ಜು.30ರೊಳಗೆ ಸರ್ಕಾರ ರಚಿಸದಿದ್ದರೆ ಮಧ್ಯಂತರ ಚುನಾವಣೆ ಖಚಿತ
ಮೈಸೂರು

ಜು.30ರೊಳಗೆ ಸರ್ಕಾರ ರಚಿಸದಿದ್ದರೆ ಮಧ್ಯಂತರ ಚುನಾವಣೆ ಖಚಿತ

July 26, 2019

ಬೆಂಗಳೂರು, ಜು.25- ಜುಲೈ 30 ರೊಳಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡದಿದ್ದರೆ ಮಧ್ಯಂತರ ಚುನಾವಣೆ ನಡೆಯುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಕಾಂಗ್ರೆಸ್ ಮುಖಂಡರಿಗೆ ಹೇಳಿದ್ದಾರೆ. ಆಪರೇಷನ್ ಕಮಲ ದಿಂದಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ನಂತರ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸ ಕಾವೇರಿ ಯಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಇಂದು ಮಧ್ಯಾಹ್ನ ಕಾಂಗ್ರೆಸ್ ಮುಖಂಡರಾದ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಬಿ.ಕೆ.ಹರಿಪ್ರಸಾದ್, ವೆಂಕಟರಮಣಯ್ಯ, ಮಾಜಿ ಸಂಸದ ಧ್ರುವನಾರಾಯಣ್, ಕೃಷ್ಣಪ್ಪ, ಐವಾನ್ ಡಿಸೋಜಾ ಸೇರಿ ಹಲವರು ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಮುಂದಿನ ರಾಜಕೀಯ ನಡೆಯ ಕುರಿತು ಮಾತುಕತೆ ನಡೆಸಿದ್ದಾರೆ.

ಈ ವೇಳೆ ಮುಖಂಡರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಸರ್ಕಾರವೇನೋ ಬಿದ್ದು ಹೋಗಿದೆ. ಬಿಜೆಪಿಯವರು ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದ್ದಾರೆ. ಅವರು ಸರ್ಕಾರ ರಚಿಸೋದು ಅಷ್ಟು ಸುಲಭವಲ್ಲ. ಈಗ ಮುಂಬೈನಲ್ಲಿ ಇದ್ದವರನ್ನ ಒಬ್ಬೊಬ್ಬರನ್ನೇ ಕಳಿಸುತ್ತಿದ್ದಾರೆ. ನನ್ನ ಹೆಸರನ್ನೇ ಎಲ್ಲರ ಬಾಯಲ್ಲಿಯೂ ಹೇಳಿಸುತ್ತಿದ್ದಾರೆ. ನಮ್ಮ ನಮ್ಮಲ್ಲೇ ಭಿನ್ನಾಭಿಪ್ರಾಯ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು. ಮುಂಬೈಗೆ ತೆರಳಿರುವ ಶಾಸಕರಿಗೂ ಈಗ ಸಾಕಾಗಿರುತ್ತದೆ. ಯಾಕಾದರೂ ನಾವು ಪಕ್ಷ ಬಿಟ್ಟು ಬಂದಿದ್ದೇವೋ, ಮತ್ತೆ ನಮ್ಮ ರಾಜಕೀಯ ಭವಿಷ್ಯ ಏನಾಗುತ್ತದೆಯೋ ಎಂಬ ಆತಂಕದಲ್ಲಿದ್ದಾರೆ. ಸರ್ಕಾರ ರಚಿಸಿದರೂ ಪಕ್ಷ ತೊರೆದು ಹೋದವರಿಗೆ ಒಳ್ಳೆಯದಾಗುತ್ತಾ. ಅಲ್ಲಿ ಬಿಜೆಪಿ ಒಳಗಿರುವವರು ಸುಮ್ಮನೆ ಕೂರ್ತಾರಾ. ಅಲ್ಲಿಯೂ ಜಗಳ ಪ್ರಾರಂಭವಾಗುತ್ತದೆ ನೋಡ್ತಿರಿ. 30ರೊಳಗೆ ಸರ್ಕಾರ ರಚನೆ ಮಾಡದಿದ್ದರೆ ಅತಂತ್ರವಾಗಬಹುದು. ನನ್ನ ಪ್ರಕಾರ ಮಧ್ಯಂತರ ಚುನಾವಣೆ ಬಂದೇ ಬರುತ್ತದೆ. ನೀವು ಚುನಾವಣೆಯತ್ತ ಗಮನ ಹರಿಸಿ. ನಮಗೆ ಮತ್ತೆ ಅಧಿಕಾರಕ್ಕೆ ಬರುವ ಅವಕಾಶಗಳು ಹೆಚ್ಚಿವೆ ಎಂದು ಸಿದ್ದರಾಮಯ್ಯ ಮುಖಂಡರಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಣತಿಯಂತೆ ನಡೆದುಕೊಂಡಿದ್ದೇವೆ…
ಬೆಂಗಳೂರು, ಜು.25(ಕೆಎಂಶಿ)-ಮಾಜಿ ಮುಖ್ಯಮಂತ್ರಿ ಹಾಗೂ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಅವರ ಆಣತಿಯಂತೆ ನಾವು ವಿಶ್ವಾಸಮತ ದಿಂದ ದೂರ ಉಳಿದೆವು ಎಂದು ಅತೃಪ್ತ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಬಾಂಬ್ ಸಿಡಿಸಿದ್ದಾರೆ. ಹೆಬ್ಬಾರ್ ಕಳೆದ ಎರಡು ಮೂರು ವಾರಗಳಿಂದ ಉಳಿದ ಅತೃಪ್ತ ಶಾಸಕರ ಜೊತೆ ಮುಂಬೈ-ಪುಣೆ ಯಲ್ಲೇ ಬಿಡಾರ ಹೂಡಿದ್ದಾರೆ. ಮುಂಬೈನಿಂದ ಹಿಂತಿರುಗುತ್ತಿದ್ದಂತೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ಅತೃಪ್ತರೆಲ್ಲರೂ ಒಟ್ಟಾಗಿದ್ದೇವೆ. ಈಗಲೂ ಸಿದ್ದರಾಮಯ್ಯನವರೇ ನÀಮ್ಮ ನಾಯಕರು ಎಂದಿದ್ದಾರೆ.

ಅತ್ತ ಹೆಬ್ಬಾರ್ ವಿಧಾನಸಭೆಯಲ್ಲಿ ಸಿದ್ದರಾಮಯ್ಯನವರ ಹೇಳಿಕೆಗಳನ್ನು ಆಲಿಸಿದ್ದೇವೆ. ಅವರು ದೊಡ್ಡವರು. ಅವರ ಆಣತಿಯಂತೆ ನಾವು ದೂರ ಸರಿದಾಗಿದೆ. ಮುಂದೇನು ಮಾಡಬೇಕೆನ್ನುವ ಬಗ್ಗೆ ನಾವು 14 ಮಂದಿಯು ಒಟ್ಟಿಗೆ ತೀರ್ಮಾನ ಮಾಡುತ್ತೇವೆ. ಬಿಜೆಪಿ ಸೇರಿದ್ದೇವೆ. ಇಲ್ಲವೇ ಅವರಿಗೆ ಬೆಂಬಲ ನೀಡಿದ್ದೇವೆ ಎನ್ನುವುದರಲ್ಲಿ ಹುರುಳಿಲ್ಲ. ರಾಜಕೀಯವಾಗಿ ಮುಂದೆ ನಾವು ತೀರ್ಮಾನ ಕೈಗೊಳ್ಳುತ್ತೇವೆ. ಹೊರ ಬಂದಾಗಿದೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಒಗ್ಗಟ್ಟಿನ ಹೋರಾಟ ನಡೆಸುತ್ತೇವೆ ಎಂದರು. ಸಮ್ಮಿಶ್ರ ಸರ್ಕಾರದ ಪತನಕ್ಕೆ ಸಿದ್ದರಾಮಯ್ಯ ಅವರ ಬೆಂಬಲಿಗರೇ ಮುಹೂರ್ತ ವಿಟ್ಟಿದ್ದು, ರಾಜೀನಾಮೆ ನೀಡಿ ಮುಂಬೈಗೆ ಹೋಗಿ ಕುಳಿತಿರುವುದು ಎಲ್ಲವೂ ಇತಿಹಾಸ.

ಜತೆಗೆ ಕೆಲವು ಶಾಸಕರು ಸಿದ್ದರಾಮಯ್ಯ ಅವರಿಗಾಗಿಯೇ ನಾವು ರಾಜೀನಾಮೆ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ ಎಂಬುದು ವರದಿಯಾಗಿದೆ. ಇದು ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲಿ ಆಕ್ರೋಶ ಹುಟ್ಟುಹಾಕಿದೆ.

“ಇದು ಸಂಪೂರ್ಣ ಸುಳ್ಳು ಮತ್ತು ದುರುದ್ದೇಶಪೂರಿತ. ಈ ಮಾತನ್ನು ಅವರು ನನ್ನ ಮುಂದೆ ಬಂದು ಹೇಳಲಿ. ಅದಕ್ಕೆ ತಕ್ಕ ಉತ್ತರ ಕೊಡುತ್ತೇನೆ ಎಂದು ಖಾರವಾಗಿ ನುಡಿದಿದ್ದಾರೆ. ಅವರ ತಪ್ಪುಗಳನ್ನು ಮುಚ್ಚಿಕೊಳ್ಳುವ ದುರುದ್ದೇಶದಿಂದ ಇಂತಹ ಹೇಳಿಕೆ ನೀಡಿರಬಹುದು. ಅವರು ನೀಡಿದ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡುತ್ತಿದ್ದರೆ, ಇದರ ಹಿಂದೆ ಯಾರೋ ಸಂಚುಕೋರರು ಇದ್ದಾರೆ ಎಂದು ಅರ್ಥ. ಮುಖ್ಯಮಂತ್ರಿಯಾ ಗಿದ್ದ ಕಾಲದಲ್ಲಿ ಕೂಡ ನನ್ನ ಮೇಲೆ ಸುಳ್ಳು ಆರೋಪಗಳ ಸುರಿಮಳೆಯಾಗಿದೆ. ನನ್ನ ರಾಜಕೀಯ ಜೀವನದಲ್ಲಿ ಇವೆಲ್ಲ ಮೊದಲನೆಯದ್ದಲ್ಲ. ಬಹುಶಃ ಕೊನೆಯದು ಅಲ್ಲ. ಇಂತಹ ಸುಳ್ಳು ಆರೋಪಗಳ ವಿಷ ಕುಡಿದು, ಕುಡಿದು ನಾನು ವಿಷಕಂಠನಾಗಿದ್ದೇನೆ. ಕೊನೆಗೆ ಸತ್ಯವೇ ಗೆಲ್ಲುವುದು. – ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್

Translate »