ಉಪಚುನಾವಣೆ ಬಳಿಕವೂ ಆಪರೇಷನ್ ಕಮಲ: ಮಂಡ್ಯ ಜೆಡಿಎಸ್‍ನ ಮತ್ತೆರಡು ವಿಕೆಟ್ ಪತನ?
ಮಂಡ್ಯ

ಉಪಚುನಾವಣೆ ಬಳಿಕವೂ ಆಪರೇಷನ್ ಕಮಲ: ಮಂಡ್ಯ ಜೆಡಿಎಸ್‍ನ ಮತ್ತೆರಡು ವಿಕೆಟ್ ಪತನ?

December 18, 2019

ಮಂಡ್ಯ, ಡಿ.17- ಉಪಚುನಾವಣೆ ಬಳಿಕವೂ ಆಪರೇಷನ್ ಕಮಲ ಸದ್ದು ಮಾಡುತ್ತಿದ್ದು, ಜೆಡಿಎಸ್‍ನ ಮತ್ತೆರಡು ವಿಕೆಟ್ ಪತನ ವಾಗುವುದು ನಿಶ್ಚಿತವಾಗಿದೆ.

ಈಗಾಗಲೇ ಆಪರೇಷನ್ ಕಮಲದ ಮೂಲಕ ಜೆಡಿಎಸ್‍ನ ಕೆ.ಸಿ.ನಾರಾಯಣಗೌಡರನ್ನು ಸೆಳೆದು ಕೆ.ಆರ್.ಪೇಟೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಿಜೆಪಿ ಜಿಲ್ಲೆಯಲ್ಲಿ ಖಾತೆ ತೆರೆ ದಿದೆ. ಅಂತೆಯೇ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಭದ್ರ ವಾಗಿ ನೆಲೆಯೂರುವ ಪ್ರಯತ್ನ ಮಾಡಿದ್ದು ಮತ್ತಷ್ಟು ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಜೆಡಿಎಸ್ ಭದ್ರಕೋಟೆಯನ್ನು ಉಪಚುನಾ ವಣೆಯಲ್ಲಿ ಛಿದ್ರ ಮಾಡಿದ ಬಿಜೆಪಿ ನಾಯಕರು ಇದೀಗ ಮತ್ತೆ ಜೆಡಿಎಸ್‍ಗೆ ಮತ್ತಷ್ಟು ಹೊಡೆತ ನೀಡಲು ಮುಂದಾಗಿದ್ದು, ಜೆಡಿಎಸ್ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಚರ್ಚೆ ಪ್ರಾರಂಭವಾಗಿದೆ.

ನಾಗಮಂಗಲ ಶಾಸಕ ಸುರೇಶ್‍ಗೌಡ, ಶ್ರೀರಂಗ ಪಟ್ಟಣದ ಶಾಸಕ ರವೀಂದ್ರ ಶ್ರೀಕಂಠಯ್ಯ ಬಿಜೆಪಿ ಕಡೆ ಮುಖ ಮಾಡಿದ್ದಾರೆ ಎಂಬ ಸುದ್ದಿ ಸಾಮಾ ಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಜೆಡಿಎಸ್ ಭೀತಿಗೆ ಕಾರಣವಾಗಿದೆ. ಜೆಡಿಎಸ್ ವರಿಷ್ಠರ ನಡೆಯಿಂದ ಬೇಸತ್ತು ಇಬ್ಬರು ಶಾಸಕರು ಪಕ್ಷ ತೊರೆಯುವ ಮನಸ್ಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಆದರೆ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗಿದೆ.

ಕಳೆದ ಬಾರಿ ಚುನಾವಣೆ ವೇಳೆ ಕಾಂಗ್ರೆಸ್ ನಿಂದ ಜೆಡಿಎಸ್‍ಗೆ ಪಕ್ಷಾಂತರ ಮಾಡಿದ್ದ ಈ ಇವರಿಬ್ಬರು ಶಾಸಕರಾಗಿ ಚುನಾಯಿತರಾಗಿದ್ದರು. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅಸ್ಥಿತ್ವ ದಲ್ಲಿದ್ದಾಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದ ಇವರಿಬ್ಬರಿಗೂ ಯಾವುದೇ ಅಧಿ ಕಾರ ಸಿಕ್ಕಿರಲಿಲ್ಲ. ವರಿಷ್ಠರು ಸೂಕ್ತ ಸ್ಥಾನಮಾನ ನೀಡದ ಬಗ್ಗೆ ಇವರಲ್ಲಿ ಅಸಮಾಧಾನ ಇತ್ತು ಎಂದು ಹೇಳಲಾಗಿದ್ದು, ಬಿಜೆಪಿ ಪಕ್ಷ ನಮಗೂ ಸಹ ಆಫರ್ ನೀಡಿತ್ತು ಎಂದು ಹೇಳಿಕೊಂಡಿದ್ದರು.

ಇದೀಗ ಕೆ.ಆರ್.ಪೇಟೆ ಕ್ಷೇತ್ರದ ಉಪಚುನಾ ವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದ್ದಂತೆ ಮತ್ತೆ ಆಪರೇಷನ್ ಕಮಲ ಸದ್ದು ಮಾಡುತ್ತಿದೆ. ನೆಲೆ ಇಲ್ಲದ ಕ್ಷೇತ್ರದಲ್ಲಿಯೇ ಬಿಜೆಪಿ ಪಕ್ಷದ ಅಭ್ಯರ್ಥಿ ಈ ಬಾರಿಯ ಉಪಚುನಾವಣೆಯಲ್ಲಿ ಗೆದ್ದಿದ್ದಾರೆ. ಇದೇ ಹಾದಿಯಲ್ಲಿ ಸಾಗಿದರೆ ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಭವಿಷ್ಯ ಕಂಡು ಕೊಳ್ಳಬಹುದು ಎಂಬ ಮನೋಸ್ಥೈರ್ಯ ಬಿಜೆಪಿ ಪಾಳೇಯದಲ್ಲಿ ಹೆಚ್ಚಾಗುತ್ತಿದ್ದು, ಇದು ಬಿಜೆಪಿ ಹಾದಿ ಸುಗಮಕ್ಕೆ ಕಾರಣವಾಗಬಹುದು ಎಂಬ ಲೆಕ್ಕಾಚಾರವೂ ನಡೆದಿದೆ ಎನ್ನಲಾಗಿದೆ. ಈಗಾ ಗಲೇ ಆದಿಚುಂಚನಗಿರಿ ಕ್ಷೇತ್ರದಲ್ಲಿ ಶಾಸಕ ಸುರೇಶ್ ಗೌಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಮುಖ್ಯ ಮಂತ್ರಿ ಜೊತೆ ಉತ್ತಮ ಬಾಂಧವ್ಯ ಹೊಂದಿ ದ್ದಾರೆ ಎಂಬ ಸಂದೇಶ ರವಾನಿಸಿದ್ದರೆ, ರವೀಂದ್ರ ಶ್ರೀಕಂಠಯ್ಯರ ರಾಜಕೀಯ ಗುರು ಎಸ್.ಎಂ ಕೃಷ್ಣ ಬಿಜೆಪಿ ಪಕ್ಷದಲ್ಲಿದ್ದು ಆಪರೇಷನ್ ಕಮಲ ದತ್ತ ಸುಲಭವಾಗಿ ಸೆಳೆಯಬಹುದು ಎಂಬ ಭಾವನೆ ಬಿಜೆಪಿ ವಲಯದಲ್ಲಿದೆ.

ಸರ್ಕಾರ ಸುಭದ್ರವಾಗಿದ್ದರೂ ಜೆಡಿಎಸ್ ಭದ್ರ ಕೋಟೆ ಮಂಡ್ಯದಲ್ಲಿ ಪಕ್ಷ ಸಂಘಟನೆ ಹಾಗೂ ಭದ್ರವಾಗಿ ನೆಲೆಯೂರುವ ನಿಟ್ಟಿನಲ್ಲಿ ಬಿಜೆಪಿ ಮತ್ತೆ ಆಪರೇಷನ್ ಕಮಲ ಪ್ರಯತ್ನಕ್ಕೆ ಮುಂದಾ ಗಿದ್ದು ಈ ಇಬ್ಬರು ಶಾಸಕರಿಗೆ ಗಾಳ ಹಾಕಿದೆ ಎಂದು ಹೇಳಲಾಗುತ್ತಿದೆ. ಆದರೆ ಆಪರೇಷನ್ ಕಮಲದ ಬಗ್ಗೆ ಪಕ್ಷದ ವರಿಷ್ಠರಿಗೆ ಆಸಕ್ತಿ ಇಲ್ಲ ವಾಗಿದ್ದು, ರಾಜ್ಯ ಮಟ್ಟದ ನಾಯಕರು ಜೆಡಿಎಸ್‍ನಿಂದ ಹೆಚ್ಚ್ಚಿನ ಶಾಸಕರನ್ನು ಸೆಳೆದು ವಿಧಾನಸೌಧದಲ್ಲಿ ಸರ್ಕಾರದ ಬಲ ಹೆಚ್ಚಿಸಿ ಕೊಳ್ಳುವ ಬಯಕೆ ಹೊಂದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಜೆಡಿಎಸ್ ತೊರೆಯಲ್ಲ: ರವೀಂದ್ರ ಶ್ರೀಕಂಠಯ್ಯ
ಯಾವುದೇ ಕಾರಣಕ್ಕೂ ನಾನು ಮತ್ತು ನಾಗಮಂಗಲದ ಕೆ.ಸುರೇಶ್‍ಗೌಡರು ಜೆಡಿಎಸ್ ತೊರೆಯುವ ಪ್ರಶ್ನೆಯೇ ಇಲ್ಲ. ಮುಂದಿನ ಮೂರು ವರ್ಷಗಳ ಕಾಲ ಪಕ್ಷದಲ್ಲಿಯೇ ಮುನ್ನಡೆಯುತ್ತೇವೆÉ. ಯಾವುದೇ ವದಂತಿಗಳಿಗೆ ಕಿವಿಗೊಡ ಬೇಡಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿಳಿಸಿದ್ದಾರೆ. ಈ ವಿಚಾರ ಸಂಪೂರ್ಣ ಸುಳ್ಳು. ನಾವು ಬಿಜೆಪಿಗೆ ಹೋಗಲ್ಲ. ನಮ್ಮನ್ನು ಬಿಜೆಪಿಯಿಂದ ಯಾರೂ ಸಂಪರ್ಕಿಸಿಲ್ಲ. ಯಾರೂ ಸಹ ನಮಗೆ ಆಹ್ವಾನ ನೀಡಿಲ್ಲ. ಯಾವುದೇ ಕಾರಣಕ್ಕೂ ನಾವು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ‘ಮೈಸೂರು ಮಿತ್ರ’ನಿಗೆ ಸ್ಪಷ್ಟಪಡಿಸಿದ್ದಾರೆ.

ನಾನು ವ್ಯಾಪಾರಕ್ಕಿಲ್ಲ: ಸುರೇಶ್‍ಗೌಡ
ಬಿಜೆಪಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಾಸಕ ಸುರೇಶ್‍ಗೌಡ, ನಾನು ಮಾರಾಟಕ್ಕಿಲ್ಲ ಎಂದು ಈಗಾಗಲೇ ತಿಳಿಸಿದ್ದೇನೆ. ಅಲ್ಲದೇ ನಾನು ಯಾವುದೇ ಕಾರಣಕ್ಕೂ ದೇವೇಗೌಡರ ಕುಟುಂಬ ಹಾಗೂ ಜೆಡಿಎಸ್ ಕಾರ್ಯಕರ್ತರನ್ನು ಬಿಟ್ಟು ಹೋಗುವ ಪ್ರಮೇಯವೇ ಇಲ್ಲ ಎಂದು ತಿಳಿಸಿದರು.

ನಾನು ಮತ್ತು ಶಾಸಕ ರವೀಂದ್ರ ಶ್ರೀಕಂಠಯ್ಯ ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ಪಡೆ ಯಾಗಲಿದ್ದೇವೆ ಎಂದು ಮಾಧ್ಯಮಗಳಲ್ಲಿ ಈ ರೀತಿ ಯಾಕೆ ಬರುತ್ತಿದೆ ಎಂದು ಗೊತ್ತಿಲ್ಲ. ನಾವು ಯಾವ ಪಕ್ಷದವರ ಜೊತೆಗೂ ಇದುವರೆಗೂ ಮಾತುಕತೆ ನಡೆಸಿಲ್ಲ. ಆದರೂ ಸಹ ಮಾಧ್ಯಮಗಳಲ್ಲಿ ಈ ತರಹ ಸುದ್ದಿ ಹಬ್ಬಿಸಿ ನಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ. ಈ ರೀತಿ ಮಾಡುತ್ತಿರುವವರು ಯಾರು ಎಂದು ತಿಳಿದುಕೊಳ್ಳಬೇಕಿದೆ ಎಂದರು.

ನಾನಾಗಲೀ, ರವೀಂದ್ರ ಶ್ರೀಕಂಠಯ್ಯ ಯಾರ ಬೆನ್ನಿಗೂ ಚೂರಿ ಹಾಕಿ ಹೋದವರಲ್ಲ. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದಾಗಲೂ ನಾವು ಆ ಪಕ್ಷಕ್ಕೆ ಅನ್ಯಾಯ ಮಾಡಿಲ್ಲ. ನಮ್ಮ ವಿರೋಧಿಗಳು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರಿಂದ ನಾವು ಕೈ ತೊರೆದು ಜೆಡಿಎಸ್‍ಗೆ ಬರಬೇಕಾಯಿತು ಎಂದ ಅವರು, ಪ್ರಸ್ತುತ ಬಿಜೆಪಿಯವರಿಗೆ ನಮ್ಮ ಅವಶ್ಯಕತೆಯೇ ಇಲ್ಲ. ಹೀಗಿರುವಾಗ ನಾವೇಕೆ ಜೆಡಿಎಸ್ ಬಿಟ್ಟು ಬಿಜೆಪಿ ಸೇರಬೇಕು ಎಂದು ಪ್ರಶ್ನಿಸಿದ ಅವರು, ನಾವು ಜೆಡಿಎಸ್ ವರಿಷ್ಠರಿಗೆ ನಿಯತ್ತಾಗಿದ್ದೇವೆ. ನಾವು ಪಕ್ಷ ಬಿಡುವ ಪ್ರಮೇಯವೇ ಇಲ್ಲ ಎಂದು ‘ಮೈಸೂರು ಮಿತ್ರ’ನಿಗೆ ಸ್ಟಷ್ಟಪಡಿಸಿದ್ದಾರೆ.

ನಾಗಯ್ಯ, ಲಾಳನಕೆರೆ

Translate »