ಅರಸೀಕೆರೆ: ವಿವಿಧ ಬೇಡಿಕೆ ಈಡೇರಿಸುವಂತೆ ನಗರದಲ್ಲಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಪ್ರವಾಸಿ ಮಂದಿರದಿಂದ ಮೆರ ವಣಿಗೆ ಹೊರಟ ಪ್ರತಿಭಟನಾಕಾರರು, ಸಿಡಿಪಿಓ ಕಚೇರಿಯಲ್ಲಿ ಕೆಲಕಾಲ ಪ್ರತಿಭಟಿಸಿ ನಂತರ ತಾಲೂಕು ಕಚೇರಿಯಲ್ಲಿ ಜಮಾಯಿಸಿ ಬೇಡಿಕೆ ಈಡೇರಿಕೆ ಆಗ್ರಹಿಸಿದರು.
ಎಐಟಿಯುಸಿ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಅಂಗನ ವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಅತೀ ತುರ್ತಾಗಿ ಕಟ್ಟಡಗಳು ನಿರ್ಮಾಣ ವಾಗಬೇಕಿದೆ. ಮಿನಿ ಅಂಗನವಾಡಿ ಕೇಂದ್ರ ಗಳಿಗೆ ಸಹಾಯಕಿಯರನ್ನು ತುರ್ತಾಗಿ ನೇಮಿಸಿ ಮಾತೃಪೂರ್ಣ ಯೋಜನೆ ಯಶಸ್ವಿಯಾಗಿ ಜಾರಿಗೊಳಿಸಬೇಕಿದೆ.
ಕಾರ್ಯಕರ್ತರಿಗೆ ಬಡ್ತಿ ನೀಡಿ, ಕೂಡಲೇ 18 ಸಾವಿರ ಕನಿಷ್ಠ ವೇತನವನ್ನು ಜಾರಿ ಗೊಳಿಸಬೇಕು. ಈಗಾಗಲೇ ನಿವೃತ್ತಿಯಾ ಗಿರುವ, ನಿವೃತ್ತಿಯಾಗಲಿರುವ ಕಾರ್ಯಕರ್ತೆ ಯರು ಮತ್ತು ಸಹಾಯಕಿಯರಿಗೆ ಕನಿಷ್ಠ ಪಿಂಚಣಿ 6 ಸಾವಿರ ರೂ. ನೀಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರಲ್ಲದೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದ ಶಾಸಕ ಕೆ.ಎಂ.ಶಿವಲಿಂಗೆಗೌಡರು, ಕೇಂದ್ರ- ರಾಜ್ಯ ಸರ್ಕಾರಗಳ ಸಂಯೋಜನೆಯಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವ ಹಿಸುತ್ತಿದ್ದು, ಕನಿಷ್ಠ ವೇತನ 9,000 ರೂ. ನೀಡಲು ಕೇಂದ್ರ ನಿರ್ಲಕ್ಷಿಸಿದೆ. ರಾಜ್ಯ ಸರ್ಕಾರದಿಂದ ಸಂಪೂರ್ಣ ವೇತನ ನೀಡಲು ವಿಳಂಬವಾಗುತ್ತದೆ. ಕೇಂದ್ರ ಈಗಾಗಲೇ ಕನಿಷ್ಠ ವೇತನ 18,000 ರೂ. ನಿಗದಿ ಮಾಡಿದ್ದರೂ, ತಾನೇ ಕಡಿಮೆ ವೇತನ ನೀಡುವ ಮೂಲಕ ಅಸಹಾಯಕತೆ ತೋರಿದೆ. ರಾಜ್ಯ ಸರ್ಕಾರ ಈಗಾಗಲೇ 8,000 ರೂ. ವೇತನ ನೀಡುತ್ತಿದ್ದು, ಹೆಚ್ಚುವರಿ ಹಣವನ್ನು ಭರಿಸುತ್ತಿದೆ ಎಂದ ಅವರು, ಅಂಗನವಾಡಿ ಕಾರ್ಯಯರ್ತೆಯರು ಕೇಂದ್ರ ಸರ್ಕಾರದ ಮೇಲೆ ಹೆಚ್ಚು ಒತ್ತಡವನ್ನು ಹಾಕಬೇಕು. ನಿಮ್ಮ ಹೋರಾಟಕ್ಕೆ ಧ್ವನಿಯಾಗಿ ನಾನು ನಿಲ್ಲುವುದರ ಮೂಲಕ ವಿಧಾನಸಭೆಯಲ್ಲಿ ಸರ್ಕಾರದ ಗಮನವನ್ನು ಸೆಳೆದು ನ್ಯಾಯ ದೊರಕಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ಸಂಚಾಲಕ ರಾಮಪ್ಪ, ಜಿಲ್ಲಾ ಕಾರ್ಯದರ್ಶಿ ಲತಾಮಣಿ , ಎಐ ಯುಟಿಸಿ ಅಧ್ಯಕ್ಷೆ ನೇತ್ರಾವತಿ, ಉಪಾಧ್ಯಕ್ಷೆ ಪ್ರೇಮಾ, ಗಾಯತ್ರಿ, ದ್ರಾಕ್ಷಾಯಿಣಮ್ಮ, ಪ್ರಧಾನ ಕಾರ್ಯದರ್ಶಿ ಜಯಮ್ಮ, ಸಂಘಟನಾ ಕಾರ್ಯದರ್ಶಿ ಗೌರಮ್ಮ, ರತ್ಮಮ್ಮ, ಖಜಾಂಚಿ ಶಾಂತಮ್ಮ ಇತರರಿದ್ದರು.