ಮಧ್ಯಂತರ ಚುನಾವಣೆಗೆಸಿದ್ಧರಾಗಿ: ಅಮಿತ್ ಷಾ
ಮೈಸೂರು

ಮಧ್ಯಂತರ ಚುನಾವಣೆಗೆಸಿದ್ಧರಾಗಿ: ಅಮಿತ್ ಷಾ

July 26, 2019

ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರ ರಚನೆ ಅನುಮಾನ. ರಾಷ್ಟ್ರಪತಿ ಆಡಳಿತ ಇಲ್ಲವೇ ಮಧ್ಯಂತರ ಚುನಾವಣೆಗೆ ಸಿದ್ಧರಾಗಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ.

ಸರ್ಕಾರ ರಚನೆಗೆ ನಿಮ್ಮ ಬಳಿ ಮ್ಯಾಜಿಕ್ ಸಂಖ್ಯೆ ಇಲ್ಲ. ಅಲ್ಲಿನ ವಿಧಾನಸಭಾಧ್ಯಕ್ಷರು
ಅತೃಪ್ತ 15 ಶಾಸಕರ ರಾಜೀನಾಮೆ ಇತ್ಯರ್ಥಗೊಳ್ಳುವವರೆಗೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಸ್ಪಷ್ಟವಾಗಿ ತಿಳಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರ ರಚನೆ ವಿಳಂಬವಾಗುತ್ತಿರುವ ಬಗ್ಗೆ ಸಮಾಲೋಚನೆ ನಡೆಸಲು ನಿನ್ನೆ ರಾತ್ರಿ ದೆಹಲಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ, ಶಾಸಕ ಮಾಧುಸ್ವಾಮಿ,

ಪಕ್ಷದ ಮುಖಂಡ ವಿಜಯೇಂದ್ರ ಇಂದು ಅಮಿತ್ ಷಾ ಅವರನ್ನು ಎರಡು ಬಾರಿ ಹಾಗೂ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಒಮ್ಮೆ ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರಿಗೆ ದೊರೆತ ಸ್ಪಷ್ಟ ಸಂದೇಶ ಅವರ ಉತ್ಸಾಹವನ್ನೇ ಕುಗ್ಗಿಸಿದೆ. ತಕ್ಷಣವೇ ಯಡಿಯೂರಪ್ಪ ಅವರನ್ನು ಸಂಪರ್ಕಿಸಿ, ಮಾಹಿತಿ ನೀಡಿದ್ದಾರೆ. ಇದರಿಂದ ಅವರೂ ಮಂಕಾಗಿದ್ದಾರೆ. ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ನೂತನ ಸರ್ಕಾರ ರಚಿಸುವ ಆತುರದಲ್ಲಿದ್ದ ರಾಜ್ಯ ಬಿಜೆಪಿ ನಿರಾಸೆಗೊಂಡಿದೆ.

ಅಮಿತ್ ಷಾ ಮುಂದುವರಿದು,ಇದೇ ಶನಿವಾರದವರೆಗೂ ವಿಧಾನಸಭಾಧ್ಯಕ್ಷರ ನಿರ್ಧಾರಕ್ಕೆ ಕಾಯುತ್ತೇವೆ. ಅವರ ನಿರ್ಧಾರದಲ್ಲಿ ಬದಲಾವಣೆ ಇಲ್ಲದಿದ್ದರೆ, ತಕ್ಷಣಕ್ಕೆ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು, ರಾಷ್ಟ್ರಪತಿ ಆಳ್ವಿಕೆ ಹೇರಲಾಗುವುದು.

ನಾವು ಇಂತಹ ನಿರ್ಧಾರ ಕೈಗೊಳ್ಳದಿದ್ದರೆ, ಕರ್ನಾಟಕದಲ್ಲಿನ ಹಣಕಾಸು ಸ್ಥಿತಿ ಏರುಪೇರು ಆಗುತ್ತದೆ. ನಿಮ್ಮ ಸರ್ಕಾರಿ ನೌಕರರಿಗೆ ವೇತನವೂ ದೊರೆಯುವುದಿಲ್ಲ. ಸಂಸತ್ ಅಧಿವೇಶನ ಪೂರ್ಣಗೊಳ್ಳುವುದರೊಳಗೆ ಹಣಕಾಸು ಮಸೂದೆಗೆ ಅಂಗೀಕಾರ ದೊರಕಿಸಿಕೊಳ್ಳುವುದು ಅನಿವಾರ್ಯ. ಅತೃಪ್ತ ಕಾಂಗ್ರೆಸ್-ಜೆಡಿಎಸ್‍ನ ಶಾಸಕರ ರಾಜೀನಾಮೆ ಬಗ್ಗೆ ಸಭಾಧ್ಯಕ್ಷರು ತೀರ್ಮಾನ ಕೈಗೊಂಡಿಲ್ಲ. ಸಭಾಧ್ಯಕ್ಷರ ಕಾರ್ಯಾಲಯಕ್ಕೆ ಸಂಬಂಧಿಸಿ ದಂತೆ ನ್ಯಾಯಾಲಯವು ಕೂಡ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಪಕ್ಷ ಸೇರಲು ಮುಂದಾಗಿರುವ ಈ ಶಾಸಕರ ಕೆಲವು ದುಡುಕು ನಿರ್ಧಾರಗಳು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಅವರು ವಿಚಾರಣೆಗೆ ಸಮಯ ಕೋರದಿದ್ದರೆ, ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದಿತ್ತು. ನಮಗೆ ಇದ್ದ ದಾರಿಯು ಮುಚ್ಚಿದೆ ಎಂದಿದ್ದಾರೆ.

ಬಿ.ಎಸ್.ಯಡಿಯೂರಪ್ಪನವರೇ ಎಂದಿದ್ದರೂ ಮುಖ್ಯಮಂತ್ರಿ, ಚುನಾವಣೆ ನಡೆದರೆ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಅವರಿಗೆ ಧೈರ್ಯ ತುಂಬಿ ಮತ್ತು ವಾಸ್ತವತೆ ತಿಳಿಸಿ. ಒಂದೆರಡು ದಿನ ಕಾದು ನೋಡೋಣ. ಶಾಸಕರ ರಾಜೀನಾಮೆ ಅಂಗೀಕಾರ ಆಗದಿದ್ದರೆ, ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು, ರಾಷ್ಟ್ರಪತಿ ಆಡಳಿತ ಹೇರುತ್ತೇವೆ.

ಒಂದು ವೇಳೆ ಸಭಾಧ್ಯಕ್ಷರು ತಮ್ಮ ನಿಲುವು ಬದಲಾಯಿಸಿಕೊಳ್ಳದೇ ಇದೇ ರೀತಿ ಮುಂದುವರಿದರೆ, ಕರ್ನಾಟಕ ವಿಧಾನಸಭೆ ವಿಸರ್ಜಿಸಿ, ಮಹಾರಾಷ್ಟ್ರ ಮತ್ತು ಹರಿಯಾಣದ ಜೊತೆಗೆ ಚುನಾವಣೆಗೆ ತೆರಳೋಣ, ಎಲ್ಲದಕ್ಕೂ ಸಿದ್ಧರಾಗಿ ಎಂದಿದ್ದಾರೆ. ನಾವು ದುಡುಕಿದರೆ, ಈ ರಾಜ್ಯಗಳ ಚುನಾವಣೆ ಮೇಲೆ ದುಷ್ಪರಿಣಾಮ ಬೀರುತ್ತದೆ. ನೀವು ರಾಜ್ಯ ನಾಯಕರು ತೆಗೆದುಕೊಂಡ ಕೆಲವು ನಿರ್ಧಾರಗಳು ಇಡೀ ರಾಷ್ಟ್ರದಲ್ಲಿ ಜನ ಪಕ್ಷದತ್ತ ಬೆರಳು ಮಾಡಿ ತೋರಿಸುತ್ತಿದ್ದಾರೆ ಎಂದಿದ್ದಾರೆ. ಸಮ್ಮಿಶ್ರ ಸರ್ಕಾರ ಬೀಳಿಸಿದ ಕೂಡಲೇ ಯಡಿಯೂರಪ್ಪ ಸಿಎಂ ಆಗುತ್ತಾರೆ ಎಂಬ ಲೆಕ್ಕಾಚಾರದಲ್ಲಿದ್ದ ಕಮಲ ಪಾಳೆಯ ಈಗ ರಾಷ್ಟ್ರಪತಿ ಆಳ್ವಿಕೆ ಬಂದರೆ ಗತಿ ಏನು ಎಂಬ ಆತಂಕದಲ್ಲಿದೆ.

ಈ ಬೆಳವಣಿಗೆಯಿಂದ ರಾಜ್ಯ ರಾಜಕೀಯದಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಗಿದ್ದು ರಾಜೀನಾಮೆ ನೀಡಿ ಮುಂಬೈಗೆ ಹೋಗಿದ್ದ ಬಹುತೇಕ ಶಾಸಕರು ಇದೀಗ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಲಕ್ಷಣ ಕಂಡು ಬಂದರೆ ನಾವು ವಾಪಸ್ ನಮ್ಮ ಪಕ್ಷಗಳಿಗೆ ಹೋಗುತ್ತೇವೆ ಎನ್ನತೊಡಗಿದ್ದಾರೆ. ಹೀಗಾಗಿ ರಾಜ್ಯ ರಾಜಕೀಯ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು ಮುಂದೇನು ಎಂಬ ಪ್ರಶ್ನೆಗೆ ಯಾರೂ ಉತ್ತರ ಕೊಡಲಾಗದ ಪರಿಸ್ಥಿತಿ ಸೃಷ್ಟಿಯಾಗಿದೆ. ಸರ್ಕಾರವನ್ನು ಉರುಳಿಸುವಾಗ ಮುಂದಿನ ಬೆಳವಣಿಗೆ ಸರಾಗ ಎಂದು ಭಾವಿಸಿದ್ದ ಬಿಜೆಪಿ ನಾಯಕರಿಗೆ ರಮೇಶ್ ಕುಮಾರ್ ಅವರು ನೀಡಿದ ಶಾಕ್ ಹೇಗಿದೆ ಎಂದರೆ ರಾಜ್ಯಾಂಗ ಬಿಕ್ಕಟ್ಟು ಉದ್ಭವವಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬುದೇ ತಲೆನೋವಿನ ಸಂಗತಿಯಾಗಿ ಪರಿಣಮಿಸಿದೆ.

Translate »