಗ್ರಾಮದ 381.1 ಎಕರೆಯನ್ನು ವಸತಿ ಯೋಜನೆ ಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವು ಭೂ ಸ್ವಾಧೀನಪಡಿಸಿಕೊಳ್ಳಲು ಪ್ರಾಥ ಮಿಕ ಅಧಿಸೂಚನೆ ಹೊರಡಿಸಿತ್ತು. ಆದರೆ ತಕ್ಷ ಣವೇ ಆ ಜಮೀನುಗಳ ಖಾತೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಿಯಾಗಿ ಮನವರಿಕೆ ಮಾಡಿ ಒಪ್ಪಿಗೆ ಪತ್ರ ಪಡೆದು, ಬಡಾವಣೆ ನಿರ್ಮಿಸುವ ಪ್ರಕ್ರಿಯೆ ಆರಂಭಿಸಿದ್ದರೆ, ಶೀಘ್ರ ಯೋಜನೆ ಅನು ಷ್ಠಾನಗೊಳ್ಳುತ್ತಿತ್ತು. ಆಗ ಉಳಿದವರೂ ಸಹ ಜಮೀನು ನೀಡಲು ಮುಂದೆ ಬರುತ್ತಿದ್ದರು.

ಪ್ರಾಥಮಿಕ ಅಧಿಸೂಚನೆ ಮಾಡಿರುವುದರಿಂದ ಮುಡಾದವರೂ ಬಡಾವಣೆ ಮಾಡಲಿಲ್ಲ. ಇತ್ತ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ, ಮದುವೆ, ಇನ್ನಿತರ ಅನಿ ವಾರ್ಯತೆ ಬಂದಾಗ ಅಲ್ಪಸ್ವಲ್ಪ ಜಮೀನು ಮಾರಿ ಕೊಳ್ಳಲು ಅಡ್ಡಿಯಾಗಿದ್ದು, ರೈತರು, ಮುಡಾ ವಿರುದ್ಧ ತಿರುಗಿ ಬೀಳಲು ಕಾರಣವಾಯಿತು ಎಂಬ ಆರೋಪ ಗಳು ಕೇಳಿ ಬರುತ್ತಿವೆ. ಈ ಹಿಂದೆಯೇ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯಲ್ಲಿ ವಸತಿ ಯೋಜನೆ ಯನ್ನೂ ಮಾಡದ ಪ್ರಾಧಿಕಾರ, ಭೂ ಮಾಲೀಕರಿಗೆ ಪರಿಹಾರವನ್ನೂ ನೀಡದೇ ಸತಾಯಿಸುತ್ತಿರುವುದ ರಿಂದ ಬೇಸತ್ತಿರುವ ರೈತರಿಗೆ ತಮ್ಮ ಭೂಮಿ ನೀಡಿ ದರೆ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು ಎಂಬ ಕಹಿ ಅನುಭವವಾಗಿರುವುದರಿಂದ ಖಾತೆದಾರರು ಮುಡಾಗೆ ಜಮೀನು ನೀಡಲು ಹಿಂಜರಿಯುತ್ತಿದ್ದಾರೆ. ಭೂಮಿ ಕೊಟ್ಟು ಪರಿಹಾರ ಪಡೆಯಲು ವರ್ಷ ಗಟ್ಟಲೆ ಅಲೆಸುವುದಲ್ಲದೆ ಲಂಚ ಕೊಡಬೇಕು. ಕೆಲ ವೊಮ್ಮೆ ನ್ಯಾಯಾಲಯಗಳಲ್ಲಿ ದಾವೆ ಹೂಡಿ ಹೋರಾಡ ಬೇಕು, ಖರ್ಚು-ವೆಚ್ಚದ ಜೊತೆಗೆ ಸಮಯ ವ್ಯರ್ಥ ವಾಗುತ್ತದೆ, ನ್ಯಾಯಾಲಯಕ್ಕೆ ಅಲೆದು ಸಾಕಾಗಿ ಕೆಲವರು ಕಾಲವಾಗಿದ್ದಾರೆ, ಇನ್ನೂ ಕೆಲವರು ತಮ್ಮ ಭೂಮಿ ಕಳೆದುಕೊಂಡು ಬೀದಿ ಪಾಲಾಗಿರುವ ನಿದರ್ಶನಗಳು ಕಣ್ಣೆದುರೇ ಇರುವುದರಿಂದ ಮುಡಾ ಬಗ್ಗೆ ರೈತರಿಗೆ ವಿಶ್ವಾಸವಿಲ್ಲದಂತಾಗಿದೆ. ಸುಮಾರು 5,000 ನಿವೇಶನ ರಚಿಸಲುದ್ದೇಶಿಸಿರುವ ಬಲ್ಲ ಹಳ್ಳಿ ಬಡಾವಣೆ ಯೋಜನೆಯೂ ಇದೀಗ ರೈತರ ಆಕ್ಷೇಪದಿಂದಾಗಿ ನೆನೆಗುದಿಗೆ ಬಿದ್ದಂತಾಗಿದ್ದು, ಭೂಮಿಯೇ ಇಲ್ಲದಿರುವುದರಿಂದ ಮುಡಾ ಕೇವಲ ಖಾಸಗಿ ಗೃಹ ನಿರ್ಮಾಣ ಸಹಕಾರ ಸಂಘಗಳು, ಡೆವಲಪರ್‍ಗಳಿಗೆ ಬಡಾವಣೆ ನಕ್ಷೆ ಅನುಮೋ ದನೆ, ನಿವೇಶನ ಬಿಡುಗಡೆ, ಎನ್‍ಓಸಿ ನೀಡುವಂ ತಹ ಕೆಲಸ ಮಾಡಬೇಕೇ ಹೊರತು, ತನ್ನ ಮೂಲ ಉದ್ದೇಶ ಸಾಕಾರಗೊಳಿಸಲು ಸಾಧ್ಯವಾಗುವುದಿಲ್ಲ.

ಭೂಮಿ ನೀಡಲು ರೈತರ ನಕಾರ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ಮೈಸೂ ರಿನ ಮಾನಸಗಂಗೋತ್ರಿಯಲ್ಲಿರುವ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ಇಂದು ರೈತರಿಗೆ ಸಭೆಯಲ್ಲಿ ಬಲ್ಲಹಳ್ಳಿ ಬಡಾವಣೆಗೆ ಜಮೀನು ನೀಡಲು ಖಡಾ ಖಂಡಿತ ನಿರಾಕರಿಸಿದ ಭೂಮಾಲೀಕರು, ಸರ್ಕಾರದಿಂದ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯನ್ನು ರದ್ದುಗೊಳಿಸಿ, ಡಿನೋಟಿಫಿಕೇಷನ್ ಮಾಡುವಂತೆ ಪಟ್ಟು ಹಿಡಿದರು. ಬೆಳಿಗ್ಗೆ 11.45ರಿಂದ ಮಧ್ಯಾಹ್ನ 1.45 ಗಂಟೆವರೆಗೆ ನಡೆದ ರೈತರೊಂದಿಗಿನ ಸಭೆ ಸಂಪೂರ್ಣ ವಿಫಲವಾ ಗಿದ್ದು, ರೈತ ಮುಖಂಡರು, ಭೂ ಮಾಲೀಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುಡಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತೀವ್ರ ಮುಜುಗರಕ್ಕೊಳಗಾಗಿ ಮರು ಮಾತನಾಡದೇ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ತೆರಳಬೇಕಾಯಿತು.

ಈ ಹಿಂದೆ ಉದ್ದೇಶಿತ ಮೈಸೂರು ತಾಲೂಕು, ಬಲ್ಲಹಳ್ಳಿ ಗ್ರಾಮದಲ್ಲೇ ಮುಡಾ ಅಧಿಕಾರಿಗಳು ಏರ್ಪಡಿಸಿದ್ದ ಸಭೆಯಲ್ಲಿ ಭೂಮಿ ನೀಡಲು ಒಪ್ಪದ ರೈತರು ಆಗಮಿಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಅಸಮಾಧಾನಗೊಂಡ ಅಂದಿನ ಮೈತ್ರಿ ಸರ್ಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರು, ಮೈಕ್ ಎಸೆದು ವೇದಿಕೆಯಿಂದ ನಿರ್ಗಮಿಸಿದ್ದರು.

ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರ ಸಮ್ಮತಿ ಪಡೆಯುವಲ್ಲಿ ವಿಫಲರಾದ ಮುಡಾ ಅಧಿಕಾರಿಗಳು, 2ನೇ ಬಾರಿಯೂ ಬಲ್ಲಹಳ್ಳಿ ವಸತಿ ಯೋಜನೆ ಸಂಬಂಧ ಜನ ಪ್ರತಿನಿಧಿಗಳು ಮುಖಭಂಗ ಅನುಭವಿಸುವಂತಾಯಿತು. ಸಭೆಯ ಆರಂಭದಲ್ಲಿ ಮಾತನಾಡಿದ ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ಬಲ್ಲಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ವಸತಿ ಬಡಾವಣೆ ನಿರ್ಮಿಸಲು ಪ್ರಾಧಿಕಾರವು 2012ರಲ್ಲಿ ನಿರ್ಣಯ ಕೈಗೊಂಡಿದ್ದು, 2015ರಲ್ಲಿ ಸರ್ಕಾರ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿತು.

ಗೋಮಾಳವಾದ್ದರಿಂದ ಬಲ್ಲಹಳ್ಳಿ ಸರ್ವೆ ನಂಬರ್ 24ರ ಜಮೀನನ್ನು ಹೊರತುಪಡಿಸಿ ಉಳಿದ 484.26 ಎಕರೆಯಲ್ಲಿ ಬಡಾವಣೆ ನಿರ್ಮಿಸಲು ಸರ್ಕಾರ ಅನುಮತಿ ನೀಡಿದ ನಂತರ ಪ್ರಾಧಿಕಾರವು 2016ರ ಜೂನ್ 24ರಂದು 384.1 ಎಕರೆ ಪ್ರದೇಶಕ್ಕೆ 4, ರೀತ್ಯಾ ಪ್ರಾಥಮಿಕ ಅಧಿಸೂಚನೆ ಹೊರಡಿಸಿತು ಎಂದು ಕಾಂತರಾಜ್ ಪ್ರಸ್ತಾವನೆಯಲ್ಲಿ ತಿಳಿಸಿದರು. 2009ರಲ್ಲಿ 40:60ರ ಅನುಪಾತದಂತೆ ಭೂಮಿ ಪಡೆಯಬೇಕೆಂದು ನಿರ್ಧರಿಸಲಾಗಿತ್ತಾದರೂ, ಭೂಮಾಲೀಕರು ಒಪ್ಪದ ಕಾರಣ, 2015ರಲ್ಲಿ 50:50 ಅನುಪಾತದಲ್ಲಿ ಹಂಚಿಕೆಗೂ ಮುಡಾ ಒಪ್ಪಿಗೆ ಸೂಚಿಸಿತ್ತಾದರೂ, ಹಲವು ಸಭೆಗಳನ್ನೂ ನಡೆಸಿದಾಗಲೂ ಜಮೀನು ನೀಡಲು ಹಿಂಜರಿಯುತ್ತಿರುವ ಕಾರಣ ಇಂದು ಮತ್ತೆ ಸಭೆ ಕರೆದಿರುವುದಾಗಿ ಕಾಂತರಾಜ ವಿವರಿಸಿದರು.

1 ಎಕರೆಯ 42,648 ಚದರಡಿ ಭೂಮಿಯಲ್ಲಿ ಬಡಾವಣೆ ಅಭಿವೃದ್ಧಿ ಪಡಿಸಿದರೆ 21,000 ಚದರಡಿ ಉಪಭೋಗದ ವಸತಿ ನಿವೇಶನ ಲಭ್ಯವಾಗುತ್ತದೆ. ಅದರಲ್ಲಿ 50:50ರ ಅನುಪಾತದಡಿ ಜಮೀನು ಮಾಲೀಕರಿಗೆ 10,000 ಚದರಡಿ ನೀಡಲಾಗುವುದು. ಅಲ್ಲದೆ ಅವರ ಜಮೀನಿನಲ್ಲಿ ಬೋರ್‍ವೆಲ್, ಮನೆ, ಪಂಪ್‍ಸೆಟ್, ಮರಗಳಿದ್ದಲ್ಲಿ ಪ್ರತ್ಯೇಕ ಪರಿಹಾರ ನೀಡುವ ಜೊತೆಗೆ ಆರಂಭದಲ್ಲಿ ಒಂದು ಎಕರೆಗೆ 5 ಲಕ್ಷ ರೂ.ಗಳನ್ನು ಮುಂಗಡವಾಗಿ ನೀಡಿ ಅದನ್ನು ನಿವೇಶನ ನೀಡುವಾಗ ಕಟಾಯಿಸಿಕೊಳ್ಳಲಾಗುವುದು ಎಂದೂ ಆಯುಕ್ತರು ವಿವರಿಸಿ, ಇದರಿಂದ ರೈತರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.

ತೀವ್ರ ತರಾಟೆ: ನಂತರ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ.ಗುರುಪ್ರಸಾದ, ರೈತರ ಅಭಿಪ್ರಾಯ, ಒಪ್ಪಿಗೆ ಪಡೆಯದೆ ಏಕಪಕ್ಷೀಯ ವಾಗಿ ನೀವು ಜಮೀನಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದೇಕೆ?, ಈ ಹಿಂದೆ ಭೂಸ್ವಾಧೀನ ಮಾಡಿರುವುದಕ್ಕೆ ಪ್ರಾಧಿಕಾರವು ಬಡ್ಡಿ ಸೇರಿ 129 ಕೋಟಿ ರೂ. ಪರಿಹಾರ ನೀಡಬೇಕು, ಅದನ್ನು ರೈತರಿಗೆ ನೀಡದೆ 406 ಕೋಟಿ ರೂ. ಕಾಮಗಾರಿಗಳಿಗೆ ಹಣ ನೀಡಿದ್ದು ಹೇಗೆ? ಎಂದು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

1985ರಿಂದಲೂ ಮೈಸೂರು ಹೊರವಲಯದ ಹಲವೆಡೆ 4 ನೋಟಿಫಿಕೇಷನ್ ಮಾಡಿದ ನಂತರ ನೋಟಿಫಿಕೇಷನ್ 6 ಮಾಡದೇ ಪರಿಹಾರವನ್ನೂ ನೀಡದೆ, ಬಡಾವಣೆಯನ್ನು ನಿರ್ಮಿಸದೇ ಇರುವ ಕಾರಣ, ರೈತರು ಸಂಕಷ್ಟದ ವೇಳೆ ಜಮೀನು ಮಾರಲಾಗದೆ ಪರಿತಪಿಸುತ್ತಿದ್ದಾರೆ. ಈಗ ಬಲ್ಲಹಳ್ಳಿಯ ಫಲವತ್ತಾದ ಭೂಮಿಯನ್ನು ರೈತರ ವಿರೋಧದ ನಡುವೆಯೂ ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಖಾಸಗಿ ಡೆವಲಪರ್‍ಗಳ ಬಡಾ ವಣೆಗಳಿಗೆ ಚರಂಡಿ, ರಸ್ತೆ, ವಿದ್ಯುತ್ ಸಂಪರ್ಕ ಕಲ್ಪಿಸಲು ಲಾಬಿ ಮಾಡುತ್ತಿದ್ದೀರಿ ಎಂದು ಗುರುಪ್ರಸಾದ್ ಛೀಮಾರಿ ಹಾಕಿದರು. ಕೇವಲ 200 ಅಡಿಗೆ ನೀರು ಸಿಗುತ್ತಿದೆ. ಅಲ್ಲಿ ರಾಗಿ, ಬಾಳೆ ಸೇರಿದಂತೆ ತರಕಾರಿ, ಆಹಾರ ಪದಾರ್ಥ ಬೆಳೆದು ಆಹಾರ ಕೊರತೆ ನೀಗಿಸುತ್ತಿರುವ ಫಲವತ್ತಾದ ಭೂಮಿ ಇದು. ಒಳ್ಳೆ ಬೆಳೆ ತೆಗೆದು ಸಮೃದ್ಧ ಜೀವನ ನಡೆಸುತ್ತಿರುವ ಭೂಮಿಯನ್ನು ದಬ್ಬಾಳಿಕೆಯಿಂದ ಕಸಿದುಕೊಳ್ಳಲು ಮಾಡುತ್ತಿರುವ ಹುನ್ನಾರಕ್ಕೆ ನಾವು ಬಗ್ಗುವುದಿಲ್ಲ ಎಂದು ಎಚ್ಚರಿಸಿದರು.

1.5 ಕೋಟಿ ರೂ ಕೊಡಿ: ಎಕರೆಗೆ 1.5 ಕೋಟಿ ರೂ. ಪರಿಹಾರ ಕೊಟ್ಟರೆ ನಾವು ಬೇರೆಡೆ ಜಮೀನು ಖರೀದಿಸಿ ಬೇಸಾಯ ಮಾಡುತ್ತೇವೆ. ಇಲ್ಲದಿದ್ದಲ್ಲಿ ಬಲ್ಲಹಳ್ಳಿ ಜಮೀನಿನ ಡಿ ನೋಟಿಫಿಕೇಷನ್ ಮಾಡುವವರೆಗೆ ಹೋರಾಟ ಮಾಡುವುದಲ್ಲದೆ, ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ತೋರಿ ಅವರಿಗೆ ಬಹಿಷ್ಕಾರ ಹಾಕುತ್ತೇವೆ ಎಂದ ಗುರುಪ್ರಸಾದ್, ನಾವು ಅನ್ನ ಕೊಡುತ್ತಿದ್ದೇವೆ, ನೀವು ಲಾಬಿ ಮಾಡುತ್ತಿದ್ದೀರಿ. ತಕ್ಷಣವೇ ಬಲ್ಲಹಳ್ಳಿ ವಸತಿ ಯೋಜನೆಯನ್ನು ಕೈಬಿಡಿ ಎಂದು ಒತ್ತಾಯಿಸಿದರು.

ಅಧ್ಯಕ್ಷ ಯಾರು : ಮುಡಾ ಅಧ್ಯಕ್ಷ ಯಾರು, ಎಲ್ಲಿದ್ದಾರೆ ಎಂದು ಕೇಳಿದ ರೈತ ಶಿವಲಿಂಗೇಗೌಡ, ನಮ್ಮ ಜಮೀನಿನಲ್ಲಿ ಸೀಬೆ, ಬಾಳೆ, ಕರಿಬೇವು, ಆಲದ ಮರ ಬೆಳೆದಿದ್ದೇವೆ. ಒಂದು ಮರಕ್ಕೆ 10 ಲಕ್ಷವಾಗುತ್ತದೆ. ಮನೆ, ಕೋಳಿ ಮನೆಗೆ ತಲಾ 10 ಲಕ್ಷ ರೂ. ಕೊಡಿ ಹಾಗೂ ಎಕರೆ ಭೂಮಿಗೆ 2 ಕೋಟಿ ಪರಿಹಾರ ಕೊಟ್ಟರೆ ನಾಳೆನೇ ಜಮೀನು ಬಿಟ್ಟುಕೊಡುತ್ತೇವೆ ಎಂದರು. ಖಾಸಗಿಯವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ರೈತರ ಭೂಮಿ ಕಬಳಿಸುವ ಯೋಜನೆ ಕೈಬಿಡಿ, 41 ನೋಟಿಫಿಕೇಷನ್ ರದ್ದುಗೊಳಿಸಿ ಎಂದು ನಿಂಗೇಗೌಡ, ನಿಂಗಣ್ಣ, ಮಹದೇವು, ಪುಟ್ಟಣ್ಣ ಸೇರಿದಂತೆ ಹಲವು ರೈತರು ಒತ್ತಾಯಿಸಿದರಲ್ಲದೆ, ಸಭೆಯಲ್ಲಿ ಭಾಗವಹಿಸಿದ ಭೂ ಮಾಲೀಕರೆಲ್ಲರೂ ಕೈ ಎತ್ತುವ ಮೂಲಕ ತಾವು ಜಮೀನು ನೀಡುವುದಿಲ್ಲ ಎಂದು ಖಡಾಖಂಡಿತವಾಗಿ ನುಡಿದರು. ಶಾಸಕ ಬಿ.ಹರ್ಷವರ್ಧನ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ, ಪಾಲಿಕೆ ಸದಸ್ಯ ಎಸ್‍ಬಿಎಂ ಮಂಜು, ಮುಡಾ ಕಾರ್ಯದರ್ಶಿ ಸವಿತಾ, ಸೂಪರಿಂಟೆಂಡಿಂಗ್ ಇಂಜಿನಿಯರ್ ಪ್ರಭಾಕರ್, ನಗರ ಯೋಜಕ ಸದಸ್ಯ ಬಿ.ಎನ್.ಗಿರೀಶ, ವಿಶೇಷ ಭೂಸ್ವಾಧೀನಾಧಿಕಾರಿ ಚಂದ್ರಮ್ಮ, ಎಕ್ಸಿಕ್ಯೂಟಿವ್ ಇಂಜಿನಿಯರ್ ಸುವರ್ಣ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಎಸ್.ಕೆ.ಭಾಸ್ಕರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಮುಖಂಡ ಹೊನ್ನೂರು ಪ್ರಕಾಶ ಸೇರಿದಂತೆ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.

Translate »