ಕೇಂದ್ರ ಸರ್ಕಾರದಿಂದ ಕಾರ್ಮಿಕ ವಿರೋಧಿ ನೀತಿ ಆರೋಪ: ಕಾರ್ಮಿಕ ಸಂಘಟನೆಗಳಿಂದ 2020ರ ಜ.8ರಂದು ರಾಷ್ಟ್ರವ್ಯಾಪಿ ಮುಷ್ಕರ
ಮೈಸೂರು

ಕೇಂದ್ರ ಸರ್ಕಾರದಿಂದ ಕಾರ್ಮಿಕ ವಿರೋಧಿ ನೀತಿ ಆರೋಪ: ಕಾರ್ಮಿಕ ಸಂಘಟನೆಗಳಿಂದ 2020ರ ಜ.8ರಂದು ರಾಷ್ಟ್ರವ್ಯಾಪಿ ಮುಷ್ಕರ

December 18, 2019

ಮೈಸೂರು,ಡಿ.17(ಪಿಎಂ)-ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳ ಸುಧಾ ರಣೆ ಹೆಸರಿನಲ್ಲಿ ಕಾರ್ಮಿಕರ ಹಕ್ಕು ಕಸಿ ಯಲು ಹೊರಟಿದೆ. ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ 2020ರ ಜ.8ರಂದು ರಾಷ್ಟ್ರೀಯ ಕಾರ್ಮಿಕ ಸಂಘ ಟನೆಗಳು ರಾಷ್ಟ್ರೀಯ ಮುಷ್ಕರಕ್ಕೆ ಕರೆ ನೀಡಿವೆ ಎಂದು ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್‍ನ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ್ ತಿಳಿಸಿದರು.

ಮೈಸೂರಿನ ಬನ್ನಿಮಂಟಪದ ಬಾಲ ಭವನ ಸಭಾಂಗಣದಲ್ಲಿ ಎರಡು ದಿನಗಳು ಹಮ್ಮಿಕೊಂಡಿರುವ ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್‍ನ (ಎಐಟಿಯುಸಿ) ಮೈಸೂರು ನಗರ ವಿಭಾಗ, ಗ್ರಾಮಾಂತರ ವಿಭಾಗ ಹಾಗೂ ಚಾಮ ರಾಜನಗರ ವಿಭಾಗದ ಕಾರ್ಯಕರ್ತರ ತರಬೇತಿ ಶಿಬಿರ ಹಾಗೂ ಸಮ್ಮೇಳನಕ್ಕೆ ಮಂಗಳ ವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ್ಮಿಕರು ಹಾಗೂ ಜನತೆ ಪರ ವಾದ 12 ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅಂದು ಮುಷ್ಕರ ನಡೆಸಲು ಉದ್ದೇಶಿಸಲಾಗಿದೆ. ಈ ಬಾರಿಯ ಮುಷ್ಕರಕ್ಕೆ ದೇಶದ ರೈತ ಸಂಘಟನೆಗಳು ಬೆಂಬಲ ನೀಡಿವೆ. ಮೊನ್ನೆಯಷ್ಟೇ ಮುಷ್ಕರ ಸಂಬಂಧ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ರೈತ ಸಂಘಟನೆಗಳು ಭಾಗವಹಿಸಿ ಬೆಂಬಲ ಘೋಷಿಸಿವೆ. ಅಷ್ಟೇ ಅಲ್ಲದೆ, ಯುವ ಸಂಘಟನೆ ಹಾಗೂ ಮಹಿಳಾ ಸಂಘಟನೆಗಳು ಬೆಂಬಲ ನೀಡಿವೆ ಎಂದು ಹೇಳಿದರು.

ಸುಧಾರಣೆ ಹೆಸರಿನಲ್ಲಿ 1991ರಲ್ಲಿ ಪ್ರಾರಂಭ ವಾದ ಹೊಸ ಆರ್ಥಿಕ ನೀತಿಯು ಜನತೆ ಹಾಗೂ ವಿಶೇಷವಾಗಿ ಕಾರ್ಮಿಕ ವರ್ಗದ ಮೇಲೆ ಗದಾಪ್ರಹಾರ ನಡೆಸುತ್ತಿದೆ. ಇದಾದ ಬಳಿಕ ಅಂದಿನ ಕೇಂದ್ರ ಸರ್ಕಾರ ಗ್ಯಾಟ್ ಒಪ್ಪಂದಕ್ಕೆ (ವಿಶ್ವ ವಾಣಿಜ್ಯ ಒಪ್ಪಂದ) ಸಹಿ ಹಾಕಿತು. ಸಂಸತ್‍ನಲ್ಲಿ ಅನುಮೋದನೆ ಯನ್ನೂ ಪಡೆಯದೇ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಹಾಗೂ ಹಣಕಾಸು ಸಚಿವ ಮನಮೋಹನ್‍ಸಿಂಗ್ ಈ ಸಹಿ ಪ್ರಕ್ರಿಯೆ ಪೂರ್ಣಗೊಳಿಸಿದರು. ಅಂದು ಇದರ ವಿರುದ್ಧ ಎಐಟಿಯುಸಿ ಪ್ರಬಲ ಹೋರಾಟ ನಡೆಸಿತು. ಹೊಸ ಆರ್ಥಿಕ ನೀತಿ ಮೂಲಕ ರೈತರ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ದೊರೆಯಲಿದೆ. ಹೀಗಾಗಿ ಇದನ್ನು ವಿರೋಧಿಸುವವರು ದೇಶದ್ರೋಹಿ ಗಳು ಎಂದು ಕಾಂಗ್ರೆಸ್ ಸರ್ಕಾರ ನಮ್ಮ ಹೋರಾಟ ವನ್ನು ಖಂಡಿಸಿತ್ತು ಎಂದು ವಿವರಿಸಿದರು.

ಅಂದು ಕಾರ್ಮಿಕ ಸಂಘಟನೆ ಪ್ರತಿ ಪಾದಿಸಿದ ವಾದ ಇಂದು ನಿಜವಾಗಿದ್ದು, ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಅಂದಿನಿಂದ ಇಲ್ಲಿವರೆಗೆ ದೇಶದಲ್ಲಿ ಮೂರೂವರೆ ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ ನೀತಿಗಳಿಂದ ಮಧ್ಯವರ್ತಿಗಳು ಹಾಗೂ ವರ್ತಕರು ಮಾತ್ರವೇ ಲಾಭಗಳಿಸು ವಂತಾಗಿದೆ. ಕಾರ್ಮಿಕ ಸಂಘಟನೆಗಳು ಕೇವಲ ಕಾರ್ಮಿಕರ ಹಿತಕ್ಕೆ ಮಾತ್ರವೇ ಹೋರಾಟಕ್ಕೆ ಸೀಮಿತವಾಗಿಲ್ಲ. ನಮ್ಮ ಬೇಡಿಕೆಗಳಲ್ಲಿ ಇಡೀ ದೇಶದ ಜನತೆಯ ಹಿತವೂ ಒಳಗೊಂಡಿದೆ. ನಮ್ಮ ಬೇಡಿಕೆ ಗಳ ಪೈಕಿ ಬೆಲೆ ಏರಿಕೆ ನಿಯಂತ್ರಿಸಬೇ ಕೆಂಬುದೂ ಸೇರಿದೆ ಎಂದು ತಿಳಿಸಿದರು.

ಕಾರ್ಮಿಕ ಕಾನೂನು ಬದಲಾವಣೆ ಮಾಡಿದರೆ ವಿದೇಶಿ ಬಂಡವಾಳ ಹರಿದು ಬರುತ್ತದೆ ಎಂದು ಪ್ರತಿಪಾದಿಸುವ ಕೇಂದ್ರ ಸರ್ಕಾರ, ದೇಶದಲ್ಲಿ ದ್ವೇಷದ ಬೆಂಕಿ ಹಚ್ಚಿದ್ದು, ಇಂತಹ ಪರಿಸ್ಥಿತಿಯಲ್ಲಿ ಯಾವ ವಿದೇಶಿ ಬಂಡವಾಳವೂ ಹರಿದು ಬರಲು ಸಾಧ್ಯವಿಲ್ಲ. `ಪೌರತ್ವ ತಿದ್ದುಪಡಿ ಕಾಯ್ದೆ’ ಹಾಗೂ `ರಾಷ್ಟ್ರೀಯ ಪೌರತ್ವ ನೋಂದಣಿ’ ಹೆಸರಿನಲ್ಲಿ ಇಡೀ ದೇಶವನ್ನು ಕೇಂದ್ರ ಸರ್ಕಾರ ಹತ್ತಿ ಉರಿಯುವಂತೆ ಮಾಡಿದೆ. ಮುಸ್ಲಿಂರನ್ನು ಹೊರತುಪಡಿಸಿ 2014ರ ಡಿಸೆಂಬರ್ 31ರೊಳಗೆ ಬಂದಿರುವ ಎಲ್ಲ ರಿಗೂ ಭಾರತೀಯ ನಾಗರಿಕತೆ ಕೊಡುತ್ತೇ ವೆಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಇದರಿಂದ ಅಸ್ಸಾಂನ 1985ರ ಒಪ್ಪಂದಕ್ಕೆ ಪೆಟ್ಟು ಬೀಳಲಿದೆ. ಒಂದು ದನಕ್ಕೆ ಇರುವ ರಕ್ಷಣೆ ಇಂದು ಮಹಿಳೆಗೆ ಇಲ್ಲವಾಗಿದೆ. ದಲಿತರು, ಮುಸ್ಲಿಂರ ಮೇಲೆ ದೌರ್ಜನ್ಯಗಳು ಮುಂದುವರೆದಿವೆ ಎಂದು ಕಿಡಿಕಾರಿದರು.

ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಹೆಚ್.ಆರ್.ಶೇಷಾದ್ರಿ, ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಜಂಟಿ ಕಾರ್ಯದರ್ಶಿ ಟಿ.ಎಲ್. ರಾಜ್‍ಗೋಪಾಲ್, ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್‍ನ ಮೈಸೂರು ನಗರ ವಿಭಾಗದ ಅಧ್ಯಕ್ಷ ಎಂ. ವಿಜಯಕುಮಾರ್, ಗ್ರಾಮಾಂತರ ವಿಭಾ ಗದ ಪ್ರಧಾನ ಕಾರ್ಯದರ್ಶಿ ಎಸ್.ಡಿ. ಬಂಡಿ ಮತ್ತಿತರರು ಹಾಜರಿದ್ದರು.

Translate »