ಅತೃಪ್ತರ ಮೇಲೆ ಸ್ಪೀಕರ್ ಮೊದಲ ಬಾಂಬ್:  ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ,ಕೆಪಿಜೆಪಿಯ ಆರ್.ಶಂಕರ್
ಮೈಸೂರು

ಅತೃಪ್ತರ ಮೇಲೆ ಸ್ಪೀಕರ್ ಮೊದಲ ಬಾಂಬ್: ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ,ಕೆಪಿಜೆಪಿಯ ಆರ್.ಶಂಕರ್

July 26, 2019

ಬೆಂಗಳೂರು, ಜು.25(ಎಸಿಪಿ)- ರಾಣೆ ಬೆನ್ನೂರು ಕ್ಷೇತ್ರದಿಂದ ಕರ್ನಾಟಕ ಪ್ರಜ್ಞಾ ವಂತ ಜನತಾ ಪಾರ್ಟಿ (ಕೆಪಿಜೆಪಿ) ಶಾಸಕರಾಗಿ ಆಯ್ಕೆಯಾಗಿದ್ದ ಆರ್. ಶಂಕರ್, ಅಥಣಿ ಕಾಂಗ್ರೆಸ್ ಶಾಸಕ ಮಹೇಶ್ ಕುಮಟಳ್ಳಿ ಮತ್ತು ಗೋಕಾಕ್ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ವಿಧಾನಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ವಿಧಾನ ಸಭಾಧ್ಯಕ್ಷ ರಮೇಶ್‍ಕುಮಾರ್ ಇಂದು ತೀರ್ಪು ನೀಡಿದ್ದಾರೆ.

ಇಂದು ಸಂಜೆ ತುರ್ತು ಸುದ್ದಿಗೋಷ್ಠಿಯಲ್ಲಿ ತಮ್ಮ ತೀರ್ಪನ್ನು ಪ್ರಕಟಿಸಿದ ಅವರು, ಇನ್ನುಳಿದಂತೆ ಜೆಡಿಎಸ್‍ನ ಮೂವರು ಹಾಗೂ ಕಾಂಗ್ರೆಸ್‍ನ 10 ಶಾಸಕರ ರಾಜೀನಾಮೆ ಹಾಗೂ ಅನರ್ಹತೆ ಪ್ರಕರಣಗಳನ್ನು ಅಧ್ಯಯನ ನಡೆಸ ಬೇಕಾಗಿರುವುದರಿಂದ ಕೆಲವೇ ದಿನಗಳಲ್ಲಿ ಅದರ ತೀರ್ಪು ನೀಡಲಿರುವುದಾಗಿ ಹೇಳಿದರು. 15ನೇ ವಿಧಾನಸಭೆ ಅಂತ್ಯದ ವರೆಗೆ ಅಂದರೆ 2023ರ ಮೇ ತಿಂಗಳವರೆಗೆ ಈ ಶಾಸಕರು

ಅನರ್ಹರಾಗಿರುತ್ತಾರೆ. ತೆರವಾದ ಇವರ ಸ್ಥಾನಗಳಿಗೆ ನಡೆಯುವ ಉಪ ಚುನಾ ವಣೆಯಲ್ಲೂ ಇವರು ಸ್ಪರ್ಧಿಸುವಂತಿಲ್ಲ. ಯಾವುದೇ ರೂಪದಲ್ಲೂ ಈ ಶಾಸಕರು ಸದನ ಪ್ರವೇಶಿಸು ವಂತಿಲ್ಲ. ಈ ಅವಧಿಯಲ್ಲಿ ಇವರು ಸಚಿವ ಸ್ಥಾನ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹೊಂದಲು ಅವಕಾಶವಿಲ್ಲ. ತಮ್ಮ ಈ ಆದೇಶವನ್ನು ಅನರ್ಹ ಶಾಸಕರು ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‍ನಲ್ಲಿ ಪ್ರಶ್ನಿಸಬಹುದು ಎಂದು ರಮೇಶ್ ಕುಮಾರ್ ಹೇಳಿದರು. ಕೆಪಿಜೆಪಿಯಿಂದ ಆಯ್ಕೆಯಾಗಿದ್ದ ಶಾಸಕ ಆರ್. ಶಂಕರ್ ತಮ್ಮ ಪಕ್ಷವನ್ನು ಕಾಂಗ್ರೆಸ್ ಜೊತೆ ವಿಲೀನ ಗೊಳಿಸಿದ ನಂತರ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದು ಬಿಜೆಪಿ ಸರ್ಕಾರ ರಚಿಸುವುದಾದರೆ ತಾವು ಬೆಂಬಲಿಸುವುದಾಗಿ ರಾಜ್ಯಪಾಲರಿಗೆ ಪತ್ರ ನೀಡಿರುವುದನ್ನು ಪಕ್ಷಾಂತರ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಅವರುಗಳು ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದು, ಆ ಪಕ್ಷದ ವಿರುದ್ಧ ಚಟುವಟಿಕೆ ನಡೆಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಅನರ್ಹಗೊಳಿಸಲಾಗಿದೆ.

ಆರ್.ಶಂಕರ್ ಕೆಪಿಜೆಪಿಯಿಂದ ಆಯ್ಕೆಯಾಗಿದ್ದರು. ಅವರು 2019ರ ಜೂನ್ 14ರಂದು ತಮ್ಮ ಪಕ್ಷವನ್ನು ಕಾಂಗ್ರೆಸ್‍ನಲ್ಲಿ ವಿಲೀನಗೊಳಿಸಿರುವುದಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯರಿಗೆ ಪತ್ರ ನೀಡಿದ್ದರು. ಅದೇ ವೇಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶಂಕರ್ ಅವರನ್ನು ತಮ್ಮ ಪಕ್ಷಕ್ಕೆ ವಿಲೀನಗೊಳಿಸಿಕೊಂಡಿರುವುದಾಗಿ ನನಗೆ ಪತ್ರ ನೀಡಿದ್ದರು. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪಡೆದ ನಂತರ ಜೂನ್ 25ರಂದು ಶಂಕರ್ ಅವರು ಕಾಂಗ್ರೆಸ್ ಶಾಸಕರೆಂದು ಪರಿಗಣಿಸಿ, ಆ ಪಕ್ಷದ ಸಾಲಿನಲ್ಲಿ ಆಸನ ವ್ಯವಸ್ಥೆ ಮಾಡಲಾಗಿತ್ತು. ಶಂಕರ್ ಮೈತ್ರಿ ಪಕ್ಷದ ಮಂತ್ರಿ ಮಂಡಲದಲ್ಲೂ ಇದ್ದರು. ಆದರೆ ಜುಲೈ 7ರಂದು ಮತ್ತೊಬ್ಬ ಸಚಿವ ನಾಗೇಶ್ ಅವರೊಡಗೂಡಿ ರಾಜ್ಯಪಾಲರನ್ನು ಭೇಟಿ ಮಾಡಿದ ಶಂಕರ್, ಮೈತ್ರಿ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದುಕೊಂಡಿದ್ದು, ಬಿಜೆಪಿ ಸರ್ಕಾರ ರಚಿಸುವುದಾದರೆ, ಅದನ್ನು ಬೆಂಬಲಿಸುವುದಾಗಿ ಪತ್ರವನ್ನು ನೀಡಿದ್ದರು. ಆ ಪತ್ರಗಳನ್ನು ರಾಜ್ಯಪಾಲರು ನನಗೆ ರವಾನಿಸಿದ್ದರು ಎಂದು ರಮೇಶ್ ಕುಮಾರ್ ವಿವರಿಸಿದರು.

ಕಾಂಗ್ರೆಸ್ ಸಂಸದೀಯ ನಾಯಕ ಸಿದ್ದರಾಮಯ್ಯ ಅವರು ಜುಲೈ 16ರಂದು ಶಂಕರ್ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆಯಡಿ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದರು. ಈ ಸಂಬಂಧ ಶಂಕರ್ ಅವರಿಗೆ ಎರಡು ಬಾರಿ ನೋಟೀಸ್ ಜಾರಿ ಮಾಡಲಾಗಿತ್ತು. ತಮ್ಮ ಮುಂದೆ ಹಾಜರಾಗದ ಅವರು, ಜುಲೈ 22ರಂದು ಇ-ಮೇಲ್ ಮೂಲಕ ನಾಲ್ಕು ವಾರಗಳ ಕಾಲಾವಕಾಶ ಕೋರಿದ್ದರು ಎಂದು ತಿಳಿಸಿದ ಸ್ಪೀಕರ್, ಶಂಕರ್ ಕಾಂಗ್ರೆಸ್ ಪಕ್ಷದ ವಿರುದ್ಧ ಚಟುವಟಿಕೆ ನಡೆಸಿರುವುದು ಸಾಬೀತಾಗಿರುವುದರಿಂದ ಅವರನ್ನು 2023ರ ಮೇ ತಿಂಗಳವರೆಗೆ ಅನರ್ಹಗೊಳಿಸಲಾಗಿದೆ ಎಂದರು.

ಗೋಕಾಕ್ ಶಾಸಕ ರಮೇಶ್ ಜಾರಕಿ ಹೊಳಿ ಮತ್ತು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರುಗಳು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದು, ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯಿದೆಯಡಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಸಂಸದೀಯ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಫೆಬ್ರವರಿ 11ರಂದು ದೂರು ಸಲ್ಲಿಸಿದ್ದರು. ಅವರಿಗೆ ಫೆಬ್ರವರಿ 14ರಂದು ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ ಈ ಇಬ್ಬರು ಶಾಸಕರು ಜುಲೈ 6ರಂದು ನಾನು ಕಚೇರಿಯಲ್ಲಿ ಇಲ್ಲದಿರುವಾಗ ಬಂದು ರಾಜೀನಾಮೆ ಸಲ್ಲಿಸಿದ್ದರು. ಅವರ ರಾಜೀನಾಮೆ ಪತ್ರಗಳನ್ನು ಪರಿಶೀಲಿಸಿದಾಗ ಅದು ಕ್ರಮಬದ್ಧವಾಗಿರಲಿಲ್ಲ. ಅವರುಗಳು ಜುಲೈ 11ರಂದು ಮುಂಬೈನಿಂದ ವಿಶೇಷ ವಿಮಾನದಲ್ಲಿ ಸಂಜೆ 6.20ಕ್ಕೆ ಇತರೆ ಕೆಲವು ಶಾಸಕರೊಂದಿಗೆ ನನ್ನ ಕಚೇರಿಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅವರನ್ನು ವಿಚಾರಣೆಗೊಳಪಡಿಸ ಲಾಗಿದ್ದು, ಜುಲೈ 6ರಂದು ಅವರು ನೀಡಿದ ರಾಜೀನಾಮೆಯನ್ನು ಕ್ರಮಬದ್ಧವಾಗಿಲ್ಲ ಎಂಬುದನ್ನು ಅವರು ಒಪ್ಪಿಕೊಂಡು ಮತ್ತೆ ರಾಜೀನಾಮೆ ಸಲ್ಲಿಸಿದರು. ಆದರೆ ಈ ಶಾಸಕರು ಅದಕ್ಕೂ ಮುನ್ನವೇ ಸುಪ್ರೀಂಕೋರ್ಟ್‍ಗೆ ಹೋಗಿ ನಮಗೆ ವಿಧಾನಸಭಾಧ್ಯಕ್ಷರು ಸಿಕ್ಕಿಲ್ಲ. ಖಾಸಗಿ ಕಾರಿನಲ್ಲಿ ಹೊರಟು ಹೋಗಿದ್ದಾರೆ ಎಂದೆಲ್ಲಾ ದೂರಿದ್ದರು. ಇವರ ರಾಜೀನಾಮೆಯನ್ನು ಪರಿಗಣಿಸಿ ಕೈಗೊಂಡ ಕ್ರಮದ ಬಗ್ಗೆ ವರದಿ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು ಎಂದು ರಮೇಶ್ ಕುಮಾರ್ ಹೇಳಿದರು.

ಇವರಿಬ್ಬರು ಶಾಸಕರು ಜುಲೈ 11ರಂದು ವಿಶೇಷ ವಿಮಾನದಲ್ಲಿ ಬಂದು ರಾಜೀನಾಮೆ ಸಲ್ಲಿಸಿ ಹೋದ ನಂತರ ರಾಜೀನಾಮೆ ಹಾಗೂ ಅನರ್ಹತೆ ಪ್ರಕರಣಗಳಿಗೆ ಸಂಬಂಧಿಸಿ ದಂತೆ ತಾವು ನೋಟೀಸ್ ನೀಡಿದ್ದರೂ, ವಿಚಾರಣೆಗೆ ಬರಲೇ ಇಲ್ಲ. ಇದೆಲ್ಲವನ್ನೂ ಪರಿಗಣಿಸಿ ಇವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು ಎಂಬುದು ಮನವರಿಕೆಯಾದ ನಂತರ ಅವರನ್ನು ಅನರ್ಹಗೊಳಿಸಲಾಗಿದೆ ಎಂದು ರಮೇಶ್ ಕುಮಾರ್ ವಿವರಿಸಿದರು. ತಾವು ತೀರ್ಪು ನೀಡುವ ಮುನ್ನ ತಮಿಳುನಾಡು ಮತ್ತು ಮಧ್ಯಪ್ರದೇಶ ವಿಧಾನಸಭೆಗಳ ನಡವಳಿಕೆಗಳು, ಸುಪ್ರೀಂಕೋರ್ಟ್ ತೀರ್ಪುಗಳು ಮುಂತಾ ದವನ್ನು ಅಧ್ಯಯನ ಮಾಡಿಯೇ ತೀರ್ಪು ನೀಡಿರುವುದಾಗಿ ಅವರು ಹೇಳಿದರು.

ಈ ಮೂವರು ಶಾಸಕರ ಅನರ್ಹತೆಯು ಇಂದಿನಿಂದಲೇ ಜಾರಿಯಾಗಲಿದೆ ಎಂದು ವಿಧಾನಸಭಾಧ್ಯಕ್ಷರು ತಿಳಿಸಿದ್ದು, ಇದರ ಬಗ್ಗೆ ಸುಪ್ರೀಂಕೋರ್ಟ್‍ಗೂ ವರದಿ ಸಲ್ಲಿಸಿರುವುದಾಗಿ ಹೇಳಿದರು. ಈ ಶಾಸಕರ ಅನರ್ಹತೆಯಿಂದಾಗಿ 225 ಸದಸ್ಯರ ಬಲವುಳ್ಳ ಕರ್ನಾಟಕ ವಿಧಾನಸಭೆ ಸದಸ್ಯರ ಬಲವು 222ಕ್ಕೆ ಕುಸಿದಿದೆ.

ಇನ್ನುಳಿದಂತೆ ಜೆಡಿಎಸ್ ಶಾಸಕರಾದ ಎ.ಹೆಚ್.ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ, ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ಮುನಿರತ್ನ, ರೋಷನ್ ಬೇಗ್, ಎಂಟಿಬಿ ನಾಗರಾಜು ಮತ್ತು ಡಾ. ಕೆ.ಸುಧಾಕರ್ ಅವರುಗಳ ರಾಜೀನಾಮೆ ಮತ್ತು ಅನರ್ಹತೆ ಅರ್ಜಿಗಳನ್ನು ವಿಧಾನಸಭಾಧ್ಯಕ್ಷರು ಇತ್ಯರ್ಥಪಡಿಸಬೇಕಾಗಿದೆ. ಕಾಲ ವಿಳಂಬ ಮಾಡದೇ ಕೆಲವೇ ದಿನಗಳಲ್ಲಿ ಆ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ರಮೇಶ್ ಕುಮಾರ್ ಹೇಳಿದರು.

ಇನ್ನು 13 ಶಾಸಕರ ಭವಿಷ್ಯ ಕೆಲವೇ ದಿನದಲ್ಲಿ ನಿರ್ಧಾರ
ಬೆಂಗಳೂರು, ಜು.25(ಎಸಿಪಿ)- ಹತ್ತು ಕಾಂಗ್ರೆಸ್ ಮತ್ತು ಮೂವರು ಜೆಡಿಎಸ್ ಶಾಸಕರ ರಾಜೀನಾಮೆ ಹಾಗೂ ಅನರ್ಹತೆ ಅರ್ಜಿಗಳನ್ನು ಕೆಲವೇ ದಿನಗಳಲ್ಲಿ ಇತ್ಯರ್ಥ ಪಡಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ತಿಳಿಸಿದ್ದಾರೆ.
13 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೆ, ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಆಯಾ ಪಕ್ಷಗಳ ಶಾಸಕಾಂಗ ಪಕ್ಷದ ನಾಯಕರು ದೂರನ್ನೂ ಸಲ್ಲಿಸಿದ್ದಾರೆ. ಇವುಗಳ ಬಗ್ಗೆ ಪರಿಶೀಲಿಸಿ, ತೀರ್ಪು ನೀಡಬೇಕಾಗಿದೆ. ಈ ವಿಚಾರ ಸುಪ್ರೀಂಕೋರ್ಟ್‍ನಲ್ಲೂ ಇರುವುದರಿಂದ ಎಲ್ಲವನ್ನೂ ಅಧ್ಯಯನ ಮಾಡಿ ತೀರ್ಪು ನೀಡಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ ಎಂದು ಅವರು ಹೇಳಿದರು. ತಮಿಳುನಾಡು ಮತ್ತು ಇತರ ವಿಧಾನಸಭೆಗಳಲ್ಲಿ ನಡೆದಿರುವ ಪ್ರಕ್ರಿಯೆ, ಸುಪ್ರೀಂಕೋರ್ಟ್ ತೀರ್ಪುಗಳು, ಶಾಸಕರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಗಳು, ರಾಜ್ಯಪಾಲರ ಸಂದೇಶ ಎಲ್ಲವನ್ನೂ ಅಧ್ಯಯನ ಮಾಡಿ ಕೆಲವೇ ದಿನಗಳಲ್ಲಿ ತೀರ್ಪು ನೀಡಲಾಗುವುದು ಎಂದರು. ಕಾಂಗ್ರೆಸ್‍ನ ಆನಂದ್‍ಸಿಂಗ್, ಪ್ರತಾಪ್‍ಗೌಡ ಪಾಟೀಲ್, ಬಿ.ಸಿ. ಪಾಟೀಲ್, ಶಿವರಾಂ ಹೆಬ್ಬಾರ್, ಎಸ್.ಟಿ. ಸೋಮಶೇಖರ್, ಭೈರತಿ ಬಸವರಾಜು, ಮುನಿರತ್ನ, ರೋಷನ್‍ಬೇಗ್, ಎಂಟಿಬಿ ನಾಗರಾಜು, ಡಾ. ಕೆ. ಸುಧಾಕರ್ ಮತ್ತು ಜೆಡಿಎಸ್‍ನ ಎ.ಹೆಚ್. ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ ಅವರುಗಳು ರಾಜೀನಾಮೆ ಅನರ್ಹತೆ ಅರ್ಜಿಗಳನ್ನು ವಿಧಾನಸಭಾಧ್ಯಕ್ಷರು ಇತ್ಯರ್ಥ ಪಡಿಸಬೇಕಾಗಿದೆ.

Translate »