ಮೈಸೂರು: ಮಹಿಳಾ ಸಂಘ-ಸಂಸ್ಥೆಗಳ ಸದಸ್ಯರು ಮನೆಯಲ್ಲಿ ಸ್ವಂತ ಉದ್ಯೋಗ ಆರಂಭಿಸಲು ಆರ್ಥಿಕ ಸಹಾಯ ಸೇರಿದಂತೆ ಸರ್ಕಾರದ ಯೋಜನೆ ಗಳ ಸಂಬಂಧ ಮಾಹಿತಿ ಒದಗಿಸಲು ಜು.21 ರಂದು ಲೀಡ್ ಬ್ಯಾಂಕ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಏರ್ಪಡಿಸುವುದಾಗಿ ಮಾಜಿ ಸಚಿವರೂ ಆದ ಶಾಸಕ ಎಸ್.ಎ. ರಾಮದಾಸ್ ಹೇಳಿದರು.
ಮೈಸೂರಿನ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯ 15 ಮತ್ತು 17ನೇ ವಾರ್ಡಿನಲ್ಲಿ (ಈಗ 59ನೇ ವಾರ್ಡ್) ಸಾರ್ವಜನಿಕರ ಕುಂದು ಕೊರತೆ ಆಲಿಸುವ ಸಂಬಂಧ ಮಂಗಳವಾರ ಪಾದಯಾತ್ರೆ ನಡೆಸಿದ ಅವರು, ವಿವೇಕಾ ನಂದನಗರದ ಮಹಿಳೆಯರ ಮನವಿ ಮೇರೆಗೆ ವಿವೇಕಾನಂದನಗರ ಸವಿತಾ ಟೈಲರಿಂಗ್ ಸ್ಕೂಲ್ ಆವರಣದಲ್ಲೇ ಸಭೆ ಏರ್ಪಡಿಸಲಾಗುವುದು. ಮಹಿಳಾ ಸಬಲೀಕರಣಕ್ಕೆ ಇರುವ ಯೋಜನೆಗಳ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ಒದಗಿಸಲಿದ್ದಾರೆ ಎಂದು ತಿಳಿಸಿದರು.
ವಿವೇಕಾನಂದ ವೃತ್ತದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವ ಬಗ್ಗೆ ಸ್ಥಳೀಯರು ಶಾಸಕರ ಗಮನಕ್ಕೆ ತಂದಾಗ, ವೃತ್ತದಲ್ಲಿ ಸಿಗ್ನಲ್ ಲೈಟ್ ಅಳವಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರಲ್ಲದೆ, ಈ ಭಾಗದಲ್ಲಿ ಒಳಚರಂಡಿ ಸಮಸ್ಯೆ ನಿವಾರಿಸಲು ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾವೇರಿ ನೀರು ಕೊಡಿ: ಕಬಿನಿ ನೀರಿನ ಜೊತೆ ಬೋರ್‍ವೆಲ್ ನೀರು ಸಹ ಮಿಶ್ರಣಗೊಂಡು ಕೊಳಾಯಿಗಳಲ್ಲಿ ಬರುತ್ತಿದೆ. ಕಬಿನಿಯಿಂದ ಪೂರೈಕೆ ಆಗುವ ಕಾವೇರಿ ನೀರು ಬಿಡಲು ವ್ಯವಸ್ಥೆ ಮಾಡಿ ಎಂದು ವಿವೇಕಾನಂದನಗರ ನಿವಾಸಿಗಳು ಶಾಸಕರಲ್ಲಿ ಮನವಿ ಮಾಡಿದರು. ಸ್ಥಳದಲ್ಲೇ ಇದ್ದ ಪಾಲಿಕೆ ಅಧಿಕಾರಿಗಳಿಗೆ ಒಂದು ವಾರದಲ್ಲಿ ಕಬಿನಿ ನೀರನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಫುಟ್‍ಪಾತ್ ಅತಿ ಕ್ರಮಣ ತೆರವಿಗೆ ಕ್ರಮ: ವಿವೇಕಾನಂದ ವೃತ್ತ ಹಾಗೂ ಸಮೀಪದ ಕೆಎಸ್‍ಆರ್‍ಟಿಸಿ ಡಿಪೋ ರಸ್ತೆಗಳಲ್ಲಿನ ಮಳಿಗೆಯವರು ಫುಟ್‍ಪಾತ್ ಅನ್ನು ಅತಿಕ್ರಮಿ ಸಿದ್ದು, ಇದರಿಂದ ಪಾದಚಾರಿಗಳು ಪರ ದಾಡುವಂತೆ ಆಗಿದೆ ಎಂದು ಸಾರ್ವಜನಿಕರು ದೂರಿದ ಹಿನ್ನೆಲೆಯಲ್ಲಿ ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಶಾಸಕ ರಾಮ ದಾಸ್ ನಿರ್ದೇಶನ ನೀಡಿದರು.
ವಿವೇಕಾನಂದನಗರದಿಂದ ರೈಲ್ವೆ ನಿಲ್ದಾಣಕ್ಕೆ ಬಸ್ ವ್ಯವಸ್ಥೆಯಿದೆ. ಆದರೆ ರೈಲ್ವೆ ನಿಲ್ದಾಣದಿಂದ ವಿವೇಕಾನಂದನಗರ ಹಾಗೂ ಶ್ರೀರಾಂಪುರಕ್ಕೆ ಯಾವುದೇ ಬಸ್ ವ್ಯವಸ್ಥೆ ಇಲ್ಲ ಎಂಬ ದೂರಿಗೆ ಸ್ಪಂದಿಸಿದ ಶಾಸಕರು, ಬಸ್ ಸೌಲಭ್ಯಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಬನಶಂಕರಿ ದೇವಸ್ಥಾನ ದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಪಾದಯಾತ್ರೆ ಪ್ರಾರಂಭಿಸಿದ ಶಾಸಕರು, ದೇವಸ್ಥಾನದ ಹಿಂಭಾಗದ ಪಾರ್ಕಿನಲ್ಲಿ ‘ಸ್ಟ್ರಾಂಗ್ ಇಂಡಿಯಾ’ ಪರಿಕಲ್ಪನೆ ಅಡಿಯಲ್ಲಿ ಮಕ್ಕಳ ಆಟಿಕೆ ಪರಿಕರಗಳನ್ನು ಅಳವಡಿಸುವ ಭರವಸೆಯನ್ನು ಸ್ಥಳೀಯರಿಗೆ ನೀಡಿದರು. ಜೊತೆಗೆ ಮಕ್ಕಳು ಹಾಗೂ ಹಿರಿಯರಿಗೆ ಯೋಗಾಭ್ಯಾಸಕ್ಕೆ ಬೇಕಿರುವ ವ್ಯವಸ್ಥೆ, ವಾಕಿಂಗ್ ಪಾತ್ ನಿರ್ಮಾಣ ಸೇರಿದಂತೆ ಪಾರ್ಕಿನ ಅಭಿವೃದ್ಧಿಗೆ ಕ್ರಮ ವಹಿಸುವುದಾಗಿ ರಾಮದಾಸ್ ತಿಳಿಸಿದರು.
ಉದ್ಯಾನದಲ್ಲಿ ಮದ್ಯದ ಅಮಲು: ಶಾಸಕ ರಾಮದಾಸ್ ಅವರು ನಡೆಸಿದ ಪಾದಯಾತ್ರೆ ವೇಳೆ ಹಲವು ಪಾರ್ಕಿನಲ್ಲಿ ಮದ್ಯಪಾನ ಹಾಗೂ ಅನೈತಿಕ ಚಟುವಟಿಕೆ ರಾತ್ರಿ ವೇಳೆ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದವು. ಈ ಸಂಬಂಧ ಗಂಭೀರ ಕ್ರಮ ವಹಿಸದ ಪೊಲೀಸರ ವಿರುದ್ಧ ಅಸಮಾ ಧಾನ ವ್ಯಕ್ತಪಡಿಸಿದ ಶಾಸಕರು, ಸ್ಥಳದಲ್ಲಿ ಉಪಸ್ಥಿತರಿದ್ದ ಪೊಲೀಸ್ ಅಧಿಕಾರಿಗಳಿಗೆ ರಾತ್ರಿ 9ರ ನಂತರ ಯಾರು ಉದ್ಯಾ ನವನದ ಒಳಗೆ ಪ್ರವೇಶಿಸುವಂತಿಲ್ಲ ಹಾಗೂ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ತಾಕೀತು ಮಾಡಿದರು.
ಕುವೆಂಪುನಗರ ಎನ್ ಬ್ಲಾಕಿನಲ್ಲಿ ಮುಡಾ ಉದ್ಯಾನವನಕ್ಕೆ ನಿವೇಶನ ಕಲ್ಪಿಸಿ ದ್ದರೂ ಖಾಲಿ ಜಾಗವಾಗೇ ಉಳಿದಿರು ವುದನ್ನು ಗಮನಿಸಿದ ಶಾಸಕರು, ಉದ್ಯಾನವನ ವಾಗಿ ಅಭಿವೃದ್ಧಿಪಡಿಸಲು ಶೀಘ್ರ ಕ್ರಮ ಕೈಗೊಳ್ಳಲು ಮುಡಾ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರಲ್ಲದೆ, ಸೂರ್ಯ ಬಡಾವಣೆಯ ನಾಗರಿಕ ಸಮಸ್ಯೆಗಳ ಸಂಬಂಧ ವರದಿ ನೀಡಲು ಉಪಸ್ಥಿತರಿದ್ದ ಅಧಿಕಾರಿಗಳಿಗೆ ತಿಳಿಸಿದರು. ಜೊತೆಗೆ ಈ ಭಾಗದ ನಾಲ್ಕು ಉದ್ಯಾನವನಗಳನ್ನು ಖಾಸಗಿ ಸಂಸ್ಥೆಗಳ ನಿರ್ವಹಣೆಗೆ ವಹಿಸಲು ಇದೇ ವೇಳೆ ಸ್ಥಳೀಯರ ಸಮ್ಮತಿ ಹಿನ್ನೆಲೆಯಲ್ಲಿ ಶಾಸಕರು ನಿರ್ಣಯ ಕೈಗೊಂಡರು.
ಪಾಲಿಕೆ ಸದಸ್ಯೆ ಸೀಮಾ ಪ್ರಸಾದ್, ಮುಖಂಡರಾದ ನಾರಾಯಣರಾವ್, ರವಿ ಶಂಕರ್, ಚಂದ್ರು, ನಾಗನಾಯಕ್, ರೂಪ, ಗೋಪಿನಾಥ್, ಮನು, ಪಾಲಿಕೆ ವಲಯ-3ರ ಸಹಾಯಕ ಆಯುಕ್ತ ಶಿವಾನಂದ ಮೂರ್ತಿ, ಅಭಿವೃದ್ಧಿ ಅಧಿಕಾರಿ ಗಂಗಾ ಧರಯ್ಯ, ಸಹಾಯಕ ಅಭಿಯಂತರ ಅನಂತು, ವರ್ಕ್ ಇನ್ಸ್‍ಪೆಕ್ಟರ್ ಮಹೇಶ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.