ಮಡಿಕೇರಿ-ಮಂಗಳೂರು ರಸ್ತೆ ಮತ್ತೊಂದು ಕಡೆ ಬಿರುಕು
ಕೊಡಗು

ಮಡಿಕೇರಿ-ಮಂಗಳೂರು ರಸ್ತೆ ಮತ್ತೊಂದು ಕಡೆ ಬಿರುಕು

July 19, 2018

ಮಡಿಕೇರಿ:  ಮಡಿಕೇರಿ-ಮಂಗಳೂರು ರಸ್ತೆಯ ಕಾಟಕೇರಿ ಜಂಕ್ಷನ್ ಬಳಿ ರಸ್ತೆಯ ಒಂದು ಪಾಶ್ರ್ವದಲ್ಲಿ ಮಂಗಳವಾರ ರಾತ್ರಿ ಭಾರೀ ಪ್ರಮಾಣದ ಬಿರುಕು ಮೂಡಿದೆ.

ಕೆಲವು ದಿನಗಳ ಹಿಂದೆ ಇದೇ ಮಾರ್ಗದ ಮತ್ತೊಂದು ಸ್ಥಳದಲ್ಲಿ ಭಾರೀ ಬಿರುಕು ಕಂಡು ಬಂದು ಆತಂಕ ಎದುರಾಗಿತ್ತು. ಇದೀಗ ಇದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗದೊಂದು ಬಿರುಕು ಕಂಡು ಬಂದಿದ್ದು, ರಸ್ತೆಯ ಬದಿಯಲ್ಲೆ ಕಂದಕವಿದ್ದು, ನೀರಿನ ಹರಿವೂ ಇದೆ. ಮಳೆಯ ಪ್ರಮಾಣ ಹೆಚ್ಚಿ ರಸ್ತೆ ಕುಸಿದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಲಿದೆ. ಈಗಾಗಲೆ ಬಿರುಕು ಬಿಟ್ಟ ರಸ್ತೆಯ ಭಾಗದಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಳೆಯ ನಡುವೆ ದುರಸ್ತಿ ಕಾರ್ಯವನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗದಿರುವುದು, ಆಡಳಿತ ವ್ಯವಸ್ಥೆಗೆ ದೊಡ್ಡ ಹಿನ್ನಡೆಯಾಗಿದೆ.

ಮಂಗಳವಾರ ರಾತ್ರಿಯ ಅವಧಿಯಲ್ಲಿ ಕಾಟಕೇರಿ ಜಂಕ್ಷನ್ ಬಳಿಯ ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಇದೀಗ ಬಿರುಕು ಬಿಟ್ಟ ಸ್ಥಳದಲ್ಲಿ ಏಕ ಕಾಲಕ್ಕೆ ರಸ್ತೆಯ ಎರಡು ಬದಿಗಳಲ್ಲಿ ವಾಹನ ಚಾಲನೆಗೆ ಅವಕಾಶವಿಲ್ಲದಂತಾಗಿದೆ. ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿದ ಪರಿಣಾಮ ಜಿಲ್ಲೆಯ ಗ್ರಾಮೀಣ ಪ್ರದೇಶದ ಬಹುತೇಕ ಪ್ರದೇಶಗಳಲ್ಲಿ ಕಾರ್ಗತ್ತಲು ಮುಂದುವರಿದಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಚೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Translate »